ಜೂನ್ 26 ವಿಶ್ವ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ

ವಿಶ್ವ ಸಂಸ್ಥೆಯಿಂದ ಮಾದಕ ದ್ರವ್ಯಗಳ ಮತ್ತು ಅವುಗಳ ಸಾಗಣೆ ವಿರೋಧಿ ಎಂಬ ದಿನಾಚರಣೆಯನ್ನು ಜೂನ್ -26 ರಂದು ಆಚರಿಸಲಾಗುತ್ತಿದೆ. ಈಗಿನ ಮಕ್ಕಳೇ ಮುಂದಿನ ಪ್ರಜೆಗಳು. ಆದರೆ ಈ ಜನಾಂಗದ  ಮಕ್ಕಳು ಎಳೆಯ ವಯಸ್ಸಿಗೆ ಇಂತಹ ಚಟಕ್ಕೆ ಮಾರು ಹೋಗಿರುತ್ತಾರೆ. ತನ್ನ ಮಗ ಅಥವಾ ಮಗಳು ಇಂತಹ ಚಟದ ವ್ಯಸನಿಗಳಾಗಿರಲು ಸಾಧ್ಯವೇ ಇಲ್ಲ ಎಂಬ ಅತಿಯಾದ ನಂಬಿಕೆ ತಂದೆ-ತಾಯಿಯರದು. ತನ್ನ ಮಗ ಅಥವಾ ಮಗಳು ಹೈಸ್ಕೂಲ್ ವ್ಯಾಸಂಗ ಮಾಡುತ್ತಿದ್ದಾರೆ ಎಂದ ತಕ್ಷಣ ಅವರ ಮೇಲೆ ಸ್ವಲ್ಪ ನಿಗಾ ಇಡಬೇಕು. ಏಕೆಂದರೆ ಆ ವಯಸ್ಸೇ ಅಂಥದ್ದು. ಹಾದಿ ತಪ್ಪುವುದು ತಪ್ಪಿಸುವವರು ಇರುವುದು ಸರ್ವೇ ಸಾಮಾನ್ಯ. ಹಾಗಾಗಿ ಮಕ್ಕಳೂ ಕೂಡ ಅಷ್ಟೇ ಜಾಗರೂಕರಾಗಿರಬೇಕು. ಸಾಧ್ಯವಾದಲ್ಲಿ ಮಕ್ಕಳಿಗೆ ತಿಳಿಹೇಳಬೇಕು. ಮಕ್ಕಳೊಂದಿಗೆ ಗೆಳೆಯ ಅಥವಾ ಗೆಳತಿಯ ತರಹದ ಬಾಂಧವ್ಯ ಬೆಳೆಸಿಕೊಂಡರೆ, ಅವರೂ ಕೂಡ ಅವರ ತೊಂದರೆಗಳನ್ನು ಭಯವಿಲ್ಲದೆ ಹೇಳಿಕೊಳ್ಳುತ್ತಾರೆ. ಹೀಗಾದರೂ ಸ್ವಲ್ಪ ಮಟ್ಟಿಗೆ ಮಕ್ಕಳು ಮಾದಕ ದ್ರವ್ಯದ ವ್ಯಸನಿಗಳಾಗದಂತೆ ತಡೆಯಬಹುದು. 

ಧೂಮಪಾನ, ಆರೋಗ್ಯಕ್ಕೆ ಹಾನಿಕರ ಎಂದು ಬರೆದಿರುವುದನ್ನು ತಿಳಿದೂ ವ್ಯಸನಿಗಳು ಅದರ ಚಟಕ್ಕೆ ಮಾರು ಹೋಗಿರುತ್ತಾರಲ್ಲವೇ? ಆದರೆ ಇದಕ್ಕೆ ಹೆಚ್ಚು  ಬಲಿಯಾಗುವುದು ಹದಿಹರೆಯದ ಮಕ್ಕಳು ಮುಂದೆ ಅತೀ ದೊಡ್ಡ ಭವಿಷ್ಯವನ್ನು ಇಟ್ಟುಕೊಂಡು ಆರೋಗ್ಯಕರವಾಗಿ ಬೆಳೆಯಬೇಕಾದ ಈ ಯುವ ಜನಾಂಗದ ಮಕ್ಕಳು ತಮ್ಮ ಆರೋಗ್ಯವನ್ನು ಬೆಳೆಯಬೇಕಾದ ಹರೆಯದಲ್ಲೇ ಹಾಳು ಮಾಡುಕೊಳ್ಳುತ್ತಾ, ಜೊತೆಗೆ ಇಂತಹ ಕೆಟ್ಟ ಚಟಗಳಿಗೆ ಅಂಟಿಕೊಂಡಿರುವುದು ವಿಷಾದಕರ ಸಂಗತಿ.

