ಹೊಸ ಕಂಪನಿಯೋ, ಹಳೇ ಸಾಹುಕಾರೋ

ಎಪಿಎಂಸಿ ಕಾಯ್ದೆ ತಿದ್ದುಪಡಿ; ಗೊಂದಲದಲ್ಲಿ ರೈತರು, ವರ್ತಕರು
ದಾವಣಗೆರೆ, ಮೇ 18- ಅಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಕೇಳಿದಷ್ಟು ಹಣ ಕಡಿಮೆ ಬಡ್ಡಿಯಲ್ಲಿ ಸಿಗ್ತಿತ್ತು. ಮನೆಯಲ್ಲಿ ಯಾರಾದ್ರೂ ಅನಾರೋಗ್ಯ ಪೀಡಿತರಾದ್ರೆ ಆಸ್ಪತ್ರೆ ಖರ್ಚಿಗೆ ಕೂಡಲೇ ಹಣ. ಹೀಗೆ ನಾನಾ ಕಾರಣಗಳ ಖರ್ಚಿಗೆ ರೈತನಿಗೆ ಹಣ ದೊರೆಯುವ ಸ್ಥಳವದು.
ಕಷ್ಟದ ಸಮಯದಲ್ಲಿ ಹಣ ಸಿಕ್ಕ ಖುಷಿ ರೈತನದ್ದಾದರೆ, ಆತ ತಾನು ಬೆಳೆದ  ಬೆಳೆಯನ್ನು ತನ್ನಲ್ಲಿಯೇ ಮಾರುತ್ತಾನೆ. ಆಗ ತಾನು ನೀಡಿದ ಹಣಕ್ಕೆ ಒಂದಿಷ್ಟು ಬಡ್ಡಿ ಸೇರಿಸಿ ಪಡೆಯಬಹುದೆಂಬ ನಿರೀಕ್ಷೆ ವ್ಯಾಪಾರಿಯದು.
ಹೌದು, ಹಲವಾರು ವರ್ಷಗಳಿಂದ ನಡೆದು ಬಂದಿರುವ ಕೊಡು-ಕೊಳ್ಳುವಿಕೆ, ಕಷ್ಟಗಳಿಗೆ ಹಣದ ನೆರವಿನ ಜೊತೆ ಒಂದಿಷ್ಟು ಲಾಭದ ವ್ಯಾಪಾರಕ್ಕೆ ಸ್ಥಳೀಯ ಎಪಿಎಂಸಿಗಳು ಸಾಕ್ಷಿಯಾಗಿವೆ. ಇಲ್ಲಿ ಯಾವ ಛಾಪಾ ಕಾಗದ, ಅಥವಾ ಶ್ಯೂರಿಟಿ ಅಗತ್ಯ ಇರಲಿಲ್ಲ.  ಮಧ್ಯರಾತ್ರಿ ಮನೆಗೆ ಬಂದು ಬಾಗಿಲು ಬಡಿದರೂ, ಹಣದ ಸಹಾಯ ಸಿಗುತ್ತಿತ್ತು ವರ್ತಕರಿಂದ. ಕಾರಣ ನಂಬಿಕೆಯೇ ಇಲ್ಲಿ ಶ್ಯೂರಿಟಿ. ಸಾಮಾನ್ಯವಾಗಿ ರೈತರೆಲ್ಲಾ ಇಲ್ಲಿನ ದಲ್ಲಾಲಿಗಳನ್ನು `ಸಾಹುಕಾರೆ  ‘ ಎಂದೇ  ಕರೆಯುತ್ತಾರೆ.

