ಎಲೆ ಮರೆ ಕಾಯಂತೆ ಇದ್ದು, ತಮ್ಮ ಸೇವೆ ಸಲ್ಲಿಸುತ್ತಿರುವ ಸೇವಕರು

ಕೊರೊನಾ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ಇಡೀ ಪ್ರಪಂಚವೇ ಹೋರಾಡುತ್ತಿದೆ. ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಸ್ಸನ್ನು ಗೆಲ್ಲಲು ಜಗತ್ತಿನಾದ್ಯಂತ ಡಾಕ್ಟರ್, ನರ್ಸ್, ಫಾರ್ಮಾಸಿಸ್, ಹೌಸ್‌ಕೀಪರ್ ಹೀಗೆ ಇಡೀ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸೈನ್ಯದವರು ಹೀಗೆ ಇನ್ನು ಹಲವರು ಶ್ರಮಿಸುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಇವರೆಲ್ಲಾ ನಮ್ಮ ಕಣ್ಣಿಗೆ ಕಾಣುವಂತೆ ತೆರೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರಿಗೂ ಒಂದು ಸಲಾಂ, ಇವರೆಲ್ಲರ ಜೊತೆ ತೆರೆಯ ಹಿಂದೆ ಇನ್ನೂ ಹಲವರು ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನೂ ಸಹ ನಾವು ನೆನಪಿಸಿಕೊಂಡು ಅವರಿಗೆ ಒಂದು ಅಭಿನಂದನೆಯನ್ನು ಹೇಳಲೇ ಬೇಕಾದದ್ದು ನಮ್ಮ ಕರ್ತವ್ಯ. 

ಯಾವ ಜಾತಿ, ಜನಾಂಗ, ಧರ್ಮ ಎನ್ನದೇ ಮನುಕುಲವನ್ನೇ ಕೆಣಕಿದ ಕೊರೊನಾ ವಿರುದ್ಧ ಹೋರಾಡಿ ಇಡೀ ಮನುಕುಲವನ್ನು ಉಳಿಸಲು, ಮಾನವೀಯತೆಯನ್ನು ಮೆರೆಯುತ್ತಿರುವ ಅನೇಕ ಸೇವಕರಲ್ಲಿ ಇವರೂ ಸಹ `ಬಡತನಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ’ ಎಂಬ ಅಂಬಿಗರ ಚೌಡಯ್ಯನವರ ವಚನದಂತೆ ಇಡೀ ಜಗತ್ತು ಇಂದು ಹಲವು ಚಿಂತೆಯಲ್ಲಿ ಮುಳುಗಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ಭಾರತದಂತಹ ದೇಶದಲ್ಲಿ ಇನ್ನೂ ಸಹ ಬಡತನ ತಾಂಡವವಾಡುತ್ತಿದೆ. ದಿನಗೂಲಿಯಿಂದ ಜೀವನ ಸಾಗಿಸುವ ಹಲವರನ್ನು ತುಂಬಿಕೊಂಡಿರುವ ದೇಶ ನಮ್ಮದು ಇಂತಹ ದೇಶ ಇಂದು ಇಡೀ ಜಗತ್ತಿಗೇ ಮಾದರಿ ಆಗಿದೆ. ಕಾರಣ ನಮ್ಮಲ್ಲಿರುವ ಒಗ್ಗಟ್ಟು, ನಿಸ್ವಾರ್ಥತೆ, ಮಾನವೀಯತೆ ಮೆರೆಯುವ ಜನ ಎಂದರೆ ತಪ್ಪಾಗಲಾರದು.

ಈ ಲಾಕ್‌ಡೌನ್‌ನಿಂದ ಮುಂದೆ ಜೀವನ ಹೇಗೆ? ಊಟಕ್ಕೆ, ಬಟ್ಟೆಗೆ, ದುಡಿಮೆಗೆ ಏನು ಎಂದು ಚಿಂತೆಯಲ್ಲಿದ್ದವರಿಗೆ ಸರ್ಕಾರ ಹಲವು ಯೋಜನೆಗಳ ಮೂಲಕ ಎಲ್ಲಾ ವರ್ಗದವರಿಗೂ ಸಹಕಾರ ನೀಡಲು ಪ್ರಯತ್ನಿಸುತ್ತಿದೆ. ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಓಡಾಡಲೂ ಸಹ ಹೆದರುವ ಪರಿಸ್ಥಿತಿ ಬಂದಿದೆ. ಹೀಗಿರುವಾಗ ಅಂತಹ ಪ್ರದೇಶದ ಜನರಿಗೆ ಆಹಾರ ಪದಾರ್ಥಗಳನ್ನು ಒದಗಿಸುವ ಕೆಲಸ ಸಹ ಮಾಡಲಾಗುತ್ತಿದೆ. ಹೀಗೆ ಹಸಿವು ಮುಕ್ತ ರಾಜ್ಯ ಮತ್ತು ದೇಶ ನಮ್ಮದಾಗಲೆಂದು ಸರ್ಕಾರ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆ ಸಹ ಇಂದು ಶ್ರಮಿಸುತ್ತಿದೆ. 

