ಮಹಿಳಾ ಶಿಕ್ಷಣಕ್ಕೆ ಸಾವಿತ್ರಿ ಫುಲೆ ಕೊಡುಗೆ ಅಪಾರ

ಮಹಿಳಾ ಶಿಕ್ಷಣಕ್ಕೆ ಸಾವಿತ್ರಿ ಫುಲೆ ಕೊಡುಗೆ ಅಪಾರ

ದಾವಣಗೆರೆ, ಜ. 6- ಸಾವಿತ್ರಿ ಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಸಿದ್ದರು ಎಂದು ಕನ್ನಡ ಶಿಕ್ಷಕಿ ಶ್ರೀಮತಿ ಎಸ್. ಮಂಜುಳಾ ಹೇಳಿದರು.

ತಾಲ್ಲೂಕಿನ ಎಲ್ಲಮ್ಮ ನಗರದ ಉರ್ದು ಶಾಲೆಯಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಸಮಾರಂಭದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಚಿಂತನೆಗಳು ಕುರಿತು ಉಪನ್ಯಾಸ ಮಂಡಿಸಿದ ಅವರು,  19ನೇ ಶತಮಾನದ ಭಾರತದ ಪ್ರಸಿದ್ಧ ಸಮಾಜ ಸುಧಾರಕಿಯಾಗಿದ್ದ ಸಾವಿತ್ರಿಬಾಯಿ ಫುಲೆ ಅವರು ಶ್ರೇಷ್ಠ ಲೇಖಕಿ ಸಹ ಹೌದು.   ಗರ್ಭಿಣಿ ಮತ್ತು ಶೋಷಿತ ವಿಧವೆಯರ ಸುರಕ್ಷತೆಗಾಗಿ ತಮ್ಮ ಸ್ವಂತ ಮನೆಯಲ್ಲಿ ಶಿಶುಹತ್ಯೆ ತಡೆಗಟ್ಟುವ ಮನೆ ಪ್ರಾರಂಭಿಸಿದರು.  

ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ ವರದಕ್ಷಿಣೆ ಅಥವಾ ಬಹಿರಂಗ ವೆಚ್ಚಗಳಿಲ್ಲದೆ ಮದುವೆಯ ಅಭ್ಯಾಸವನ್ನು ಪ್ರಾರಂಭಿಸಿದ ಭಾರತದ ದಿಟ್ಟ ಮಹಿಳೆ ಅವರಾಗಿದ್ದರು ಎಂದು ಹೇಳಿದರು. 

ಅತಿಥಿಗಳಾಗಿ ಆಗಮಿಸಿದ್ದ ಉರ್ದು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶಗುಫ್ತ ಯಾಸ್ಮಿನ್ ಮಾತನಾಡಿ, ಭಾರತದಲ್ಲಿ ಸಾಮಾಜಿಕ ವಿಮೋಚನೆಗಾಗಿ ಜಾತ್ಯತೀತ ಶಿಕ್ಷಣಕ್ಕೆ ಅವರು ಒತ್ತು ನೀಡಿದ್ದು, ಅವರ ವ್ಯಕ್ತಿತ್ವದ ಮುಖ್ಯ ಗುರುತು. ಮಹಿಳೆಯರ ಶಿಕ್ಷಣಕ್ಕಾಗಿ ಹಗಲಿರಲು ಶ್ರಮಿಸಿದರು ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಇಶ್ರತ್  ಸುಲ್ತಾನ ಮಾತನಾಡಿದರು.

ನಿವೃತ್ತ ಶಿಕ್ಷಕರಾದ ಶ್ರೀಮತಿ ಫರಹತ್ ಬಾನು, ಶ್ರೀಮತಿ ನಸ್ರೀನ್ ಬಾನು, ಶ್ರೀಮತಿ ರಿಹಾನ ಕಾತುನ್ ಇವರುಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಅತಿಕ, ನೂರೈನ್, ಹುಸೇನಾ ಬಾನು, ಆಫ್ರಿನ್ ಬಾನು, ತೆಹರಿನ್, ಸೂಫಿಯಾ ಬಾನು, ನಗ್ಮಾ ಬಾನು, ಶಾಯಿಸ್ತನಾಜ್, ನೊರೈನ್ ವಿದ್ಯಾರ್ಥಿನಿಯರು ಸಾವಿತ್ರಿಬಾಯಿ ಫುಲೆ ಅವರ ವೇಷವನ್ನು ಧರಿಸಿದ್ದರು. ಅಫ್ಜಲ್, ಅಮರ್ ಬೇಗ್‌, ಜಿಶಾನ್, ವಿದ್ಯಾರ್ಥಿಗಳು ಜ್ಯೋತಿಬಾ ಫುಲೆ ಅವರ ವೇಷಧಾರಿಗಳಾಗಿ ಕಾಣಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಎಸ್. ಮಂಜುಳಾ ಸಾವಿತ್ರಿಬಾಯಿ ಫುಲೆ ಬಗ್ಗೆ ಸ್ವತಃ ಕವನ ಬರೆದು ಹಾಡಿದರು.

ಶ್ರೀಮತಿ ಷಾತಾಜ್ ಬಾನು ಸ್ವಾಗತಿಸಿದರು. ಮದೀಹ ಪ್ರಾರ್ಥಿಸಿದರು. ಶ್ರೀಮತಿ ನಾಜಿಮಾ ಖಾನಂ  ವಂದಿಸಿದರು.  ಶ್ರೀಮತಿ ಸೈರಾಬಾನು ಮತ್ತು ಶಾಯಿನ್ ಪರ್ವೀನ್ ಉಪಸ್ಥಿತರಿದ್ದರು.

error: Content is protected !!