`ಮಕ್ಕಳ ಬಾಳಿನ ಬೆನ್ನೆಲುಬು’ …. `ಅಪ್ಪ’

9 ತಿಂಗಳು ಗರ್ಭದಲ್ಲಿ ಧರಿಸಿ, ಮಾಂಸ ಮುದ್ದೆಯಂತಿದ್ದ ಮಗುವಿನ ಆಕಾರ ಸೃಷ್ಠಿಸಿ ಅದರ ಜನನಕ್ಕೆ ಕಾರಣವಾಗುವ ಅಮ್ಮ…. ಅದೇ ಮಗು ಭುವಿಗೆ ಬಂದ ನಂತರ ಸುಮಾರು 20 ರಿಂದ 25 ವರ್ಷಗಳವರೆಗೆ ಮನೆಯ ಹೊರಗೆ ಬಿಸಿಲು, ಮಳೆ, ಚಳಿ ಎನ್ನದೇ ಜೀತ ಮಾಡಿ, ಮಕ್ಕಳಿಗೆ ಬೇಕು ಬೇಕಾದ್ದನ್ನೆಲ್ಲಾ ಕೊಡಿಸಿ, ಮಕ್ಕಳನ್ನು ಆನಂದದ ಉಯ್ಯಾಲೆಯಲಿ ತೇಲುವಂತೆ ಮಾಡುವ ಅಪ್ಪ ಎಲ್ಲಾ ಮಕ್ಕಳ ಪಾಲಿನ ಸರ್ವಸ್ವ. ಮಕ್ಕಳ ಬಾಳಿನ ಬೆನ್ನೆಲುಬು. ಅವರ ನಿಜವಾದ ಹೀರೋ….

ತಾಯಿಯ ಅಕ್ಕರೆಯ ಮಡಿಲಲ್ಲಿ ಬೆಳೆದ ಮಗು ಸ್ವಲ್ಪ ದೊಡ್ಡದಾದ ಮೇಲೆ ಅದನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತನಗಿಂತ ಎತ್ತರದ ದೃಷ್ಟಿಯಲ್ಲಿ ತೋರಿಸುವ ಅಪ್ಪನ ಆಗಸದಂತಹ ಪ್ರೀತಿಗೆ ಕೊನೆ ಎಲ್ಲಿದೆ ?

ಹೆಗಲ ಮೇಲೆ ಕೂರಿಸಿಕೊಂಡು ಊರು ತುಂಬಾ ಮೆರವಣಿಗೆ ಮಾಡುವ ಅಪ್ಪನ ಭುಜ-ರಥ, ಕಾರು, ವಿಮಾನ….. ಎಲ್ಲಾ….

ಅಪ್ಪ ಎಂದರೆ ಮಕ್ಕಳ ಕೌತುಕ, ಕುತೂಹಲ, ಆಸೆ ಉತ್ಸಾಹಗಳಿಗೆ ಸಂಭ್ರಮದ ಗರಿ ಮೂಡಿಸಿ ಪೊರೆಯುವ ದೊಡ್ಡ ಆಸ್ತಿ. ಜೀವನಕ್ಕೊಂದು ದಿಕ್ಕು ಕೊಡಲು ಉತ್ಕರ್ಷದ ದಾರಿಯಲ್ಲಿ ಸಾಗಲು ಮಾರ್ಗದರ್ಶನ ನೀಡುವ ಸಲಹೆಗಾರ, ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಳ್ಳಲು ತಾನೂ ಮಗುವಂತಾಗುವ ಭಾವುಕ ಜೀವಿ. ಕತ್ತಲೆಯೆಂಬ ಸಮಸ್ಯೆಗಳನ್ನು ಹೋಗಲಾಡಿಸಿ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸುವ ಸೂರ್ಯ, ಅಮ್ಮನಿಂದ ಜೀವ ಪಡೆದ ಮಗುವಿಗೆ ಬದುಕು ಕಲಿಸಿದ ಮಾಂತ್ರಿಕ, ವಿದ್ಯೆಯ ಜೊತೆ ಬುದ್ಧಿ ಹೇಳಿಕೊಡುವ ಶಿಕ್ಷಕ, ಸಂಸಾರದ ನಾವಿಕ, ಬದುಕಿನ ಜನಕ.

