ಶಿವರಾತ್ರಿ ಏಕೆ ? ಆಚರಣೆ ಹೇಗೆ ?

ಶಿವರಾತ್ರಿ ಏಕೆ ? ಆಚರಣೆ ಹೇಗೆ ?

ಕೈಲಾಸ ವಾಸನಾದ ಸದಾ ಧ್ಯಾನದಲ್ಲಿರುವ ವಿರಕ್ತಮೂರ್ತಿ ಪರಶಿವನ ಹಬ್ಬ ಎಂದರೆ ಅದು ಶಿವರಾತ್ರಿ. ಯಾವ ಆಡಂಬರವೂ ಬೇಡದ, ಯಾವ ಅಲಂಕಾರವು ಮಾಡಿಕೊಳ್ಳದೆ ಕೇವಲ ಭಸ್ಮಧಾರಿಯಾಗಿರುವ, ಶರೀರ ನಶ್ವರ ಎಂದು ತನ್ನ ಸ್ವರೂಪದಿಂದಲೇ ಸಾರುತ್ತಿರುವ, ಸದಾ ಧ್ಯಾನದಲ್ಲಿದ್ದು ತನ್ನಂತೆ ಅಂತರ್ಮುಖಿಗಳಾಗಿ ಎಂದು ಜನರಿಗೆ ತಿಳಿ ಹೇಳುವ, ಅಜ್ಞಾನವನ್ನು ತೊಳೆಯುವ ಜ್ಯೋತಿ ಸ್ವರೂಪಿಯಾಗಿರುವ ಪರಶಿವನ ಹಬ್ಬದಲ್ಲಿ, ನಾವು ಮಾಡಬೇಕಾಗಿರುವುದು ಉಪವಾಸ ಎಂದರೆ ಆ ಭಗವಂತನ ಬಗ್ಗೆ ಚಿಂತನೆ ಮಾಡುತ್ತಾ, ಬೇರೆ ಎಲ್ಲ ಯೋಚನೆಗಳನ್ನು ಅನ್ನ ಆಹಾರದ ಬಯಕೆಗಳನ್ನು ತ್ಯಜಿಸುವುದು. ಅಜ್ಞಾನದ ಧ್ಯೋತಕವಾದ ಕತ್ತಲಿನಲ್ಲಿ, ತಮೋ ಗುಣ ಪೂರ್ಣವಾದ  ನಿದ್ರೆ ಮಾಡದೆ, ಭಗವಂತನಾದ ಶಿವನ ಪೂಜೆ ಮಾಡುತ್ತಾ, ಅವನ ನಾಮ ಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು. 

ಜಾಗರಣೆ ಎಂದರೆ ಜಾಗೃತರಾಗುವುದು, ನಮ್ಮ ಅಸ್ತಿತ್ವ ಏನು? ನಾವು ಈ ಭೂಮಿಗೆ ಬಂದಿರುವ ಉದ್ದೇಶವೇನು? ಎಂದು ಆಲೋಚಿಸಿ, ಪರಮಾತ್ಮನ ಸಾಕ್ಷಾತ್ಕಾರವಾಗಲು ಬೇಕಾಗಿರುವಂತಹ ಧ್ಯಾನ, ಜಪ, ಭಜನೆ, ನೇಮ ಆಚರಿಸುವುದು. ಹೃದಯದ ಆಕಾರದಲ್ಲಿರುವ ಬಿಲ್ವಪತ್ರವು ಜೀವನನ್ನು ಸಂಕೇತಿಸಿದರೆ ಲಿಂಗಾಕಾರದ ಶಿವಲಿಂಗವು ಭಗವಂತನನ್ನು ಸಂಕೇತಿಸುತ್ತದೆ. ಬಿಲ್ವಪತ್ರೆ ಶಿವಲಿಂಗದ ಮೇಲೆ ಬಿದ್ದಾಗ ಜೀವ ಪರಮಾತ್ಮರ ಐಕ್ಯತೆಯ ಸೂಚಕವಾಗಿರುತ್ತದೆ. 

ಈ ಶಿವರಾತ್ರಿಯ ವಿಶೇಷತೆಗೆ ಕಾರಣಗಳು ಅನೇಕ. ಲಿಂಗ ಪುರಾಣ, ಶಿವ ಪುರಾಣ, ಸ್ಕಂದ ಪುರಾಣದ ಪ್ರಕಾರ, ಶಿವನು ಒಂದು ಕಂಬ ರೂಪದಲ್ಲಿ ನಿಂತು, ಅದರ ತುದಿ ಮೊದಲುಗಳನ್ನು ಹುಡುಕಲು ಬ್ರಹ್ಮ ಮತ್ತು ವಿಷ್ಣುವಿಗೆ ಹೇಳಿದಾಗ, ಅವರು ಅದನ್ನು ಹುಡುಕಲಾಗದೆ ಹಿಂದಿರುಗಿದಾಗ ಶಿವನು ಲಿಂಗಾಕಾರವಾಗಿ ಈ ದಿನ ನಿಂತನು ಎಂಬ ಕತೆ ಇದೆ.

