ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಲಾಭದಾಯಕ

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಲಾಭದಾಯಕ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ವಿಶ್ರಾಂತ ಕುಲಪತಿ ಎಸ್.ಎ. ಪಾಟೀಲ

ಹಾವೇರಿ ಜ. 10- ಇಂದಿನ ಯುವ ಪೀಳಿಗೆಗೆ ಇಂಜಿನಿಯರ್, ಡಾಕ್ಟರ್, ಸಾಫ್ಟ್‍ವೇರ್ ಇಂಜಿನಿಯರ್ ಮುಂತಾದವುಗಳು ಮಾತ್ರ ಆಕರ್ಷಕವಾಗಿ ಕಾಣುತ್ತಿವೆ. ಹಾಗಾಗಿ ಕೃಷಿ ಕೃಶವಾಗುತ್ತಿದೆ, ಕೃಷಿಯಲ್ಲಿ ಮೊದಲಿನ ಜೋಶ್ ಉಳಿದಿಲ್ಲ ಎಂದು ಧಾರವಾಡದ ವಿಶ್ರಾಂತ ಕುಲಪತಿ ಎಸ್.ಎ. ಪಾಟೀಲ ಕಳವಳ ವ್ಯಕ್ತಪಡಿಸಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನಕ-ಷರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ನಡೆದ ‘ಅನ್ನದಾತರ ಅಳಲು ಮತ್ತು ಅಪೇಕ್ಷೆ’ ವಿಷಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಅಜ್ಜ ಮುತ್ತಜ್ಜರು ಕೃಷಿಗೆ ಹೇಗೆ ಸಮಯ ನೀಡುತ್ತಿದ್ದರೋ ಆ ರೀತಿಯಲ್ಲಿ ಇಂದಿನ ರೈತ ಕೃಷಿಗೆ ಸಮಯ ನೀಡಬೇಕಿದೆ.    ಸಾವಯವ ಕೃಷಿಗೆ ಉತ್ತೇಜನ ನೀಡುವ ಯೋಜನೆ ಜಾರಿಗೊಂಡಿದೆ, ಆದರೆ ಅದರ ಉಪಯೋಗ ಎಷ್ಟರ ಮಟ್ಟಿಗೆ ಆಗುತ್ತಿದೆ ಎಂದು ಪ್ರಶ್ನಿಸಿದ ಅವರು, ರೈತರು ಶ್ರಮದ ಜೊತೆಗೆ ವೈವಿಧ್ಯತೆ, ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಮಾತ್ರ ಲಾಭದಾಯ ಕವಾಗಿಸಲು ಸಾಧ್ಯ.  ಉನ್ನತ ಸಾಧನೆ ಮಾಡಿದ ಕೃಷಿಕರ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು   ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡುವುದು ಸೂಕ್ತ ಎಂದು ಎಸ್.ಎ. ಪಾಟೀಲ್ ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಕುರಿತು ಮಾತನಾಡಿದ ರಾಯಚೂರಿನ ಕವಿತಾ ಮಿಶ್ರಾ ಅವರು, ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಮಾಡುವುದು ಕೃಷಿ ಕ್ಷೇತ್ರಕ್ಕೆ ಇರುವ ಬಹುದೊಡ್ಡ ಸವಾಲು.  ಕೃಷಿ ಬಿಟ್ಟು ರೈತ ನಗರ, ಪಟ್ಟಣಗಳತ್ತ ಮುಖ ಮಾಡುತ್ತಿದ್ದಾನೆ.  ಅಂತರ ರಾಜ್ಯ ನದಿಗಳ ವಿವಾದ, ಸತತ ಅನುದಾನ ಪೂರೈಕೆಯಲ್ಲಿನ ವ್ಯತ್ಯಯ ಮುಂತಾದವು ಕೂಡ ನೀರಾವರಿ ಕೃಷಿ ವಿಸ್ತರಣೆ ಕುಂಠಿತಕ್ಕೆ ಕಾರಣವಾಗಿದೆ.  

