ಜಗತ್ತಿನಾದ್ಯಂತ ಭಾರತದ ಸಂಸ್ಕೃತಿ ಪಸರಿಸಬೇಕು

ಜಗತ್ತಿನಾದ್ಯಂತ ಭಾರತದ ಸಂಸ್ಕೃತಿ ಪಸರಿಸಬೇಕು

ಚಾಣಕ್ಯ ಸಂಸ್ಕೃತಿ ಸೌರಭ-23 ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ್

ದಾವಣಗೆರೆ, ಏ.29- ಪ್ರಸ್ತುತ ಜಾಗತೀಕರಣದ ಕಾಲಘಟ್ಟದಲ್ಲಿ ಸಂಸ್ಕೃತಿಯಿಂದ ವಿಚ್ಛಿನ್ನವಾಗುತ್ತಿರುವ ಜಗತ್ತಿಗೆ ನಮ್ಮ ಭಾರತದ ಅಗಾಧ ಶ್ರೀಮಂತ ಸಂಸ್ಕೃತಿಯನ್ನು ಪಸರಿಸುವ ಹೊಣೆಗಾರಿಕೆ ನಮ್ಮ ಯುವ ಪೀಳಿಗೆ ಮೇಲಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ್ ಹೇಳಿದರು. 

ಶನಿವಾರ ನಗರದ ಚಾಣಕ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಚಾಣಕ್ಯ ಸಂಸ್ಕೃತಿ ಸೌರಭ-23 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂಸೆ, ಅಶಾಂತಿ ಹಾಗೂ ಅಮಾನವೀಯತೆಯ ಈ ಜಗತ್ತಿನಲ್ಲಿ ಮನುಷ್ಯನನ್ನು ಕೂಡಿಸುವ ಕಾರ್ಯ ಆಗಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿ ಕೆಲಸ-ಕಾರ್ಯ ಹಾಗೂ ನಡವಳಿಕೆಯಲ್ಲಿ ತಮ್ಮ ದೇಶೀತನವನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆ. ವಿದ್ಯಾರ್ಥಿ ಜೀವನದ ಕಲಿಕೆಯ ಈ ಹಂತದಲ್ಲಿಯೇ ನಾನೇನು ಕಲಿತೆ ಎನ್ನುವುದಕ್ಕಿಂತ ಜಗತ್ತು ನನ್ನಿಂದ ಏನನ್ನು ಅಪೇಕ್ಷಿಸುತ್ತಿದೆ ಎಂದು ಅರಿತು, ಅದರತ್ತ ಗಮನ ನೀಡಿ ಸಾಧಿಸಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹುಟ್ಟು ಹಾಗೂ ಸಾವಿನ ನಡುವೆ ಏಕಾಂಗಿಯಾಗಿರುವ ನಾವುಗಳು, ಹುಟ್ಟು-ಸಾವುಗಳ ನಡುವೆ ನಿರ್ದಿಷ್ಟ ಯೋಜನೆ ರೂಪಿಸಿ, ಛಲ ಮತ್ತು ಸಂಕಲ್ಪದಿಂದ ಸಾಧಿಸಿ ಅಮರರಾಗಬೇಕು ಎಂದರು.

ಚಾಣಕ್ಯ ಸಂಸ್ಥೆಯ ಡೀನ್ ಬಿ.ಆರ್.ಟಿ.ಸ್ವಾಮಿ ಮಾತನಾಡಿ, ಇಂದಿನ ಯುವ ಜನಾಂಗ ದಾರಿ ತಪ್ಪಿಲ್ಲ, ಯುವ ಜನಾಂಗ ಸಂಸ್ಕೃತಿ ಹೀನವಾಗಿಲ್ಲ, ಆದರೆ ಅವರನ್ನು ರೂಪಿಸುವ, ಅಣಿಗೊಳಿಸುವ ವಿದ್ಯಾಸಂಸ್ಥೆಗಳು, ಪೋಷಕರು ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ. ಸಾಮಾಜಿಕ ಮಾಧ್ಯಮಗಳು ಹಾಗೂ ದೃಶ್ಯ ಮಾಧ್ಯಮಗಳು ಅವರ ಮೇಲೆ ಪ್ರಭಾವ ಬೀರುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ವೆಂಕಟೇಶ್ ಬಾಬು ಅವರು ಮೊಟ್ಟ ಮೊದಲ ಬಾರಿಗೆ ವೋಟು ಮಾಡಲಿರುವ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೆಂಕಟೇಶ್ ಬಾಬು, ಮಂಜುನಾಥ್, ರೂಪ ನಾಗರಾಜ್ ಶೆಟ್ಟಿ, ಜಯಶ್ರೀ ಗುಜ್ಜಾರ್ ಆಗಮಿಸಿದ್ದರು. ಕಾಲೇಜಿನ ಪ್ರಾಚಾರ್ಯ ಕೆ. ರಾಜಶೇಖರ್, ಅರುಣ್ ಕುಮಾರ್, ಭರತ್ ರಾಜ್, ಶಾಂತಲಾ ಮತ್ತಿತರರಿದ್ದರು.

error: Content is protected !!