ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ, ಹಸಿವೆ ಇಲ್ಲದೇ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ. ಇದರ ಹಿಂದೆ ರೈತನ ಶ್ರಮದ ಬೆವರೇ ಮುಖ್ಯ ಕಾರಣ. ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ನಮಗೆಲ್ಲ ರಿಗೂ ಡಾಕ್ಟರ್‍ಗಳು, ಲಾಯರ್‍ಗಳು, ಇಂಜಿನಿಯರ್ ಗಳು ಮಾತ್ರ ಮುಖ್ಯ ಎನಿಸುತ್ತಾರೆ. ಆದರೆ, ದಿನ ಒಂದಕ್ಕೆ ಮೂರು ಹೊತ್ತು ಅನ್ನಕ್ಕೆ ಕಾರಣವಾಗಿರುವ ರೈತನ ನೆನಪು ಮಾತ್ರ ಬರುವುದಿಲ್ಲ. ರೈತನ ಮಹತ್ವವನ್ನು ತಿಳಿಯುವ ಒಂದು ಕತೆ ನನಗೆ ನೆನಪಾಗುತ್ತದೆ.
ಈ ಕತೆಯನ್ನು ಯಾರು ಬರೆದಿದ್ದಾರೋ ಗೊತ್ತಿಲ್ಲ. ಆದರೆ, ನೀಡುವ ಸಂದೇಶ ಮಾತ್ರ ಅತ್ಯುತ್ತಮವಾಗಿದೆ. ಮೊದಲು ಕತೆ ಕೇಳಿ ಬಿಡೋಣ; ಒಂದು ಊರಲ್ಲಿ ಒಬ್ಬ ರಾಜ. ಆತನಿಗೆ ತನ್ನ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ರಾಜ್ಯದ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ಸನ್ಮಾನಿಸುವ ತವಕ. ಅದಕ್ಕಾಗಿ ಒಂದು ಪ್ರಕಟಣೆ ಮಾಡಿಸಿದನು.
ರಾಜನ ಪ್ರಕಟಣೆಯನ್ನು ಕೇಳಿದ್ದೇ ತಡ ರಾಜ್ಯದಲ್ಲಿರುವ ವೈದ್ಯರು, ಇಂಜಿನಿಯರ್‍ಗಳು, ಸಮಾಜ ಸುಧಾರಕರು, ವ್ಯಾಪಾರಸ್ಥರು, ಜ್ಯೋತಿಷಿಗಳು, ರಾಜಕಾರಣಿಗಳು, ಪರ್ವತರೋಹಿಗಳು, ಕ್ರೀಡಾಪಟುಗಳು, ಸಂಗೀತಗಾರರು, ನೃತ್ಯಪಟುಗಳು, ಉದ್ಯಮಿಗಳು, ವಕೀಲರು, ಪೋಲಿಸರು ಹೀಗೆ ವಿವಿಧ ವರ್ಗದ ಜನರು ರಾಜನ ಆಸ್ಥಾನಕ್ಕೆ ಬಂದು ತಾವು ಏಕೆ ಪ್ರಸಿದ್ಧ ಹಾಗೂ ಶ್ರೇಷ್ಠ ವ್ಯಕ್ತಿಗಳು ಎನ್ನುವುದನ್ನು ವಿವರಿಸಿದರು. ತನ್ನ ರಾಜ್ಯದಲ್ಲಿ ಇಷ್ಟೊಂದು ಶ್ರೇಷ್ಠ ವ್ಯಕ್ತಿಗಳು ಇದ್ದಾರಲ್ಲ ಎಂದು ರಾಜನಿಗೆ ಬಹಳ ಸಂತಸವಾಯಿತು. ಎಲ್ಲರಿಗೂ ಮುಂದಿನ ವರ್ಷದ ತನ್ನ ಹುಟ್ಟಿದ ಹಬ್ಬಕ್ಕೆ ಬರುವಂತೆ ಸೂಚಿಸಿ ಕಳುಹಿಸಿದ. ಅಲ್ಲದೇ ಮಂತ್ರಿಯನ್ನು ಕರೆದು ಇವರಲ್ಲಿ ಶ್ರೇಷ್ಠ ವ್ಯಕ್ತಿ ಯಾರೆಂಬುವನ್ನು ಪತ್ತೆ ಮಾಡಲು ಸೂಚಿಸಿದನು.
