ಶರಣಧರ್ಮ ವಚನ ಸಾಹಿತ್ಯ ಸಂರಕ್ಷಣಾ ಹುತಾತ್ಮ ಶರಣ ಡೋಹರ ಕಕ್ಕಯ್ಯ

ಶರಣಧರ್ಮ ವಚನ ಸಾಹಿತ್ಯ ಸಂರಕ್ಷಣಾ ಹುತಾತ್ಮ ಶರಣ ಡೋಹರ ಕಕ್ಕಯ್ಯ

12ನೇ ಶತಮಾನ ಮಾನವ ಕುಲದ ಇತಿಹಾಸ ಪುಟಗಳಲ್ಲಿ ವೈಚಾರಿಕ ಪ್ರಜ್ಞೆಯ ಮೂಲಕ ವೈಯಕ್ತಿಕ, ಸಾಮಾಜಿಕ, ಧಾರ್ಮಿಕ ಮತ್ತು ರಾಷ್ಟ್ರೀಯ ರಾಜಕೀಯ ಕ್ಷೇತ್ರದಲ್ಲಿ ಜಾಗೃತಿಯನ್ನುಂಟು ಮಾಡಿದ ಕಾಲ. ಮಹಾ ಮಾನವತಾವಾದಿ ಬಸವಣ್ಣ ಮತ್ತು ಜಾತಿ, ಮತ, ಕುಲಗೋತ್ರ, ಮೇಲು-ಕೀಳು ಭೇದ-ಭಾವಗಳನ್ನು ಛೇದಿಸಿ ಹೊರಬಂದ ಶ್ರಮಜೀವಿಗಳು, ಶೂದ್ರ ಶ್ರಮಿಕ ವರ್ಗದ ಜನಸಾಮಾನ್ಯರು ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ ಮಾನವತಾವಾದ (Humanism) ವನ್ನು ಪ್ರತಿಪಾದಿಸಿ, ತಮ್ಮ ನಡೆ-ನುಡಿಗಳೊಂದಿಗೆ ಅನುಷ್ಠಾನಗೊಳಿಸಿ, ಶಿವಶರಣರೆಂದು ಚರಿತ್ರೆಯಲ್ಲಿ ದಾಖಲಾದರು. ಕೀಳು ಕುಲ ಜಾತಿಗೆ ಸೇರಿದ್ದ, ಚರ್ಮ ಹದ ಮಾಡುವ ಕಾಯಕ ಸ್ವೀಕರಿಸಿದ್ದ ಡೋಹರ ಕಕ್ಕಯ್ಯ ಮಹಾನುಭಾವಿ ಶಿವಶರಣನಾಗಿದ್ದು, ಆ ಕಾಲದ ಮಾನವತಾವಾದಕ್ಕೆ ಸಿಕ್ಕ ಐತಿಹಾಸಿಕ ಮಾದರಿ ವಿಜಯವಾಗಿದೆ.

