ಸತತ 42 ದಿನಗಳಿಂದಲೂ ಅಗತ್ಯತೆಯುಳ್ಳವರಿಗೆ ಪ್ರತಿದಿನ 2 ಟನ್ ಊಟ ಬಡಿಸುತ್ತಿರುವ ದಾನಿಗಳ ಅನ್ನದ ಸೇವೆ ಇನ್ನೂ ಮುಂದುವರಿಕೆ
ವಿಶ್ವದ ಹಲವು ರಾಷ್ಟ್ರಗಳಲ್ಲಿ ಪಸರಿಸಿರುವ `ಕೊರೊನಾ ವೈರಸ್’ ಜಾಗತಿಕವಾಗಿ ತೀವ್ರ ಆತಂಕ ಮೂಡಿಸಿರುವ ಆರೋಗ್ಯ ಸಮಸ್ಯೆ. ಇದು, ಸೋಂಕಿತ ರೋಗವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಡೀ ಭಾರತ ದೇಶವೇ ಜನತಾ ಕರ್ಫ್ಯೂನಲ್ಲಿದೆ.
ಲಾಕ್ ಡೌನ್ ಆದ ಪರಿಣಾಮ ಬಡವರು, ಕಡು ಬಡವರು, ಕಾರ್ಮಿಕರು, ದಿನಗೂಲಿ ಕಾರ್ಮಿಕರು ಆಹಾರವಿಲ್ಲದೇ ಪರದಾಡುತ್ತಿರುವುದು ಒಂದು ಕಡೆಯಾದರೆ, ಊಟದ ಕಡೆ ಗಮನ ಹರಿಸದೇ ಪೊಲೀಸರು, ಆರೋಗ್ಯ ಸೇವಕರು ಜನರಿಗೆ ಅಗತ್ಯ ಸೇವೆ ಒದಗಿಸುವಲ್ಲಿ ನಿರತರಾಗಿರುವುದು ಮತ್ತೊಂದೆಡೆ. ಇವರಿಗೆಲ್ಲಾ ಆಹಾರ ಒದಗಿಸುವಲ್ಲಿ ಕೊಡುಗೈ ದಾನಿಗಳ ನಗರ ಎಂದೇ ಹೆಸರಾದ ದಾವಣಗೆರೆಯಲ್ಲಿ ದಾನಿಗಳು ನಾ ಮುಂದೆ – ತಾ ಮುಂದೆ ಎನ್ನುತ್ತಿದ್ದಾರೆ.
ಇಂತಹ ಅನೇಕ ದಾನಿಗಳು ಮತ್ತು ಸಮಾಜ ಸೇವಕರಲ್ಲಿ ಬಿ.ಸತ್ಯನಾರಾಯಣ ಮೂರ್ತಿ ರೆಡ್ಡಿ ಮತ್ತು ಅವರ ಸ್ನೇಹ ಬಳಗ ಪ್ರಮುಖ ಪಾತ್ರ ವಹಿಸಿದೆ. ಈ ಬಳಗದ ಸೇವೆ ಕೇವಲ ಒಂದು ದಿನದ್ದಲ್ಲ ; ಲಾಕ್ ಡೌನ್ ಆದಾಗಿ ನಿಂದಲೂ ಆರಂಭವಾಗಿದ್ದು, ಇಂದೂ ಕೂಡಾ ಮುಂದು ವರೆದಿದೆ. ಲಾಕ್ ಡೌನ್ ಮುಗಿಯುವ ತನಕವೂ ತಮ್ಮ ಸೇವೆ ಸಂಕಷ್ಟದಲ್ಲಿರುವ ಜನರಿಗಾಗಿಯೇ ನಿರಂತರ ವಾಗಿರುತ್ತದೆ ಎನ್ನುತ್ತಾರೆ ಸತ್ಯನಾರಾಯಣ ರೆಡ್ಡಿ.
