ಪ್ರತಿವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಸಮಾಜದಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನು ನೆನೆಯಲಾಗುತ್ತದೆ ಮತ್ತು ಮಹಿಳೆಯರಿಗಾಗಿ ಸರ್ಕಾರದಿಂದ ಏನೇನು ಸವಲತ್ತುಗಳು ಇವೆ, ಶೋಷಣೆಗೆ ಒಳಗಾಗು ವಂತಹ ಸಂದರ್ಭಗಳಿದ್ದಾಗ ಏನೇನು ಮಾಡ ಬೇಕು, ಮಹಿಳೆಯರಿಗೆ ಕಾನೂನಾತ್ಮಕವಾಗಿ ರಕ್ಷಣೆ ಪಡೆಯಲು ಏನೇನು ಕ್ರಮಗಳು ನಿಯಮಗಳು ಇವೆ ಎಂದು ತಿಳಿಯುವ ತಿಳಿಸುವ ಕೆಲಸವಾಗುತ್ತದೆ. ಹಾಗೂ ಜಾಗೃತ ವಾಗಿ ಇರಲು ಮಾನಸಿಕ ಧೈರ್ಯವನ್ನು ತುಂಬುವ ಕಾರ್ಯಕ್ರಮವಾಗಿದೆ.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ನಾಡು ನುಡಿಯನ್ನು ಕೇಳಿ ದ್ದೇವೆ. ಈ ನುಡಿ ಕೇಳಲು ಎಷ್ಟು ಚಿಕ್ಕದಾಗಿದೆ ಆದರೆ ಇದರ ಅರ್ಥ ವಿಸ್ತಾರವಾಗಿದೆ.
ಅಕ್ಷರ ಕಲಿಯುವುದು ಎಂದರೆ ಜ್ಞಾನವನ್ನು ವಿಕಾಸ ಮಾಡಿಕೊಳ್ಳುವುದು, ಜಾಗೃತರಾಗಿರುವುದು ಎಂದು. ಒಂದು ಹೆಣ್ಣು ಜಾಗೃತವಾಗಿದ್ದರೆ ಅವರಿಂದ ಅನೇಕರು ಜಾಗೃತರಾಗುತ್ತಾರೆ. ಮನೆಯಲ್ಲಿ ಗಂಡ, ಮಕ್ಕಳನ್ನು ಒಂದು ಶಿಸ್ತು ಬದ್ದವಾಗಿ ಇಡುವಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ.
1975 “ಅಂತರರಾಷ್ಟ್ರೀಯ ಮಹಿಳೆ ಯರ ದಿನ” ದ ಸಮಯದಲ್ಲಿ, ಮಾರ್ಚ್ 8 ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು.
ಇದಾದ ಎರಡು ವರ್ಷಗಳ ನಂತರ 1977 ರಲ್ಲಿ, “ದಿ ಜನರಲ್ ಅಸೆಂಬ್ಲಿ ” ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆ ಯನ್ನು ಆಯಾ ದೇಶದ ಸದಸ್ಯರು ಗಮನಿಸಿ, ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿ ಕೊಳ್ಳುವಂತೆ ಕರೆ ನೀಡಿತು. ಅದರಂತೆ ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಯನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.
ಮಹಿಳೆಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಸಂವಿಧಾನಿಕವಾಗಿ ಇತ್ತೀಚಿಗೆ ಘೋಷಿಸಲಾಗಿದೆ. ಈ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಆದರೆ ಹನ್ನೆರಡನೆಯ ಶತಮಾನದಲ್ಲಿ ಇಂತಹ ಒಂದು ಜಾಗೃತಿಯ ಕಹಳೆಯನ್ನು ಊದಿದವರು ಬಸವಣ್ಣನವರು ಮತ್ತು ಬಸವಾದಿ ಶರಣ ಶರಣೆಯರು.
ಸ್ತ್ರೀ ಸಮಾನತೆಗಾಗಿಯೇ ಬಸವಣ್ಣನವರು ಹುಟ್ಟಿದ ಮನೆಯನ್ನು ತೊರೆಯಲು ಮೊದಲ ಕಾರಣವಾಗಿದ್ದು.
