ಕೊರೊನಾ ಲಾಕ್‌ಡೌನ್ ದಿನಚರಿ – ಡಾ. ಹೆಚ್.ವಿ. ವಾಮದೇವಪ್ಪ

Home ಲೇಖನಗಳು ಕೊರೊನಾ ಲಾಕ್‌ಡೌನ್ ದಿನಚರಿ – ಡಾ. ಹೆಚ್.ವಿ. ವಾಮದೇವಪ್ಪ

ಕೊರೊನಾ ಲಾಕ್‌ಡೌನ್ ದಿನಚರಿ – ಡಾ. ಹೆಚ್.ವಿ. ವಾಮದೇವಪ್ಪ

ಹಲವಾರು ವರ್ಷಗಳ ಯಾಂತ್ರಿಕ ಜೀವನದಿಂದ ವಿಭಿನ್ನವಾಗಿ ಮನೆಯಲ್ಲಿಯೇ ಇರಬೇಕಾದ ವಿಶಿಷ್ಟ ಪರಿಸ್ಥಿತಿ ಇಂದು ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹಬ್ಬುತ್ತಿರುವುದರಿಂದ ನಿರ್ಮಾಣವಾಗಿದೆ. ಮಾರ್ಚ್ 22 ರಿಂದ ಇಲ್ಲಿಯವರೆಗೆ ಸುಮಾರು 45 ದಿನಗಳ ಕಾಲ ವಿರಾಮ ದೊರೆತಿರುವುದು ನನಗೆ ಒಂದು ರೀತಿ ಯಲ್ಲಿ ವರವಾಗಿದೆ. ಸುಮಾರು 35 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ನಿವೃತ್ತನಾದ ನಂತರ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ವಿಶೇಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನನಗೆ ಭಾನುವಾರ ಹೊರತುಪಡಿಸಿ ಎಂದೂ ಬಿಡುವು ಸಿಗುತ್ತಿರಲಿಲ್ಲ. ಲಾಕ್‌ಡೌನ್ ಆರಂಭವಾದ ನಂತರ ನನ್ನ ದಿನಚರಿ ಬದಲಾಗಿದೆ. ಬೆಳಿಗ್ಗೆ 6 ಗಂಟೆಗೆ ಎದ್ದು ಮನೆಯ ಮೇಲೆ ಸ್ವಲ್ಪ ಹೊತ್ತು ವಾಯು ವಿಹಾರ ನಡೆಸಿ ನಂತರ 7 ಗಂಟೆಯವರೆಗೆ ಯೋಗಾಸನ ಮತ್ತು ಧ್ಯಾನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ನಂತರ ಮನೆಯ ಸುತ್ತ ಇರುವ ಹೂವಿನ ಗಿಡಗಳಿಗೆ ನೀರುಣಿಸುವ ಕಾರ್ಯ ಹಾಗೂ ಮನೆಯ ಮುಂದೆ ಪಶು ಪಕ್ಷಿಗಳಿಗಾಗಿ ಇಟ್ಟಿರುವ ನೀರಿನ ತೊಟ್ಟಿಯನ್ನು ತುಂಬಿಸುತ್ತೇನೆ. ಬೇಸಿಗೆ ಕಾಲವಾಗಿರುವುದರಿಂದ ಹಲವಾರು ಪ್ರಾಣಿ-ಪಕ್ಷಿಗಳು ಬಂದು ನೀರು ಕುಡಿಯುವಾಗ ಮನಸ್ಸಿಗೆ ತೃಪ್ತಿ ದೊರೆಯುತ್ತದೆ. ನಂತರ ಬೆಳಿಗ್ಗೆ 8 ರಿಂದ 9ರವರೆಗೆ ದಿನಪತ್ರಿಕೆಗಳನ್ನು ಓದುತ್ತೇನೆ. ಸ್ನಾನ ಹಾಗೂ ತಿಂಡಿ ಮುಗಿಸಿದ ನಂತರ ನನ್ನ ಬರವಣಿಗೆಯ ಕಾರ್ಯ ಆರಂಭವಾಗುತ್ತದೆ. 2015-16ರಿಂದ ಎರಡು ವರ್ಷದ ಬಿ.ಇಡಿ. ಕೋರ್ಸ್ ಆರಂಭವಾದ ನಂತರ ಹೊಸ ಪಠ್ಯಕ್ರಮಕ್ಕೆ ಅನುಗುಣವಾಗಿ `ಬಾಲ್ಯಾವಸ್ಥೆ ಮತ್ತು ಹದಿಹರೆಯ ಮನೋವಿಜ್ಞಾನ’ ಎಂಬ ಪುಸ್ತಕವನ್ನು ರಚಿಸಬೇಕೆಂದು ಆಲೋಚಿಸಿದ್ದರೂ ಸಹ ಸಮಯ ದೊರೆಯುತ್ತಿರಲಿಲ್ಲ. ಈಗ ಆ ಕಾರ್ಯವನ್ನು ಕೈಗೆತ್ತಿಕೊಂಡು ಹಲವಾರು ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಹಾಗೂ ಅಂತರ್ಜಾಲದಿಂದ ಮಾಹಿತಿಯನ್ನು ಸಂಗ್ರಹಿಸಿ ಪುಸ್ತಕ ಬರೆಯಲಾರಂಭಿಸಿದ್ದೇನೆ.

