ಕತ್ತೆ ಕಪ್ಪಣ್ಣ ಮೂತಿ ಮಂಗಣ್ಣ?!!

ಕತ್ತೆ ಕಪ್ಪಣ್ಣ ಮೂತಿ ಮಂಗಣ್ಣ?!!

ದಾವಣಗೆರೆ ಹಳೆ ಊರಿನ ಶಿವರಾತ್ರಿ ಸ್ವಾರಸ್ಯಗಳು…

ಶಿವರಾತ್ರಿ ಜಾಗರಣೆಯಂದು  ಕೆಲ ತುಂಟ  ಹುಡುಗರು ಕತ್ತೆಗಳಿಗೆ ಕಿರುಕುಳ ಕೊಟ್ಟು ಮೋಜು ನೋಡುವುದನ್ನು ನಿನ್ನೆ ಪ್ರಸ್ತಾಪ ಮಾಡಿದ್ದೆ.  ನಮ್ಮ ಬಾಲ್ಯದಲ್ಲಿ ದಾವಣಗೆರೆ ಹಳೆ ಊರಿನ ಬೀದಿಗಳಲ್ಲಿ ಕತ್ತೆಗಳು ಸಹ ಹೇರಳವಾಗಿ ಓಡಾಡುತ್ತಿದ್ದವು.

ಅಗಸರ ಗುಡ್ಡಪ್ಪ, ಅಗಸರ ಕೆಂಚಪ್ಪ ಮುಂತಾಗಿ  ಅನೇಕ ಮಡಿವಾಳರ ಕತ್ತೆಗಳು ಬೆಳಿಗ್ಗೆ ಬಟ್ಟೆ ಹೊತ್ತುಕೊಂಡು ಅಗಸರ ಜೊತೆಗೆ ಹಳ್ಳಗಳಿಗೆ ಹೋಗಿ ಮಧ್ಯಾಹ್ನದ ನಂತರ ವಾಪಾಸ್ ಬಂದಮೇಲೆ ಕತ್ತೆಗಳನ್ನು  ಸ್ವತಂತ್ರವಾಗಿ ಬಿಡುತ್ತಿದ್ದರು. ಅವು ಬೀದಿಗಲ್ಲಿ ಸುತ್ತುತ್ತಾ ರಸ್ತೆಯಲ್ಲಿ ಬಿದ್ದ ಕಸ ಮತ್ತು ಕಾಗದದ ಹಾಳೆಗಳನ್ನೇ ತಿನ್ನುತ್ತಿದ್ದವು. ಒಮ್ಮೊಮ್ಮೆ ಗಂಡು ಕತ್ತೆಗಳು ಕರ್ಣ  ಕಠೋರವಾಗಿ ಕಿರುಚುತ್ತಾ ಹೆಣ್ಣು ಕತ್ತೆಯನ್ನು ಬೆನ್ನತ್ತಿ ಓಡುವುದು ಸ್ವಾಭಾವಿಕವಾಗಿತ್ತು.

ಒಮ್ಮೆ ರಸ್ತೆ ಬದಿಯಲ್ಲಿ ರದ್ದಿ ಹಾಳೆಯನ್ನು ತಿನ್ನುತ್ತಿದ್ದ ಕತ್ತೆಗೆ ಪುಟ್ಟ ಹುಡುಗ ಷಣ್ಮುಖಿ ಪುಟ್ಟ ಕೋಲನ್ನು  ತೆಗೆದುಕೊಂಡು ಹೊಡೆಯಲು ಹೋದ. ಇದನ್ನು ನೋಡಿದ ಅಣ್ಣಿಗೇರಿ ಮುರುಗೆಮ್ಮಜ್ಜಿ “ಲೇ ಹುಡುಗಾ ಹೊಡಿಬ್ಯಾಡಲೇ, ನೀನೂ ಕತ್ತಿ ಕಪ್ಪಣ್ಣ ಮೂತಿ ಮಂಗಣ್ಣ ಆಗ್ತಿದಿ” ಎಂದರು. 