ಈ ಶಿವರತ್ರಿಯ ದಿನದಂದೇ ಸಮುದ್ರ ಮಥನ ಕಾಲದಲ್ಲಿ ಬಂದಂತಹ ಹಾಲಾಹಲವನ್ನು ಶಿವ ಸ್ವೀಕರಿಸಿದ, ಅದು ಅವನ ಒಳಗೆ ಹೋಗದಂತೆ ಪಾರ್ವತಿ ಗಂಟಲಿನಲ್ಲೇ ಅದನ್ನು ಹಿಡಿದಾಗ, ಪರಶಿವನನ್ನು ದೇವಾನು ದೇವತೆಗಳು ರಾತ್ರಿಯಲ್ಲ ಬಿಲ್ವ ಪೂಜೆ ಮಾಡುತ್ತಾ, ಅಭಿಷೇಕ ಮಾಡುತ್ತಾ ಪೂಜಿಸಿದರು ಎಂಬ ಕಥೆ ಇದೆ. 

ಇದಲ್ಲದೆ ಪಾರ್ವತಿಯು ಶಿವರಾತ್ರಿಯಂದು ಶಿವನನ್ನು ರಾತ್ರಿ ಎಲ್ಲಾ ಪೂಜಿಸಿದ್ದರಿಂದ ಶಿವನನ್ನು ಒಲಿಸಿಕೊಂಡು ಅವನನ್ನು ವಿವಾಹವಾದಳು ಎಂಬ ಕಥೆ ಇದೆ.

ಭಗೀರಥನು ಶಿವನ ಜಟೆಯಲ್ಲಿದ್ದ ಗಂಗೆಯನ್ನು ಧರೆಗೆ ಕಳುಹಿಸು ಎಂದು ಪ್ರಾರ್ಥಿಸಿದಾಗ ಶಿವರಾತ್ರಿಯಂದೇ ಗಂಗೆಯನ್ನು ಶಿವನು ಭೂಮಿಗೆ ಬಿಟ್ಟನು ಎಂಬ ಕಥೆಯು ಇದೆ.   ವೈಜ್ಞಾನಿಕವಾಗಿ, ಅತ್ಯಂತ ಚಳಿಯ ಕಾಲ ಮುಗಿದು ಬೇಸಿಗೆ ಕಾಲ ಪ್ರಾರಂಭವಾಗುವ ಈ ಪರ್ವಕಾಲದಲ್ಲಿ, ಉಪವಾಸ ಮತ್ತು ಜಾಗರಣೆಯು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಬಿಲ್ವಪತ್ರೆಯ ಸುವಾಸನೆಯೂ ಉಸಿರಾಟದ ಶಕ್ತಿಯನ್ನು ಹೆಚ್ಚಿಸುತ್ತದೆ, ಬಿಲ್ವಾರ್ಚನೆಯನ್ನು ಶಿವನಿಗೆ ಮಾಡುವ ಸಲುವಾಗಿ ಬಿಲ್ವಪತ್ರೆಯ ವಾಸನೆಯನ್ನು ಜನರು ಸೇವಿಸಿ ಆರೋಗ್ಯವಂತರಾಗಲಿ ಎಂಬ ಉದ್ದೇಶವಿದೆ. ಉಪವಾಸವನ್ನು ದೇಹಕ್ಕೆ ಅತ್ಯಂತ ಮುಖ್ಯ ಎಂದು ಅನೇಕ ಸಂಶೋಧನೆಗಳು ಸಾಬೀತು ಪಡಿಸಿವೆ.

ಭಗವಂತನ ಸಾಕ್ಷಾತ್ಕಾರವಾಗಬೇಕಾದರೆ ಮನೋ ನಿಗ್ರಹ ಬೇಕು. ದೇಹದ ಸಹಜ ಕ್ರಿಯೆಗಳಾದ ಹಸಿವು ಮತ್ತು ನಿದ್ರೆಗಳನ್ನು ತಡೆದು ಎಚ್ಚರವಾಗಿರಬೇಕೆಂದರೆ ಮನೋಬಲ ಬಹಳ ಬೇಕು. ಹಬ್ಬ ಹರಿದಿನಗಳ ಸರಿಯಾದ ಆಚರಣೆ ಯಿಂದ ಮನುಷ್ಯನ ಮನೋಬಲ ಹೆಚ್ಚುತ್ತದೆ. ಮನಸ್ಸಿದ್ದರೆ ಮಾರ್ಗ ಎಂಬ ನಾಣ್ನುಡಿಯಂತೆ, ಮನಸ್ಸು ಗಟ್ಟಿಯಾಗಿರುವವನು ಏನನ್ನು ಬೇಕಾದರೂ ಸಾಧಿಸಬಹುದು, ಅದು ಆತ್ಮ ಬಲವನ್ನು ಹೆಚ್ಚಿಸುತ್ತದೆ.

