ಕೃಷ್ಣನೆಂಬ ಕೌತುಕ…

ಆಧ್ಯಾತ್ಮ ಸಾಹಿತ್ಯ ಜಗತ್ತಿನಲ್ಲಿ ಕೃಷ್ಣನ ವ್ಯಕ್ತಿತ್ವದ ಬಗ್ಗೆ ಓದುತ್ತಿದ್ದಿದ್ದಕ್ಕಿಂತ ಓದದೇ ತಿಳಿಯದೇ ಬರೆದಿದ್ದೇ ಹೆಚ್ಚು. ಅಂತಹ ಪೀಠಿಕಾ ಪಂಡಿತರ ಜಗತ್ತಿನಲ್ಲಿ ಈಗ ನಾವಿದ್ದೇವೆ. ಎಲ್ಲಾ ಕಡೆಯಲ್ಲೂ ರಾಜಕೀಯ ಇದ್ದದ್ದೇ ಅದರ ಪ್ರಕಾರ, ರಂಗಮಂಚಗಳಷ್ಟೇ ಬೇರೆ ಬೇರೆ. ಆದರೆ ಅದು ನಮ್ಮ ಭವಸಾಗರವನ್ನು ದಾಟಿಸಲಿಕ್ಕಿರಬೇಕೆ ಹೊರತು. ಮುಳುಗಿಸಲಿಕ್ಕಲ್ಲ. ಇದನ್ನೇ ಕೃಷ್ಣ ಹೇಳಿದ್ದು. ಇದನ್ನು ತಿಳಿದೂ, ತಿಳಿಯದಂತಿರುವದರಲ್ಲೇ ಮುಗಿಯುತ್ತದೆ ನಮ್ಮ ಜಾಣ್ಮೆ.

ಕೃಷ್ಣನ ಬದುಕೆಂಬ ಗಂಗೆಯೇ ಹಾಗೆ, ತೇಲಿದರೆ ಮೈ ಜಳಜಳ, ಮುಳುಗಿದರೆ ಮುಕ್ತಿರತ್ನ, ಬಾಲ್ಯದಿಂದಲೂ ಕೌತುಕ, ಆಶ್ಚರ್ಯ, ಅತಿಯ, ಅಮಾನುಷ ಹೀಗೆ ಎಲ್ಲವನ್ನೂ ತನ್ನ ಗುಟ್ಟಿನಲ್ಲೇ ಇಟ್ಟು, ಎಲ್ಲರ ಮೋಡಿಮಾಡಿದವ `ಹಿಡಿದರೆ ಹಿಡಿತುಂಬ ಬಿಟ್ಟರೆ ಮನೆ ತುಂಬಾ’. ಇದನ್ನೇ ಕುಮಾರವ್ಯಾಸನು `ಈಸು ಮಹಿಮೆಯ ಮೆರೆಸಿ, ಲೋಕವಿಲಾಸ ಚೇಷ್ಟೆಯನುಸರಿಸಿ, ನರ ವೇಷವನು ನಟಿಸಿದನು ಹರಿ, ಹೂಳಿದ ನಿಜೋನ್ನತಿಯ’ ಎಂದು ಹೇಳಿದ್ದಾನೆ. ಯುದ್ಧ ರಂಗದಲ್ಲಿ ಬಂಧುಗಳ ನಾಶಕ್ಕೆ ಮರುಗಿದ ಅರ್ಜುನನಿಗೆ, `ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ’ ಎಂಬ ಒಂದು ವಾಕ್ಯದಿಂದಲೇ ಅಂದಿಗೂ ಇಂದಿಗೂ, ಎಂದೆಂದಿಗೂ, ವಿಷಯ-ನಿಕಷಕ್ಕೆ ಇನ್ನೂ ಒರೆಯಾಗುವಂತಹ ಭಗವದ್ಗೀತೆ, ಎಂದೆಂದಿಗೂ ಅಜರಾಮರ.  ತಾನು ತೊಟ್ಟಿರುವುದು ಬರೀ ಬಟ್ಟೆ, ಆ ಬಟ್ಟೆಯೊಳಗಿರುವುದೇ ಜೀವಾತ್ಮನೆಂಬ ಮೊಟ್ಟೆ, ಬಟ್ಟೆ ತೊಟ್ಟಿದ್ದೇನೆಂದು ತಿಳಿದವನಿಗೆ ಮಾತ್ರ ಅದರ ಕಿತ್ತೆಸೆವ ಕಸವು ಚಿಕ್ಕಂದಿನಲ್ಲೇ ದೊಡ್ಡತನ ತೋರಿದವನೇ ಮುಂದೆ ಮಹಿಮಾ ಪುರುಷನಾಗುತ್ತೆಯೇ ಹೊರತು, ಅಲ್ಪನಲ್ಲ. ಇನ್ನೊಬ್ಬನು ದುರ್ಬಲನಾಗಲಿ ಎಂಬುದನು ಎಂದಿಗೂ ಬಲಿಷ್ಠನಾಗಲಾರ. ಕೃಷ್ಣನ ಆತ್ಮ ಕಥೆ ತೊಗಲು ಗಣ್ಣಿನಿಂದ ಕಾಣದ್ದು.