ಗೆಳೆಯ ಅಥವಾ ಗೆಳತಿಯೊಂದಿಗೆ ಸೇರಿ ಮಕ್ಕಳು ಏನೇನು ಮಾಡುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಪಾಠ ಚನ್ನಾಗಿ ಕಲಿಯುತ್ತಿದ್ದಾರೆಯೇ? ಹೆತ್ತವರಲ್ಲಿ ಮಾತನಾಡುವ ಶೈಲಿಯಲ್ಲಿ ವ್ಯತ್ಯಾಸವಾಗಿದೆಯೇ? ಸಂಬಂಧಿಕರೊಳಗಿನ ಬಾಂಧವ್ಯ ಚೆನ್ನಾಗಿದೆಯೇ? ಮುಂತಾದವುಗಳಿಂದ ವ್ಯಸನಿಗಳನ್ನು ತಿಳಿದುಕೊಳ್ಳಬಹುದು. ಮಾರುಹೋದರೆ ಮತ್ತೆ ವಾಸ್ತವಕ್ಕೆ ಮರಳುವುದು ಕಷ್ಟಕರ. ಇಂತಹ ಮಾದಕ ವಸ್ತುಗಳು ತುಂಬಾ ಕಡೆಗಳಲ್ಲಿ ಕಳ್ಳಸಾಗಾಣಿಕೆಯಾಗುತ್ತಿವೆ. ಪೋಲಿಸರು ಕಂಡು ಹಿಡಿದು ವಶಕ್ಕೆ ತೆಗೆದುಕೊಂಡರೂ ಸಹ ಕೆಲವೊಮ್ಮೆ ಕೈಗೆ ಸಿಗದೆ ಉಳಿದು ಬಿಡುತ್ತದೆ. ತಮ್ಮ ಮಕ್ಕಳು ಮಾದಕ ದ್ರವ್ಯದ ವ್ಯಸನಿಗಳಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಸಂದರ್ಭದಲ್ಲಿ ತಂದೆ-ತಾಯಿಗಳು ತಮ್ಮ ಮಕ್ಕಳಿಗೋಸ್ಕರ ಬಿಡಿಸಿಕೊಂಡು ಬರುತ್ತಾರೆ. ಇದರಿಂದ ತಮಗಾಗಿರುವ ಅವಮಾನಕ್ಕಿಂತ ಹೆಚ್ಚಾಗಿ ತಂದೆ-ತಾಯಿಗಳಿಗೆ ಮಕ್ಕಳ ಬಗ್ಗೆ ಬೇಸರ, ಹತಾಶೆ ಮತ್ತು ನೋವುಂಟಾಗುತ್ತದೆ. 

ಹೆತ್ತವರ ಮನಸ್ಸಿಗೆ ನೋವುಂಟಾಗುತ್ತದೆ. ಹೆತ್ತವರ ಮನಸ್ಸಿಗೆ ನೋವುಂಟು ಮಾಡದೆ ಅವರನ್ನು ಸಂತೋಷವಾಗಿ ನೋಡಿಕೊಳ್ಳುವುದು ಮಕ್ಕಳ ಅತಿ ದೊಡ್ಡ ಜವಾಬ್ಧಾರಿ ಹಾಗೂ ಕರ್ತವ್ಯವಾಗಿದೆ.

ಗಾಂಜಾ, ಅಫೀಮು ಚರಸ್ ನಂತಹ ಮಾದಕ ವಸ್ತುಗಳ ಶೇಖರಣೆ, ಬಳಕೆ, ಸಾಗಾಣಿಕೆ ಹಾಗೂ ಉತ್ಪಾದನೆ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಯುವ ಜನತೆ ಮನದಟ್ಟು ಮಾಡಿಕೊಳ್ಳಬೇಕು. ಇಂತಹ ಅಪರಾದಕ್ಕೆ ಗರಿಷ್ಠ 10 ವರ್ಷಗಳ ಸೆರೆವಾಸ ಹಾಗೂ ಭಾರೀ ದಂಡ  ವಿಧಿಸಲಾಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಯುವಕರೇ ಮುಂದಾಗಬೇಕು.

    ಇಂದಿನ ಯುವ ಜನಾಂಗ ಆರಂಭದಲ್ಲಿ ಸಂತೋಷ ವಿನೋದಕ್ಕಾಗಿ ಮಾದಕ  ದ್ರವ್ಯ ಸೇವನೆ ಆರಂಭಿಸುತ್ತಾರೆ. ಅದು ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ  ಬೆಳೆದು ನಿಲ್ಲುತ್ತದೆ. ಹಾಗಾಗಿ ಯುವಜನತೆ ಜಾಗೃತರಾಗಿರಬೇಕು ಉತ್ತಮ ನಾಗರಿಕರಾಗಲು ಮಕ್ಕಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.  

