ಎಸ್ಸೆಸ್ ವೈದ್ಯಕೀಯ ವಿದ್ಯಾಲಯದಲ್ಲಿ ತೊನ್ನು ದಿನಾಚರಣೆ

ದಾವಣಗೆರೆಯ ಎಸ್.ಎಸ್.ಐ.ಎಂ.ಎಸ್ ಅಂಡ್ ಆರ್.ಸಿ.ನಲ್ಲಿ ಜನಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಪ್ರಸಾದ್‌, ವೈದ್ಯಕೀಯ ಅಧೀಕ್ಷಕ ಡಾ.ಎನ್.ಕೆ. ಕಾಳಪ್ಪನವರ್ ಹಾಗೂ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಎನ್.ಜಗನ್ನಾಥ್ ಅವರು ಭಾಗವಹಿಸಿದ್ದರು. 

ತೊನ್ನು (ವಿಟಿಲಿಗೊ): ವರ್ಣಮಯ ಜೀವನದ ಸಂದೇಶ: ಇಂದು (25 ರಂದು) ವಿಶ್ವ ತೊನ್ನು ದಿನ ಎಂದು ಆಚರಿಸಲಾಯಿತು. ಈ ದಿನದಂದು ತೊನ್ನಿನ ಬಗ್ಗೆ ಮಾಹಿತಿ ನೀಡಿ, ಜನ ಜಾಗೃತಿ ಮೂಡಿಸಲಾಗುತ್ತದೆ. ನಮ್ಮ ಚರ್ಮಕ್ಕೆ ಬಣ್ಣ ಕೊಡುವಂತಹ ಜೀವಕೋಶವನ್ನು ಮೆಲನೋಸೈಟ್ಸ್ ಎಂದು ಕರೆಯಲಾಗುತ್ತದೆ. ಈ ಮೆಲನೋಸೈಟ್ಸ್ ಜೀವಕೋಶದಿಂದ ಮೆಲಾನಿನ್ ಎಂಬ ಧಾತು ಉತ್ಪತಿಯಾಗುತ್ತದೆ. ಇದು ಮನುಷ್ಯನ ಚರ್ಮದ ಬಣ್ಣವನ್ನು ನಿರ್ಧರಿಸುತ್ತದೆ.

ತೊನ್ನು ಬರಲು ಕಾರಣ:  ದೇಹದಲ್ಲಿ ಸ್ವಯಂ-ಪ್ರತಿರೋಧಕದಲ್ಲಿ ಅಸಹಜತೆ ಉಂಟಾದಾಗ, ರೋಗ ಪ್ರತಿರೋಧಕ ವ್ಯವಸ್ಥೆಯು ಚರ್ಮದಲ್ಲಿರುವ ಮೆಲನೋಸೈಟ್‌ಗಳನ್ನು ಬಾಹ್ಯ ಅಂಶಗಳೆಂದು ಗುರುತಿಸಿ, ಅವುಗಳನ್ನು ನಾಶ ಮಾಡುತ್ತದೆ. ಇದರಿಂದ ದೇಹದ ವಿವಿಧ ಭಾಗಗಳಲ್ಲಿ ಬಿಳಿ ತೇಪೆಗಳು ಮತ್ತು ಆ ಜಾಗದಲ್ಲಿ ಕೂದಲು ಬಿಳಿಯಾಗುತ್ತದೆ. ಇದನ್ನು ತೊನ್ನು ಎಂದು ಕರೆಯಲಾಗುತ್ತದೆ. ಭಾರತದ ಜನರ ಮೈಬಣ್ಣದೆದುರು ಈ ಬಿಳಿ ತೇಪೆಗಳು ಎದ್ದು ಕಾಣುತ್ತವೆ.