ಆದರೆ, ಅಷ್ಟರಲ್ಲಿ ಆಸ್ಥಾನದಲ್ಲಿ ಒಂದು ಘಟನೆ ನಡೆದಿತ್ತು. ಅದು ಯಾರ ಗಮನಕ್ಕೂ ಬಂದಿರಲಿಲ್ಲ. ರಾಜನ ಆಸ್ಥಾನದಲ್ಲಿ ವಿದ್ವಾಂಸರು ಮತ್ತು ಇತರೆ ವ್ಯಕ್ತಿಗಳು ನಾವೇಕೆ ಶ್ರೇಷ್ಠರು ಎಂದು ಹೇಳಿಕೊಳ್ಳುತ್ತಿದ್ದ ಸಮಯದಲ್ಲಿಯೇ ಮೈಯೆಲ್ಲಾ ಕೆಸರುಮಯವಾಗಿರುವ, ತಲೆಗೆ ಶಾಲು ಸುತ್ತಿದ್ದ ವ್ಯಕ್ತಿಯೊಬ್ಬ ಓಡುತ್ತಾ ಬಂದು ರಾಜನ ಆಸ್ಥಾನ ಪ್ರವೇಶ ಮಾಡಲು ಯತ್ನಿಸಿದ್ದ. ಆದರೆ, ಅದಕ್ಕೆ ಬಾಗಿಲ ಭಟರು ಅವಕಾಶವನ್ನೇ ನೀಡಲಿಲ್ಲ. ಏ ಭಿಕ್ಷುಕ, ನೀನು ಒಳಗೆ ಹೋಗಲು ಸಾಧ್ಯವಿಲ್ಲ ಎಂದು ಆತನನ್ನು ತಡೆದುಬಿಟ್ಟರು.
ನಾನು ಭಿಕ್ಷುಕನಲ್ಲ, ರೈತ ಈ ರಾಜ್ಯದ ಎಲ್ಲರಿಗೂ ಬೇಕಾಗುವ ಆಹಾರ ಧಾನ್ಯಗಳನ್ನು ಬೆಳೆದುಕೊಡುವವನು ಎಂದು ಎಷ್ಟು ಹೇಳಿದರೂ ಕಾವ ಲುಗಾರರು ಆತನನ್ನು ಒಳಕ್ಕೆ ಬಿಡಲೇ ಇಲ್ಲ ಅದರಿಂದ ಬೇಸರಗೊಂಡ ಆ ರೈತ ಮನೆಗೆ ಹೋಗಿ ಮಲಗಿಬಿಟ್ಟ.
ಮುಂದಿನ ವರ್ಷ ರಾಜನ ಹುಟ್ಟಿದ ಹಬ್ಬ ಬಂತು. ಶ್ರೇಷ್ಠ ವ್ಯಕ್ತಿಯನ್ನು ಸನ್ಮಾನ ಮಾಡಲು ರಾಜ ಸಿದ್ಧನಾಗಿ ಕುಳಿತಿದ್ದ. ಆದರೆ, ಇಂಜಿನಿಯರ್, ವೈದ್ಯ, ಪರ್ವತರೋಹಿ, ವಿದ್ವಾಂಸ, ಈಜುಗಾರ, ಸಮಾಜ ಸುಧಾರಕ, ಕ್ರೀಡಾಸಾಧಕ ಹಾಗೂ ಇನ್ನೂ ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಯಾರು ಆಸ್ಥಾನದತ್ತ ಸುಳಿಯಲೇ ಇಲ್ಲ. ರಾಜ ಮಂತ್ರಿಯನ್ನು ಕರೆದು ಯಾಕೆ ಯಾರು ಬಂದಿಲ್ಲ ಎಂದು ಕೇಳಿದ. ತಕ್ಷಣವೇ ಬೇಹುಗಾರರನ್ನು ಕಳುಹಿಸಿ, ತಪಾಸಣೆ ಮಾಡಿದಾಗ ಮಂತ್ರಿಗೆ ನಿಜವಾದ ಹಕೀಕತ್ ಗೊತ್ತಾಯಿತು.