`ಕೃಷಿಕ ಮತ್ತು ಕೃಷಿ ಕಾರ್ಮಿಕರ ಸ್ಥಿತಿಗತಿ ಕುರಿತು ವಿಷಯ ಮಂಡಿಸಿದ ಹಿರಿಯ ಕೃಷಿಕ ಈರಯ್ಯ ಕಿಲ್ಲೇದಾರ, ಜಗತ್ತಿಗೆ ಅನ್ನವನ್ನು ನೀಡುವ ರೈತ ಇಂದು ಪರಾವಲಂಬಿ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ. ರೈತ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ, ಬೆಂಬಲ ಬೆಲೆ ಇಲ್ಲದೆ ಹತಾಶರಾಗಿ ಮಾರುಕಟ್ಟೆಗೆ ತಂದ ಬೆಳೆಗಳನ್ನು ರಸ್ತೆ ಪಾಲು ಮಾಡುವ ಸ್ಥಿತಿ ಬಂದಿದೆ.    ದುಡಿಮೆಯೇ ದೇವರು ಎಂದಿರುವ ಆದರ್ಶಗಳು ಇಂದು ಬದಲಾಗಿದೆ. ರೈತ ದನ-ಕರುಗಳನ್ನು ಸಾಕುತ್ತಿದ್ದನು, ಆದರೆ ಇಂದು ರೈತನಿಗೆ ತನ್ನ ಕೃಷಿ ಪರಿಕರಗಳ ಜೊತೆಗೆ ಸಾಕು ಪ್ರಾಣಿಗಳನ್ನು ಮಾರುವ ಸ್ಥಿತಿ ಬಂದಿದೆ. ರೈತನ ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.

ಆಶಯ ನುಡಿಗಳನ್ನಾಡಿದ ಹಿರಿಯ ಕೃಷಿಕ ಎಚ್.ವಿ. ಸಜ್ಜನ್, ಅನ್ನ ಹೆಚ್ಚಿಸಲು ಭೂಮಿ ಯನ್ನು ರಸಗೊಬ್ಬರಗಳಿಂದ ವಿಷ ಮಾಡಿ, ವಿಷಪೂರಿತ ಆಹಾರ ಹೆಚ್ಚಾಗುತ್ತಿದೆ. ಕೃಷಿಯಲ್ಲಿ ಅನೇಕ ಮೂಲ ತಳಿಗಳನ್ನು ಕಳೆದುಕೊಂಡಿ ದ್ದೇವೆ. ಆಧುನಿಕ ಬೇಸಾಯ ಪದ್ದತಿಯಿಂದ  ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. 

‘ಸಾವಯವ ಕೃಷಿ ಮತ್ತು ಇಂದಿನ ಸ್ಥಿತಿಗತಿ’ ಕುರಿತು ಡಾ. ಚನ್ನಪ್ಪ ಅಂಗಡಿ ಮಾತನಾಡಿ, ರೈತನ ಸ್ಥಿತಿಗಳನ್ನು ಸುಧಾರಿಸಲು ಸಾವಯವ ಕೃಷಿ ಪದ್ದತಿ ಇಂದು ಅಗತ್ಯವಾಗಿದ್ದು, ಹಿಂದಿನ ಸ್ಥಿತಿಯನ್ನು ಸುಧಾರಿಸುವುದು ಸಾವಯವ ಕೃಷಿ ಪದ್ದತಿಯ ಉದ್ದೇಶವಾಗಿದೆ.   ಆಧುನಿಕ ಕೃಷಿ ಪದ್ದತಿಯಿಂದ ಇಂದು ಕೃಷಿ ಪರಿಸರ ಹಾಳಾಗುತ್ತಿದ್ದು, ರಸಗೊಬ್ಬರದಿಂದ ದೊಡ್ಡ ದೊಡ್ಡ ಕಂಪನಿಗಳಿಗೆ ಹೆಚ್ಚು ಲಾಭವಿದೆ. ಹೀಗಾಗಿ ಕೃಷಿಯ ಫಲವತ್ತತೆ ಕಾಯ್ದುಕೊಳ್ಳುವುದು ಅಗತ್ಯವಿದೆ. ಇಲ್ಲವಾದರೆ ಇನ್ನಷ್ಟು ವರ್ಷಗಳು ಗತಿಸಿದರೆ ಎಲ್ಲರಿಗೂ ಆಹಾರ ಸಿಗುವುದು ಕಷ್ಟದಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿ, ಎಲ್ಲ ಭೂಮಿಗಳನ್ನು ಸಾವಯವ ಕೃಷಿ ಪದ್ಧತಿಗೆ ಅಳವಡಿಸಬೇಕೆಂದು ಹೇಳಿದರು.   

