ಚಿಕಿತ್ಸೆಗೆ ನೆರವು, ಜಾಗೃತಿಗೆ ಒಲವು : ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಗುರಿ

ಇದೇ ಅಕ್ಟೋಬರ್ 10 ರಂದು ಶನಿವಾರ ಬೆಳಗ್ಗೆ ದಾವಣಗೆರೆಯಲ್ಲಿ ನಡೆಯುವ ‘ಕ್ಯಾನ್ಸರ್ ತಡೆ, ಕೋವಿಡ್ ನಡೆ’ ಅಭಿಯಾನದ ಈ ಸಂದರ್ಭದಲ್ಲಿ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಕಾರ್ಯದರ್ಶಿ ಕ್ಯಾನ್ಸರ್ ಸರ್ಜನ್ ಡಾ. ಸುನಿಲ್ ಬ್ಯಾಡಗಿ ಇವರೊಂದಿಗಿನ ಮಾತುಕತೆ.

ಅಕ್ಟೋಬರ್ 10 ರಂದು ‘ವಿಶ್ವ ಕ್ಯಾನ್ಸರ್ ದಿ‌ನ’ ಇತ್ತೀಚಿನ ವರ್ಷಗಳಲ್ಲಿ ಈ ಕ್ಯಾನ್ಸರ್ ಕಾಯಿಲೆ ಹೆಚ್ಚಾಗುತ್ತಿದೆ. ಇದಕ್ಕೆ ಹೈಟೆಕ್ ವಿಧಾನದ ಚಿಕಿತ್ಸೆ ಗಳು ಲಭ್ಯವಿದ್ದರೂ ಸಹ ರೋಗಿಗಳ ಪ್ರಮಾಣ ಮಾತ್ರ ತಗ್ಗುತ್ತಿಲ್ಲ. ಇದಕ್ಕೆ ಜಾಗೃತಿಯ ಜೊತೆ ತಿಳಿವಳಿಕೆ ಕೊರತೆ ಕಾರಣ ಎನ್ನುತ್ತಾರೆ ತಜ್ಞರು. ಈ ಕುರಿತು ಒಂದು `ಕ್ಯಾನ್ಸರ್ ಫೌಂಡೇಷನ್’ ಸ್ಥಾಪಿಸಿ ಇದರ ಜಾಗೃತಿಗಾಗಿ ಶ್ರಮಿಸುತ್ತಿದ್ದೇವೆ.

ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಸ್ಥಾಪಿಸುವ ಪರಿಕಲ್ಪನೆ ನಿಮಗೆ ಹೊಳೆದದ್ದು ಹೇಗೆ ? 

ನಾಲ್ಕು ವರ್ಷಗಳ ಹಿಂದೆ ಕ್ಯಾನ್ಸರ್ ಕುರಿತು ಅವೇರನೆಸ್ ಕ್ಯಾಂಪ್ ಮಾಡಿದ್ದೆವು. ಆಗ ಇದನ್ನೇ ಒಂದು ಬ್ಯಾನರ್ ಅಡಿಯಲ್ಲಿ ಯಾಕೆ ಮಾಡಬಾರದು ಅನ್ನಿಸಿತು. ಗೆಳೆಯರ ಜೊತೆ ಚರ್ಚಿಸಿ ಈ ಸಂಸ್ಥೆ ಹುಟ್ಟು ಹಾಕಿದೆವು.

ಈ ಫೌಂಡೇಶನ್‌ನ ಮುಖ್ಯ ಉದ್ದೇಶ ಏನೇನು?