ಹೆಣ್ಣು ಮಕ್ಕಳೆ ಹೀಗೆ ಮುದ್ದಾದ ಮಕ್ಕಳನ್ನು ಕಂಡರೆ ಮಗುವಿನ ಕೆನ್ನೆ ಸವೆದು ಹೋಗುವಷ್ಟು ಮುದ್ದಿಡುವ ಹುಚ್ಚು, ಪುರಾಣ ಪ್ರಪಂಚದಲ್ಲಿ ಇಷ್ಟು ಮುದ್ದಿಸಿಕೊಂಡ ಪಾತ್ರ ಮತ್ತೊಂದಿಲ್ಲ. ಬೇರೆ ಬೇರೆ ಪಾತ್ರಗಳಲ್ಲಿ ರೋಚಕತೆ ಇದ್ದರೆ, ಮತ್ತೆ ಕೆಲವು ಹಲವು ಹಾದಿ. ಹಾಗಲ್ಲ ಈ ಕೃಷ್ಣ ಕಥೆ ಆದಾವಂತೇ ಚ ಮಧ್ಯೇ ಚ ರೋಚಕ.

ಹೀಗೊಂದು ನಂಬಿಕೆಯಿದೆ, ರಾಮಾಯಣದಲ್ಲಿ ರಾಮನ ಪಟ್ಟಾಭಿಷೇಕದ ನಂತರ ಬರುವ ಉತ್ತರರಾಮಚರಿತ್ರೆಯನ್ನು, ಮಹಾಭಾರತ ಮತ್ತು ಭಾಗವತದಲ್ಲಿ ಬರುವ ಕೃಷ್ಣಾವತಾರದ ಅಂತಿಮ ಕಥಾ ಪ್ರಸಂಗವನ್ನು ಕೇಳಬಾರದೆಂದು, ಅದಕ್ಕೆಂದೇ ಆದಿ ಪರ್ವದಿಂದ ಆರಂಭವಾದ ಕಥಾ ಪ್ರಸಂಗ ಧರ್ಮಜನ ಪಟ್ಟಾಭಿಷೇಕದವರೆಗೆ ಮಾತ್ರ ಶ್ರವಣ, ಭಾಗವತದಲ್ಲಿ ಕೃಷ್ಣ ರುಕ್ಮಿಣಿಯರ ಅಥವಾ ಅಷ್ಟಮಹಿಷಿಯರ ವಿವಾಹ ಪರ್ಯಂತ ಶ್ರವಣ. ಆದರೆ ಕೃಷ್ಣಾವತಾರದ ಮಥಿತಾರ್ಥವಾಗುವುದೇ ಕೊನೆಯ ಘಳಿಗೆಯಲ್ಲಿ.

ಕೃಷ್ಣನಿಗೆ ಅವತಾರವಾಗಲಿ ಅಥವಾ ಪರಿಸಮಾಪ್ತಿಯಾಗಲಿ, ಅದು ಅವನಿಗೊಂದು ಅಭಿನಯ, ಧರ್ಮ ಸಂಸ್ಥಾಪನೆಯೊಂದೇ ಅವನ ಅಭಿನಯಕ್ಕೆ ಸಲ್ಲುವ ಸಂಭಾವನೆ. ಅದು ಭಗವಂತನೇ ಇರಲಿ, ಭಕ್ತನೇ ಇರಲಿ, ಈ ನೆಲದಲ್ಲಿದ್ದ ಮೇಲೆ ವಿಮರ್ಶಾತೀತರೇನಲ್ಲ, ಹಾಗೆಂದ ಮಾತ್ರಕ್ಕೆ ಅವರ ಮೇಲಿರುವ ಗೌರವಕ್ಕೇನೂ ಕುಂದಿಲ್ಲ. ಅಸಹಾಯ ಶೂರನೆನಿಸಿದ ಅರ್ಜುನನಿಗೆ ಜಯವನ್ನು, ಯಾವ ಯದುನಂದನ ತಂದಿತ್ತನೋ, ಅದೇ ಪಾರ್ಥ, ಪಾರ್ಥ ಸಖನಿಲ್ಲದಾಗ ನಿರ್ವೀರ್ಯನಾದ. ಮದ್ಯಪಾನ ನೆಪದಿಂದ ಕಣ್ಣೆದುರಿನಲ್ಲೇ ವಂಶನಾಶವಾಗುತ್ತಿದ್ದರೂ ಮೂಕ ಪ್ರೇಕ್ಷಕನಾಗಿದ್ದ ಅದೇ ಕೃಷ್ಣ ಅಶ್ವತ್ಥಾಮನಿಂದ ಉತ್ತರೆ ಗರ್ಭವನ್ನುಳಿಸಿದ.