ಶರಣ ಧರ್ಮದಲ್ಲಿಯೇ ಜೀವಿಸಿದ ಡೋಹರ ಕಕ್ಕಯ್ಯ : ಧರ್ಮಗುರು ಬಸವಣ್ಣನ ನೇತೃತ್ವದ ಶರಣ ಧರ್ಮ ಮತ್ತು ಸಂಸ್ಕೃತಿ ಅಸ್ತಿತ್ವದಲ್ಲಿದ್ದ ಜಾತಿ, ಕುಲ, ಗೋತ್ರ, ಜಾತೀಯತೆ, ಅಸ್ಪೃಶ್ಯತೆ, ನೀಚಕುಲ, ಸಾಮಾಜಿಕ ಮೇಲು-ಕೀಳು ಮುಂತಾದ ಅಮಾನವೀಯ ಹೀನ ಗುಣಗಳನ್ನು ಮೀರಿ; ಮಾನವೀಯತೆ, ಸಾಮಾಜಿಕ ಸಮಾನತೆ, ವೈಯಕ್ತಿಕ ಸಮಾನ ಧಾರ್ಮಿಕ ಪೂಜಾವಿಧಾನ, ಸಾಮಾಜಿಕ ಧಾರ್ಮಿಕ ಹಕ್ಕುಗಳನ್ನು ನೀಡಿ, ವಿಶ್ವ ಸಹೋದರತೆಯನ್ನು ಮೈಗೂಡಿಸಿಕೊಂಡು ವಿಶ್ವಧರ್ಮವಾಗಿ ಇವನಾರವ; ಇವನಾರವ ಎನ್ನದೇ, ಇವ ನಮ್ಮವ ಇವ ನಮ್ಮವ ಎನ್ನುವ ಸಾಮಾಜಿಕ ಸಮಾನತೆಯನ್ನು ಸರ್ವರಿಗೂ ನೀಡಿತು. ಇದರ ಕೀರ್ತಿಯಿಂದ ಪ್ರಭಾವಿತರಾದ ಚರ್ಮ ಹದ ಮಾಡುವ ಚಮ್ಮಾರ ಕಾಯಕದ ಡೋಹರ ಕಕ್ಕಯ್ಯ ಮತ್ತು ಪತ್ನಿ ಮಲ್ಲಮ್ಮ ದಂಪತಿ ಕಲ್ಯಾಣಕ್ಕೆ ಆಗಮಿಸಿ, ಶರಣ ಧರ್ಮ ದೀಕ್ಷೆ ಸ್ವೀಕರಿಸಿದರು. ಬಸವಣ್ಣನಿಗಿಂತ ವಯಸ್ಸಿನಲ್ಲಿ ಹಿರಿಯರಾದ ಡೋಹರ ಕಕ್ಕಯ್ಯ ದಂಪತಿಯನ್ನು ಶರಣ ಸಂಕುಲ ಹರ್ಷೋದ್ಘಾರಗಳಿಂದ ಸ್ವಾಗತಿಸಿತು. ಬಸವಣ್ಣ, ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ, ಕಾಯಕಯೋಗಿ ಸಿದ್ಧರಾಮ, ಮಡಿವಾಳ ಮಾಚಿದೇವ, ಬಸವೋತ್ತರ ಯುಗದ ಷಣ್ಮುಖಸ್ವಾಮಿ ಮುಂತಾದವರು ತಮ್ಮ ವಚನಗಳಲ್ಲಿ ಇವರನ್ನು ಸ್ಮರಿಸಿದ್ದಾರೆ. ಡೋಹರ ಕಕ್ಕಯ್ಯನೂ ವಚನಕಾರನಾಗಿದ್ದು ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ, ಅನ್ಯಾಯದ ಧರ್ಮಾಚರಣೆಗಳು, ಅಧರ್ಮದ ಸಂಪಾದನೆ, ಇತ್ಯಾದಿಗಳನ್ನು ಖಂಡಿಸಿ ವಚನಗಳನ್ನು ರಚಿಸಿದ್ದಾನೆ. ಈತನ ವಚನಗಳು ಸಮಗ್ರ ವಚನ ಸಂಪುಟದಲ್ಲಿ ಪ್ರಕಟಗೊಂಡಿವೆ.