ಅನ್ನ ದಾನ : ದಾನಗಳಲ್ಲೇ ಮಹಾದಾನ `ಅನ್ನ ದಾನ’. ಎಲ್ಲಾ ದಾನಗಳಿಗಿಂತಲೂ ಅನ್ನ ದಾನ ಶ್ರೇಷ್ಠಾತಿ ಶ್ರೇಷ್ಠ. ದಾನ ಮಾಡುವುದಕ್ಕೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಆದರೆ, ಅನ್ನ ದಾನ ಮಾಡುವುದಕ್ಕೆ ಸಿಗುವ ಅವಕಾಶಗಳು ಅಷ್ಟಕ್ಕಷ್ಟೇ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಜಾಣತನ ಮುಖ್ಯ.
ಸತ್ಯನಾರಾಯಣ ರೆಡ್ಡಿ ಮತ್ತು ಅವರ ಸ್ನೇಹ ಬಳಗ ಅನ್ನ ದಾಸೋಹದ ವ್ಯವಸ್ಥೆಯನ್ನು ತುಂಬಾ ಅಚ್ಚುಕಟ್ಟಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಒಂದು ಅಗಳೂ ವ್ಯರ್ಥವಾಗದಂತೆ ಸಂಕಷ್ಟದಲ್ಲಿರುವವರಿಗೆ ತಲುಪಿ ಸುವಲ್ಲಿ ಮುತುವರ್ಜಿ ವಹಿಸಿದೆ.
ದಾನಿಗಳು ಮತ್ತು ಸಹಕಾರಿಗಳು : ಎಂ.ಸಿ.ಸಿ. ಎ ಬ್ಲಾಕ್ ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಶ್ರೀ ಸಾಯಿ ಟ್ರಸ್ಟ್, ಸಾಮಾಜಿಕ ಸೇವಾ ಸಂಸ್ಥೆ ಕರುಣಾ ಜೀವ ಕಲ್ಯಾಣ ಟ್ರಸ್ಟ್, ಯೋಗ ಒಕ್ಕೂಟ, ವನಿತಾ ಯೋಗ ಕೇಂದ್ರ ಮತ್ತು ಇತರೆ ಸಂಸ್ಥೆಗಳ ಹಾಗೂ ದಾನಿಗಳ ಧನ ಸಹಾಯದೊಂದಿಗೆ ಸ್ಫೂರ್ತಿ ಸೇವಾ ಟ್ರಸ್ಟ್ ಅನ್ನ ದಾಸೋಹದ ಕಾರ್ಯದಲ್ಲಿ ಕಾರ್ಯೋನ್ಮುಖವಾಗಿದೆ.
ತಮ್ಮ ಸೇವಾ ಕಾರ್ಯಕ್ಕೆ ಧನ ಸಹಾಯ ಮಾಡುವುದರೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿರುವ ರಾಜನಹಳ್ಳಿ ಬೆಳ್ಳಿ – ಬಂಗಾರದ ಅಂಗಡಿ ಮಾಲೀಕ ರಮೇಶ್ ಬಾಬು, ಶಿಕ್ಷಣ ಪ್ರೇಮಿ ಶ್ರೀಮತಿ ವಿಜಯಲಕ್ಷ್ಮಿ ವೀರಮಾಚನೇನಿ, ಮೇಕಾ ಸತ್ಯನಾರಾಯಣ, ಭಾವ ನಾರಾಯಣ, ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ, ವಿನಾಯಕ ರೈಸ್ ಮಿಲ್ಲಿನ ಜಿ.ಮೂರ್ತಪ್ಪ, ರೈಸ್ ಮಿಲ್ ನ ರಟ್ಟಿಹಳ್ಳಿ ನಾಗಣ್ಣ, ನಾರಪ್ಪ, ಸಂದೀಪ್ ನರ್ಸಿಂಗ್ ಹೋಂನ ಡಾ. ಹೆಚ್.ಎನ್. ಮಲ್ಲಿಕಾರ್ಜುನ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಪುಷ್ಪ ಮಲ್ಲಿಕಾರ್ಜುನ್, ಜಜಮು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜು, ಡಾ. ಹೆಚ್.