ದಾವಣಗೆರೆ ಹಳೆ ಊರಿನ ಶಿವರಾತ್ರಿ ಸ್ವಾರಸ್ಯಗಳು…
ನಮ್ಮ ಬಾಲ್ಯದಲ್ಲಿ ಹಳೆ ಊರಿಗೆ ಹಗಲು ವೇಷದವರು ಆಗಾಗ ಬರುತ್ತಲೇ ಇದ್ದರು. ಬುಡುಗ ಜಂಗಮರು ಎಂದು ಎಳನಾಡು ಅಂಜನಪ್ಪನವರು ಈ ಜನಾಂಗದ ಸ್ಥಿತಿಗತಿಗಳ ಬಗ್ಗೆ ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ಈ ಹಗಲು ವೇಷದ ತಂಡದಲ್ಲಿ ಕನಿಷ್ಠ ಮೂವರಿಂದ ಆರೇಳು ಮಂದಿ ಸಹ ಇರುತ್ತಿದ್ದುದುಂಟು. ಕೇವಲ ಪುರುಷರು ಮಾತ್ರ. ಒಬ್ಬರು ತಬಲಾ ಬಾರಿಸುವವರಾದರೆ ಮತ್ತೊಬ್ಬರು ಹಾರ್ಮೋನಿಯಂ ನುಡಿಸುತ್ತಿದ್ದರು. ಉಳಿದವರು ಬಗೆ ಬಗೆಯ ವೇಷಧಾರಿಗಳು.
ತಬಲಾ, ಹಾರ್ಮೋನಿಯಂ ವಾದಕರೂ ಸಹ ಮುಖಕ್ಕೆ ಬಣ್ಣ ಬಳಿದುಕೊಂಡು ಬಣ್ಣದ ಪೋಷಾಕುಗಳನ್ನೇ ತೊಟ್ಟಿರುತ್ತಿದ್ದರು. ಹಾಡುಗಳನ್ನು ಇವರೆಲ್ಲರೂ ಹಾಡುತ್ತಿದ್ದರು. ಶಾಸ್ತ್ರೀಯ ಸಂಗೀತದ ಕೀರ್ತನೆಗಳ ಸಾಲು ಗಳಿಂದ ಹಿಡಿದು ದಾಸರ ಕೀರ್ತನೆ, ಶರಣರ ವಚನ, ಸಂತರ ಅಭಂಗ ಹಾಗೂ ಚಲನಚಿತ್ರಗಳ ಜನಪ್ರಿಯ ಭಕ್ತಿ ಗೀತೆಗಳು ಕಂದಪದ್ಯ, ಸೀಸ ಪದ್ಯಗಳು ಸಹಾ ತುಣುಕು ತುಣುಕಾಗಿ ಇವರ ಬಾಯಿಗಳಿಂದ ಓತಪ್ರೋತವಾಗಿ ಬರುತ್ತಿದ್ದವು!. ತುಣುಕು ತುಣುಕು ಏಕೆಂದರೆ ಬಹಳ ಚುರುಕು ಚುರುಕಾಗಿ ಒಂದು ಅಂಗಡಿ ಮುಂದಿನಿಂದ ಮತ್ತೊಂದು ಅಂಗಡಿಯ ಮುಂದೆ ಹೋಗುವಲ್ಲಿ ಇವರ ಹಾಡುಗಳು ಬದಲಾಗುತ್ತಿದ್ದವು. ಹಾಗೆ ಬದಲಾಗುವಾಗ ರಾಗ ತಾಳಗಳನ್ನು ಅಷ್ಟೇ ಚಮತ್ಕಾರಿಕವಾಗಿ ಬದಲಾಯಿಸಿಕೊಳ್ಳುತ್ತಿದ್ದರು. ಕಚೇರಿಗಳಲ್ಲಿ ಕುಳಿತು ತಬಲಾ, ಹಾರ್ಮೋನಿಯಂ ಭಾರಿಸುವುದೇ ಕಷ್ಟ ಎನ್ನುವಾಗ ಇವರು ಸೊಂಟಕ್ಕೆ ಕಟ್ಟಿಕೊಂಡ ಎರಡು ತಬಲಾಗಳು ಕೊರಳಿಗೆ ಕಟ್ಟಿಕೊಂಡ ಹಳೆ ಹಾರ್ಮೋನಿಯಂ ಅನ್ನು ಅದ್ಭುತವಾಗಿ ನುಡಿಸುತ್ತಿದ್ದರು.