ಮುಖ್ಯವಾಗಿ ನಮ್ಮ ಜನರಿಗೆ ಈ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು‌. ರೋಗ ಪತ್ತೆ ಹಚ್ಚಲು ಕಾರ್ಯಾಗಾರ ನಡೆಸುವುದು. ಎಷ್ಟೋ ರೋಗಿಗಳು ಈ ಕಾಯಿಲೆಯ ಚಿಕಿತ್ಸೆಗೆ ಹಣಕಾಸು ಇಲ್ಲದೇ ತುಂಬಾ ಅಸಹಾಯಕರಾಗಿದ್ದನ್ನು ಒಬ್ಬ ವೈದ್ಯನಾಗಿ ನಾನು ನೋಡಿದ್ದೇನೆ. ಅಂತವರಿಗೆ ಸಂಸ್ಥೆಯಿಂದ ಸಾಧ್ಯವಾದಷ್ಟು ನೆರವು ನೀಡುವುದು, ಇನ್ನೊಂದು ಉದ್ದೇಶ. ದಾನಿಗಳಿಂದ ಆದಾಯ ತೆರಿಗೆ ವಿನಾಯಿತಿಯಡಿ ಈ ಸಂಸ್ಥೆಗೆ ಡೊನೇಷನ್ ಸಂಗ್ರಹಿಸಿ, ಬಡವರ ಚಿಕಿತ್ಸೆಗೆ ನೆರವಾಗುತ್ತೇವೆ. 

ಇತ್ತೀಚೆಗೆ ಕ್ಯಾನ್ಸರ್ ಹೆಚ್ಚಾಗಲಿಕ್ಕೆ  ಕಾರಣಗಳು ಏನೇನು ?

ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಬದಲಾಗುತ್ತಿರುವ ನಮ್ಮ ಜೀವನ ಶೈಲಿ. ವಿಪರೀತ ಮಾನಸಿಕ ಒತ್ತಡ. ಜೊತೆಗೆ ಜಿನೆಟಿಕ್ ಅಂಶಗಳು ಕೂಡ ಕಾರಣವಾಗುತ್ತಿವೆ.

ಒಬ್ಬ ವೈದ್ಯರಾಗಿ ಕ್ಯಾನ್ಸರ್ ರೋಗಿಗಳಿಗೆ ನೀವು ಕೊಡುವ ಮೇಜರ್ ಸಲಹೆಗಳೇನು ? 

ಈ ಕ್ಯಾನ್ಸರ್ ಕಾಯಿಲೆ ಶಾರೀರಿಕ ಪರಿವರ್ತನೆಗಳ ಜೊತೆ ಮಾನಸಿಕವಾಗಿ ಹಲವು ತರಹದ ಪರಿಣಾಮ ಬೀರುತ್ತದೆ. ನಾವು ಕೊಡುವ ಚಿಕಿತ್ಸೆಯಿಂದ ಶೇ. 50 ವಾಸಿಯಾದರೆ, ಇನ್ನರ್ಧ ಅವರ ಧೈರ್ಯ ಮತ್ತು ಆತ್ಮವಿಶ್ವಾಸದಿಂದಲೇ  ಗುಣವಾಗಬಲ್ಲದು. ಒಬ್ಬ ಕ್ಯಾನ್ಸರ್  ರೋಗಿ ಬಹುಬೇಗ ಇದರಿಂದ ಪಾರಾಗಬೇಕಾದರೆ, ಅವರ ಕುಟುಂಬದ ಹಾಗೂ ಸಮಾಜದ ಸಪೋರ್ಟ್ ಬಹಳ ಮುಖ್ಯ ಎಂದು ಒಬ್ಬ ವೈದ್ಯನಾಗಿ ಹೇಳಬಲ್ಲೆ.

ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ರಾಯಭಾರಿ, ಕಲಾವಿದ, ಸಿವಿಲ್ ಇಂಜಿನಿಯರ್ ಆಗಿರುವ ಆರ್.ಟಿ.ಅರುಣ್ ಕುಮಾರ್ ಜೊತೆ ನಡೆಸಿದ ಒಂದು ಮಾತುಕತೆಯ ಚಿತ್ರಣ ಇಲ್ಲಿದೆ.

ಕ್ಯಾನ್ಸರ್ ನ ಗೆಲ್ಲುವುದೆಂದರೆ ಸಾವನ್ನೇ ಜಯಿಸಿ ಬಂದಂತೆ. ನೀವು ಈ ಕಾಯಿಲೆಯನ್ನು  ಎದುರಿಸಿದ್ದು ಹೇಗೆ ? 

