ಶಿವಾನುಭವ ಆಗಬೇಕಾದರೆ ಶಿವರಾತ್ರಿ ಒಂದು ದಿನದ ಸಾಧನೆ ಅಲ್ಲ. ನಿತ್ಯ ನಿತ್ಯವೂ ಶಿವರಾತ್ರಿ ಆದಾಗ ಶಿವಾನುಭವ ಆಗಲು ಸಾಧ್ಯ.
ನಮ್ಮೊಳಗಿರುವ ಅಜ್ಞಾನದ ಕತ್ತಲು ಕಳೆದು, ಜ್ಞಾನದ ಬೆಳಕು ಮೂಡಿದಾಗಲೇ ನಮ್ಮಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಜ್ಞಾನದ ಬೆಳಕು ಮೂಡಬೇಕಾದರೆ, ನಮ್ಮ ಜೀವ ಜೀವನ ಶಿವಮಯ ಆಗಬೇಕು. ಅಹಂಕಾರ ಅಳಿದು; ಅಂಗ ಲಿಂಗಾಂಗವಾಗಬೇಕು. ಶಿವಯೋಗವು ; ಅಂಗವು ಲಿಂಗಾಂಗವಾಗುವಂತಹ ಶಿವಾನುಭವದ ಪ್ರಕ್ರಿಯೆಯನ್ನು ತಿಳಿಸಿಕೊಡುವ ಸಾಧನವಾಗಿದೆ.
ಈ ಶಿವಾನುಭವವನ್ನು ಕೇವಲ ಒಂದು ದಿನ ಶಿವರಾತ್ರಿಯಲ್ಲಿ ಮಾಡಿ ಅನುಭವಿಸಲು ಸಾಧ್ಯವಿಲ್ಲ. ಹಾಗಾಗಿ ಬಸವಾದಿ ಶರಣರು ಶಿವರಾತ್ರಿ, ನವರಾತ್ರಿ ಎಂದು, ಹಬ್ಬ ವಿಶೇಷತೆಗಳು ಎಂದು ಪ್ರಾಮುಖ್ಯತೆ ಕೊಡುವುದಿಲ್ಲ. ಪ್ರತಿದಿನ, ಪ್ರತಿ ಕ್ಷಣವನ್ನು ಶಿವರಾತ್ರಿ ಎಂದು ನೋಡುತ್ತಾರೆ.
ಶರಣರ ನಡೆ ನುಡಿ ಕೆಲವರಿಗೆ ವಿಚಿತ್ರವಾಗಿ ಕಂಡರೂ ಆಲೋಚಿಸಿ ಅನುಭವಿಸಿ ನೋಡಿದಾಗ ಸತ್ಯದ ದರ್ಶನ ಆಗುತ್ತದೆ. ” ಹಾವಿನ ಡೊಂಕು ಹುತ್ತಕ್ಕೆ ಸಸಿನ, ನದಿಯ ಡೊಂಕು ಸಮುದ್ರಕ್ಕೆ ಸಸಿನ, ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ “ ಎನ್ನುವಂತೆ ದೇವರನ್ನು ಮೆಚ್ಚಿಸಲು ಶರಣರ ನಡೆ ನುಡಿಗಳು ಪ್ರಿಯವಾಗಿರುತ್ತವೆ.
ಸಾಮಾನ್ಯರ ಜೀವನ ಕ್ರಮ ಮತ್ತು ಶರಣರ ಜೀವನ ಕ್ರಮವು ಒಂದೇ ತರಹ ಇರುವುದಿಲ್ಲ. ಬೇರೆ ಬೇರೆಯೇ ಆಗಿರುತ್ತದೆ. ಏಕೆಂದರೆ ಸಾಮಾನ್ಯರ ಮನಸ್ಥಿತಿಯೇ ಬೇರೆ, ಶರಣರ ಮನಸ್ಥಿತಿಯೇ ಬೇರೆ.
ಸಾಮಾನ್ಯರಿಗೆ ಹಬ್ಬ, ತೇರು, ಜಾತ್ರೆಗಳು ವಿಶೇಷ ಆಗಿರುತ್ತವೆ. ಆದರೆ ಶರಣರ ದೃಷ್ಟಿಕೋನದಲ್ಲಿ ಹಬ್ಬ, ಜಾತ್ರೆಗಳು ವಿಶೇಷವಲ್ಲ. ಎಲ್ಲಾ ಕಾಲವನ್ನು, ಎಲ್ಲರನ್ನು, ಒಂದೇ ರೀತಿಯಾಗಿ, ಸಮತ್ವದ ದೃಷ್ಟಿಯಲ್ಲಿ ನೋಡುತ್ತಾರೆ. ಏಕೆಂದರೆ ಶರಣರು ಸತ್ಯದ ಸಾಕ್ಷಾತ್ಕಾರವನ್ನು ಮಾಡಿಕೊಂಡು, ಜೀವ, ಜೀವನವನ್ನು ಶಿವಮಯ ಮಾಡಿಕೊಂಡು, ಸತ್‌ಚಿತ್ ಆನಂದದಲ್ಲಿ ಇರುವಂತವರು.