ಡ್ರಗ್ ಅಡಿಷನ್ ಎಂದರೇನು?

ವ್ಯಕ್ತಿಯೊಬ್ಬ ಪ್ರತಿ ನಿತ್ಯ ಮಾದಕ ವಸ್ತುಗಳನ್ನು ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಮಾದಕ ದ್ರವ್ಯ ವ್ಯಸನ (ಡ್ರಗ್ ಅಡಿಷನ್) ಅಥವಾ ಮಾದಕ ವಸ್ತುಗಳ ದುರುಪಯೋಗ ಎನ್ನಬಹುದು. ಇದನ್ನು ಸೇವಿಸಿದರೆ ಮಾತ್ರ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಈ ವ್ಯಸನಕ್ಕೆ ದಾಸರಾದವರು ಭಾವಿಸಿರುತ್ತಾರೆ. ವ್ಯಕ್ತಿಯೊಬ್ಬ ಪ್ರತಿದಿನ ನಿರಂತರವಾಗಿ ಮಾದಕ ವಸ್ತುಗಳನ್ನು ಬಳಸಲು ಹಂಬಲಿಸುತ್ತಿದ್ದರೆ, ಅದಕ್ಕಾಗಿ ಹಾತೊರೆಯುತ್ತಾರೆ. ಮತ್ತು ಅದರ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎನ್ನುವಷ್ಟು ಆ ಚಟಕ್ಕೆ ಅವಲಂಬಿತರಾಗಿರುತ್ತಾರೆ. ಮಾದಕ ವ್ಯಸನವು ಗಂಭೀರವಾದ, ಭಾವನಾತ್ಮಕ ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಾದಕ ದ್ರವ್ಯ ವ್ಯಸನದ ಆರಂಭ ಹೇಗೆ?

ಮೊದ ಮೊದಲು ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆಗಳನ್ನು ಮರೆಯಲೆಂದೋ ಮಾದಕ ದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಡ್ರಗ್ಸ್ ಬಳಕೆಯಿಂದ ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ  ವಸ್ತುಗಳನ್ನು ಹೆಚ್ಚು ಹೆಚ್ಚು ಬಯಸುವಂತೆ ಮಾಡುತ್ತದೆ. ಅಂತವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೇ ಹೋಗುತ್ತಾರೆ. 

ವ್ಯಕ್ತಿಗಳು ಅವರ ಮನೋ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಆ ಹವ್ಯಾಸದಿಂದ ಹೊರಬರಬೇಕೆಂದು ನಿಜವಾಗಿ ಬಯಸಿದರೂ ಸಾಧ್ಯವಾಗದೇ, ಮತ್ತೆ ಮತ್ತೆ ಅದರೆಡೆಗೆ ಆಕರ್ಷಿತರಾಗುತ್ತಾರೆ. ದುರ್ಬಲ ವ್ಯಕ್ತಿತ್ವ ಹಾಗೂ ಮನೋಸಾಮರ್ಥ್ಯ ಕಡಿಮೆ ಇರುವವರು ಮಾದಕ ದ್ರವ್ಯ ವ್ಯಸನಿಗಳಾಗುತ್ತಾರೆ. ವ್ಯಸನಿಗಳು ಸೋಮಾರಿಗಳಾಗುವುದರಿಂದ ಅವರ ವರ್ತನೆಯಲ್ಲಿ ಬದಲಾವಣೆ ಸಾಧ್ಯವಿಲ್ಲ. ಇನ್ನೂ ಮುಂದೆ ಡ್ರಗ್ಸ್ ಸೇವನೆ ಮಾಡುವುದಿಲ್ಲ ಎಂದು ದೃಢ ನಿಶ್ಚಯ ಮಾಡಿದರೆ, ಆ ಚಟದಿಂದ ಹೊರಬರಬಹುದು ಎಂಬ ಸಾಮಾನ್ಯವಾದ ಕಲ್ಪನೆ ಸಮಾಜದಲ್ಲಿದೆ. ವಾಸ್ತವವೆಂದರೆ ವ್ಯಸನಿಗಳಾಗಲು ವಂಶವಾಹಿ ಮತ್ತು ಸುತ್ತಮುತ್ತಲಿನ ವಾತಾವರಣ ಹೆಚ್ಚಿನ ಕಾರಣವಾಗಿರಬಹುದು. 

ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ತಂಬಾಕು ಜಗಿಯುವುದು ಮತ್ತು ಕುಡಿಯುವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಮಾರಿ ಜುವಾನಾ, ಗಾಂಜಾ, ತಂಬಾಕು ಮತ್ತು ವೈದ್ಯರ ಸಲಹೆ ಪಡೆಯದೇ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಮುಂತಾದವು ವ್ಯಸನಿಗಳು ಹೆಚ್ಚಾಗಿ ಬಳಸುವ ದ್ರವ್ಯಗಳು.

ಮಾದಕ ದ್ರವ್ಯಗಳು ಮನುಷ್ಯನ ಮಿದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ಡ್ರಗ್ಸ್ ಸೇವನೆಯಿಂದ ಮನುಷ್ಯನ ಮಿದುಳಿನ ನರಗಳಲ್ಲಿ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಯಾವಾಗ ನೀವು ಮಾದಕ ವಸ್ತುಗಳನ್ನು ಬಳಸುತ್ತಿರೋ ಇದು ಮಿದುಳಿನ  ಸಂದೇಶದ ವ್ಯವಸ್ಥೆಯನ್ನು ಪುನರಾವರ್ತಿಸುತ್ತದೆ ಹೀಗೆ ಡೋಪಮೈನ್ ಬಿಡುಗಡೆಯಾಗಿ ಮಿದುಳಿನಲ್ಲಿ ಸಂತೋಷ ಉಂಟಾಗುತ್ತದೆ. ಮಿದುಳು ಮತ್ತೆ ಮತ್ತೆ ಸಂತೋಷಪಡಲು ಬಯಸಿ ಮಾದಕ ದ್ರವ್ಯವನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಉತ್ತೇಜಿಸುತ್ತದೆ. 

ದೀರ್ಘಕಾಲದ ಡ್ರಗ್ಸ್ ಸೇವೆನೆಯು ಮಿದುಳಿನ ಅರಿವಿನ ಕಾರ್ಯಕ್ಷಮತೆಯನ್ನು ಹಾನಿಗೊಳಿಸಬಹುದು. ಅಧ್ಯಯನಗಳು ತಿಳಿಸುವಂತೆ ದೀರ್ಘಕಾಲದ ಡ್ರಗ್ಸ್ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆಗೆ ಒಳಗಾಗಬಹುದು.

ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ಇತರೆ ಸಮಸ್ಯೆಗಳು.

* ನಡುಗುವಿಕೆ
* ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು

* ಮೂರ್ಛೆ ಹೋಗುವುದು
* ತೂಕದಲ್ಲಿ ಏರಿಳಿತ
* ಸಾಮಾಜಿಕವಾಗಿ ಕಡೆಗಣಿಸಲ್ಪಡುವುದು
* ಅತಿಯಾದ ಅಥವಾ ಅತಿರೇಕದ ಚಟುವಟಿಕೆಗಳು
* ಹೆದರಿಕೆ ಮತ್ತು ತಳಮಳ
* ಆತಂಕ ಮತ್ತು ಮತಿ ವಿಕಲ್ಪ.

ಮಾದಕ ದ್ರವ್ಯ ಸೇವನೆ ಚಟ ವಿಸ್ತಾರವಾಗದಂತೆ ತಡೆಯಲು ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು, ಮಾದಕ ದ್ರವ್ಯ ಸೇವನೆಯ ಚಟ ನಮ್ಮ ಸಮಾಜದಲ್ಲಿ ವಿಸ್ತಾರವಾಗದಂತೆ ತಡೆಯಲು ಪರ್ಯಾಯವಾಗಿ ನಾವು ನಮ್ಮನ್ನು ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಡ್ರಗ್ಸ್  ಮಾಫಿಯಾದ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಮಾಜಿಕ ಪ್ರಯತ್ನ ಸಾಗಬೇಕಾಗಿದೆ. ವಿಶ್ವ ಮಾದಕ ದ್ರವ್ಯ ಮತ್ತು ಕಳ್ಳ ಸಾಗಣಿ ವಿರೋಧಿ ದಿನಾಚರಣೆಯಂದು ನಾವೆಲ್ಲರೂ ಮಾದಕ ದ್ರವ್ಯವನ್ನು ಈ ದೇಶದಿಂದ ತೊಲಗಿಸೋಣ.


ಎ.ಜಿ.ಸುರೇಂದ್ರಬಾಬು
ಸಹಾಯಕ ಕಾರ್ಯದರ್ಶಿ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,
ಹೊಳಲ್ಕೆರೆ.
[email protected]

error: Content is protected !!