ದಶಕದ ಹಿಂದೆ ವೈದ್ಯರು ನನಗೆ ಕ್ಯಾನ್ಸರ್ ಇದೆ ಅಂದಾಗ ನಾನು ಹೆದರಲಿಲ್ಲ. ಆಗ ನನ್ನ ಗೆಳೆಯ, ಚಲನಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ ತಕ್ಷಣ ನನ್ನ ನೆರವಿಗೆ ಬಂದರು. ಬೆಂಗಳೂರಿನ ಬಿಸಿಜಿ ಆಸ್ಪತ್ರೆ ಚೇರ್ಮನ್‌ಗೆ ಫೋನ್ ಮಾಡಿ ಹೇಳಿದ್ದೂ ಅಲ್ಲದೇ, ಅಲ್ಲಿಯೇ ರೆಗ್ಯೂಲರ್ ಆಗಿ ಚಿಕಿತ್ಸೆ ಸಿಗುವಂತೆಯೂ ನೋಡಿಕೊಂಡರು. ನಂತರ ನನ್ನ ಅನೇಕ ಸ್ನೇಹಿತರು ನೆರವಿಗೆ ಧಾವಿಸಿದರು. ಅವರೆಲ್ಲರ ಸಹಾಯದ ಜೊತೆಗೆ ನನ್ನ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಧೈರ್ಯ ವಾಗಿ ಎದುರಿಸಿ‌, ಅದರಿಂದ ಪಾರಾಗಿ ಹೊರ ಬಂದೆ.

ಚಿಕಿತ್ಸೆಗೆ ನೆರವು, ಜಾಗೃತಿಗೆ ಒಲವು : ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಗುರಿ - Janathavani

ನಿಮ್ಮನ್ನ ಕ್ಯಾನ್ಸರ್‌ನಿಂದ ಹೊರ ತಂದದ್ದು ಚಿಕಿತ್ಸೆಗಿಂತ ಹೆಚ್ಚಾಗಿ ನಿಮ್ಮೊಳಗಿನ ಆತ್ಮಶಕ್ತಿಯೇ?

ಖಂಡಿತಾ ಹೌದು. ನಾನು ಅಂಜಲಿಲ್ಲ. ನನ್ನ ಆತ್ಮಶಕ್ತಿ ಜೊತೆ ನನ್ನ ಕುಟುಂಬದವರು, ನನ್ನ ಬಂಧು ಬಳಗ,  ನನ್ನ ಸ್ನೇಹಿತರ ಸಮಾಧಾನದ ಮಾತುಗಳು ಕೂಡ ಈ ಕಾಯಿಲೆ ಎದುರಿಸಲು ನನಗೆ ನೆರವಾಗಿವೆ. ಪ್ರತಿ ರೋಗಿಗೂ ಇಂತಹ ಆತ್ಮೀಯತೆಯ ಸಾಂತ್ವನ ಬೇಕು.

ನಿಮ್ಮದು ಕ್ಯಾನ್ಸರ್‌ನಂಥ ವೈರಿ ಜೊತೆಗಿನ ಹೋರಾಟದ ಬದುಕು. ಈ ಹೊತ್ತು ಯಾರಾರನ್ನ ನೆನೆಯಲು ಇಚ್ಛಿಸುತ್ತೀರಿ ? 

ಒಬ್ಬರಲ್ಲ. ತುಂಬಾ ಜನ ಇದ್ದಾರೆ. ನನಗೆ  ಚಿಕಿತ್ಸೆ ನೀಡಿದಂತಹ ವೈದ್ಯರನ್ನು ಈ ವೇಳೆ ನೆನೆಯುತ್ತೇನೆ. ನನ್ನ ಸಹೋದರರು, ನನ್ನ ಪರಮಾಪ್ತ ಮಿತ್ರರು, ನನಗೆ ಆತ್ಮಸ್ಥೈರ್ಯ ತುಂಬಿದ ಪ್ರತಿಯೊಬ್ಬರನ್ನೂ ಇವೊತ್ತು ನೆನಪಿಸಿಕೊಳ್ಳುತ್ತೇನೆ.