ಇವರ ವಿಶೇಷತೆ ಎಂದರೆ ಆ ಅಂಗಡಿಯ ನಾಮಫಲಕ ಅಂದರೆ ಬೋರ್ಡ್ ಅನ್ನು ನೋಡುತ್ತಲೇ ಅವರಿಗೆ ಸೂಕ್ತವಾದ ಹಾಡುಗಳನ್ನು ಹಾಡುತ್ತಿದ್ದರು !!. ಉದಾಹರಣೆಗೆ ಗೌಡರ ಮಹಾಲಿಂಗಪ್ಪ ಗಂಗಾಧರಪ್ಪ ಎಂಬ ಬೋರ್ಡನ್ನು ನೋಡಿ ಶರಣರ ವಚನದ ಸಾಲುಗಳನ್ನು ಹಾಡಿದರೆ ಪಕ್ಕದಲ್ಲಿ ಪುಟಾಣಕರ ಪಾಂಡುರಂಗ ರಾವ್ ಎಂಬ ಬೋರ್ಡನ್ನು ನೋಡಿ ಮರಾಠಿ ಅಭಂಗದ ಸಾಲು ಅವರ ಬಾಯಿಂದ ಬರುತ್ತಿತ್ತು. ದಲಿಚಂದ್ ಕಪೂರ್ ಚಂದ್ ಬೋರ್ಡ್ ನೋಡುತ್ತಲೇ ತುಳಸಿದಾಸರ, ಕಬೀರದಾಸರ ಯಾವುದೋ ಹಿಂದಿ ಹಾಡು ಅಲ್ಲಿ ಹಾಡಿದರೆ, ಸುಬ್ರಾಯ ಶೆಟ್ಟರ ಅಂಗಡಿ ಮುಂದೆ `ನಮೋ ವೆಂಕಟೇಶ ನಮೋ ತಿರುಮಲೇಶ ಮುಡುಪಲು ನೀ ಕೊಸಗಿ ಎಂದೇನೋ..’ ತೆಲುಗು ಹಾಡು ಸಾಲು ಅವರ ಬಾಯಿಂದ ಬರುತ್ತಿತ್ತು.
ಎಷ್ಟು ಚಮತ್ಕಾರಿಕವಾಗಿ ಹಾಡು, ತಾಳ, ಲಯ ಎಲ್ಲವೂ ಕ್ಷಣಮಾತ್ರದಲ್ಲಿ ಬದಲಾಗುತ್ತಿತ್ತು !!. ಬರೀ ಹಾಡುವುದಷ್ಟೇ ಅಲ್ಲ ಮುಖ್ಯವಾಗಿ ಈ ಹಗಲು ವೇಷದವರು ದಿನಕ್ಕೊಂದೊಂದು ಪೌರಾಣಿಕ ವೇಷಗಳನ್ನೂ ಮಾಡಿಕೊಂಡು ಆಕರ್ಷಕವಾಗಿ ಹಾವಭಾವ ಗಳನ್ನು ಸಹಾ ಅಂಗಡಿಗಳ ಮುಂದೆ ಮಾಡುತ್ತಿ ದ್ದರು. ಆರೇಳು ದಿನ ನಿತ್ಯವೂ ಹೀಗೆ ಬೀದಿಯಲ್ಲಿ ಅಂಗಡಿಗಳ ಮುಂದೆ ಹಾಡು ಪ್ರದರ್ಶನ ನೀಡುತ್ತಿದ್ದರಾದರೂ ಕಾಸು ಕೇಳಿ ಪಡೆಯುತ್ತಿರ ಲಿಲ್ಲ. ಕೊನೆಯ ದಿನ ಮಾತ್ರ ಅರ್ಧನಾರೀಶ್ವರ ವೇಷ ಹಾಕಿಕೊಂಡು ಕೈಯಲ್ಲಿ ಒಂದು ನೋಟ್ ಪುಸ್ತಕವನ್ನು ಹಿಡಿದುಕೊಂಡು ಬರುತ್ತಿದ್ದರು. ಅಂದು ಎಲ್ಲರೂ ಅವರಿಗೆ ಹಣ ಕೊಡುವುದು.