ಕಳೆದ ಬಾರಿ ರಾಜನ ಆಸ್ಥಾನ ಪ್ರವೇಶಿಸಲು ಸಾಧ್ಯವಾಗದ್ದರಿಂದ ರೈತ ಮನೆಯಲ್ಲಿಯೇ ಮಲಗಿಬಿಟ್ಟಿದ್ದ. ಆತ ಮಲಗಿದ್ದರಿಂದ ಈ ವರ್ಷ ಆಹಾರ ಧಾನ್ಯದ ಉತ್ಪಾದನೆಯೇ ಆಗಿರಲಿಲ್ಲ. ಆಹಾರ ಇಲ್ಲದ್ದರಿಂದ ತಾವೇ ಶ್ರೇಷ್ಠ ಅಂದುಕೊಂಡಿದ್ದ ಯಾವುದೇ ವ್ಯಕ್ತಿಗೂ ರಾಜನ ಆಸ್ಥಾನಕ್ಕೆ ಬರುವಷ್ಟು ಶಕ್ತಿಯೇ ಇರಲಿಲ್ಲ. ಈ ವಿಷಯ ರಾಜನಿಗೆ ಗೊತ್ತಾದ ತಕ್ಷಣವೇ ತನ್ನ ರಾಜ್ಯದಲ್ಲಿ ಅತ್ಯುತ್ತಮ ಶ್ರೇಷ್ಠ ವ್ಯಕ್ತಿ ಎಂದರೆ ಅದು ರೈತ ಎಂದುಕೊಂಡು, ರಾಜನು ಸೀದಾ ರೈತನ ಮನೆಗೆ ಹೋಗಿ ಆತನನ್ನು ಸನ್ಮಾನಿಸಿ ಸತ್ಕರಿಸಿದನು. ಜೊತೆಗೆ ಕಳೆದ ಬಾರಿ ರಾಜಭಟರು ಅರಮನೆಗೆ ಪ್ರವೇಶ ನಿರಾಕರಿಸಿದ್ದಕ್ಕಾಗಿ ಕ್ಷಮೆಯನ್ನೂ ಕೋರಿದನು. ಅನ್ನದಾತನಿದ್ದರೆ ಮಾತ್ರ ಅರಮನೆ ಎನ್ನುವುದು ಆ ರಾಜನಿಗೆ ಅರ್ಥವಾಗಿತ್ತು. ಅನ್ನದಾತ ಮುನಿದರೆ ಯಾರೂ ಯಾವುದೇ ಸಾಧನೆ ಮಾಡುವುದು ಅಸಾಧ್ಯ ಎನ್ನುವುದೂ ಆತನಿಗೆ ಗೊತ್ತಾಯಿತು.
ಗದ್ದೆ ಕೆಸರನು ತುಳಿದು ಕಾಡ ಮುಳ್ಳನು ಕಡಿದು,
ಮುಂಜಾನೆಯಿಂದ ಸಂಜೆಯವರೆಗೆ ದುಡಿದುಡಿದು
ಚಳಿಯೋ ಮಳೆಯೋ ಬಿಸಿಲೋ ಬೇಗೆಯಲ್ಲವ ಸಹಿಸಿ,
ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ
ಕೆಸರಿನಿಂದ ಅಮೃತಕಳಸವನೆತ್ತಿ ಕೊಡುತ್ತಿರುವವ ರೈತ.