ಕ್ಯಾನ್ಸರ್ ರೋಗಿಗಳಿಗೆ ನಿಮ್ಮ ಸರಳವಾದ ಟಿಪ್ಸ್ ಏನೇನು?  

ಕ್ಯಾನ್ಸರ್ ಬಂತೆಂದರೆ ಯಾರೂ ಹೆದರಬೇಕಿಲ್ಲ. ಧೈರ್ಯ ಒಂದಿದ್ದರೆ ಸಾಕು ಎದುರಿಸಬಹುದು. ಇವತ್ತು ಆಧುನಿಕ ಚಿಕಿತ್ಸಾ ಸೌಲಭ್ಯಗಳಿವೆ. ಹಾಗೆಯೇ ಸುಸಜ್ಜಿತವಾದ ಆಸ್ಪತ್ರೆಗಳಿವೆ. ಅವುಗಳ ಮೊರೆ ಹೋಗಿ ಕ್ಯಾನ್ಸರ್‌ನಿಂದ ಬಹುಬೇಗ ಗುಣಮುಖ ಆಗಬಹುದು.

ಜಗತ್ತನ್ನೇ ಆತಂಕಕ್ಕೆ ದೂಡಿರುವ ಕೊರೊನಾ ದಾಳಿಯನ್ನು ಕೂಡ ನೀವು ಈಚೆಗೆ ಎದುರಿಸಿ, ಗೆದ್ದು ಬಂದಿದ್ದೀರಿ. ಈ ಬಗ್ಗೆ ಏನು ಹೇಳುತ್ತೀರಿ ?

ನಾನು ಲಾಕ್‌ಡೌನ್ ಆದ ದಿನಗಳಿಂದಲೇ ಈ ಕೋವಿಡ್ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದೆ. `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್, ಕೋವಿಡ್ ಕುರಿತು ಜನ ಜಾಗೃತಿ ಮೂಡಿಸುವ ಲೇಖನಗಳನ್ನು ಬರೆಯಲು ಕೇಳಿಕೊಂಡರು. ನಮ್ಮದೇ ಆದ ಕೋವಿಡ್ ಅಧ್ಯಯನ ತಂಡ ರಚಿಸಿ, ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿರುವ ದಾವಣಗೆರೆ ಮೂಲದ ದೇಶ – ವಿದೇಶಗಳಲ್ಲಿರುವ ವೈದ್ಯರ ಸಂದರ್ಶನಗಳನ್ನು ಮಾಡಿ, ಅವರ ಅನುಭವಗಳನ್ನು, ಅಭಿಪ್ರಾಯಗಳನ್ನು ಪತ್ರಿಕೆಯಲ್ಲಿ ಪ್ರಕಟಿಸತೊ ಡಗಿದೆವು. ಆದರೆ, ಮುಂದೊಂದು ದಿನ ಅಥವಾ ಇಷ್ಟು ಬೇಗ ನಾನೇ ಈ ಕೊರೊನಾ ಸೋಂಕಿಗೆ ಒಳಗಾದೇನು ಅಂತಹ ಕಲ್ಪನೆ ಇರಲಿಲ್ಲ. ‌ಎಷ್ಟೇ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸಿಂಗ್ ಮಾಡಿಕೊಂಡರೂ ಸಹ ಈ ಕೊರೊನಾ ಬಿಡಲಿಲ್ಲ. ಹೋಂ ಕ್ವಾರಂಟೈನ್‌ನಲ್ಲಿದ್ದುಕೊಂಡು ಚಿಕಿತ್ಸೆ ತೆಗೆದುಕೊಳ್ಳಲು ಆರಂಭಿಸಿದೆ. ಕೆಲ ದಿನಗಳಲ್ಲಿ ತೀರಾ ಉಸಿರಾಟ ತೊಂದರೆ ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಸೇರಿ, ಚಿಕಿತ್ಸೆ ಪಡೆದು, ಗುಣಮುಖನಾಗಿ ಹೊರ ಬಂದೆ. 