ಈ ಶಿವರಾತ್ರಿ ಯಂದು ನಾಲ್ಕು ಯಾಮ ಗಳಲ್ಲೂ ರುದ್ರಾಭಿಷೇಕವನ್ನು ಮಾಡುತ್ತಾ ರುದ್ರ ಮತ್ತು ಚಮಕ ಎಂಬ ಮಂತ್ರಗಳನ್ನು ಪಠಿಸುತ್ತಾ ಶಿವನಿಗೆ ನೀರು, ಹಾಲು, ತುಪ್ಪ, ಜೇನುತುಪ್ಪ, ಎಳೆನೀರು ಮುಂತಾದ ಪದಾರ್ಥಗ ಳಿಂದ ಅಭಿಷೇಕ ಮಾಡಲಾಗುತ್ತದೆ. ಈ ಮಂತ್ರ ಪಠಣವೂ ಕೂಡ ಹೃದಯವನ್ನು ಗಟ್ಟಿ ಮಾಡುತ್ತದೆ. ಕೇಳುಗರಿಗೆ ಶಾಂತಿ ಸಮಾಧಾನ, ಆತ್ಮಾನಂದವನ್ನು ನೀಡುತ್ತದೆ.

ಅನೇಕ  ದೇವಸ್ಥಾನಗಳಲ್ಲಿ ನಾಲ್ಕು ಜಾವದ ಪೂಜೆಗಳನ್ನು ಮಾಡಲಾಗುತ್ತದೆ. ದೇವಸ್ಥಾನಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಿರುತ್ತಾರೆ. ಅಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ. ಅಂತಹ ಜಾಗಗಳಲ್ಲಿ ಇರುವುದರಿಂದಲೇ ನಮ್ಮ ದೇಹ, ಮನಸ್ಸು ಮತ್ತು ಆತ್ಮ ನೆಮ್ಮದಿ ಮತ್ತು ಶಾಂತಿಗಳನ್ನು ಪಡೆಯುತ್ತದೆ. 

ಸುಖ, ಸಂತೋಷ, ನೆಮ್ಮದಿ ಎಲ್ಲವೂ ನಮ್ಮೊಳಗೆ ಇದೆ. ಹೊರಗಿನ ಯಾವ ವಸ್ತುವು ಇದನ್ನು ಕೊಡಲು ಸಾಧ್ಯವಿಲ್ಲ. ಆ ನಮ್ಮೊಳಗೆ ನಾವು ನೋಡಿಕೊಳ್ಳಬೇಕಾದರೆ ಧ್ಯಾನಸ್ಥ ಸ್ಥಿತಿಯಲ್ಲಿ ಮಾತ್ರ ಸಾಧ್ಯ. ಇದನ್ನೇ ಕಣ್ಣು ಮುಚ್ಚಿ ಧ್ಯಾನ ಮಾಡುವ ಪರಶಿವ ಎಲ್ಲರಿಗೂ ಹೇಳುತ್ತಿದ್ದಾನೆ. ಯಾವ ಒಡವೆ, ವಸ್ತ್ರ, ಹೊರಗಿನ ಯಾವುದನ್ನೂ ಬಯಸದ ಪರಮಾತ್ಮನಾದ ಪರಶಿವನನ್ನು ಸಂತೋಷಗೊಳಿಸುವುದು ಕೇವಲ ಅನನ್ಯವಾದ ಭಕ್ತಿಯೊಂದೇ ‌

ಇದನ್ನು ಬೇಡರ ಕಣ್ಣಪ್ಪನ ಕಥೆ ನಮಗೆ ತೋರಿಸುತ್ತದೆ. ಅದು ತನ್ನ ಎರಡೂ ಕಣ್ಣನ್ನೂ ಕಿತ್ತು ಕೊಡಲೂ ಸಿದ್ಧನಾದ ಮುಗ್ಧನ ಭಕ್ತಿಯ ಶ್ರೇಷ್ಠತೆ ತಿಳಿಸುತ್ತದೆ. ಜಾತಿ, ಮತ, ಬೇಧ ಯಾವುದು ಇಲ್ಲದೆ, ಭಕ್ತಿ ಮಾಡುವ ಅಸುರರಿಗೂ ಕೂಡ ಬೇಕಾದ ವರಗಳನ್ನು ಧಾರಾಳವಾಗಿ ಕೊಡುವಂತಹ ಬೋಲೇಶಂಕರ ತನ್ನ ಭಕ್ತರನೆಲ್ಲ ಕಾಪಾಡಿಯೇ ಕಾಪಾಡುತ್ತಾನೆ. 

ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಯಂದು ಬರುವ ಶಿವರಾತ್ರಿಯ ಈ ವಿಶೇಷ ಪರ್ವಕಾಲದಲ್ಲಿ, ಶಿವನ ಪಾದಾರವಿಂದವನ್ನು ನಾವು ಹಿಡಿಯೋಣ. ಆತ್ಮೋದ್ಧಾರದ ಮಾರ್ಗದಲ್ಲಿ ಮುನ್ನಡೆಯೋಣ, ಜ್ಞಾನ ಭಕ್ತಿ, ವೈರಾಗ್ಯಗಳನ್ನು ನೀಡೆಂದು ಬೇಡಿ ಶರಣಾಗೋಣ.  

– ಡಾ. ರೂಪಶ್ರೀ ಶಶಿಕಾಂತ್, ದಾವಣಗೆರೆ.

error: Content is protected !!