ಕೃಷಿ ಹಾಗೂ ರೈತನ ಅಗತ್ಯತೆ ಸಮಾಜಕ್ಕೆ ಎಷ್ಟಿದೆ ಎಂಬುದು ಈ ಕತೆಯಿಂದಲೇ ನಮಗೆ ತಿಳಿಯುತ್ತದೆ. ಒಕ್ಕಲಿಗ ಒಕ್ಕದಿರೆ ದೇಶವೆಲ್ಲ ಬಿಕ್ಕುವುದು ಎಂದು ಬಹಳ ಹಿಂದೆಯೇ ಸರ್ವಜ್ಞ ಹೇಳಿದ್ದರೂ ಅದನ್ನು ನಮ್ಮ ನೇತಾರ ರಾಗಲೀ, ಜನನಾಯಕರಾಗಲೀ, ಸಮಾಜ ಸುಧಾರಕ ರಾಗಲೀ ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ.
ನೇಗಿಲ ತುದಿಯೊಳಗಡಗಿದೆ ಕರ್ಮ, ನೇಗಿಲ ಮೇಲೆ ನಿಂತಿದೆ. ಧರ್ಮ ಎನ್ನುವ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳು ವೇದಿಕೆಗಳ ಮೇಲೆ ರಾಜಕಾ ರಣಿಗಳ ಬಾಯಲ್ಲಿ ಹರಿದಾಡುತ್ತಿದ್ದರೂ ರೈತರ ಉತ್ಪನ್ನಗ ಳಿಗೆ ಹಾದಿ-ಬೀದಿಯೇ ಗತಿಯಾಗಿದೆ. ಇದರಿಂದ ರೈತನು ಕಂಗೆಟ್ಟು ಸಾಲದ ಶೂಲಕ್ಕೆ ಒಳಗಾಗಿ ನೇಣಿನ ಕುಣಿಕೆಗೆ ತನ್ನ ಕೊರಳನ್ನು ಒಡ್ಡುತ್ತಿದ್ದಾನೆ. ಯಾರೇ ಅಧಿಕಾರಕ್ಕೆ ಬಂದರೂ ರೈತ ರಾಗಿ ಬೀಸುವುದು ತಪ್ಪಿಯೇ ಇಲ್ಲ.
ರಾಜ್ಯದಲ್ಲಿ ರೈತರಿಗೋಸ್ಕರ ಸಬ್ಸಿಡಿ, ಬೆಳೆವಿಮೆ, ಸಾಲ ಮನ್ನಾದಂತಹ ಯೋಜನೆಗಳು ಬಂದಿದ್ದರೂ ರೈತರ ಆತ್ಮಹತ್ಯೆ ನಿಂತಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಸಮಾಜ ತನ್ನ ಬೆನ್ನಿಗೆ ನಿಂತಿಲ್ಲ ಎನ್ನುವ ಅನಾಥ ಪ್ರಜ್ಞೆ. ರೈತ ಸಮುದಾಯವನ್ನು ಕಾಡುತ್ತಿದೆ. ಇದನ್ನು ಹೋಗ ಲಾಡಿಸುವ ತನಕ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ. ಹೊಲ, ಗದ್ದೆಗಳಲ್ಲಿ ಮಣ್ಣು, ಕೆಸರು ಮೆತ್ತಿಕೊಂಡು ದುಡಿಯು ವುದು, ಬೆಳೆಯನ್ನು ಬೆಳೆಯುವುದು ಅವನ ಕರ್ಮ, ಹಣ ಕೊಟ್ಟು ನಾವು ತಿನ್ನುತ್ತೇವೆ. ನಮಗೂ ರೈತರಿಗೂ ಸಂಬಂಧವೇ ಇಲ್ಲ ಎಂದು ಕೊಂಡಿದ್ದರ ಪರಿಣಾಮವನ್ನು ಈಗ ನಾವು ಆಹಾರದ ಧಾನ್ಯಗಳ ಕೊರತೆಯ ಮೂಲಕ ನಾವು