ಬಿ. ಶಿವಕುಮಾರ್, ಹೋಟೆಲ್ ಉದ್ಯಮಿ ಮೋತಿ ಪರಮೇಶ್ವರ್, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಟ್ರಸ್ಟಿ ಶ್ರೀಮತಿ ಮಂಜುಳಾ ಬಸವಲಿಂಗಪ್ಪ, ಇಂಜಿನಿಯರ್ ಕರಿಬಸಯ್ಯ, ಪೆಟ್ರೋಲ್ ಬಂಕ್ ನ ಹನುಮಂತ ರೆಡ್ಡಿ, ವರ್ತಕ ಪೋಪಟ್ಲಾಲ್ ಜೈನ್, ಎಸ್.ವಿ. ಮೃತ್ಯುಂಜಯ, ಎಲ್. ಕಾಶಿರೆಡ್ಡಿ, ವಾಣಿ ಶಿವಣ್ಣ, ರಮಾಕಾಂತ್ ವೆರ್ಣೇಕರ್, ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾದ ಕು. ಹೆಚ್.ಸಿ.ಜಯಮ್ಮ, ಶ್ರೀಮತಿ ಹೆಚ್.ಎನ್. ಗೌರಿ, ಬೆಳ್ಳುಳ್ಳಿ ಶಿವಕುಮಾರ್, ಯೋಗ ಒಕ್ಕೂಟದ ವಾಸುದೇವ ರಾಯ್ಕರ್, ಪ್ರಕಾಶ್ ಉತ್ತಂಗಿ, ಅನಿಲ್ ರಾಯ್ಕರ್, ಲೆಕ್ಕ ಪರಿಶೋಧಕ ಜಿ. ಮಹಾಂತೇಶ್, ಗೋಪಾಲ ಗೌಡ್ರು, ಭಾರತೀಯ ರೈತ ಒಕ್ಕೂಟದ ಶಾನುಭೋಗರ ನಾಗರಾಜರಾವ್, ಶಾಮನೂರು ಹೆಚ್.ಆರ್. ಲಿಂಗರಾಜ್, ದೇವಿಗೆರೆ ಪ್ರಭಾಕರ್, ಮುರುಳೀಧರ ಆಚಾರ್, ಮಲ್ಲಿಕಾರ್ಜುನ ಮಾಗೋಡ್, ಶಿರಮನಳ್ಳಿ ಶ್ರೀನಿವಾಸ್, ಶಂಕರ್ ಅಡಿಗೆ ಮತ್ತು ಇತರರನ್ನು ಸತ್ಯನಾರಾಯಣ ಮೂರ್ತಿ ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ವಿಕಾಸ ತರಂಗಿಣಿ : ಸತ್ಯನಾರಾಯಣ ಮೂರ್ತಿ ಅವರು ತಮ್ಮದೇ ಆದ ಮತ್ತೊಂದು ಸೇವಾ ಸಂಸ್ಥೆ ವಿಕಾಸ ತರಂಗಿಣಿ ಆಶ್ರಯದಲ್ಲಿ ದಾನಿಗಳ ಸಹಕಾರ ಪಡೆದು ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಒಂದೂವರೆ ತಿಂಗಳ ಕಾಲ ಪ್ರತಿದಿನವೂ ಮಹಾನಗರ ಪಾಲಿಕೆ ಕಾರ್ಯಾಲಯದ ಮುಂದಿನ ಪಿ.ಬಿ. ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಜ್ಜಿಗೆ ವಿತರಿಸುತ್ತಿದ್ದಾರೆ.
ವಿಕಾಸ ತರಂಗಿಣಿಯ ಈ ಸೇವಾ ಕಾರ್ಯವು ಕಳೆದ 24 ವರ್ಷಗಳಿಂದ ನಡೆಯುತ್ತಿದ್ದು, ಸಾರ್ವಜನಿಕ ಉಚಿತ ಮಜ್ಜಿಗೆ ವಿತರಣೆಯ ಸೇವೆಯು ಮುಂದಿನ ವರ್ಷದಲ್ಲಿ 25 ವರ್ಷಗಳ ರಜತ ಮಹೋತ್ಸವದ ಸಂಭ್ರಮದಲ್ಲಿದೆ.
