ಕನ್ನಡ ಕಲಿಕಾ ಚೇತರಿಕೆ ಉಪಕ್ರಮದ ಯಶೋಗಾಥೆ..!

ಕನ್ನಡ ಕಲಿಕಾ ಚೇತರಿಕೆ ಉಪಕ್ರಮದ ಯಶೋಗಾಥೆ..!

ಕೋವಿಡ್-19 ಕಾರಣದಿಂದ, ಮಕ್ಕಳ ಕಲಿಕಾ ಪ್ರಗತಿ ಎರಡು ವರ್ಷಗಳ ಕಾಲ  ಕುಂಠಿತವಾದ ಹಿನ್ನೆಲೆಯಲ್ಲಿ ಸರ್ಕಾರವು 1ರಿಂದ 9 ನೇ ತರಗತಿವರೆಗಿನ ಮಕ್ಕಳ ಬುನಾದಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕಲಿಕಾ ಚೇತರಿಕೆ ಉಪಕ್ರಮದ  ಶೈಕ್ಷಣಿಕ ಯೋಜನೆಯನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿತು. 

ಈ ಹಿನ್ನೆಲೆಯಲ್ಲಿ ಶಿಕ್ಷಕರು ಸುಗಮಕಾರ ರಾಗಿ ಪಾತ್ರವಹಿಸಿ,  ಮಕ್ಕಳಿಗೆ ಕಲಿಕಾ ಫಲ ಗಳ ಆಧಾರಿತ ಓದು, ಬರಹಗಳನ್ನು ವೈವಿಧ್ಯ ಮಯ ಚಟುವಟಿಕೆಗಳ ಮೂಲಕ ಕಲಿಸು ವಂತಹ  ಕಲಿಕಾ ಪ್ರಕ್ರಿಯೆಗಳು ಶಾಲೆಗಳಲ್ಲಿ ಮೇ ತಿಂಗಳಿನಿಂದ ಇಲ್ಲಿಯವರೆಗೂ ಯಶಸ್ವಿಯಾಗಿ ನಡೆಯುತ್ತಾ ಬಂದಿವೆ.

ಇದಕ್ಕೆ ಸಂಬಂಧಿಸಿದಂತೆ ಕಲಿಕಾ ಚೇತರಿಕೆ ಉಪಕ್ರಮ ಕುರಿತಾದ ಸಮಾಲೋ ಚನಾ ಸಭೆಗಳನ್ನು  ನಮ್ಮ  ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು  ತಿಂಗಳಿಗೊಮ್ಮೆ  ಪರಿಣಾಮಕಾರಿಯಾಗಿ  ನಡೆಸುತ್ತಾ ಬಂದು, ಕಲಿಕಾ ಫಲ ಆಧಾರಿತ  ಮಕ್ಕಳಿಗೆ ವೈವಿಧ್ಯಮಯ ಚಟುವಟಿಕೆಗಳನ್ನು ಕಲಿಸುವಾಗ ಶಿಕ್ಷಕರಿಗೆ ಎದುರಾಗುವ ಕಲಿಕಾ ಸಮಸ್ಯೆಗಳನ್ನು ಹೇಗೆ ಪರಿಹರಿಸ ಬೇಕು.? ಹೇಗೆ ಮಕ್ಕಳಲ್ಲಿ ಕಲಿಕಾ ಪ್ರಗತಿ ಯುಂಟು ಮಾಡಬೇಕು..? ಎಂಬುದನ್ನು ಶಿಕ್ಷಕರೇ ಪರಸ್ಪರ ಚರ್ಚಿಸಿ, ಪರಿಹಾರ ಪಡೆಯುವಂತೆ ಇಲಾಖೆ ಮಾಡಿತು. 

ಇಲಾಖೆಯ ಹಾಗೂ ಶಿಕ್ಷಕರ ಸಾಕಷ್ಟು  ಪರಿಶ್ರಮ,  ಪ್ರಯತ್ನಗಳ ಫಲಶೃತಿಯಾಗಿ ಮೂಡಿಬಂದುದು ಕಲಿಕಾ ಚೇತರಿಕೆಯ ಯಶೋಗಾಥೆ!  

ಕಳೆದ 9ರಂದು ಶುಕ್ರವಾರ ದಾವಣಗೆರೆ ತಾಲ್ಲೂಕಿನ ಹೂವಿನಮಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ   ಕನ್ನಡ  ಭಾಷಾ ಶಿಕ್ಷಕಿಯಾದ ನಾನು, ಕಲಿಕಾ ಚೇತರಿಕೆ  ಈ ಯಶೋಗಾಥೆ ಸಾರುವ ಮಕ್ಕಳ ಕಲಿಕಾ ಚಟುವಟಿಕೆಗಳ ದಾಖಲೆ-ಕೃತಿ ಸಂಪುಟಗಳನ್ನು  8 ಮತ್ತು 9 ನೇ ತರಗತಿಗಳ ಕನ್ನಡ ಭಾಷಾ ಬೋಧನೆಯ  ಅವಧಿಗಳಲ್ಲಿ ಪ್ರದರ್ಶನ ಮಾಡಿಸಲಾಯಿತು. 