ಅದು ಈಗ ಅಂತಿಮ ಹಂತ ತಲುಪಿರುವುದು ನನ್ನಲ್ಲಿ ಸಂತಸವನ್ನುಂಟುಮಾಡಿದೆ. ನನ್ನ ಶ್ರೀಮತಿ ಸುಧಾ ಹೊತ್ತು-ಹೊತ್ತಿಗೆ ಶುಚಿ-ರುಚಿಯಾದ ಊಟ-ತಿಂಡಿ ಒದಗಿಸುತ್ತಾರೆ. ಬೆಳಿಗ್ಗೆ ಕಾಫಿ-ಟೀ ಬಿಟ್ಟು ಜೀರಿಗೆ-ಅಜ್ವಾನ-ಶುಂಠಿ ಕಷಾಯ ತಯಾರಿಸುತ್ತಾರೆ. ಇದರಿಂದ ನಮ್ಮ ಆರೋಗ್ಯವು ಸುಧಾರಿಸಿದೆ. ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಮಗ ವಿಶೇಷ ಮತ್ತು ಸೊಸೆ ಸುಕನ್ಯಾ ಮನೆಯಿಂದಲೇ ಕೆಲಸ ಮಾಡುತ್ತಾರೆ. ಇಬ್ಬರೇ ಇದ್ದು ಬೇಸರವಾಗುತ್ತಿದ್ದ ನಮಗೆ ಮಕ್ಕಳು ಜೊತೆಗಿರುವುದು ಆನಂದ ತಂದಿದೆ. ಆದರೆ ಕಿರಿಯ ಮಗ ಡಾ. ಶ್ರೇಯಸ್ ಈ ಸಮಯದಲ್ಲಿ ನಮ್ಮೊಂದಿಗೆ ಇರಬೇಕಿತ್ತು ಎನಿಸಿದರೂ ಸಹ ಅವನು ವೈದ್ಯಕೀಯ ಸೇವೆಯಲ್ಲಿ ಧಾರವಾಡದ ಎಸ್‌ಡಿಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಮಧ್ಯಾಹ್ನ 1.30 ರಿಂದ 2.30ರ ನಡುವೆ ಊಟ ಮಾಡುವುದು ಹಾಗೂ ಟಿ.ವಿ. ವಾರ್ತೆ ವೀಕ್ಷಿಸುವುದು.

ಮಧ್ಯಾಹ್ನದ ಸ್ವಲ್ಪ ವಿಶ್ರಾಂತಿಯ ನಂತರ ಯಾವುದಾದರೂ ಒಂದು ಪುಸ್ತಕ ಓದುತ್ತೇನೆ. ಪ್ರಜಾವಾಣಿಯವರು ಫೇಸ್‌ಬುಕ್‌ನಲ್ಲಿ ಆರಂಭಿಸಿದ್ದ ಗುರುರಾಜ ಕರಜಗಿಯವರ  ಮಾತುಗಳನ್ನು ಸಂಜೆ 4 ರಿಂದ 5ರವರೆಗೆ ಕೇಳುತ್ತಿದ್ದೆ. ಆದರೆ ಅದು ಕೇವಲ 4-5 ದಿನಗಳಲ್ಲೇ ನಿಂತು ಹೋಗಿದ್ದರಿಂದ ಯೂ-ಟೂಬ್‌ನಲ್ಲಿ ಅವರ ವೈಚಾರಿಕ ನುಡಿಗಳನ್ನು ಕೇಳುತ್ತಿರುತ್ತೇನೆ. ಲಾಕ್‌ಡೌನ್ ಅವಧಿಯಲ್ಲಿ ಕೆಲವು ಉತ್ತಮ ಪುಸ್ತಕಗಳನ್ನು ಓದುವ ಅವಕಾಶ ದೊರೆತಿದೆ.