ನೂತನ ಕಾಯ್ದೆ ಪ್ರಕಾರ ಹೊರಗಿನ ಕಂಪನಿಗಳು ನೇರವಾಗಿ ರೈತರಿಂದ ಖರೀದಿಸಲು ಅನುಮತಿ ಇದೆ. ಇದರಿಂದ ರೈತರಿಗೆ ಉತ್ತಮ ದರ ಸಿಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಆದರೆ ಯಾವ ರೀತಿಯ ಬದಲಾವಣೆ ಎಂಬ ಕರಡು ಪ್ರತಿ ನಮಗಿನ್ನೂ ಬಂದಿಲ್ಲ.  – ಪ್ರಭು, ಕಾರ್ಯದರ್ಶಿ, ಎಪಿಎಂಸಿ

ಸಾಲ ಕೊಂಡು ಹೋದ ರೈತ ಬೆಳೆ ಬಂದಾಕ್ಷಣ ನಮ್ಮಲ್ಲಿಗೇ ಬಂದು  ಮಾರುತ್ತಾನೆ ಎಂಬ ನಂಬಿಕೆಯಲ್ಲಿಯೇ ಹಣ ನೀಡುತ್ತಾನೆ ದಲ್ಲಾಲಿ. ರೈತನೂ ಸಹ ತನ್ನ ಕಷ್ಟಕ್ಕೆ ನೆರವಾದ ವರ್ತಕನ ಬಳಿಯೇ ದಾಸ್ತಾನು ತರುತ್ತಾನೆ.  ಈ ವರ್ಷ ಅತಿವೃಷ್ಟಿಯೋ, ಅನಾವೃಷ್ಟಿಯೋ ಆದರೆ ಮುಂದಿನ ಬೆಳೆ ಬಂದಾಗ ಹಣ ಕೊಟ್ಟರೂ ಆಯಿತು. ಬಡ್ಡಿ ಕೊಟ್ಟರೆ ಸಾಕು.
ಇದೀಗ ಇಂತಹ ಪದ್ಧತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೂರ್ಣ ವಿರಾಮ ಹಾಕುತ್ತಿದೆ ಎಂಬ ಆತಂಕ ರೈತರಿಗೂ, ವರ್ತಕರಿಗೂ ಇದೀಗ ಕಾಡಲಾರಂಭಿಸಿದೆ. ಸರ್ಕಾರಗಳು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿವೆ. ಆದರೆ ಅದೇನು ಎಂಬ ಬಗ್ಗೆ ಸಾಕಷ್ಟು ರೈತರು ಇನ್ನೂ ತಲೆ ಕೆಡಿಸಿಕೊಂಡಿಲ್ಲ. ಕೆಲ ಮುಖಂಡರು ನೂತನ ಕಾಯ್ದೆ ಪರವಿದ್ದರೆ, ಮತ್ತೆ ಕೆಲವರು ಕಾಯ್ದೆಯಿಂದ ರೈತರಿಗೆ ಕಷ್ಟ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ಈ ವಿಷಯದಲ್ಲಿ ರೈತರು, ವರ್ತಕರು ಗೊಂದಲದಲ್ಲಿದ್ದಾರೆ.