ಏಕೆಂದರೆ ಬಸವಾದಿ ಶರಣರು ನಿತ್ಯ ಶುದ್ಧ, ನಿತ್ಯಮುಕ್ತರು. ಅವರ ಜೀವ, ಜೀವನವೇ ಶಿವಮಯವಾಗಿರುತ್ತದೆ. ಆದ್ದರಿಂದ ಬಸವಣ್ಣನವರು ” ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ,ಶರಣ ನಿದ್ದೆಗೈದರೆ ಜಪ ಕಾಣಿರೋ” ಎಂದಿದ್ದಾರೆ.
“ಶಿವ ಶರಣರು ನಿದ್ದೆಗೈದಡೆ ಜಪ ಕಾಣಿರಣ್ಣ, ಶಿವಶರಣರು ಎದ್ದಿದ್ದರೆ ಶಿವರಾತ್ರಿ ಕಾಣಿರಣ್ಣ, ಶಿವಶರಣರು ನೋಡಿದರೆ ಪಾಪಕ್ಷಯ ಕಾಣಿರಣ್ಣ, ಶಿವ ಶರಣರು ನಡೆದುದೇ ಪಾವನ ಕಾಣಿರಣ್ಣ, ಶಿವ ಶರಣರು ನುಡಿದುದೇ ಶಿವತತ್ವ, ಶಿವಮಂತ್ರ ಕಾಣಿರಣ್ಣ, ಶಿವ ಶರಣರು ಮುಟ್ಟಿದುದೇ ಸರ್ವ ಸಿದ್ದಿ ಕಾಣಿರಣ್ಣ, ಶಿವ ಶರಣರ ಮನವೇ ಲಿಂಗ ಕಾಣಿರಣ್ಣ ಶಿವ ಶರಣರ ಕಾಯವೇ ಕೈಲಾಸ ಕಾಣಿರಣ್ಣ ಗುಹೇಶ್ವರಾ ನಿಮ್ಮ ಶರಣನ ಚಾರಿತ್ರವು ವಿಪರೀತವು.” ಎಂದು ಅನುಭಾವಿ ಅಲ್ಲಮಪ್ರಭುಗಳು ಹೇಳಿದ್ದಾರೆ.
ನಾವು ಇಂತಹ ಹಂತ ತಲುಪಲು, ಜೀವ, ಜೀವನ ಶಿವಮಯವಾಗಲು, ಅಂಗ ಸರ್ವಾಂಗ ಲಿಂಗವಾಗಲು ಅನೇಕ ಶಿವರಾತ್ರಿಗಳನ್ನು ಮಾಡಬೇಕು.
ನಾವು ಆಚರಿಸುವ ಶಿವರಾತ್ರಿ ; ಒಂದು ದಿವಸದ ಉಪವಾಸ ಜಾಗರಣೆ ಆಗಿದೆ. ಶರಣರು ಮಾಡುವ ಶಿವರಾತ್ರಿ ನಿತ್ಯ ನಿತ್ಯವಾಗಿರುತ್ತದೆ.
ನಾವು ಉಪವಾಸದ ಹೆಸರಲ್ಲಿ ; ಹೊಟ್ಟೆ ಬಿರಿಯುವಂತೆ ಹಣ್ಣು ಮತ್ತು ಉಪಹಾರವನ್ನು ಸೇವಿಸುತ್ತೇವೆ. ಜಾಗರಣೆಯ ಹೆಸರಲ್ಲಿ ಟಿ.ವಿ. ಮೊಬೈಲ್ ನೋಡುತ್ತಾ , ಆಟ ಆಡಿಕೊಂಡು ಜಾಗರಣೆ ಮಾಡುತ್ತೇವೆ. ಹಾಗಾಗಿ ನಮ್ಮ ಸ್ಥಿತಿ ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ ಎಂದು ಹೇಳುವಂತೆ ಆಗಿದೆ.
“ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,ಮಾಡುವ ನೀಡುವ ನಿಜಗುಣವುಳ್ಳೆಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ ” ಎಂದು ಹೇಳುವಂತೆ; ನಾವುಗಳು ಭಕ್ತಿಯನ್ನು ಮಾಡುತ್ತೇವೆ, ಸೇವೆಯನ್ನು ಮಾಡುತ್ತೇವೆ, ಆದರೆ ಅದರ ನಿಜವನ್ನು, ಮರ್ಮವನ್ನು ಅರಿಯದೇ ಮಾಡುತ್ತಿದ್ದೇವೆ.
ನಾವು ಹಬ್ಬದ ಆಚರಣೆಗಳ ಮೂಲಗಳನ್ನು ಅರಿತು ಆಚರಿಸಿದ್ದೇ ಆದರೆ ನಮಗೆ ಶಿವಾನುಭವದ ಸತ್ಯದರ್ಶನವಾಗುತ್ತದೆ.
– ಶಿವಪ್ರಸಾದ ಕರ್ಜಗಿ, ದಾವಣಗೆರೆ.