ಮಕ್ಕಳಲ್ಲಿರುವ ವೈವಿಧ್ಯಮಯ ಕಲಿಕಾ ಕೌಶಲ್ಯಗಳಲ್ಲಿ ಕೆಲವನ್ನು ಪುನರಾವರ್ತನೆ ಯಂತೆ  ಅಭಿವ್ಯಕ್ತಿ ಮಾಡಿಸಿದೆವು.ಕಲಿತದ್ದನ್ನು ಮರೆತಿದ್ದ  ಮಕ್ಕಳು ಮತ್ತೆ ಸ್ಮರಿಸಿಕೊಂಡು  ಹೇಳಲು ಈ ಪ್ರದರ್ಶನ ತುಂಬಾ ಸಹಾಯಕವಾಯಿತು.  ಚುಟುಕು ಕವಿತೆ ಹೇಳುವ, ಅನುಕರಣೆ ಮಾಡುವ, ಸಂಭಾಷಿಸುವ, ಅನಿಸಿಕೆ ಹೇಳುವ, ಬರೆಯುವ, ನಾಟಕ ಅಭಿನಯ ಮಾಡುವ, ನೃತ್ಯ ಮಾಡುವ ಹೀಗೆ ತಮಗಿಷ್ಟದ ನಾನಾ ಪ್ರಕಾರಗಳಲ್ಲಿ ವರ್ಷದಿಂದ ಕಲಿತ ಕಲಿಕೆಗಳಲ್ಲಿ  ಕೆಲವು  ಕಲಿಕಾ ಕಲೆಗಳನ್ನು ಪ್ರದರ್ಶಿಸಿ, ಆನಂದಿಸಿದರು.   

ಶಿಕ್ಷಕರ ಪ್ರಾಮಾಣಿಕ ಶ್ರಮ  ಸಾರ್ಥಕ ವಾಗಿದೆ. ಇದು ಮುಂಬರುವ ವರ್ಷಗಳಲ್ಲಿ  ಸಮಾಜದ ಅನೇಕ ಪಿಡುಗುಗಳನ್ನು ತೊಡೆದು ಹಾಕಲು; ಶಾಲಾ ಕೊಠಡಿಗಳೇ ಶಾಂತಿಯುತ, ಪ್ರಭಾವಯುತ ಶೈಕ್ಷಣಿಕ ಕ್ರಾಂತಿಯ ಆಲಯಗಳಂತಾಗಿ  ಸಮಾಜದ ಸ್ವಾಸ್ಥ್ಯವನ್ನು  ಕಾಪಾಡಲು ಮಹತ್ತರ ಪಾತ್ರವಹಿಸುತ್ತದೆ ಎಂದರೆ ಅತಿಶಯೋಕ್ತಿ ಖಂಡಿತಾ ಅಲ್ಲ.

ರಾಷ್ಟ್ರೀಯ ಶೈಕ್ಷಣಿಕ ಯೋಜನೆಯ ಹಿಂದೆ ಇರುವ ಅಂತಿಮ ಗುರಿ ಆದರೂ  ಬಲಿಷ್ಠ ರಾಷ್ಟ್ರದ ನಿರ್ಮಾಣವೇ. ದೇಶ ಪೋಷಣೆಯ ಸಕಲ ಶೈಕ್ಷಣಿಕ ನೀತಿಗಳು, ಆಶಯಗಳು – ಲಕ್ಷಾಂತರ  ಶಿಕ್ಷಕರ ಮತ್ತಷ್ಟು    ಮತ್ತಷ್ಟೂ  ಸೇವಾ ಶ್ರದ್ಧಾ ಸಮರ್ಪಣೆಯ ಮನೋಭಾವಗಳಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿ.  ಭಾರತ ಮಾತೆ ಸದಾ ಕಾಲ ಸಕಲ ಸಂಪದದಿಂದ ಕಂಗೊಳಿಸಲಿ ಎಂದು ನಾನು ಭಾವಿಸುವೆ. 


 – ಎ. ಸಿ. ಶಶಿಕಲಾ ಶಂಕರಮೂರ್ತಿ, ಕನ್ನಡ ಭಾಷಾ ಶಿಕ್ಷಕಿ, ದಾವಣಗೆರೆ.

error: Content is protected !!