ನಮಗಾಗಿ ಕಂಟೈನ್‌ಮೆಂಟ್ ಜೋನ್‌ಗಳಿಗೆ ತೆರಳಿ ಪ್ರತಿ ಮನೆ ಮನೆಗೂ ಆಹಾರ ಪದಾರ್ಥಗಳ ಪೂರೈಕೆ ನಡೆಯುತ್ತಿದೆ. ಹೀಗೆ ಆಹಾರ ಇಲಾಖೆ ನಮ್ಮೆಲ್ಲರಿಗಾಗಿ ಶ್ರಮಿಸುತ್ತಿರುವ ಎಲ್ಲಾ ವರ್ಗದ ಸಿಬ್ಬಂದಿಗೂ ಒಂದು ಸಲಾಂ, ಇದರ ಜೊತೆ ಜೊತೆಗೆ ನಮ್ಮ ಜೊತೆಯಾಗಿ ನಿಂತು ಸಹಾಯ ನೀಡುತ್ತಿರುವ ಹಲವಾರು ಬ್ಯಾಂಕ್ ಸಿಬ್ಬಂದಿಗೂ ಒಂದು ನಮನ, ನಮಗೆ ಬ್ಯಾಂಕ್‌ಗಳಲ್ಲಿ ವ್ಯವಹರಿಸಲು ಲಾಕ್‌ಡೌನ್‌ನಲ್ಲಿ ಯಾವುದೇ ಅಡ್ಡಿ ಇಲ್ಲದೇ, ತಮ್ಮ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಸ್ವಯಂ ಸೇವಾ ಸಂಸ್ಥೆಗಳು ಅಗತ್ಯ ವಸ್ತುಗಳ ಪೂರೈಕೆಯನ್ನು ಅಗತ್ಯವಿರುವ ಜನರ ಮನೆ ಮನೆಗೆ ತಲುಪಿಸುತ್ತಿದ್ದಾರೆ. ಅವರಿಗೂ ಒಂದು ಸಲಾಂ. ಹೀಗೆ ಇದೀಗ ಸಾರಿಗೆ ಸಂಸ್ಥೆಯೂ ಸಹ ಜನರ ಅನುಕೂಲಕ್ಕಾಗಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಜನರು ಒಂದು ಊರಿನಿಂದ ಮತ್ತೊಂದೂರಿಗೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇನ್ನು ಕೊರೊನಾ ವೈರಸ್ ನಂತೆ ಹಗಲು-ಇರುಳು ಶ್ರಮಿಸುತ್ತಿರುವ ಸಿಬ್ಬಂದಿಗೂ ಹಾಗೂ ಪರೋಕ್ಷವಾಗಿ ಲಾಕ್‌ಡೌನ್‌ನಲ್ಲೂ ಸಹ ಯಾವುದೇ ರೀತಿ ಕೊರತೆ ತೊಂದರೆಯಾಗದ ರೀತಿ ಜನರ ಅಗತ್ಯತೆಗಳನ್ನು ಪೂರೈಸಿದ ಎಲ್ಲಾ ಇಲಾಖೆಯ ಸಿಬ್ಬಂದಿಗೂ ನಮ್ಮ ಹೃದಯ ಪೂರ್ವಕ ನಮನ.

ನಮ್ಮೆಲ್ಲರ ಹಿತಕ್ಕಾಗಿ ನಿಮ್ಮ ಕುಟುಂಬ, ನಿಮ್ಮ ಹಿತವನ್ನು ಮರೆತು ಜೀವದ ಹಂಗು ತೊರೆದು ನಮಗಾಗಿ ಬಂದ ದೇವರು ನೀವು. ಕಾಣದ ದೇವರಿಗಿಂತ, ಕಾಣುವ ನಿಮ್ಮಯ ಸೇವೆಯೇ ನಿಜವಾದ ದೇವರು.