ಅಪ್ಪ ಎಂದರೆ ಮಕ್ಕಳ ಬಾಳಿನ ಬೆನ್ನೆಲುಬು. ಮಕ್ಕಳಿಗೆ ಆಸರೆ, ಸಂಸಾರ ವ್ಯೂಹದ ಮುಗಿಯದ ಪುಸ್ತಕ. ವಿಶ್ವಾಸಕ್ಕೆ ಮತ್ತೊಂದು ಹೆಸರು ಧೈರ್ಯ. ಧ್ಯೋತಕ, ಮಕ್ಕಳ ಭದ್ರತೆಯ ಬಿಸಿಯುಸಿರು. 

 

ಮಕ್ಕಳು ಪ್ರತಿ ಹೆಜ್ಜೆ ಇಡುವಲ್ಲಿ ತಂದೆಯ ಶ್ರಮ ಅಪರಿಮಿತ. ಮಕ್ಕಳು ನೋಡು ನೋಡುತ್ತಲೇ ಬೆಳೆದು ನಿಂತಾಗ ಅಪ್ಪನ ಎದೆ ನಡುಗುತ್ತದೆ. ನನ್ನ ಮನೆ ದೇವತೆಗೆ (ಮಗಳಿಗೆ) ಎಂತಹ ದೇವರಂತಹ ಅಳಿಯನನ್ನು ತರಲಿ ಎನ್ನುವ ಚಿಂತೆ. ದೇವರೇ ಬಂದು ವರಿಸಿದರೂ ಸಮಾಧಾನವಿಲ್ಲ ಅಪ್ಪನಿಗೆ. ನನ್ನ ಮನೆ ಮಗನಿಗೆ ಎಂತಹ ಸೊಸೆ ತರಲಿ, ನನ್ನ ಮಗ ಹೇಗೆ ಇದಾನೋ ಹಾಗೆ ಒಪ್ಪಿಕೊಂಡು, ನಾವು ನೋಡಿಕೊಂಡ ಹಾಗೆ ಕಾಪಾಡುವ ಸೊಸೆ ಸಿಗುವಳೇ ಎನ್ನುವ ಆತಂಕ.

ಮದುವೆಯ ನಂತರ ಮಕ್ಕಳಾದ ಕ್ಷಣದಿಂದ ನಿಸ್ವಾರ್ಥಿಯಾಗಿ ತನ್ನ ಮಕ್ಕಳ ಭಾವೀ ಭವಿಷ್ಯಕ್ಕೋಸ್ಕರ  ತನ್ನ ಇಡೀ ಜೀವಮಾನವನ್ನು ಗಂಧದಂತೆ ತೇಯ್ದು, ಇಡೀ ಮನೆಯ ಬೆಂಗಾವಲಾಗಿ ನಿಲ್ಲುವ ಅಪ್ಪ ಒಂದು ಕ್ಷಣ ನಮ್ಮ ಬಾಳಲ್ಲಿ ಯಾವ ಅಳತೆಗೂ ನಿಲುಕದ, ಅರ್ಥಮಾಡಿಕೊಳ್ಳಲಾಗದ ಒಗಟಾಗುತ್ತಾನೆ.

ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಎಲ್ಲರ ರಕ್ಷಣೆಗಾಗಿ ತಮ್ಮ ಜೀವವನ್ನು ಒತ್ತೆ ಇಟ್ಟು, ಕಾಪಾಡುತ್ತಿರುವ ಆರೋಗ್ಯ ಇಲಾಖೆಯ ಒಬ್ಬ ವೈದ್ಯ, ಒಬ್ಬ ನರ್ಸ್, ಒಬ್ಬ ಆಂಬ್ಯೂಲೆನ್ಸ್ ಡ್ರೈವರ್, ಆರಕ್ಷಕ ಠಾಣೆಯ ಒಬ್ಬ ಪೊಲೀಸ್ ಮಹಾತ್ಮ, ನಗರಪಾಲಿಕೆಯ ಒಬ್ಬ ಪೌರ ಕಾರ್ಮಿಕ, ಕೊರೊನಾ ಎನ್ನುವ ಹೆಮ್ಮಾರಿಗೆ ಹೆದರದೇ ನಮಗೆ ಅನ್ನ ನೀಡುತ್ತಿರುವ ಒಬ್ಬ ರೈತ. ಅಂಜದೇ, ಅಳುಕದೇ ಇದಾವುದರ ಗೊಡವೆನೇ ಇಲ್ಲದೆ ದೇಶ ಕಾಯುತ್ತಿರುವ ಒಬ್ಬ ಯೋಧ. ಎಲ್ಲಿ ನಮ್ಮ ಮಕ್ಕಳ ಭವಿಷ್ಯ ಮಣ್ಣು ಪಾಲಾಗುತ್ತೋ ಅಂತ ಕಂಗಾಲಾಗಿರುವ ಒಬ್ಬ ಶಿಕ್ಷಕ, ಒಬ್ಬ ಅಧಿಕಾರಿ ಕೂಡ ಒಬ್ಬ ಅಪ್ಪನಲ್ಲವೇ? ಈ ದಿನದಂದು ಅಂತಹ ಮಹಾನ್ ಅಪ್ಪನಿಗೆ ಒಂದು ಶುಭಾಶಯ ಕೋರೋಣವೇ?

ಇಂತಹ ನಿಸ್ವಾರ್ಥ ಅಪ್ಪ, ಮಕ್ಕಳಿಂದ ಬಯಸುವುದಾದರೂ ಏನನ್ನು? ಸ್ವಲ್ಪ ನೆಮ್ಮದಿ, ಮಕ್ಕಳಿಂದ ತುಸು ಪ್ರೀತಿ, ಕಾಳಜಿ. ಹೆಚ್ಚೆಂದರೆ ಆರೈಕೆ. ಇದನ್ನರಿಯದೇ, ಅವರ ಶ್ರಮ ಅರ್ಥವಾಗದೇ ಅವರ ತ್ಯಾಗದ ಜೀವನಕ್ಕೆ ಬೆಲೆ ಕೊಡದೇ ಏಣಿ ಹತ್ತಿ ಮೇಲೆ ಹೋದ ನಂತರ ಹತ್ತಿದ ಏಣಿಯನ್ನು ಮರೆತು ಮತ್ತೆ ಕೆಳಗಿಳಿಯಲು ಆ ಏಣಿಯ ಅವಶ್ಯಕತೆ ಇದೆ ಎನ್ನುವ ಸಣ್ಣ ಪರಿಜ್ಞಾನವಿಲ್ಲದೆ, ಕೊನೆಗೆ ಅವರನ್ನು ಕಡೆಗಣಿಸಿ, ವೃದ್ಧಾಶ್ರಮದ ಪಾಲಾಗುವಂತೆ ಮಾಡುವ ಮಕ್ಕಳಾಗಲೀ, ಹೆಂಡತಿ ಮಾತು ಕೇಳುವ ಮಗನಾಗಲೀ, ಗಂಡನ ಮಾತು ಕೇಳುವ ಮಗಳ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ತಮ್ಮ ಸ್ವಾರ್ಥ ಜೀವನದಲ್ಲಿ ಮುಳುಗಿ ಕಾಲು ಕಸ ಮಾಡಿದ ಮಕ್ಕಳ ಅಪ್ಪಂದಿರು ಏಕಾಂಗಿಗಳಾಗಿ ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿರುವುದು ಶೋಚನೀಯ.


ಡಾ. ಅನಿತಾ ಹೆಚ್. ದೊಡ್ಡಗೌಡರ್
ಸಹಾಯಕ ಪ್ರಾಧ್ಯಾಪಕರು
ಎಸ್.ಎಸ್.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯ, ದಾವಣಗೆರೆ. 99021 98655

error: Content is protected !!