ಡಾ. ಕೆ.ಆರ್. ಶ್ರೀಧರ್‌ರವರ ಸಿಗ್ಮಂಡ್ ಫ್ರಾಯ್ಡ್, ನಾಗೇಶ ಹೆಗಡೆಯವರ ಗ್ರೇಟ್ ಥನ್ಬರ್ಗ್, ಡಾ. ಸಿ.ಆರ್. ಚಂದ್ರಶೇಖರ್‌ರವರ ಮನಸ್ಸನ್ನು ಅರ್ಥಮಾಡಿಕೊಳ್ಳುವುದುಹೇಗೆ, ಪ್ರಸನ್ನ ಅವರ ಶೂದ್ರರಾಗೋಣ ಬನ್ನಿ, ನನ್ನ ಮಗ ವಿಶೇಷ ರಚಿಸಿರುವ ಇಂಗ್ಲೀಷ್ ಕಾದಂಬರಿ ಕೈಲಾಸದ್ವಾರ, ಶ್ರೀ ತರಳಬಾಳು ಜಗದ್ಗುರುಗಳವರ  `ಬಿಸಿಲು ಬೆಳದಿಂಗಳು ಸರಣಿ ಕೃತಿಗಳು’, ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರ `ಪ್ರಾರ್ಥನೆಯಿಂದ ಪರಿವರ್ತನೆ’ ಹಾಗೂ ಹೆಚ್.ಬಿ. ಇಂದ್ರಕುಮಾರ್ ಅವರ `ನನ್ನ ನಿನ್ನ ನೆಂಟತನ’ ಎಂಬ ಕಥಾ ಸಂಕಲನವನ್ನು ಓದಲು ಸುವರ್ಣಾವಕಾಶ ದೊರೆಯಿತು. ನನ್ನಲ್ಲಿ ಸಾಕಷ್ಟು ಪುಸ್ತಕಗಳಿದ್ದರೂ ಓದಲು ಸಮಯ ಸಿಗುತ್ತಿರಲಿಲ್ಲ. ಈಗ ಅವುಗಳನ್ನು ಓದಲು ಸಮಯ ದೊರೆತಿರುವುದು ತುಂಬಾ ಸಂತೋಷವಾಗಿದೆ.

ಇವುಗಳೊಂದಿಗೆ ಲಾಕ್‌ಡೌನ್‌ಗಿಂತ ಮೊದಲು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಯಾಗಿತ್ತು. ಆ ಸಂದರ್ಭದಲ್ಲಿ ಡಯಟ್‌ನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮತ್ತು ವಿನ್ನರ್ಸ್ ಕೆರಿಯರ್ ಅಕಾಡೆಮಿಯವರು TET ಪರೀಕ್ಷೆಗೆ ಉಚಿತ ಕೋಚಿಂಗ್ ಏರ್ಪಡಿಸಿದ್ದರು. ಅದರಲ್ಲಿ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಕೆಲವು ತರಗತಿಗಳನ್ನು ತೆಗೆದುಕೊಂಡಿದ್ದೆನು. ಈಗ ಪರೀಕ್ಷೆ ಮುಂದೆ ಹೋಗಿರುವುದಿರಂದ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ದೂರವಾಣಿ ಕರೆ ಮಾಡಿ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಅವರಿಗೆ ಸೂಕ್ತ ಉತ್ತರ ನೀಡಲು ಪ್ರಯತ್ನಿಸುತ್ತೇನೆ. ಹಾಗೂ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತೇನೆ.

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳವರು ತಮ್ಮ ಸಮಸ್ಯೆಗಳ ಬಗ್ಗೆ ದೂರವಾಣಿ ಕರೆ ಮಾಡಿ ಸಲಹೆ ಕೇಳುತ್ತಾರೆ. ಅವರಿಗೆ ಸಲಹೆ ನೀಡುತ್ತೇನೆ. ಪೂಜ್ಯ ಶ್ರೀ ಜಗದ್ಗುರುಗಳವರು ನೀಡಿದ ಸಲಹೆ-ಸೂಚನೆಗಳನ್ನು ದೂರವಾಣಿ ಮುಖಾಂತರ ಶಾಲಾ-ಕಾಲೇಜು ಮುಖ್ಯಸ್ಥರಿಗೆ ತಲುಪಿಸುತ್ತೇನೆ. ಈ ಲಾಕ್‌ಡೌನ್‌ನ ಕಡ್ಡಾಯ ವಿರಾಮ ನಾವು ಹೇಗೆ ಸಮಯವನ್ನು ವಿನಿಯೋಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಹಾಲು-ಸೊಪ್ಪು-ತರಕಾರಿ-ಮೆಡಿಸಿನ್‌ಗಳಿಗೆ ಬಿಟ್ಟರೆ ಮನೆಯಿಂದ ಹೊರ ಹೋಗುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆ, ಜಿಲ್ಲಾಡಳಿತ ಮತ್ತು ಮಾಧ್ಯಮ ಮಿತ್ರರ ಪ್ರಯತ್ನ ಸಫಲವಾಗಬೇಕಾದರೆ ಪ್ರತಿಯೊಬ್ಬರೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಮುಕ್ತರಾಗುವುದು ಕಷ್ಟವಾಗಲಾರದು.


ಕೊರೊನಾ ಲಾಕ್‌ಡೌನ್ ದಿನಚರಿ - ಡಾ. ಹೆಚ್.ವಿ. ವಾಮದೇವಪ್ಪ - Janathavani

ಡಾ. ಹೆಚ್.ವಿ. ವಾಮದೇವಪ್ಪ
94483 17452
[email protected]

error: Content is protected !!