ಈ ವರ್ಷವೂ ಮಜ್ಜಿಗೆ ವಿತರಣೆ ಕಾರ್ಯಕ್ಕೆ ಸಿದ್ಧತೆ ನಡೆಸುವ ವೇಳೆಗೆ ಮಹಾಮಾರಿ ಕೊರೊನಾ ವೈರಸ್ ಸೋಂಕು ಜಗತ್ತಿನಾದ್ಯಂತ ಹರಡಿದ ಪರಿಣಾಮ ದೇಶವು ಸುದೀರ್ಘ ಕಾಲ ಜನತಾ ಕರ್ಫ್ಯೂನಲ್ಲಿರಬೇಕಾಯಿತು. ಕಾರಣ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಜ್ಜಿಗೆ ವಿತರಣೆ ಬದಲಾಗಿ ಸಂಕಷ್ಟಕ್ಕೊಳಗಾದವರಿಗೆ ಆಹಾರ ಪೂರೈಸಲು ಯೋಜನೆ ರೂಪಿಸಿ, ಅದರಂತೆ ಕಾರ್ಯೋನ್ನುಖರಾಗಿರುವುದಾಗಿ ಸತ್ಯನಾರಾಯಣ ಮೂರ್ತಿ ವಿವರಿಸಿದ್ದಾರೆ.
ಸ್ಫೂರ್ತಿ ಸೇವಾ ಟ್ರಸ್ಟ್ : 1990 – 2000 ರ ದಶಕದಲ್ಲಿ ರಾಜಕೀಯ ಪಕ್ಷವೊಂದರಲ್ಲಿ ಸಕ್ರಿಯರಾಗಿದ್ದ ಬಿ.ಸತ್ಯನಾರಾಯಣ ಮೂರ್ತಿ ರೆಡ್ಡಿ ಅವರು ತಮ್ಮ ತತ್ವ – ಸಿದ್ಧಾಂತಗಳಿಗೆ ಪಕ್ಷದಲ್ಲಿ ಮನ್ನಣೆ ಸಿಗದ ಕಾರಣ ಬೇಸರಗೊಂಡು ಆ ಪಕ್ಷದಿಂದ ದೂರ ಉಳಿದರು. ತಮ್ಮ ಕೈಲಾದಷ್ಟು ಸಾಮಾಜಿಕ ಸೇವೆ ಮಾಡಬೇಕೆಂಬ ತುಡಿತವೇ ಸ್ಫೂರ್ತಿ ಸೇವಾ ಟ್ರಸ್ಟ್ ಸ್ಥಾಪನೆಗೆ ಕಾರಣವಾಯಿತು.
ಕಳೆದ 15 ವರ್ಷಗಳ ಹಿಂದೆ ಉದಯವಾದ ಸ್ಫೂರ್ತಿ ಸೇವಾ ಟ್ರಸ್ಟ್ ಅನ್ನು ನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದ್ದರು.