ಡೋಹರ ಕಕ್ಕಯ್ಯನ ಮೂಲ ಮತ್ತು ಕಲ್ಯಾಣಕ್ಕೆ ಆಗಮನ : ಸಾಮಾಜಿಕ ಶ್ರೇಣಿಯಲ್ಲಿ ಅತ್ಯಂತ ಕೆಳಸ್ತರಕ್ಕೆ ಸೇರಿದ ಶೂದ್ರಾತಿಶೂದ್ರ, ಅಂತ್ಯಜ, ಶ್ವಪಚ, ಅಸ್ಪೃಶ್ಯ, ಕೀಳು ಜಾತಿ ಎನಿಸಿಕೊಂಡ ಡೋಹರ ಕುಲದಲ್ಲಿ ಚರ್ಮ ಹದ ಮಾಡಿ ಪಾದರಕ್ಷೆ ಇತರೆ ಸಾಮಗ್ರಿಗಳನ್ನು ಸಿದ್ಧಪಡಿಸಿ ಜೀವನ ಮಾಡುವ ಚಮ್ಮಾರ ಕುಟುಂಬದಲ್ಲಿ ಕಕ್ಕಯ್ಯ ಜನಿಸಿದನು. ಮಾಳ್ವ ದೇಶದ ಬೆಜವಾಡ ಈತನ ಮೂಲ ಸ್ಥಳ. ಈತನ ಪೂರ್ವಜರ ಕುರಿತು ಹೆಚ್ಚೇನೂ ತಿಳಿದಿಲ್ಲ. ಮರಾಠ ಪ್ರಾಂತ್ಯದವನು ಎಂಬ ಅಭಿಪ್ರಾಯಗಳೂ ಇವೆ. ದನದ ಚರ್ಮ ಹದ ಮಾಡುವವರನ್ನು ಮರಾಠಿಯಲ್ಲಿ ಘೋರ, ಡೋಹರ ಎನ್ನುತ್ತಾರೆ. ಬಸವಣ್ಣ ಮತ್ತು ಇತರೆ ಶರಣರಿಗೆ ಈತನು ಹಿರಿಯ ಸಮಕಾಲೀನನಾಗಿದ್ದು, ಬಸವಣ್ಣನ ಶರಣ ಧರ್ಮ, ಮಾನವತಾವಾದ, ಸತ್ಯ ಶುದ್ಧ ಕಾಯಕ ದಾಸೋಹ ತತ್ವ, ಧಾರ್ಮಿಕ ಸಮಾನತೆ, ಅಸ್ಪೃಶ್ಯತೆ, ಅಮಾನವೀಯ ಧರ್ಮಾಚರಣೆಗಳ ತಿರಸ್ಕಾರ ಮುಂತಾದ ಉದಾತ್ತ ಗುಣಗಳಿಗೆ ಮನಸೋತು ಕಲ್ಯಾಣಕ್ಕೆ ಆಗಮಿಸಿ ಬಸವಣ್ಣ, ಅಲ್ಲಮಪ್ರಭು, ಸಿದ್ದರಾಮ, ಚೆನ್ನಬಸವಣ್ಣ, ನುಲಿಯ ಚಂದಯ್ಯ, ಬಿಬ್ಬಿ ಬಾಚಯ್ಯ, ಅಕ್ಕಮಹಾದೇವಿ ಮುಂತಾದ ಶರಣರ ಸಮ್ಮುಖದಲ್ಲಿ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿ, ಶರಣ ಧರ್ಮ ಪರಿಪಾಲಕನಾದನು. ಕಲ್ಯಾಣ ಪಟ್ಟಣಕ್ಕೆ ಸಮೀಪದಲ್ಲಿರುವ ತೊಗಲೂರು ಎಂಬಲ್ಲಿ ನೆಲೆಸಿ ಚರ್ಮ ಹದ ಮಾಡುವ ಡೋಹರ ಚಮ್ಮಾರ ಕಾಯಕದಲ್ಲಿ ಸತಿ ಮಲ್ಲಮ್ಮನೊಡನೆ ನಿರತನಾದನು. ಶರಣರ ಸಂಪರ್ಕದಿಂದ ಮಹಾಪ್ರಸಾದಿ, ಮಹಾನುಭಾವಿ ಕಕ್ಕಯ್ಯ ಎನಿಸಿಕೊಂಡನು.

ಸಾಮಾಜಿಕ ಉಚ್ಛ-ನೀಚ, ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯಗಳಿಲ್ಲದ ಸರ್ವ ಸಮಾನತೆಯ ಜೀವನ ಕಂಡು ಭೂಲೋಕದಲ್ಲಿ ಸ್ವರ್ಗವೇ ಧರೆಗಿಳಿದಂತಾಯಿತು. ಇದನ್ನು ಸಹಿಸದ ಪುರೋಹಿತ ಶಾಹಿ ಕುಲಗೇಡಿಗಳು ಕಲ್ಯಾಣ ಕ್ರಾಂತಿಗೆ ಕಾರಣರಾದರು. 