ಜಲ ತಜ್ಞ ಡಾ. ಎನ್.ಕೆ. ದೇವರಾಜ ರೆಡ್ಡಿ ಅವರು `ಜಲಮೂಲಗಳ ಅಳಿವು ಉಳಿವು’ ಕುರಿತು ವಿಷಯ ಮಂಡಿಸಿ, ಕೃಷಿ ಭೂಮಿಗಳು ಲೇಔಟ್‍ಗಳಾಗಿ ಪರಿವರ್ತನೆಗೊಳ್ಳುತ್ತಿದ್ದು, ಕೃಷಿ ಭೂಮಿ ಕಡಿಮೆಯಾಗುತ್ತಿವೆ, ಬೋರ್‍ವೆಲ್ ಕೊರೆಯಿಸುವ ಸಂಖ್ಯೆ ಹೆಚ್ಚಾಗುತ್ತಿದೆ.  ಅಂತರ್ಜಲ ಈಗ ಕೇವಲ ಶೇ. 0.58 ರಷ್ಟು ಮಾತ್ರ ಉಳಿದಿದೆ.   ಸಾವಿರ ಅಡಿಗಳಷ್ಟು ಆಳದಲ್ಲಿ ಬೋರ್‍ವೆಲ್ ಕೊರೆಯುತ್ತಿದ್ದಾರೆ.  ಹೆಚ್ಚು ಆಳದಲ್ಲಿ ದೊರೆಯುವುದು ಶುದ್ಧ ನೀರಲ್ಲ, ಬದಲಿಗೆ ಅದು ಫ್ಲೋರೈಡ್, ಅರ್ಸೆನಿಕ್, ನೈಟ್ರೇಟ್ ಮುಂತಾದ ಅಂಶಗಳನ್ನು ಒಳಗೊಂಡ ವಿಷಕಾರಿ ನೀರು. 

ರಾಜ್ಯದಲ್ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಕೆರೆಗಳಿದ್ದು,  ಅವುಗಳಿಗೆ ನೀರು ತುಂಬಿಸುವ ಕಾರ್ಯವಾದರೆ ಅಂದಾಜು 600 ಟಿಎಂಸಿ ನೀರು ಶೇಖರಿಸಿಟ್ಟರೆ ಅಂತರ್ಜಲ ವೃದ್ಧಿಯಾಗಿ   ಕೃಷಿ ಬಳಕೆಗೆ ಮತ್ತು  ಶುದ್ಧ ಕುಡಿಯುವ ನೀರು ಪಡೆಯಬಹುದು.  ಅಲ್ಲದೇ ಎಲ್ಲ ಮನೆಗಳು ಮತ್ತು ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸು ವುದು ಇಂದಿನ ಅತ್ಯಂತ ಅಗತ್ಯಗಳಲ್ಲಿ ಒಂದು ಎಂದರು.

ಗೋಷ್ಠಿಯಲ್ಲಿ ಮಡ್ಡಿಕೆರೆ ಗೋಪಾಲ್ ಸ್ವಾಗತಿಸಿದರು, ಎಸ್. ನಾಗರಾಜು ನಿರ್ವಹಿಸಿ  ದರೆ, ರಮೇಶ ಆನವಟ್ಟಿ ವಂದಿಸಿದರು, ಬಿ.ಎಂ. ಜಗಾಪುರ ನಿರೂಪಿಸಿದರು.

error: Content is protected !!