ಮೌಢ್ಯಕ್ಕೆ ಮಕ್ಕಳ ಬಲಿ-ನ್ಯಾಯವೇ..?

ಗ್ರಹಣಗಳಿಂದಾಗಿ ಹೆದರುವ ಮತ್ತು ಹೆದರಿಸುವ ಜನರಿಂದ ಅನೇಕ ಅಂಧಾಚರಣೆಗಳನ್ನು ನೋಡಿದ್ದೇವೆ. ವೈಕುಂಠ ಏಕಾದಶಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆಂಬುದನ್ನು ನಂಬಿ ಆತ್ಮಹತ್ಯೆ ಮಾಡಿಕೊಂಡವರುಂಟು. ಸ್ವರ್ಗಪ್ರಾಪ್ತಿ ಎಂದು ಸಾಮೂಹಿಕ ಆತ್ಮಹತ್ಯೆಗಳಾಗಿರುವುದನ್ನು ಕಂಡಿದ್ದೇವೆ. ಧನಪ್ರಾಪ್ತಿಗಾಗಿ ಮಕ್ಕಳ ಬಲಿ ನೀಡುವುದನ್ನು ಕಾಣುತ್ತಿದ್ದೇವೆ. ಮಾಡಿದ ಪಾಪಕೃತ್ಯಗಳಿಗಾಗಿ ಪ್ರಾಯಶ್ಚಿತ್ತವೆಂಬಂತೆ ಪ್ರಸಿದ್ಧ ದೇವಸ್ಥಾನಗಳಿಗೆ ಹೋಗಿ ಕೋಟಿ ಕೋಟಿ ಹಣ, ವಜ್ರ, ವೈಢೂರ್ಯಗಳನ್ನು ಹುಂಡಿಗಳಿಗೆ ಹಾಕುವ ಜನರನ್ನೂ ಕಂಡಿದ್ದೇವೆ. ಜೊತೆಗೆ ಅಂತಹವರ ಅಧಃಪತನವನ್ನು ಕಂಡಿದ್ದೇವೆ. ಆದರೆ ವಿಜ್ಞಾನ, ತಂತ್ರಜ್ಞಾನಗಳು ಬೆಳೆದಂತೆ ನಾಗರೀಕತೆ ಮುಂದುವರೆದಂತೆ ಅಂಧಶ್ರದ್ಧೆಗಳು, ಮೌಢ್ಯಾಚರಣೆಗಳು ಹೆಚ್ಚುತ್ತಿವೆ. ಇದು ಒಂದು ದೇಶಕ್ಕೆ, ಜನಾಂಗಕ್ಕೆ ಸೀಮಿತ ವಾಗಿಲ್ಲ, ಜಗತ್ತಿನಾದ್ಯಂತ ವಿವಿಧೆಡೆಗಳಲ್ಲಿ ವಿವಿಧ ರೂಪಗಳಲ್ಲಿ ಕಂಡುಬರುತ್ತಿದೆ.

ಜ್ಞಾನ-ವಿಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ಅರಿತು ಬದುಕಬೇಕಾಗಿದೆ. ವೈಚಾರಿಕತೆಯಿಂದ ಮನುಷ್ಯನ ಎಷ್ಟೋ ಸಂಕಷ್ಟಗಳನ್ನು ಬಗೆಹರಿಸಲು ಸಾಧ್ಯವಿದೆ ಎಂಬುದನ್ನು ತಿಳಿಯಬೇಕಾಗಿದೆ.

ವೈಜ್ಞಾನಿಕ ಮನೋಭಾವದ ಮೂಲ ಲಕ್ಷಣಗಳಾದ-ಸತ್ವಶೀಲ ವೈಚಾರಿಕತೆ, ಪ್ರಶ್ನಿಸುವ ಮತ್ತು ಪ್ರಶ್ನಿಸಿಕೊಳ್ಳುವ ಮನೋಭಾವ-ಇವುಗಳನ್ನು ಶಿಕ್ಷಣ ಕಲಿಸುವ ಮತ್ತು ಕಲಿಯುವಿಕೆಯ ಭಾಗವಾಗಿಸಿಕೊಂಡು ವೈಚಾರಿಕತೆ, ಪ್ರಶ್ನಿಸುವ ಮತ್ತು ಪ್ರಶ್ನಿಸಿಕೊಳ್ಳುವ ಮನೋಭಾವ-ಇವುಗಳನ್ನು ಶಿಕ್ಷಣದ ಕಲಿಸುವ ಮತ್ತು ಕಲಿಯುವಿಕೆಯ ಭಾಗವಾಗಿಸಿಕೊಂಡು, ವೈಚಾರಿಕ ಜನಾಂಗವನ್ನು ಸೃಷ್ಟಿಸಬೇಕಿದೆ. 