ಶಿವಶರಣರಿಂದ ಸ್ತುತಿಸಲ್ಪಟ್ಟ ಡೋಹರ ಕಕ್ಕಯ್ಯ : ಕಲ್ಯಾಣ ದಲ್ಲಿ ಶರಣ ಕಕ್ಕಯ್ಯನವರ ಜೀವನ ಇತರರಿಗೆ ಮಾದರಿಯಾಗು ವಂತಿತ್ತು. ಸದಾ ಗುರು-ಲಿಂಗ-ಜಂಗಮ, ಕಾಯಕ ದಾಸೋಹ ಪ್ರೇಮಿಯಾಗಿದ್ದ ಈತನ ನಡೆ-ನುಡಿಯನ್ನು ಸರ್ವ ಶರಣ ಸಂಕುಲ ಕೊಂಡಾಡಿತ್ತು. ಈತನನ್ನು ಮೆಚ್ಚಿದ ಆಧ್ಯ ವಚನಕಾರ ದೇವರ ದಾಸಿಮಯ್ಯ, ಕೀಳು ಡೋಹರ ಕಕ್ಕ, ಕೀಳು ಮಾದಾರ ಚೆನ್ನ, ಕೀಳು ಓಹಿಲದೇವ, ಕೀಳು ಉದ್ಧಟಯ್ಯ ಕೀಳಿಂಗಲ್ಲದೆ ಹಯನು ಕರೆಯದು ನೋಡಾ ರಾಮನಾಥ ಎನ್ನುವ ಮೂಲಕ ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯನವರು ಜಾತಿ ಕುಲದಲ್ಲಿ ಕೀಳಲ್ಲ, ಇವರು ಶಿವನಿಗೆ ಅಮೃತವನುಣಬಡಿಸಿದವರು ಎಂದಿದ್ದಾನೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಕಕ್ಕಯ್ಯನನ್ನು ಕೊಂಡಾಡಿದ್ದಾರೆ. ಭಕ್ತಿಯಿಲ್ಲದ ಬಡವ ನಾನಯ್ಯ; ಕಕ್ಕಯ್ಯನ ಮನೆಯಲ್ಲೂ ಬೇಡಿದೆ; ಚೆನ್ನಯ್ಯನ ಮನೆಯಲ್ಲೂ ಬೇಡಿದೆ; ದಾಸಯ್ಯನ ಮನೆಯಲ್ಲೂ ಬೇಡಿದೆ; ಎಲ್ಲಾ ಪುರಾತನರು ನೆರೆದು ಭಕ್ತಿಯ ಭಿಕ್ಷೆಯನ್ನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು ನೋಡಾ ಕೂಡಲಸಂಗಮದೇವಾ ಎಂದಿದ್ದಾರೆ. ಇನ್ನೊಂದು ವಚನದಲ್ಲಿ ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ; ಚಿಕ್ಕಯ್ಯನೆಮ್ಮಯ್ಯ ಕಾಣಿರಯ್ಯಾ, ಅಣ್ಣನು ನಮ್ಮ ಕಿನ್ನರಿ ಬ್ರಹ್ಮಯ್ಯ ಎನ್ನನೇತಕ್ಕರಿಯಿರಿ ಕೂಡಲಸಂಗಯ್ಯ ಎನ್ನುವ ಮೂಲಕ ಚೆನ್ನಯ್ಯ, ಕಕ್ಕಯ್ಯ, ಬ್ರಹ್ಮಯ್ಯ ಮುಂತಾದವರ ಕುಲಕ್ಕೆ ಅಂಟಿದ್ದ ಕೀಳೆಂಬ ಸೂತಕವನ್ನು ಕಳೆದು ಹಿರಿದಾಗಿಸಿದ ಸಾಮಾಜಿಕ ಕ್ರಾಂತಿಯ ನೇತಾರನಾಗಿದ್ದಾನೆ. ಶರಣ ವೈದ್ಯ ಸಂಗಣ್ಣನು ಕಕ್ಕಯ್ಯನಿಗೆ ಕಾಮಧೇನು ಎಂದು ಸಾರಿ ಕಕ್ಕಯ್ಯನ ಶರಣ ಧರ್ಮವು ಕಾಮಧೇನು ಆಗಿತ್ತು ಎಂದಿದ್ದಾನೆ. ಇದೇ ರೀತಿ ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಚೆನ್ನಬಸವಣ್ಣ ಮುಂತಾದ ಶರಣರು ಕಕ್ಕಯ್ಯನನ್ನು ತಮ್ಮ ವಚನಗಳಲ್ಲಿ ಸ್ತುತಿಸಿದ್ದಾರೆ.