ವಿವಿಧ ಛತ್ರಗಳಲ್ಲಿ ನಡೆಯುವ ಹಲವು ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಊಟ ಉಳಿದಿದೆ ಎಂಬ ವಿಷಯ ತಿಳಿದೊಡನೆ ಸ್ಥಳಕ್ಕೆ ತೆರಳಿ, ಆ ಊಟವನ್ನು ವಾಹನದಲ್ಲಿ ಹೊತ್ತು ವೃದ್ಧಾಶ್ರಮ, ಅನಾಥಾ ಶ್ರಮ, ಅಂಧ ಮಕ್ಕಳ ಶಾಲೆ, ಅಂಗವಿಕಲರ ಶಾಲೆಗಳಲ್ಲದೇ, ಕೂಲಿ ಕಾರ್ಮಿಕರು ಮತ್ತು ಅಗತ್ಯತೆಯು ಳ್ಳವರಿಗೆ ವಿತರಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಪ್ರತಿದಿನ ನಡೆಯುವ ಈ ಸೇವಾ ಕಾರ್ಯ ಕುರಿತಂತೆ ದಾಖಲೆ ಪುಸ್ತಕ ಮಾಡಲಾಗಿದ್ದು, ಆ ಪ್ರಕಾರ ಪ್ರತಿ ವರ್ಷ ಸರಾಸರಿ ಸುಮಾರು ಒಂದು ಲಕ್ಷ ಜನರಿಗಾಗುವಷ್ಟು ಊಟ ಛತ್ರಗಳಲ್ಲಿ ಉಳಿಯುತ್ತಿದ್ದು, ಅದನ್ನು ಅಗತ್ಯತೆಯುಳ್ಳವರಿಗೆ ಪೂರೈಸುವ ಕಾರ್ಯ ಮಾಡುತ್ತಿರುವುದರಿಂದ ತಾವು ತಮ್ಮ ಜೀವನದಲ್ಲಿ ಸಂತೃಪ್ತಿ ಕಂಡಿರುವುದಾಗಿ ಸತ್ಯನಾರಾಯಣ ಮೂರ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ಕಾಗಿಯೇ ಸ್ವಂತ ವಾಹನ ಖರೀದಿಸಿ, ಅದಕ್ಕೆ ಚಾಲಕ ಮತ್ತು ನಿರ್ವಾಹಕರನ್ನು ಇಡಲಾಗಿದೆ. ಇದಕ್ಕೆಲ್ಲಾ ತಗುಲಬಹುದಾದ ವೆಚ್ಚವನ್ನು ಸತ್ಯನಾರಾಯಣ ಮೂರ್ತಿ ಅವರೇ ನಿರ್ವಹಿಸುತ್ತಾರೆ. ಸ್ಫೂರ್ತಿ ಸೇವಾ ಟ್ರಸ್ಟ್ ಹೀಗೆ ಅರ್ಥಪೂರ್ಣ ಸೇವೆ ಮಾಡುವುದರ ಮೂಲಕ ಸಮಾಜದಲ್ಲಿ ಪ್ರಶಂಸೆಗೊಳಗಾಗಿದೆ.
ಮಾದರಿ ಮತ್ತು ಅರ್ಥಪೂರ್ಣ ಸಾಮಾಜಿಕ ಸೇವೆಯಲ್ಲಿ ಸತ್ಯನಾರಾಯಣ ಮೂರ್ತಿ ರೆಡ್ಡಿ : ಸಾಮಾಜಿಕ ಸೇವೆಯಲ್ಲಿ ಹಲವಾರು ವಿಧಗಳು. ಅವುಗಳಲ್ಲಿ ; ದುಡಿಮೆ ಮಾಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ದೇಣಿಗೆ ನೀಡುವುದು ಒಂದಾ ದರೆ, ದೇಣಿಗೆ ಕೊಡುವುದರ ಜೊತೆ – ಜೊತೆೆಗೆ ಸ್ವತಃ ತಾವೇ ಆ ಜವಾಬ್ಧಾರಿಯನ್ನು ಹೊತ್ತು ಸಂಬಂಧಪಟ್ಟವರಿಗೆ ಸಮರ್ಪಿಸುವುದು ಮತ್ತೊಂದು.
ಪ್ರಮುಖವಾದ ಈ ಎರಡೂ ಸೇವೆಗಳನ್ನು ಒಟ್ಟೊಟ್ಟಿಗೆ ಮಾಡುವ ಮೂಲಕ ಸಮಾಜ ಸೇವೆಗೆ ಅರ್ಥ ಕಲ್ಪಿಸುತ್ತಿರುವ ಕೆಲವೇ ಕೆಲವು ಸಮಾಜ ಸೇವಕರಲ್ಲಿ ಬಿ.ಸತ್ಯನಾರಾಯಣ ಮೂರ್ತಿ ರೆಡ್ಡಿ ಅವರೂ ಕೂಡಾ ಒಬ್ಬರು.