ಮುರುಗೆಮ್ಮಜ್ಜಿ ಹೇಳಿದ ಕತ್ತೆ ಕಪ್ಪಣ್ಣ ಮೂತಿ ಮಂಗಣ್ಣನ ಬಗ್ಗೆ ಆಮೇಲೆ ಹೇಳುವೆ. ಅದಕ್ಕೂ ಮೊದಲು  ಬಾಲ್ಯದಲ್ಲಿ ನಮ್ಮ ಜಾಗರಣೆ ಪರಿಯನ್ನು ಹೇಳಬೇಕೆಂದರೆ ತಡ ರಾತ್ರಿಯವರೆಗೂ ಬೇರೆ ಬೇರೆ ದೇವಸ್ಥಾನಗಳಿಗೆ ಹೋಗಿ ಬರುವವರು ಬೀದಿಯಲ್ಲಿ ಭಕ್ತಿಪರಶರಾಗಿ ಓಡಾಡುವುದನ್ನು  ನೋಡುವುದೇ ನಮಗೆ ಸಂಭ್ರಮ.  

ಅಲ್ಲದೆ ನಾವು ಅಣ್ಣ ತಮ್ಮ ಅಕ್ಕ ತಂಗಿಯರು ಒಟ್ಟಾಗಿ ಶಿವ ಧ್ಯಾನ, ಶಿವ ಭಜನೆ ಮಾಡುವಾಗ ಜಯದೇವ ಪ್ರೆಸ್‌ನ ಕಣ್ವಕುಪ್ಪೆ ಗುರುಪಾದಪ್ಪನವರು ಹೇಳಿಕೊಟ್ಟ ಶಿವ ಕವಿಯ ಅಕ್ಷರ ಶಿವ ನಾಮ ಸಂಕೀರ್ತನೆ `ಅ’ಕಾರದಿಂದ `ಕ್ಷ’ ಕಾರದವರೆಗೆ  ಎಲ್ಲಾ ಅಕ್ಷರಗಳಲ್ಲೂ ಶಿವನನ್ನು ಸ್ತುತಿಸುವ `ಅದ್ಭುತ ವಿಗ್ರಹ ಅಮರಾಧೀಶ್ವರ ಅಗಣಿತ ಗುಣಗಣ ಅಮೃತಶಿವ, ಆನಂದಾಮೃತ ಆಶ್ರಿತ ರಕ್ಷಕ ಆತ್ಮಾನಂದ ಮಹೇಶ ಶಿವ, ಇಂದು ಕಲಾಧರ ಇಂದ್ರಾದಿಪ್ರಿಯ  ಸುಂದರ ರೂಪ ಸುರೇಶ ಶಿವ,  ಈಶ ಸುರೇಶ ಮಹೇಶ ಜನಪ್ರಿಯ ಕೇಶವ ಸೇವಿತ ಸೇವ್ಯ ಶಿವ, ಉರಗಾದಿಪ್ರಿಯ ಭೂಷಣ ಶಂಕರ ನರಕ ವಿನಾಶ ನಟೇಶ ಶಿವ….’ ಹೀಗೆ ಅ ಆ ಇ ಈ ಉ ಊ ದಿಂದ  ಕೃ  ತ್ರ ಘ್ನ  ದವರೆಗೆ ಎಲ್ಲ ಅಕ್ಷರಗಳಲ್ಲೂ ಶಿವಧ್ಯಾನ ವಿರುತ್ತಿತ್ತು. 

ನಮ್ಮ ಜಾಗರಣೆ ಹೀಗಾದರೆ ಕೆಲವರು ಸೆಕೆಂಡ್ ಶೋ  ಥರ್ಡ್ ಶೋ ಫೋರ್ತ್  ಶೋ ಅಂತ ಹೇಳಿ ಸಿನಿಮಾಗಳಿಗೂ ಹೋಗುತ್ತಿದ್ದರು. ಸುದೈವ ವಶಾತ್ ಆಗ ಪೌರಾಣಿಕ ಚಲನಚಿತ್ರಗಳನ್ನು ಮಾತ್ರ ಶಿವರಾತ್ರಿಯ ದಿನದಂದು ಪ್ರದರ್ಶಿಸಲಾಗುತ್ತಿತ್ತು. 