ಇನ್ನು ಬಹುರಾಷ್ಟ್ರೀಯ ಕಂಪನಿಗಳು ನೇರ ರೈತನ ಹೊಲಕ್ಕೆ ದಾಳಿ ಇಡುತ್ತಿವೆ ಎಂಬ ಆತಂಕದ ನಡುವೆಯೂ, ಸ್ಥಳೀಯ ವರ್ತಕರು ಎಲ್ಲರಿಗೂ ಆಗಿದ್ದು ನಮಗೂ ಆಗುತ್ತದೆ ಎಂಬ ಮಾತುಗಳನ್ನಾಡುತ್ತಿದ್ದಾರೆ.
ಕಾಯ್ದೆ ಬಗ್ಗೆ ಹೇಳುವುದಾದರೆ, ರೈತರು ಬೆಳೆಯುವ ಫಸಲನ್ನು ಎಪಿಎಂಸಿಗಳಲ್ಲಿ ಮಾರಾಟ ಮಾಡಬೇಕು. ಅದನ್ನು ಖರೀದಿ ಮಾಡುವ ವ್ಯಾಪಾರಿಗಳು ಎಪಿಎಂಸಿಗಳಲ್ಲಿ ನೋಂದಣಿ ಮಾಡಿಸಿಕೊಂಡು, ರೈತರು ಬೆಳೆದ ಮಾಲನ್ನು ಹರಾಜಿನ ಮೂಲಕ ಖರೀದಿಸಲು ಅವಕಾಶವಿತ್ತು.
ಜೊತೆಗೆ 2017ರ ಮಾದರಿ ಕಾಯಿದೆಯ ಪ್ರಕಾರ ಆನ್‌ಲೈನ್‌ ಮೂಲಕ ಟೆಂಡರ್‌ ಖರೀದಿದಾರರು ಭಾಗವಹಿಸಲು ಅವಕಾಶವಿತ್ತು. ಈಗ ಇದೇ ಕಾಯಿದೆಯ 8ನೇ ಕಲಂಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸೂಚಿಸಿದೆ.
ನೂತನ ಸುಗ್ರೀವಾಜ್ಞೆಯಲ್ಲಿ ಏನಿದೆ?:  ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸುಗ್ರೀವಾಜ್ಞೆ ಮೇಲ್ನೋಟಕ್ಕೆ ರೈತರಿಗಾಗಿಯೇ ತಿದ್ದುಪಡಿ ಎನ್ನುವಂತಿದ್ದರೂ, ಬಹುರಾಷ್ಟ್ರೀಯ ಕಂಪನಿಗಳ ಹಿತ ಎದ್ದು ಕಾಣುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಈಗಿರುವ ಎಪಿಎಂಸಿ ಕಾಯಿದೆ ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಇರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಕೃಷಿ ನಿರ್ದೇಶನಾಲಯದ ಅನುಮತಿ ಅಗತ್ಯವಾಗಿತ್ತು.
ಇದೀಗ ಎಂಪಿಎಂಸಿ ಒಳಗೆ ಅಥವಾ ಹೊರಗೆ ರೈತರ ಉತ್ನನ್ನಗಳನ್ನು ಖರೀದಿ ಮಾಡಲು ಅನುಮತಿ ಅನಗತ್ಯ ಎಂಬುದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಬೇಕೆಂದು ಕೇಂದ್ರ ಕೃಷಿ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಮೇ 5 ರಂದು ಪತ್ರ ಬರೆದು ಸೂಚಿಸಿತ್ತು.
ಅದರಂತೆ ಕಾಯಿದೆಗೆ ತಿದ್ದುಪಡಿ ಮಾಡಿ ರಾಜ್ಯಪಾಲರ ಅಂಕಿತಕ್ಕೆ ರಾಜ್ಯ ಸರ್ಕಾರ ಕಳಿಸಿತ್ತು. ಆದರೆ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು, ಸಂಪುಟ ಸಭೆಯಲ್ಲಿಟ್ಟು ಅನುಮೋದನೆ ಪಡೆದ ಬಳಿಕ ಸುಗ್ರೀವಾಜ್ಞೆಯನ್ನು ಕಳಿಸಿ ಎಂದು ತಿರಸ್ಕರಿಸಿದ್ದರು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಉತ್ಪನ್ನಗಳಿಗೆ ಯೋಗ್ಯ ಧಾರಣೆ ಮತ್ತು ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದಲೇ ತಿದ್ದುಪಡಿ ತರಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಯಾವ ರೀತಿ ಹಿತ ಎಂಬುದನ್ನು ಕಾದು ನೋಡಬೇಕಿದೆ.
_______________________________________________________________________________________________________

ಹೊಸ ಕಂಪನಿಯೋ, ಹಳೇ ಸಾಹುಕಾರೋ - Janathavani

ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ
9964930983
[email protected]

error: Content is protected !!