ದಾವಣಗೆರೆ ಕ್ಯಾನ್ಸರ್ ಫೌಂಡೇಶನ್‌ನಿಂದ ಜನ ಜಾಗೃತಿ ಅಭಿಯಾನ ನಡೆಯುತ್ತಿದೆ. ನೀವು ಅದರ ರಾಯಭಾರಿ ಕೂಡ. ಜನರ ಸ್ಪಂದನ ಹೇಗಿದೆ?

ಹೌದು. ಅಕ್ಟೋಬರ್ ಹತ್ತರಂದು ಅಭಿಯಾನ ಹಮ್ಮಿಕೊಂಡಿದ್ದೇವೆ. ಇದಕ್ಕೆ ಅನೇಕರು ಸಹಕಾರ ನೀಡಿದ್ದಾರೆ. ಕೆಲ ಸಂಘಟನೆಗಳು ನಮ್ಮ ಜೊತೆ ಕೈ ಜೋಡಿಸಿವೆ. ಮುಖ್ಯವಾಗಿ ವೈದ್ಯರ ಸಂಸ್ಥೆಯಾದ ದಾವಣಗೆರೆ ಐಎಂಎ ಶಾಖೆ, ಜಿಲ್ಲಾ ವರದಿಗಾರರ ಕೂಟ, ರೋಟರಿ ಕ್ಲಬ್, ಲೈಫ್‌ಲೈನ್ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಹಲವು ಸಂಘ-ಸಂಸ್ಥೆಗಳು ಇದರಲ್ಲಿ ಭಾಗಿಯಾಗಲು ಉತ್ಸಾಹ, ಆಸಕ್ತಿ ತೋರಿವೆ. ಇವರೆಲ್ಲರಿಗೂ ಫೌಂಡೇಶನ್ ವತಿ ಯಿಂದ ಅಭಿನಂದಿಸುತ್ತೇನೆ. ಕೃತಜ್ಞತೆ ಸಲ್ಲಿಸುತ್ತೇನೆ.

ಅಕ್ಟೋಬರ್ 10 ರಂದು ಅಭಿಯಾನದಲ್ಲಿ ಪಾಲ್ಗೊಳ್ಳುವುದು ತುಂಬಾ ಸುಲಭ. ಭಾಗವಹಿಸುವವರು ಅಂದು ಬೆಳಿಗ್ಗೆ 8 ಗಂಟೆಗೆ ತಮ್ಮ ಅನುಕೂಲಕರ ಸ್ಥಳಗಳಲ್ಲಿ ಒಂದು ಇಪ್ಪತ್ತು ನಿಮಿಷ ವಾಕ್ ಮಾಡಬೇಕು. ಆ ಚಟುವಟಿಕೆಯನ್ನು ಸೆಲ್ಫೀ ವಿಡಿಯೋ ಮಾಡಿ (40 ರಿಂದ 90 ನಿಮಿಷಗಳು) ಅವುಗಳನ್ನು ನಮಗೆ ಕಳುಹಿಸಬೇಕು. ಉತ್ತಮ ಐದು ವೈಯಕ್ತಿಕ ವಿಡಿಯೋಗಳಿಗೆ  ತಲಾ 2000 ರೂ.  ಹಾಗೂ ಎರಡು ಉತ್ತಮ ಗ್ರೂಪ್ ವಿಡಿಯೋಗೆ ತಲಾ 5000 ರೂ. ಮತ್ತು ಅತ್ಯುತ್ತಮ ಮಹಿಳಾ ಪಾಲ್ಗೊಳ್ಳವಿಕೆಗೆ ಒಂದು 2000 ರೂ. ಬಹುಮಾನವಿದೆ. ವೈಯಕ್ತಿಕವಾಗಿ ಪ್ರತ್ಯೇಕ ಬಹುಮಾನಗಳಿವೆ. ಭಾಗವಹಿಸುವವರು ತಮ್ಮ ಅಭಿಯಾನದ ಕಿರು ವಿಡಿಯೋಗಳನ್ನು ಮೊ. ಸಂಖ್ಯೆ 78924 03271,  96637 93337 ಈ ನಂಬರ್ ಗಳಿಗೆ ವಾಟ್ಸಾಪ್  ಕಳುಹಿಸಬಹುದು.


– ರವಿ ಆರುಂಡಿ 

error: Content is protected !!