ಕೊಟ್ಟೂರು ಧರ್ಮ, ಸಂಸ್ಕೃತಿಗಳ ತವರು ಮನೆ, ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಊರಿನ ಕೊಡುಗೆ ಅಪಾರ. ಬಸವಣ್ಣನವರ ವಚನಗಳನ್ನು ನಾಡಿನಲ್ಲಿಯೇ ಮೊಟ್ಟಮೊದಲು ಹಿಂದಿ ಭಾಷೆಗೆ ಅನುವಾದ ಮಾಡಿದವರು ಸಹ ಕೊಟ್ಟೂರಿನ ಪ್ರತಿಭೆಯೆಂಬುದು ಹೆಮ್ಮೆಯ ವಿಷಯ.
ಕೊಟ್ಟೂರಿನ ಬಣಕಾರ ಮನೆತನದ ಗೌಡಪ್ಪನವರು ಕಾಶಿ ವಿದ್ಯಾಪೀಠದಿಂದ ಹಿಂದಿ ಸಾಹಿತ್ಯದಲ್ಲಿ ಪದವಿ ಪಡೆದವರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಅಪ್ರತಿಮ ದೇಶಪ್ರೇಮಿ. 30ರ ದಶಕದಲ್ಲಿ ಕೊಟ್ಟೂರು ಸ್ವಾತಂತ್ರ್ಯ ಹೋರಾಟದ ಕೇಂದ್ರ ಬಿಂದು. ಮಹಾತ್ಮಾ ಗಾಂಧಿ, ಬಾಬು ರಾಜೇಂದ್ರ ಪ್ರಸಾದ್, ಕಮಲಾದೇವಿ ಚಟ್ಟೋಪಾಧ್ಯಾಯ ಮುಂತಾದ ರಾಷ್ಟ್ರನಾಯಕರು ಕೊಟ್ಟೂರಿಗೆ ಭೇಟಿ ನೀಡಿ, ಚಳವಳಿಗೆ ಹುರುಪು ತುಂಬಿದ್ದರು. ಹಾಗಾಗಿ ಗೌಡಪ್ಪನವರು ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವದೇಶಿ ಚಳವಳಿಯಲ್ಲಿ ಪಾಲ್ಗೊಂಡವರು. ಕೊಟ್ಟೂರಿನ ಹರಿಜನ ಕೇರಿಯಲ್ಲಿ ದೀನ ಸೇವಾ ಸಂಘವನ್ನು ಸ್ಥಾಪಿಸಿ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡರು. ಈ ಸಂಘದ ಚಟುವಟಿಕೆಗಳಿಗಾಗಿ ಕೋಗಳಿ ತೋಟನಗೌಡರಿಂದ ಆರು ಎಕರೆ ಜಮೀನನ್ನು ದಾನವಾಗಿ ನೀಡಿದ್ದರು.
ಮಹಾತ್ಮ ಗಾಂಧಿಜಿಯವರು ಕೊಟ್ಟೂರಿಗೆ ಭೇಟಿ ನೀಡಿದಾಗ `ದೀನ ಸೇವಾ ಸಂಘ’ದ ಆಶ್ರಮಕ್ಕೆ ಅಡಿಗಲ್ಲು ಹಾಕಿಸಿದರು. (ಈಗ ಈ ಜಾಗದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡೆಯುತ್ತಿದೆ. ಇಂದಿಗೂ ಇದನ್ನು ಗಾಂಧಿ ತೋಟ ಎಂದೇ ಕರೆಯುವ ರೂಢಿಯಲ್ಲಿದೆ) ಖಾದಿ ಪ್ರಚಾರ, ವಿದೇಶಿ ವಸ್ತ್ರ ಬಹಿಷ್ಕಾರ, ದೀನರ ಉದ್ದಾರ, ಪಾನ ನಿಷೇಧ ಮುಂತಾದ ಚಟುವಟಿಕೆಗಳಿಗೆ ಈ ಆಶ್ರಮ ಕೇಂದ್ರವಾಗಿತ್ತು. ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲು ವಾಸವನ್ನೂ ಸಹ ಅನುಭವಿಸಬೇಕಾಯಿತು.
ಜೈಲಿನಿಂದ ಬಿಡುಗಡೆಯಾದ ಮೇಲೆ ಆಂಧ್ರದ ಕಡಪ ಮತ್ತಿತರ ಕಡೆಗಳಲ್ಲಿ ಸರಕಾರಿ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು.
ನಿವೃತ್ತಿಯ ನಂತರ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹರಪನಹಳ್ಳಿ ಮತ್ತು ಅರಸೀಕೆರೆ ಪದವಿ ಕಾಲೇಜುಗಳಲ್ಲಿ ಸ್ಥಾಪಕ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು ಸ್ಮರಣೀಯ ವಿಚಾರ. ಆಗ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆಣತಿಯಂತೆ ಬಸವಣ್ಣನವರ ವಚನಗಳನ್ನು ಅನುವಾದಿಸಿದ್ದರು.
ಈ ಅನುವಾದದಿಂದ ಕೃತಿಯನ್ನು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಗಳವರು ಶ್ರೀ ಮಠದಿಂದ ಪ್ರಕಟಿಸಿದ್ದಾರೆ. ಕಳೆದ ಬಸವ ಜಯಂತಿಯ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಿರುತ್ತಾರೆ. ಪ್ರೊ. ಬಣಕಾರ ಗೌಡಪ್ಪನವರ ಸಹೋದರ ಬಣಕಾರ ಸಿದ್ಧಲಿಂಗಪ್ಪನವರು ಸಹ ಅಣ್ಣನ ದಾರಿಯಲ್ಲಿ ಹೆಜ್ಜೆ ಹಾಕಿ, ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಒಂದೇ ಕುಟುಂಬದ ಇಬ್ಬರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ವಾಸ ಅನುಭವಿಸಿದವರು. ಬಸವಣ್ಣನವರ ಷಟ್ ಸ್ಥಲ ವಚನಗಳನ್ನು ಹಿಂದಿ ಭಾಷಿಗರಿಗೂ ಓದುವಂತೆ ಮಾಡಿಕೊಟ್ಟ ಪ್ರೊ. ಬಣಕಾರ ಗೌಡಪ್ಪನವರ ಸೇವೆಯನ್ನು ಕೊಟ್ಟೂರಿನಲ್ಲಿ ಜರುಗುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಸ್ಮರಿಸುತ್ತಿರುವುದು ಅರ್ಥಪೂರ್ಣ.
– ನಾಗರಾಜ ಸಿರಿಗೆರೆ, ಕನ್ನಡ ಅಧ್ಯಾಪಕರು, ದಾವಣಗೆರೆ