ಬಂಧೀಖಾನೆಯಲ್ಲಿ ಹುಟ್ಟಿದ ಕೃಷ್ಣ, ಬೆಳೆದದ್ದು ಗೊಲ್ಲರ ಕುಲದಲ್ಲಿ. ತಾನಾಗಿಯೇ ಒದಗಿ ಬಂದ ಅರಸೊತ್ತಿಗೆಯನ್ನು ಬಯಸದ, ಸಜ್ಜನರ ಭಕ್ತರ ಸೇವೆ ಮಾಡಿದ, ದೌತ್ಯ (ರಾಯಭಾರಿ) ಸಾರಥ್ಯ ಮಾಡಿದ್ದು, ದುರ್ಯೋಧನನ ರಾಜೋಪಚಾರವನ್ನು ಧಿಕ್ಕರಿಸಿ, ವಿದುರನ ಮನೆಯಲ್ಲಿ ಪಾಲುಂಡದ್ದು, ತಾವೇ ಜ್ಞಾನಿಗಳೆಂದು ಬೀಗುತ್ತಿದ್ದವರಿಗೆ ನಿಲುಕದ, ತನ್ನ ವಂಶದವರಿಗೆ ಅರ್ಥವಾಗದ, ಎಲ್ಲದಕ್ಕೂ ನಿರ್ಭಾವುಕತೆಯಿಂದ ಸಾಕ್ಷಿಭೂತನಾಗಿ ಪಂರಧಾಮಕ್ಕೆ ತೆರಳಿದವನ ಕಥೆಯನ್ನು, ಪುಸ್ತಕದ ಜೊತೆ ಮನವನಿಟ್ಟು ಓದಿದರಷ್ಟೇ ಮನಕರಗುವುದು.

ಈ ಬಾಳು, ಬದುಕು, ಈ ಲೋಕ ಯಾವುದೂ ತುಚ್ಛವಲ್ಲ, ಯಾರೂ ಉಚ್ಚರಲ್ಲ, ತನ್ನನರಿಯಲು, ಮುಕ್ತಿಪಥಕ್ಕೆ ಇದು ಸಾಧನ ಭೂಮಿಯೆಂದು ತೋರಲು, ತಾನೇ ಅವತರಿಸಿ, ಆಚರಿಸಿ, ತೋರಿಸಿದ ಕೃಷ್ಣನನ್ನರಿಯದೆ, ಅವನನ್ನೂ ಅವನ ಭಕ್ತರನ್ನೂ ಇಂದಿಗೂ ದ್ವೇಷಿಸುವವರು, ಆ ಕಾಲದಿಂದಲೂ ಇಂದಿನವರೆಗೂ ಇದ್ದಾರೆ. ಮುಂದೆಯೂ ಬಹುಶಃ  ಇರುತ್ತಾರೆ.