ದೊಡ್ಡ ಮೊತ್ತವನ್ನು ಅದರಲ್ಲಿ ಬರೆದುಕೊಳ್ಳುತ್ತಿದ್ದರು. ಆಗ ಒಂದು ರೂಪಾಯಿಯೇ ದೊಡ್ಡ ಮೊತ್ತ !. ಯಾರಾದರೂ ಉದಾರವಾಗಿ ಐದು ರೂಪಾಯಿ ಕೊಟ್ಟರೆಂದರೆ ಅದು ಅವರಿಗೆ ನಂಬಲಾರದಷ್ಟು ದೊಡ್ಡ ಮೊತ್ತ. ಆಗ ದುಡ್ಡಿನ ಬೆಲೆಯೂ ಅಷ್ಟು ಇತ್ತು. ವಿಶೇಷತೆ ಎಂದರೆ ಒಬ್ಬನೇ ತನ್ನ ಇಡೀ ದೇಹದ ಬಲ ಪಾರ್ಶ್ವವನ್ನು ಶಿವನಂತೆ ಹಾಗೂ ಎಡಪಾರ್ಶ್ವವನ್ನು ಪಾರ್ವತಿಯಂತೆ ಅಲಂಕಾರ ಮಾಡಿಕೊಂಡು ನೆತ್ತಿಯ ಮೇಲಿನಿಂದ ಒಂದು ಪರದೆಯನ್ನು ಇಟ್ಟುಕೊಂಡಿರುತ್ತಿದ್ದು, ಆ ಪರದೆಯು ಸರಿಸುವಂತಿದ್ದು ಪಾತ್ರಧಾರಿಯ ಎಡ ಭಾಗವನ್ನು ಮುಚ್ಚಿದಾಗ ಬಲ ಭಾಗವು ನೀಲ ವರ್ಣದ ಗಜಚರ್ಮಾಂಬರಧರ ತ್ರಿಶೂಲಧಾರಿ ಜಟಾಧಾರಿ ಸರ್ಪಭೂಷಣ ಗಂಗಾಧರನಾಗಿ ಕಂಡರೆ ಪರದೆಯು ಬಲ ಭಾಗವನ್ನು ಮುಚ್ಚಿದಾಗ ಸೀರೆಯುಟ್ಟ ಗೌರರ್ವಣದ ಪಾರ್ವತಿಯು ಸರ್ವಾಲಂಕಾರ ಭೂಷಿತೆಯಾಗಿ ಕಾಣುತ್ತಿದ್ದಳು. ಇದನ್ನು ನೋಡಲು ನಾವಂತೂ ಬಾಲ್ಯದಲ್ಲಿ ಕಾದುಕೊಂಡಿರುತ್ತಿದ್ದೆವು. ಅವರ ಹಿಂದೆ ಹೋಗುತ್ತಾ ನೋಡಿದಷ್ಟು ನಮಗೆ ಸಮಾಧಾನವಾಗುತ್ತಿರಲಿಲ್ಲ. ಸ್ವಾರಸ್ಯವೆಂದರೆ ಪ್ರತಿ ಅಂಗಡಿಯ ಮುಂದೆ ಬರುವಾಗ ಬಲಭಾಗವನ್ನು ಮುಚ್ಚಿಕೊಂಡು ಪಾರ್ವತಿ ರೂಪವನ್ನೇ ತೋರಿಸುತ್ತಾ ನೃತ್ಯ ಮಾಡಿ, ಸರ್ರನೆ ಒಮ್ಮೆ ತಿರುಗುತ್ತಲೇ ಚುರುಕಾಗಿ ಪರದೆಯನ್ನು ಸರಿಸಿ ಶಿವನ ರೂಪ ತೋರಿಸುತ್ತಿದ್ದರು !. ಹಾಗೆ ಶಿವನ ರೂಪ ತೋರಿಸುವಾಗ ಕಂಕುಳಲ್ಲಿ ಕಾಣದಂತೆ ಕಟ್ಟಿಕೊಂಡ ರಬ್ಬರ್ ಚೀಲವನ್ನು ಅದುಮುತ್ತಿದ್ದರು. ಆಗ ಶಿವನ ಜಟೆಯ ಮೇಲಿದ್ದ ಗಂಗೆಯ ಮುಖದ ಬಾಯಿಯಿಂದ ನೀರು ಕಾರಂಜಿಯಂತೆ ಹಾರುತ್ತಿತ್ತು. ಪ್ರತಿ ಅಂಗಡಿಯ ಮುಂದೆ ನೃತ್ಯ ಮಾಡಿ ಹೀಗೆ ಗಂಗಾವತರಣ ಮಾಡುತ್ತಿದ್ದರು.