ಸರಳ – ಸಜ್ಜನಿಕೆಯ ಮತ್ತು ಅಪಾರ ದೈವ ಭಕ್ತರಾಗಿದ್ದಾರೆ. ಇವರನ್ನು ಕೇವಲ ಸತ್ಯನಾರಾಯಣ ರೆಡ್ಡಿ ಎಂದರೆ ಬಹುತೇಕರಿಗೆ ತಕ್ಷಣವೇ ಪರಿಚಯವಾಗಲಿಕ್ಕಿಲ್ಲ. ಅವರನ್ನು ಮಜ್ಜಿಗೆ ಅಥವಾ ಅನ್ನ ದಾಸೋಹಿ – ಅನ್ನ ಬ್ರಹ್ಮ ಸತ್ಯನಾರಾಯಣ ಮೂರ್ತಿ ರೆಡ್ಡಿ ಎಂದರೆ ದಾವಣಗೆರೆಯ ಸಾಕಷ್ಟು ಜನರು ಗುರುತಿಸಬಲ್ಲರು.
ಇವರು ತಾವು ಸ್ಥಾಪಿಸಿರುವ ಎರಡು ಸಾಮಾಜಿಕ ಸೇವಾ ಸಂಸ್ಥೆಗಳ ಪೈಕಿ `ವಿಕಾಸ ತರಂಗಿಣಿ’ ಯನ್ನು ಪ್ರತಿ ವರ್ಷ ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ವಿತರಿಸಲು ಮತ್ತು `ಸ್ಫೂರ್ತಿ ಸೇವಾ ಟ್ರಸ್ಟ್’ ಅನ್ನು ಅಗತ್ಯತೆಯುಳ್ಳವರಿಗೆ
ಅನ್ನ ದಾಸೋಹ ಮಾಡಲು ಮೀಸಲಾಗಿಟ್ಟಿದ್ದಾರೆ. ಹೀಗಾಗಿ ಸಮಾಜ ಸೇವೆೆಗೆ ಮತ್ತೊಂದು ಹೆಸರೇ ಸತ್ಯನಾರಾಯಣ ರೆಡ್ಡಿ ಎಂದರೆ ಅತಿಶಯೋಕ್ತಿಯೇನಲ್ಲ.
ಸತ್ಯನಾರಾಯಣ ಮೂರ್ತಿ ಅವರು ದಾನಿಗಳ ಮತ್ತು ಸ್ನೇಹಿತರ ಸಹಕಾರದೊಂದಿಗೆ ಮಾರ್ಚ್ 28 ರಂದು ಲಾಕ್ ಡೌನ್ ಘೋಷಣೆಯಾದಾಗಿನಿಂದ ಅನ್ನ ದಾಸೋಹ ನಡೆಸುತ್ತಿದ್ದು, ಪ್ರತಿ ದಿನವೂ ಅಗತ್ಯತೆಯುಳ್ಳ ಸುಮಾರು ಎರಡರಿಂದ ಎರಡೂವರೆ ಸಾವಿರ ಜನರಿಗೆ ವಿತರಿಸಲಾಗುತ್ತಿದೆ.
ಎಂ.ಸಿ.ಸಿ. `ಎ’ ಬ್ಲಾಕ್ ನಲ್ಲಿರುವ ಸತ್ಯನಾರಾಯಣ ಮೂರ್ತಿ ಅವರ ನಿವಾಸದ ಮುಂದಿನ ವಠಾರದಲ್ಲಿ ಪ್ರತಿ ದಿನವೂ ಮಧ್ಯರಾತ್ರಿ 2 ಗಂಟೆ ವೇಳೆಗೆ ಬಾಣಸಿಗರು ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಕಾರ್ಯ ಆರಂಭಿಸುವ ದೃಶ್ಯ ನೋಡಿ ದಾಗ, ಒಂದು ರೀತಿಯಲ್ಲಿ ಮದುವೆ ಮನೆಯಲ್ಲಿನ ಅಡುಗೆ ಮಾಡುವ ಸಂಭ್ರಮದಂತೆ ಕಂಡು ಬರುತ್ತದೆ.