ಕೃಷ್ಣನ ಲೀಲೆಗಳೆಲ್ಲವೂ ಕೇವಲ ಸಾಂಕೇತಿಕವಾಗಿರದೇ ಅದರಲ್ಲೂ ತತ್ಪುವಿವೇಚನೆಯಿದೆ. ಒಂದೆರಡನ್ನು ನೋಡಿದರೆ ಸಾಕು ಎಲ್ಲಾ ಅಗುಳನ್ನು ಹಿಸುಕಬೇಕಾಗಿಲ್ಲ, ಕಾಮರೂಪಿಯಾದ ಕಾಳಿಂಗನ ಮರ್ದನವೆಂದರೆ, ಕುಂಡಲಿನಿ ರೂಪದಲ್ಲಿರುವ ಕಾಮವೇ ಈ ಸರ್ಪ, ಅದನ್ನು ಮೆಟ್ಟಿದನಂದೇ ಇಲ್ಲಿ ಧ್ವನಿತವಾಗುತ್ತದೆ. ಗೋಪಿಯರ ವಸ್ತ್ರ ಕದ್ದಾಗ ಕೃಷ್ಣ ಹತ್ತು ಹನ್ನೆರಡರೊಳಗಿನ ಪೋರ. ಅವರೊಂದಿಗಾಡಿದ ರಾಸಲೀಲೆ `ರಸ’ಭಾವವೇ ಹೊರತು `ರಾಜಸ’ ಭಾವವಲ್ಲ. ಕದ್ದದ್ದು ಬೆಣ್ಣೆಯಲ್ಲ ಅವರ ಹೃದಯದಲ್ಲಿರುವ ಭಕ್ತಿಯನ್ನು, ತಾಯಿಗೆ ಬಾಯಲ್ಲಿ ಎರಡು ಬಾರಿ ಬ್ರಹ್ಮಾಂಡವನ್ನೇ ಆಕಳಿಸಿ, ಬಾಯ್ತೆರೆದು ತೋರಿ ತನ್ನ ಅವತಾರದ ರಹಸ್ಯವನ್ನು ಕ್ಷಣಕಾಲ ತೋರಿ ಮತ್ತೆ ಮಮತೆಯ ಬಂಧನದ ಬೇಡಿ ತೊಡಿಸಿದವ.

ದ್ವಾಪರ ಮುಗಿದು, ಕಲಿಯ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಾ, ತ್ರಯೋದಶೀ, ಚತುರ್ದಶೀ ಮತ್ತು ಅಮಾವಾಸ್ಯಾ ಎಂಬ ತಿಥಿಗಳು ಒಂದೇ ದಿನ ಬರಲಿದ್ದು, ಈ ಪಂಚಾಂಗ ಅವಲಕ್ಷಣ ಗ್ರಹಗತಿ ತಿಳಿದು, ತನ್ನ ಪಟ್ಟ ಮಹಿಷಿಯರಿಗೆ ಮುಂಬರುವ ಅನರ್ಥಗಳ ಸೂಚನೆ ಕೊಡುತ್ತಾ `ಲೋಕದ ನಿಯಮಗಳಿಗೆ ನಾವೂ ಬದ್ಧರು’ ಎಂದು ತಿಳಿಸುತ್ತಾನೆ. ಸಾಕ್ಷಾತ್ ಕೃಷ್ಣ – ಜಾಂಬವತಿಯರ ಮಗನಾದ ಸಾಂಬನು ಕುಲಕುಠಾರನಾದರೂ ಇಲ್ಲಿ ನಿರ್ಮಮಿಯಾಗಿ ಬಿಡುತ್ತಾನೆ. ಕೊನೆಗಾಲದಲ್ಲಿ ಮರದಡಿಯಲ್ಲಿ ವಿಶ್ರಮಿಸುತ್ತಾ ಅವತಾರಸಮಾಪ್ತಿ ನಿರೀಕ್ಷೆಯಲ್ಲಿದ್ದಾಗಲೇ ಸಾಧಾರಣ ಮನುಷ್ಯರಂತೆ, ಬದುಕಿನ ಸರಿ-ತಪ್ಪುಗಳ ಲೆಕ್ಕಾಚಾರ ಮಾಡುತ್ತಾ, ದೈವದ ದಾಯವೇನು? ನಿಯತಿಯ ನಿಯಮಗಳೇನು? ಎಂದು ತನ್ನನ್ನು ತಾನೇ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕೃಷ್ಣನೆಂಬ ದೈವ “ನಾತಿ ಸ್ವಸ್ಥಮನಾ ಯಯೌ” ಅನನ್ಯ ಮನಸ್ಕನಾಗಿಯೇ ಪರಂಧಾಮಕ್ಕೆ ತೆರಳಿತು ಎನ್ನುತ್ತಾರೆ ವ್ಯಾಸಮುನಿ.

ಕೃಷ್ಣನ ಕಾಲದಲ್ಲಿ ನಾವಿಲ್ಲದಿದ್ದರೂ ಸಹೃದಯಿಗಳಾಗಿ ಅವನ ಕಥೆಯನ್ನು ಕೇಳುತ್ತಾ ಅವನ “ಶ್ರೀಕೃಷ್ಣಾಯ ನಮಃ” ಎಂಬ ನಾಮಮಂತ್ರವನ್ನು ಜಪಿಸೋಣ… ಅವನ ಅನುಗ್ರಹ ಸಂಪಾದಿಸೋಣ….


ಜಯತೀರ್ಥಾಚಾರ್ ವಡೇರ್
94486 66678

error: Content is protected !!