ಡೋಹರ ಕಕ್ಕಯ್ಯನವರ ವಚನಗಳು : ವಚನಗಳ ರಚನೆ ಶರಣ ಧರ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಅನುಭವ ಮಂಟಪ ಎಂಬ ವಿಶ್ವದ ಪ್ರಥಮ ಬಯಲು ಸಂಸತ್ತು ಶಿವಶರಣರ ಚಿಂತನಾ ಅನುಭಾವದ ವೇದಿಕೆಯಾಗಿತ್ತು. ಕಕ್ಕಯ್ಯನವರೂ ಈ ಚಿಂತನಾ ಗೋಷ್ಠಿಗಳಲ್ಲಿ ಭಾಗವಹಿಸಿ, ತಮ್ಮ ವಿಚಾರಧಾರೆಗಳನ್ನು ಮಂಡಿಸಿದ್ದರು. ಗುರು- ಲಿಂಗ-ಜಂಗಮ, ಕಾಯಕ ದಾಸೋಹದ ಪಾವಿತ್ರ್ಯತೆಯನ್ನು ಧಾರ್ಮಿಕ-ಸಾಮಾಜಿಕ ಸಮಾನತೆಯನ್ನು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ. ಅಭಿನವ ಮಲ್ಲಿಕಾರ್ಜುನ ಎಂಬ ನಾಮಾಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ. ಇದುವರೆಗೂ ಒಂಭತ್ತು ವಚನಗಳು ದೊರೆತಿವೆ. ಹುಟ್ಟಿದ ಕೀಳು ಜಾತಿ ಎಂಬ ಸೂತಕವ ಕಳೆದು ಲಿಂಗದೀಕ್ಷೆಯ ಶರಣ ಧರ್ಮದ ಸಮಾನತೆಯನ್ನು ಡೋಹರ ಕಕ್ಕಯ್ಯ ತನ್ನ ವಚನಗಳಲ್ಲಿ ಕೊಂಡಾಡಿದ್ದಾನೆ.