ತೊನ್ನು ಹೇಗೆ ಕಾಣಿಸುತ್ತದೆ, ಯಾರಲ್ಲಿ ಕಾಣಿಸುತ್ತದೆ, ಅದರ ವಿನ್ಯಾಸ, ಕಾಣುವ ದೇಹದ ಭಾಗಗಳು:

ಚರ್ಮದಲ್ಲಿ ಬಣ್ಣ ಬದಲಾವಣೆಯಿಂದಾಗಿ ಬಿಳಿ ತೇಪೆಗಳು ಎದ್ದು ಕಾಣುತ್ತವೆ. ಆ ಭಾಗದಲ್ಲಿ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಇದು ಎಲ್ಲಾ ವಯಸ್ಸಿನ ಜನರಲ್ಲಿ ಮತ್ತು ಲಿಂಗ ಭೇದವಿಲ್ಲದೆ ಕಾಣಿಸುತ್ತದೆ. ಬೇರೆ ರೀತಿಯ ಸ್ವಯಂ ಪ್ರತಿರೋಧಕ ಅಸಹಜತೆಯ ಕಾಯಿಲೆ ಇರುವವರಲ್ಲಿ (Autoimmune ಕಾಯಿಲೆಗಳು) ತೊನ್ನು ಬಾಧಿಸುವುದು ಹೆಚ್ಚುತ್ತದೆ. ತೊನ್ನಿನಿಂದ ವ್ಯಕ್ತಿಯು ಮಾನಸಿಕ ಒತ್ತಡದಿಂದ ಬಳಲುತ್ತಾನೆ.

* ತೇಪೆಗಳ ಗಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.
* ಕೆಲವರಿಗೆ ಸಣ್ಣದಾಗಿ ಉಳಿಯುತ್ತದೆ. ಹಲವರಿಗೆ ಅದೇ ದೊಡ್ಡದಾಗಬಹುದು. ಅದರ ಜೊತೆ ಹೊಸ ತೇಪೆಗಳು ಕಾಣಬಹುದು.
* ಇನ್ನು ಕೆಲವರಲ್ಲಿ ಎಷ್ಟು ವರ್ಷಗಳಾದರೂ ಅದರ ಗಾತ್ರದಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲದೇ ಹಾಗೆಯೇ ಉಳಿದಿರುತ್ತದೆ.
* ತೊನ್ನು ಕಾಣುವ ಹಲವಾರು ವಿನ್ಯಾಸ :
* Focal ವಿನ್ಯಾಸ
* Segmental ವಿನ್ಯಾಸ
* Generalized ವಿನ್ಯಾಸ

ತೊನ್ನು ಕಾಣುವ ದೇಹದ ಭಾಗಗಳು :
ಸಾಮಾನ್ಯವಾಗಿ ಏಳು ಜಾಗಗಳಲ್ಲಿ ಕಾಣುವುದು : ಮೊಣಕೈ, ಮಂಡಿ, ಮುಂಗೈ, ಮುಖ, ತುಟಿ, ಜನನೇಂದ್ರಿಯ, ಕಣ್ಣಿನ ಸುತ್ತ.

ಬಿಳಿ ಮಚ್ಚೆಗಳು ಕಾಣುವ ಇತರೆ ಕಾರಣಗಳು:
* ಅನುವಂಶಿತವಾಗಿ ಬಂದ ಬಿಳಿ ಮಚ್ಚೆಗಳು
* ಇಸುಬು
* ಸ್ಟಿರಾಯ್ಡ್ ಮತ್ತು Hydroquinone ಗಳ ದುರುಪಯೋಗ
* ಕುಷ್ಠರೋಗ , ಕೆಮಿಕಲ್ ಲ್ಯುಕೊಡರ್ಮ

ಎಲ್ಲಾ ಬಿಳಿ ಚರ್ಮ, ತೊನ್ನು ರೋಗವಲ್ಲದೆ, ಇತರೆ ಕಾರಣದಿಂದಲೂ ಕಾಣಿಸಬಹುದು. ಆದ್ದರಿಂದ ಚರ್ಮ ರೋಗ ತಜ್ಞರಿಂದ ಸೂಕ್ತ ಸಲಹೆ ಪಡೆಯುವುದು ಅವಶ್ಯಕ.