ಈ ದೇವರುಗಳಿಗೆ ನನ್ನ ನಮನ, ಕಸ ಎಂದ ಕೂಡಲೇ ಎಲ್ಲರೂ ಸಹ ಮುಖ ಮುರಿಯುವುದು ಸಹಜ. ನಮ್ಮ ಮನೆಯ ಕಸದ ಬುಟ್ಟಿಯನ್ನು ಮುಟ್ಟಲು ನಮಗೆ ಅದೆಷ್ಟೋ ಬಾರಿ ಅಸಹ್ಯ ಭಾವ ಬಂದಿರುವುದು ಸಹಜ. ಆದರೂ ಸಹ ಮೂಗು ಮುಚ್ಚಿಕೊಂಡು ಕಸದ ಬುಟ್ಟಿಯನ್ನು ಹಿಡಿದು ಮುಖ ಕಿವುಚಿಕೊಂಡು ಹೊರ ನಡೆದು ಕಸದ ವಾಹನ ಬಂದಾಗ ಹೊರಗಿಟ್ಟು ಬರುವೆವು ನಾವೆಲ್ಲ. ವಿಪರ್ಯಾಸವೆಂದರೆ ನಮ್ಮ ಮನೆಯ ಕಸ ಮುಟ್ಟಲು ನಾವೇ ಹಿಂಜರಿಯುತ್ತೇವೆ. ಹೀಗಿರುವಾಗ ಊರ ಕಸವನ್ನೆಲ್ಲಾ ಮನೆ ಮನೆಗೆ ಹೋಗಿ ಅವರೊಂದಿಗೆ ನಗುತ್ತಾ ಮಾತನಾಡಿ, ಅಮ್ಮ ಕಸ ಕೊಡಿ ಎಂದು ಕೂಗುತ್ತಾ ಬಂದು ನಮ್ಮ ಮನೆಯ ಕಸ ಕೊಂಡೊಯ್ದ ನಮ್ಮ ಮನೆ, ನೆರೆಹೊರೆಯನ್ನು ಸ್ವಚ್ಛವಾಗಿಡಲು ಸಹಕಾರ ನೀಡುವ ನಮ್ಮ ಪೌರ ಕಾರ್ಮಿಕರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ಕೊರೊನಾದಿಂದಾಗಿ ನಾವು ತರುವ ತರಕಾರಿ, ಹೂ ಎಲ್ಲವನ್ನು ಹೊರಗೆ ತೊಳೆದು ನಂತರ ಮನೆಯೊಳಗೆ ತರುವ ನಾವು ತರಕಾರಿ, ಸಾಮಗ್ರಿ ತಂದ ನಮ್ಮ ಮನೆಯ ವ್ಯಕ್ತಿಯನ್ನು ತೊಳೆಯುವುದೊಂದೇ ಬಾಕಿ. ಈ ರೀತಿ ಕೊರೊನಾ ನಮ್ಮನ್ನು ಸ್ವಚ್ಛತೆಯ ಕಡೆಗೆ ಕೊಂಡೊಯ್ಯತ್ತಿದ್ದು, ಹೀಗೆ ನಮ್ಮ ಮನೆ, ಊರನ್ನು  ರೋಗ ಮುಕ್ತ ಮಾಡಲು ಪೌರಕಾರ್ಮಿಕರು ತಪ್ಪದೇ ದಿನಾ ಬಂದು ಎಲ್ಲರ ಮನೆಯ ಕಸವನ್ನು ನಿರ್ಭಯದಿಂದ ಒಯ್ದು ನಮ್ಮ ಮನೆ, ಮನಸ್ಸನ್ನು ಸ್ವಚ್ಛವಾಗಿಡಲು ಕಾರಣರಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೂ ಒಂದು ಸಲಾಂ.

ಈ ಕೊರೊನಾದಿಂದ ಅಸಂಬದ್ಧವಾಗಿ ಹೋಗುತ್ತಿದ್ದ ಮಾನವನ ಜೀವನದಲ್ಲಿ ಸಂಬದ್ಧತೆಯನ್ನು, ಮಾನವೀಯತೆಯನ್ನು, ಶಿಸ್ತು, ಸ್ವಚ್ಛತೆಯನ್ನು, ಸಮಾನತೆಯನ್ನು, ಸಹೃದಯತೆಯನ್ನು ನಮ್ಮೆಲ್ಲರಲ್ಲಿ ತಂದಿದೆ. ನಮಗೊಂದು ನೀತಿ ಪಾಠ ಕೂಡ ಕಲಿಸಿದೆ. ಯಾರನ್ನೂ ಅಲ್ಲಗಳೆಯದೆ, ಎಲ್ಲರನ್ನೂ ಪ್ರೀತಿ ಸುವ, ಗೌರವಿಸುವ ಭಾವವನ್ನು ಹುಟ್ಟಿಹಾಕಿದೆ.


ಶೃತಿ ಪಿ.ರಾಜು
ದಾವಣಗೆರೆ.

error: Content is protected !!