ನೋಡುತ್ತಿದ್ದೇವೆ. ಇದು ತಪ್ಪಬೇಕಾದರೆ ಇಡೀ ಸಮಾಜ ಹಾಗೂ ನಮ್ಮನ್ನಾಳುವ ಸರ್ಕಾರಗಳು ರೈತರ ಋಣವನ್ನು ತೀರಿಸುವುದಕ್ಕೆ ಕಟಿಬದ್ದವಾಗಬೇಕು. ರೈತ ಮುಖಂಡ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ಯಾವಾಗಲೂ ಹೇಳುತ್ತಿದ್ದ ಮಾತು, ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ ಎಂಬುದು ನೆನಪಾಗುತ್ತದೆ. ನಿಜವಾದ ಅರ್ಥದಲ್ಲಿ ಸರ್ಕಾರ ಅಷ್ಟೇ ಅಲ್ಲ ಸಮಾಜವೂ ಕೂಡ ಬಾಕಿದಾರ, ರೈತರ ಋಣ ತೀರಿಸುವ ಬಹುದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ.
ಇತ್ತೀಚಿಗೆ ಕೃಷಿಕರೆಂದು ಹೇಳಿಕೊಳ್ಳಲು ಮುಜುಗರ ಪಡುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಕಳಪೆ ಬೀಜ, ದುಬಾರಿ ಗೊಬ್ಬರ, ಕಾಲ ಕಾಲಕ್ಕೆ ಬರದ ಮಳೆ, ಕ್ರಿಮಿಕೀಟಗಳ ಹಾವಳಿ. ಇವೆಲ್ಲವುಗಳನ್ನು ಹೇಗೋ ನಿಭಾಯಿಸಿಕೊಂಡು ಉತ್ತಮ ಬೆಳೆ ತೆಗೆದರೆ, ಅದಕ್ಕೆ ಸೂಕ್ತ ಬೆಲೆ ಸಿಗದಿರುವುದರ ಜೊತೆಗೆ ಬೆಳೆದ ಬೆಳೆ ಹಾಳಾಗದಂತೆ ಸಂಗ್ರಹಿಸಿಡುವ ವ್ಯವಸ್ಥೆಯ ಕೊರತೆ. ಇಂತಹ ಹತ್ತು ಹಲವು ಕಾರಣಗಳಿಂದಾಗಿ ವ್ಯವಸಾಯಗಾರರ ಬದುಕು ಅತ್ಯಂತ ನಿಕೃಷ್ಟ ಹಾಗೂ ನೋವಿನದ್ದಾಗಿದೆ. ನಾಡಿನಲ್ಲಿ ಇನ್ನೂ ಧರ್ಮ, ನೀತಿ, ನ್ಯಾಯ, ಪರೋಪಕಾರ ಇಂತಹ ಸದ್ಗುಣಗಳು ಉಳಿದಿರುವುದು ಕೃಷಿಕ ವರ್ಗದವರಿಂದಲೇ ಅವರನ್ನು ಸರ್ಕಾರವಾಗಲೀ, ಸಾರ್ವಜನಿಕರಾಗಲೀ ಕಡೆಗಣಿಸಿದರೆ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಂತೆ. ಇದನ್ನರಿತು ಎಲ್ಲರೂ ವರ್ತಿಸಿದರೆ, ನಾಡಿನಲ್ಲಿ ನೆಮ್ಮದಿ ನೆಲೆಗೊಳ್ಳಬಲ್ಲದು, ಅದರ ಜೊತೆಗೆ ನಾಡಿನ ಅನ್ನದಾತನು ಸುಖಿಯಾಗಿರುವನು.
ಎಲ್.ಜಿ.ಮಧುಕುಮಾರ್, ಬಸವಾಪಟ್ಟಣ
9448786664