ಸರ್ವರಿಗೂ ಸಮಾನತೆಯನ್ನು ಕೊಡ ಬೇಕು ಎನ್ನುವ ಉದ್ದೇಶದಿಂದಲೇ ; ಅನುಭವ ಮಂಟಪ ರೂಪಗೊಂಡಿದ್ದು. ಅನುಭವ ಮಂಟಪದಲ್ಲಿ ಶರಣರಂತೆ ಎಲ್ಲಾ ಶರಣೆ ಯರಿಗೂ ; ಎಲ್ಲಾ ಧಾರ್ಮಿಕ ಕ್ರಿಯಾ ಚಟು ವಟಿಕೆಯಲ್ಲಿ, ಗೋಷ್ಠಿಗಳಲ್ಲಿ ಸಮಾನವಾಗಿ ಭಾಗವಹಿಸುವ ಅವಕಾಶವನ್ನು ಕೊಟ್ಟಿದ್ದರು.
ಬಸವಣ್ಣನವರ ಅಕ್ಕ ಅಕ್ಕ ನಾಗಮ್ಮಳಿಗೆ ಬಸವಣ್ಣನವರು ಇಷ್ಟಲಿಂಗ ದೀಕ್ಷೆಯನ್ನು ಕೊಡು ವುದರ ಮೂಲಕ ಮಹಿಳೆಯರ ಧಾರ್ಮಿಕ ಸಮಾನತೆಗೆ ಕಹಳೆಯನ್ನು ಊದಿದರು.
ಅಕ್ಕನಾಗಮ್ಮ ಮತ್ತು ಅಕ್ಕಮಹಾದೇವಿ ಇಬ್ಬರು ಸಮಾಜದಲ್ಲಿ, ಶರಣ ಸಂಕುಲದಲ್ಲಿ ಮೊದಲ ಮಹಿಳಾ ವಚನಕಾರ್ತಿಯರಾಗಿ, ಕವಯತ್ರಿಯರಾಗಿದ್ದಾರೆ. ಅನಂತರ ಎಲ್ಲಾ ಶರಣೆಯರು ಜಾಗೃತರಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿ ಬೆಳೆದು, ಸಮಾಜದ ಮಾರ್ಗದರ್ಶಕರಾಗಿದ್ದಾರೆ, ನಮಗೆ ಆದರ್ಶ ಮಹಿಳೆಯರಾಗಿದ್ದಾರೆ.
ಬಸವ ಚರಿತ್ರೆಯನ್ನು ಓದಿದರೆ, ಅನುಭವ ಮಂಟಪದಲ್ಲಿ ಶರಣ, ಶರಣೆಯರಲ್ಲಿ ಮಹಿಳಾ ಸಮಾನತೆ ಹೇಗಿತ್ತು ಎಂದು ತಿಳಿಯುತ್ತದೆ. ಈ ಕುರಿತು, ಅನೇಕ ಘಟನೆಗಳು ನಮಗೆ ಸಿಗುತ್ತವೆ.
ಒಂದು ಘಟನೆ ನೆನಪು ಮಾಡಿಕೊಳ್ಳುವುದಾದರೆ ; ಮಂಡಿ ( ದವಸ ಧಾನ್ಯಗಳ ಅಂಗಡಿ ಮುಂಭಾಗ) ಗಳಲ್ಲಿ ಬಿದ್ದ ಅಕ್ಕಿಗಳನ್ನು ಆಯ್ದು ತರುವುದು ; ಆಯ್ದಕ್ಕಿ ಮಾರಯ್ಯನವರ ಕಾಯಕ.ಅಂದಂದಿನ ದಿನಕ್ಕೆ ಏನು ಬೇಕೋ, ಎಷ್ಟು ಬೇಕೋ ಅಷ್ಟನ್ನೇ ತರುವುದು, ಶರಣರ ಸಿದ್ಧಾಂತ. ತಂದಿರುವ ಅಕ್ಕಿಯನ್ನು ಸಂಸ್ಕರಿಸಿ, ಪ್ರಸಾದ ತಯಾರಿಸುವುದು ಶರಣೆ ಆಯ್ದಕ್ಕಿ ಲಕ್ಕಮ್ಮನ ಕಾಯಕ. ಅನಂತರ ಶರಣರಿಗೆ, ಜಂಗಮರಿಗೆ, ಹಸಿದವರಿಗೆ ಎಡೆ ಮಾಡಿ, ತಾವು ಪ್ರಸಾದವನ್ನು ಸ್ವೀಕರಿಸುತ್ತಿದ್ದರು. ಶರಣ ದಂಪತಿಗಳು.