ಎನ್ನ ಕಷ್ಟಕುಲದಲ್ಲಿ ಹುಟ್ಟಿಸಿದೆಯಯ್ಯಾ, ಎಲೆ ಲಿಂಗ ತಂದೆ. ಕೆಟ್ಟೆನಯ್ಯಾ, ನಿಮ್ಮ ಮುಟ್ಟಿಯೂ ಮುಟ್ಟದಿಹನೆಂದು, ಎನ್ನ ಕೈ ಮುಟ್ಟದಿರ್ದಡೆ ಮನಃ ಮುಟ್ಟಲಾಗದೇ? ಅಭಿನವ ಮಲ್ಲಿಕಾರ್ಜುನಾ ಎಂದಿದ್ದಾನೆ. ಆಸೆಯಾಮಿಷವಳಿದು, ಹುಸಿ ವಿಷಯಂಗಳೆಲ್ಲಾ ಇಂಗಿ, ಸಂಶಯ ಸಂಬಂಧ ನಿಸ್ಸಂಬಂಧ ವಾಯಿತಯ್ಯಾ, ಎನ್ನ ಮನದೊಳಗೆ ಘನ ಪರಿಣಾಮವ ಕಂಡು ಮನ ಮಗ್ನವಾಯಿತ್ತಯ್ಯಾ. ಅಭಿನವ ಮಲ್ಲಿಕಾರ್ಜುನಾ, ಪ್ರಭುದೇವರ ಕರಣದಿಂದಾನು ಬದುಕಿದೆನು. ಎಂದು ಹೇಳುವ ಮೂಲಕ ಶರಣ ಸಂಕುಲ ತನ್ನನ್ನು ಎತ್ತಿಕೊಂಡು ಮುದ್ದಾಡಿ, ಶರಣ ಶ್ರೇಷ್ಠ ಮಹಾನುಭಾವಿ, ಮಹಾಪ್ರಸಾದಿ ಸ್ಥಲ ನೀಡಿ ಉನ್ನತಿಗೇರಿಸಿದ ಪರಿಯನ್ನು ಕೊಂಡಾಡಿದ್ದಾನೆ. ಇಂತಹ ಸಾಮಾ ಜಿಕ ಪರಿವರ್ತನೆ ಪ್ರಪಂಚದ ಶ್ರೇಷ್ಠ ಪ್ರಾಯೋಗಿಕ ಚಳುವಳಿ ಯಾಗಿದೆ. ತನ್ನ ಇನ್ನೊಂದು ವಚನದಲ್ಲಿ ಎನ್ನ ಕಷ್ಟಕುಲದ ಸೂತಕ ನಿಮ್ಮ ಹಸ್ತ ಮುಟ್ಟಿದಲ್ಲಿ ಹೋಯಿತು. ತಟ್ಟಿದ ಮುಟ್ಟಿದ ಸುಖಂಗಳನೆಲ್ಲವ ಲಿಂಗ ಮುಖಕ್ಕೆ, ಅರ್ಪಿಸಿದೆನಾಗಿ ಎನ್ನ ಪಂಚೇಂದ್ರಿಯಗಳು ಬಯಲಾದವು. ಎನ್ನಂತರಂಗದಲ್ಲಿ ಜ್ಞಾನ ಜ್ಯೋತಿಯೆಡೆಗೊಂಡುದಾಗಿ, ಒಳಗೂ ಬಯಲಾಗಿತ್ತು: ಸಂಸಾರದ ಸಂಗದ ಅವಸ್ಥೆಯ ಮೀರಿದ ಕ್ರೀಯೆಯಲ್ಲಿ ತರಹರ ವಾಯಿತ್ತಾಗಿ ಬಹಿರಂಗ ಬಯಲಾಗಿತ್ತು ಅಭಿನವ ಮಲ್ಲಿಕಾರ್ಜುನಾ, ನಿಮ್ಮ ಮುಟ್ಟಿದ ಕಾರಣ ನಾನೂ ಬಯಲಾದೆ. ಎಂದೆನ್ನುವ ಶರಣ ಕಕ್ಕಯ್ಯ, ಶರಣ ಧರ್ಮ ದೀಕ್ಷೆ, ಲಿಂಗ ದೀಕ್ಷೆ ಪಡೆದು ಮಹಾತ್ಮನೆನಿ ಸಿಕೊಂಡಿದ್ದಾನೆ. ಆದ್ದರಿಂದಲೇ ಬಸವಣ್ಣ ನವರು ಡೋಹರ ನೆಂಬೆನೆ ಕಕ್ಕಯ್ಯನ ಎಂದು ಉಧ್ಘರಿಸಿ ತಲುಪಿದ ಶರಣ ಧರ್ಮದ ಧಾರ್ಮಿಕ ಅಧ್ಯಾತ್ಮಿಕ ಶಿಖರವನ್ನು ಕೊಂಡಾಡಿದ್ದಾರೆ.

– ಪ್ರೊ. ಡಾ. ಮಲ್ಲಿಕಾರ್ಜುನ ಜವಳಿ, ದಾವಣಗೆರೆ.
94818 71936

error: Content is protected !!