ಕೆಲವರು ಒಂದೆಡೆ ಕುಳಿತುಕೊಂಡು ರಂಜನೀಯವಾಗಿ ಕಾಡು ಹರಟೆ ಹೊಡೆಯುತ್ತಾ, ರಾತ್ರಿ ಕಳೆದರೆ ಮತ್ತೆ ಕೆಲವು ತುಂಟ ಹುಡುಗರು ಸೈಕಲ್ಲಿನ ಹಿಂದಿನ ಚಕ್ರ ಹಾಗೂ ಮಡ್  ಗಾರ್ಡ್ ನಡುವೆ ಒಂದು ದಾರಕ್ಕೆ ರಟ್ಟಿನ ತುಂಡು ಕಟ್ಟಿ ಅದನ್ನು ಚಕ್ರದ ತಂತಿಗಳಿಗೆ ತಾಗುವಂತೆ ಮಾಡಿ ವೇಗವಾಗಿ ಸೈಕಲ್ ತುಳಿದುಕೊಂಡು ಹೋಗುವಾಗ ಕರ್ಕಶವಾಗಿ `ಪರ್ರ್ ಪರ್ರ್’ ಎಂಬುವ ಎಂಬ ಶಬ್ದ ಮಾಡುತ್ತಾ ರಸ್ತೆಗಳಲ್ಲಿ ಸುತ್ತುವುದೇ ಜಾಗರಣೆಯ ಮೋಜು ಆಗಿತ್ತು. 

ಕೆಲವು ತುಂಟ ಹುಡುಗರು ಮಾತ್ರ ಕತ್ತೆಗಳ ಬಾಲಕ್ಕೆ ಖಾಲಿ ಡಬ್ಬ ಕಟ್ಟಿ ಅವನ್ನು  ಓಡಿಸುವುದು,  ಕತ್ತೆಗಳು ಓಡುವಾಗ ಬಾಲಕ್ಕೆ ಕಟ್ಟಿದ ಖಾಲಿ ಡಬ್ಬ ರಸ್ತೆಯಲ್ಲಿ ಗೆರಚಿಗೊಂಡಾಗಿನ  ಶಬ್ದಕ್ಕೆ ಮತ್ತಷ್ಟು ಹೆದರಿ ಕತ್ತೆಗಳು ಕಿರುಚುತ್ತಾ ಮತ್ತೂ ಜೋರಾಗಿ ಓಡುವುದು ತುಂಟ ಹುಡುಗರಿಗೆ ದೊಡ್ಡ ಮೋಜು ಆಗಿರುತ್ತಿತ್ತು.  

ಹೀಗೆ ಒಮ್ಮೆ ಕತ್ತೆ ಬಾಲಕ್ಕೆ ಡಬ್ಬ ಕಟ್ಟಲು ಹೋದ ಕಪ್ಪಣ್ಣ ಬಹುಶಃ ಅವನ ಹೆಸರು ಕಪಿಲೇಶ ಅಥವಾ ಕಲ್ಪೇಶವೂ ಇರಬಹುದು, ಕರೆಯುವುದು ಕಪ್ಪಣ್ಣ ಎಂದು, ಕಪಣ್ಣನ ಮುಖಕ್ಕೆ ಕತ್ತೆ ಜಾಡಿಸಿ ಒದ್ದು ತುಟಿಗಳು ಊದಿಕೊಂಡವು. ಅಲ್ಲಿಂದ ಅವನಿಗೆ `ಕತ್ತೆ ಕಪ್ಪಣ್ಣ ಮೂತಿ ಮಂಗಣ್ಣ’ ಎಂದು ಜೊತೆಯ ಹುಡುಗರಷ್ಟೇ ಅಲ್ಲ ಬೀದಿಯ ದೊಡ್ಡವರೂ ಗೇಲಿ ಮಾಡಿದರು. ಇದನ್ನೇ ಷಣ್ಮುಖಿಗೆ ಮುರಿಗೆಮ್ಮಜ್ಜಿ ಹೇಳಿದ್ದು. 


ಹೆಚ್.ಬಿ.ಮಂಜುನಾಥ್
ಹಿರಿಯ ಪತ್ರಕರ್ತ

error: Content is protected !!