ತೊನ್ನಿಗೆ ಇರುವ ಹಲವಾರು ಚಿಕಿತ್ಸೆಗಳು:
ಚಿಕಿತ್ಸೆಯ ಮೂಲ ಉದ್ದೇಶ – ಚರ್ಮದ ಸಹಜ ಬಣ್ಣ ಮರಳಿ ಪಡೆಯುವುದು. ಚಿಕಿತ್ಸೆ ಯಾವಾಗಲೂ, ವೈದ್ಯರ ನೇತೃತ್ವದಲ್ಲಿ ಪಡೆಯ ಬೇಕು. ಸ್ವಯಂ ಚಿಕಿತ್ಸೆ ಮಾಡಬಾರದು.

1. ವೈದ್ಯಕೀಯ ಚಿಕಿತ್ಸೆಗಳು:

* ಬೆಳಕಿನ ಶಾಖದ ಚಿಕಿತ್ಸೆ : NBUVB Phototherapy, Target Phototherapy
* ಚರ್ಮದ ಮೇಲೆ ಹಚ್ಚುವಂತಹ ಮುಲಾಮುಗಳು ಮತ್ತು ನುಂಗುವ ಗುಳಿಗೆಗಳು.

2. ಶಸ್ತ್ರಚಿಕಿತ್ಸೆ : Minipuch grafting, Melanocytes transplantation ಎಂಬ ಆಧುನಿಕ ಶಸ್ತ್ರಚಿಕಿತ್ಸೆಗಳು ಲಭ್ಯವಿವೆ.

ರೋಗಿಗಳಿಗೆ ಸಲಹೆ ಮತ್ತು ಸೂಚನೆಗಳು :
ತೊನ್ನು ಅಂಟುರೋಗವಲ್ಲ. ಅದರಿಂದ ಆತಂಕವಾಗದೇ ಆಶಾವಾದಿಯಾಗಿ, ಧೈರ್ಯದಿಂದಿರಿ. ಒಂಟಿ ಜೀವನದ ಕಡೆ ವಾಲದೆ, ವೈವಾಹಿಕ ಜೀವನವನ್ನು ಪ್ರಾರಂಭಿಸಿ. ಅದರಿಂದ ನಿಮ್ಮ ವೈವಾಹಿಕ ಜೀವನಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ತೊನ್ನು ಇರುವ ವ್ಯಕ್ತಿಯ ಮಕ್ಕಳಲ್ಲಿ ತೊನ್ನು ಕಾಣಿಸುವ ಸಂಖ್ಯೆ ಕಡಿಮೆ. ಅರೆಬೆಂದ ಮಾತುಗಳನ್ನು ಕೇಳದೇ, ಚಿಕಿತ್ಸೆಯನ್ನು ಆರಂಭದಿಂದಲೇ ಪ್ರಾರಂಭಿಸಿ ಮತ್ತು ಚಿಕಿತ್ಸೆಯನ್ನು ಮುಂದುವರೆಸಿ, ವರ್ಣಮಯ ಜೀವನ ಪ್ರಾರಂಭಿಸಿ.


ಡಾ. ಮಂಜುನಾಥ್ ಹುಲ್ಮನಿ, ಪ್ರಾಧ್ಯಾಪಕರು,
ಡಾ. ವಿನುತ ಎಮ್.ಎಮ್ (ಪಿಜಿ)
ಚರ್ಮ ರೋಗ ವಿಭಾಗ
ಎಸ್.ಎಸ್.ಐ.ಎಂ.ಎಸ್ ಅಂಡ್ ಆರ್.ಸಿ. ದಾವಣಗೆರೆ.
[email protected]

error: Content is protected !!