ಚೌಕಿಪೇಟೆಯ ಮಾರವಾಡಿ ಬಂಧುಗಳ ದೇವಸ್ಥಾನದ ಎದುರು ಒಂದು ಚಿಕ್ಕ ವಾಚ್ ರಿಪೇರಿ ಅಂಗಡಿ ಇತ್ತು, `ಲಿಂಗಂ ವಾಚ್ ವರ್ಕ್ಸ್’ ಎಂದು ಕರೆಯಲಾಗುತ್ತಿತ್ತು. ರುದ್ರಪ್ಪನವರು ಇದನ್ನು ನಡೆಸುತ್ತಿದ್ದರು. ಅವರು ಏಕಾಂಗಿ, ವಯೋವೃದ್ಧರು ಅವಧೂತರ ತರಹ ಸನ್ಯಾಸಿಯಂತೆ ಇರುತ್ತಿದ್ದರು. ಮಿತ ಭಾಷಿ ಹಸನ್ಮುಖಿ ಅಧ್ಯಾತ್ಮ ಜೀವಿಗಳು. ಬೀದಿಯ ಮಕ್ಕಳಿಗೂ ಅವರಲ್ಲಿ ತುಂಬಾ ಸಲುಗೆ. `ರುದ್ರಪ್ಪನವರೇ’, `ರುದ್ರಪ್ಪೋರೆ’ ಎಂಬುದು ಕೊನೆಗೆ ಸಂಕ್ಷಿಪ್ತವಾಗಿ `ಪೋರೆ’ ಎಂದು ಮಕ್ಕಳು ಕರೆಯುತ್ತಿದ್ದದು. ಅವರ ಅಂಗಡಿಗೂ `ಪೋರ ಅಂಗಡಿ’ ಎಂದೇ ಹೆಸರಾಗಿತ್ತು.
ರುದ್ರಪ್ಪನವರ ವಾಚ್ ಅಂಗಡಿಯ ಎಡಪಕ್ಕದಲ್ಲಿ ಶಂಕರಲಾಲ್ (ಲಾಯರ್ ಜಯಕುಮಾರ್ ರವರ ತಂದೆ) ಅಂಗಡಿ, ಬಲಪಕ್ಕದಲ್ಲಿ ತೆಂಗಿನಕಾಯಿ ವ್ಯಾಪಾರಿಗಳಾಗಿದ್ದ ಜೋಳದ ರಾಶಿ ಬಸವಲಿಂಗಪ್ಪನವರ ಮನೆ, ಇವರ ಕುಟುಂಬದವರಿಗೆ ಬೆಣ್ಣೆದೋಸೆ ಮೂಲಪುರುಷರಾದ ಮಹದೇವಪ್ಪ ಶಾಂತಪ್ಪರ ಕುಟುಂಬದ ಬೀಗತನವೂ ಇದೆ.
ಒಮ್ಮೆ ಶಿವರಾತ್ರಿಯ ಮುನ್ನಾ ದಿನ ಹಗಲು ವೇಷದವರು ಅರ್ಧನಾರೀಶ್ವರ ರೂಪದಲ್ಲಿ ಹಾಡುತ್ತಾ ಕುಣಿಯುತ್ತಾ ಅಂಗಡಿಗಳ ಮುಂದೆ ಬಂದವರು ರುದ್ರಪ್ಪನವರ ಅಂಗಡಿಯ ಮುಂದೆಯೂ ಹಾಡಿ ಕುಡಿದು ಹಣ ಪಡೆದು ಹೋದರು. ಹಣ ಕೊಟ್ಟು ಕಳಿಸಿದ ರುದ್ರಪ್ಪ ನವರು ನಕ್ಕರು. `ಏಕೆ ನಗುತ್ತಿದ್ದೀರಿ?’ ಎಂದು ಪಕ್ಕದಲ್ಲಿ ಕುಳಿತಿದ್ದ ಉಮಯ್ಯ ನವರು ಕೇಳಿದಾಗ ಅವ್ರು ಹಾಡಿದ ಹಾಡು ಕೇಳಿದ್ರಾ?, `ಭವಸಾಗರದ ಮಧ್ಯದಲ್ಲಿರುವೆ ಸಲಹೋ ಶಂಕರ ಲಿಂಗೇಶಾ, ಸಲಹೋ ಬಸವಲಿಂಗೇಶಾ..’ ಎಂದು ಹಾಡಿದರಲ್ಲ, ತಮಾಷಿ ಅಂದ್ರೆ ನನ್ ಪಕ್ಕದಲ್ಲಿ ಆ ಕಡೆ ಇರೋದು ಶಂಕರ ಲಾಲ್ ಅಂಗಡಿ, ಈ ಕಡೆ ಇರೋದು ಬಸವಲಿಂಗಪ್ಪನ್ ಮನೆ, ಮಧ್ಯದಾಗೆ ನಂದು ಲಿಂಗಂ ವಾಚ್ ಅಂಗಡಿ, ಅವರಿಗೇನೂ ಇದು ಗೊತ್ತಿದ್ದು ಹಾಡಿದ್ದಲ್ಲ. ಆದರೆ, ನನ್ ಸ್ಥಿತಿಗೆ ಅದು ಚಲೋ ಹೋಲಿಕಿ ಅಲ್ವಾ’ ಎಂದರು. ಉಮಯ್ಯನವರು ನಕ್ಕರು.
ಹೆಚ್.ಬಿ.ಮಂಜುನಾಥ್
ಹಿರಿಯ ಪತ್ರಕರ್ತ