ಭಾರತ ಸರ್ಕಾರವು 1958 ಮಾರ್ಚ್ 4 ರಂದು ವಿಜ್ಞಾನ ಧೋರಣೆಗೆ ಸಂಬಂಧಿಸಿದಂತೆ ಗೊತ್ತುವಳಿಯೊಂದನ್ನು ಅಂಗೀಕರಿಸಿತು. ಅದರಲ್ಲಿ ವಿಶೇಷ ಅಂಶವೊಂದಿದೆ. ಅದು ಹೀಗಿದೆ. “ಸಮಾಜದ ಪ್ರತಿಯೊಬ್ಬನಿಗೂ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ಕೆಲಸ ವೈಜ್ಞಾನಿಕ ದೃಷ್ಟಿಕೋನ ಮತ್ತು ವಿಧಾನದಿಂದ ಮಾತ್ರ ಸಾಧ್ಯ” ಆದರೆ ಇದರ ಮಹತ್ವವನ್ನು ಅರಿತು ನಮ್ಮನ್ನಾಳುವ ಮಂದಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಾಗಿದೆ.

ನೆಹರೂರವರ ಮಾತೊಂದು ಅರ್ಥಪೂರ್ಣವೆನಿಸುತ್ತಿದೆ. ಅದು ಹೀಗಿದೆ “ವಿಜ್ಞಾನವೆಂದರೆ ಪರೀಕ್ಷಾ ನಳಿಕೆಗಳ ಸಹಾಯಕದಿಂದ ಒಂದು ವಸ್ತುವಿನಲ್ಲಿ ಇನ್ನೊಂದನ್ನು ಸೇರಿಸಿ ಸಣ್ಣ, ದೊಡ್ಡ ವಸ್ತುಗಳನ್ನು ತಯಾರಿಸುವುದಲ್ಲ, ನಮ್ಮ ಇಡೀ ಜೀವನ ಕ್ರಮವು ವೈಜ್ಞಾನಿಕ ವಿಧಾನಗಳಿಗೆ ಅನುಗುಣವಾಗಿರುವಂತೆ ಮನಸ್ಸನ್ನು ತರಬೇತಿಗೊಳಿಸಿವುದೇ ಆಗಿದೆ.” ಈ ಮನಸ್ಸನ್ನು ವೈಜ್ಞಾನಿಕವಾಗಿ ಅಣಿಗೊಳಿಸುವ ಕೆಲಸ ಮನೆ, ಶಾಲೆ, ಸಮಾಜ ಮತ್ತು ಮಾಧ್ಯಮ ಇವೆಲ್ಲವುಗಳೂ ಜವಾಬ್ದಾರಿಯಿಂದ ತಮ್ಮ ಕೆಲಸ ನಿರ್ವಹಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಯಾವುದೇ ದೇಶದ ಅಥವಾ ವ್ಯಕ್ತಿಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳ ಪರಿಹಾರಕ್ಕೆ ವೈಜ್ಞಾನಿಕ ಅನ್ವೇಷಣೆಯ ದಾರಿ ಹಿಡಿದು, ಆ ಮೂಲಕ ಸಾಮಾಜಿಕ ಬದಲಾವಣೆಯನ್ನು ವೈಚಾರಿಕತೆಯ ಮಾರ್ಗದಿಂದ ತರಲು ಪ್ರಯತ್ನಿಸಿದಾಗ ಕ್ರಾಂತಿಕಾರಕ ಬದಲಾವಣೆ ಸಾಧ್ಯವಲ್ಲವೇ?

ಜೊತೆಗೆ ನಮ್ಮ ಭಾರತದ ಸಂವಿಧಾನ ನೀಡಿರುವ ಮೂಲಭೂತ ಕರ್ತವ್ಯಗಳಲ್ಲಿ 51 (h) ಹೀಗಿದೆ. ಪ್ರತಿಯೊಬ್ಬ ನಾಗರಿಕನಿಗೂ ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸುವುದು-ಕರ್ತವ್ಯವಾಗಿರತಕ್ಕದ್ದು ಎಂದಿದೆ.  ಅಂದರೆ ಅವೈಜ್ಞಾನಿಕ ಆಚರಣೆಗಳು ಮತ್ತು ಅವುಗಳ ಪ್ರಚೋದನೆ, ಪ್ರೇರಣೆ ಕೂಡ ನಮ್ಮ ಸಂವಿಧಾನಕ್ಕೆ ವಿರೋಧವಾಗಿದ್ದು, ಮೌಢ್ಯಗಳ ವಿರುದ್ಧದ ಕಾಯಿದೆಗಳು ಬೇಗ ರೂಪುಗೊಂಡು, ತಪ್ಪಿತಸ್ಥರಿಗೆ ಶಿಕ್ಷಿಸುವ ವ್ಯವಸ್ಥೆ ಆಗಬೇಕಾಗಿದೆ.


ಮೌಢ್ಯಕ್ಕೆ ಮಕ್ಕಳ ಬಲಿ-ನ್ಯಾಯವೇ..? - Janathavaniಹರೋನಹಳ್ಳಿ ಸ್ವಾಮಿ 
ಅಧ್ಯಾಪಕರು
ಹವ್ಯಾಸಿ ಖಗೋಳ ವೀಕ್ಷಕರು, ಭದ್ರಾವತಿ.
[email protected]

error: Content is protected !!