ಪ್ರತಿದಿನ ಸುಮಾರು 2 ಕ್ವಿಂಟಾಲ್ ನಷ್ಟು ಆಹಾರಗಳನ್ನು ಮಾಡಲಾಗುತ್ತದೆ. ಸಿದ್ಧಗೊಂಡ ಆಹಾರ ಪದಾರ್ಥಗಳನ್ನು ಪ್ಯಾಕೆಟ್ ಮಾಡುವಷ್ಟೊತ್ತಿಗೆ ಬೆಳಿಗ್ಗೆ
9 ಗಂಟೆಯಾಗುತ್ತದೆ. ನಂತರ ಮಧ್ಯಾಹ್ನ 2 ಗಂಟೆವರೆಗೂ ಅಗತ್ಯತೆ ಯುಳ್ಳವರನ್ನು ಹುಡುಕಿ ಕೊಂಡು ಹೋಗಿ ವಿತರಿಸಲಾಗುತ್ತದೆ. ಸಿ.ಜಿ. ಆಸ್ಪತ್ರೆ, ಹಳೆ ಹೆರಿಗೆ ಆಸ್ಪತ್ರೆಗಳಲ್ಲಿನ ರೋಗಿಗಳು ಮತ್ತು ಅವರ ಸಹಾಯ ಕರಿಗೆ, ಪೌರ ಕಾರ್ಮಿಕರಿಗೆ, ಬೇತೂರು ರಸ್ತೆ, ಬೈಪಾಸ್ ರಸ್ತೆ, ಗಂಗಾ ನಗರ, ನಿಟುವಳ್ಳಿ, ಪಾಮೇನ ಹಳ್ಳಿ ಚಾನಲ್ ಹತ್ತಿರ, ಶಾಮನೂರು ರಸ್ತೆ, ಲೋಕಿಕೆರೆ ರಸ್ತೆ, ಹಳೇ ಪಿ.ಬಿ.ರಸ್ತೆಗಳಲ್ಲಿರುವ ಸಂಕಷ್ಟಕ್ಕೊ ಳಗಾದ ಜನರಿಗೆ ನೀಡಲಾಗುತ್ತಿದೆ. ಅಗತ್ಯ ಸೇವೆ ಒದಗಿಸುತ್ತಿರುವ ಪೊಲೀಸರಿಗೆ, ಆರೋಗ್ಯ ಇಲಾಖೆ ಕಾರ್ಯಕರ್ತ ರಿಗೂ ಊಟ ಪೂರೈಸಲಾಗುತ್ತಿದೆ.
ಸಂದೀಪ್ ನರ್ಸಿಂಗ್ ಹೋಂನ ಡಾ. ಹೆಚ್.ಎನ್.ಮಲ್ಲಿಕಾರ್ಜುನ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಪುಷ್ಪಾ ದಂಪತಿ ಸೇರಿದಂತೆ ಹಲವಾರು ದಾನಿಗಳು ತಾವೊಬ್ಬ ವೈದ್ಯರು ; ತಾವು ದಾನವಂತರು ಎಂಬುದನ್ನು ಮರೆತು, ಸಾಮಾನ್ಯರಲ್ಲಿ ಸಾಮಾನ್ಯ ರಾಗಿ ಅನ್ನ ದಾಸೋಹದ ಸಿದ್ಧತೆಗೆ ಸ್ವತಃ ಕೆಲಸ ಮಾಡುವುದರ ಮೂಲಕ ಸ್ಫೂರ್ತಿ ಸೇವಾ ಟ್ರಸ್ಟ್ ನ ಸಾಮಾಜಿಕ ಸೇವೆಗೆ ಕೈ ಜೋಡಿಸುವುದರೊಂದಿಗೆ ಮಾದರಿಯಾಗಿದ್ದಾರೆ.
ಇ.ಎಂ. ಮಂಜುನಾಥ
9448277772
[email protected]