ಒಂದು ದಿನ ಆಯ್ದಕ್ಕಿ ಮಾರಯ್ಯನವರು ; ಹೆಚ್ಚು ಅಕ್ಕಿ ಸಿಕ್ಕವೆಂದು, ಹೆಚ್ಚು ಅಕ್ಕಿಯನ್ನು ಆಯ್ದು ತರುತ್ತಾರೆ. ಆಗ ಆಯ್ದಕ್ಕಿ ಲಕ್ಕಮ್ಮಳು ; ಗಂಡನಿಗೆ ಬುದ್ದಿ ಹೇಳುತ್ತಾಳೆ. ಆ ಪ್ರಸಂಗದಲ್ಲಿ ಆಯ್ದಕ್ಕಿ ಲಕ್ಕಮ್ಮಳು ಗಂಡನಿಗೆ ಒಂದು ವಚನವನ್ನು ಹೇಳುತ್ತಾಳೆ. ಆ ವಚನವನ್ನು ನಾವುಗಳು ಓದಿದರೂ ಸಾಕು, ಆ ವಚನವನ್ನು ವಿವರಿಸಿ ಹೇಳುವ ಅವಶ್ಯಕತೆಯು ಇಲ್ಲ ಎನಿಸುತ್ತದೆ. ವಚನ ಹೀಗಿದೆ – “ಆಸೆ ಯೆಂಬುದು ಅರಸಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ರೋಷವೆಂಬುದು ಯಮದೂತ ರಿಗಲ್ಲದೆ, ಅಜಾತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ. ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಅಲ್ಲಿಯೇ ಸುರಿದು ಬನ್ನಿ ಮಾರಯ್ಯ. ”
ಹನ್ನೆರಡನೆಯ ಶತಮಾನದಲ್ಲೇ ಇಂತಹ ಕ್ರಾಂತಿ ನಡೆದಿರುವಾಗ, ಇವರ ಆದರ್ಶ ಗುಣಗಳನ್ನು ಓದಿ, ತಿಳಿದುಕೊಂಡು ಅಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜಾಗೃತರಾಗಿ, ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಸೇವೆ ಮಾಡಲು ಇಂದು ಅನೇಕ ಅವಕಾಶಗಳಿವೆ, ಸರ್ಕಾರದಲ್ಲಿ ಅನೇಕ ಸವಲತ್ತುಗಳಿವೆ, ಮಹಿಳೆಯರಿಗೆಂದೇ ಗುಡಿ ಕೈಗಾರಿಕೆ ಮತ್ತು ವ್ಯವಹಾರ, ವ್ಯಾಪಾರಗಳಿಗೆ ಸಾಲ ಸೌಲಭ್ಯಗಳಿವೆ, ಇವುಗಳನ್ನು ಬಳಸಿಕೊಂಡು, ಸಮಾಜಕ್ಕೆ ಮಾದರಿಯಾಗುವಂತೆ ನಡೆದರೆ ; ಇಂದಿನ ಮಹಿಳೆಯರು ಮತ್ತೊಂದು ಹೊಸ ಇತಿಹಾಸವನ್ನು ಸೃಷ್ಟಿಸಬಹುದು.
– ಶಿವಪ್ರಸಾದ ಕರ್ಜಗಿ, ದಾವಣಗೆರೆ.
ಮೊ. 90362 51399