ಸರ್ವಜ್ಞ ಎಲ್ಲರೊಳಗಿನ ಸಹೃದಯಿ ಕವಿ

ಸರ್ವಜ್ಞ ಎಲ್ಲರೊಳಗಿನ ಸಹೃದಯಿ ಕವಿ

ಕನ್ನಡ ಸಾಹಿತ್ಯದಲ್ಲಿ ಜನಪದ ವರಕವಿ, ದರ್ಶನಿಕ, ತತ್ವಜ್ಞಾನಿ, ತ್ರಿಪದಿಯ ಬ್ರಹ್ಮ, `ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಹೇಳದ ಮಾತಿಲ್ಲ’ ಎಂಬ ಉಪಮಾನಗಳಿಗೆ ಕಾರಣರಾದ ಸರ್ವಜ್ಞ ಒಬ್ಬ ನಾಡು ಕಂಡ ಅತ್ಯದ್ಭುತ ಕವಿ. ಅವರ ಮೂರು ಸಾಲಿನ ಪದ್ಯಗಳು ಬದುಕಿನ ಅಗಾಧವಾದ ಅರ್ಥವನ್ನು ಒಳಗೊಂಡಿರುವುದು ವಿಶೇಷ

`ತ್ರಿಪದಿ’ ಎಂಬ ವಿಶಿಷ್ಟ ಪ್ರಕಾರದ ಸಾಹಿತ್ಯ ರಚನೆಗೆ ಕಾರಣರಾದ ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಅಬ್ಬಲೂರು ಎಂಬ ಹಳ್ಳಿ. ಅವರ ಹೆತ್ತಮ್ಮ ಕುಂಬಾರ ಮಾಳೆ. ಅವರ ಮೂಲ ಹೆಸರು ಪುಷ್ಪದತ್ತ. ಸರ್ವಜ್ಞನವರ ಬಗ್ಗೆ ಹೆಚ್ಚಿನ ವೈಯಕ್ತಿಕ ಮಾಹಿತಿ ನಮಗೆ ಲಭ್ಯವಿರದಿದ್ದರೂ ಅವರ ತ್ರಿಪದಿಗಳು ಅವರ ವ್ಯಕ್ತಿತ್ವದ ಪ್ರತೀಕವಾಗಿ ನಮಗೆ ಲಭ್ಯವಿರುವುದು ನಮ್ಮ ಭಾಗ್ಯವೇ ಸರಿ.

ಸರ್ವಜ್ಞ ತ್ರಿಪದಿಗಳ ಸಾರ

ಸರ್ವಜ್ಞ ತ್ರಿಪದಿಗಳು ಜಾತಿ ಮತ್ತು ಧರ್ಮ ಸಂಘರ್ಷದ ವಿರುದ್ಧ ಕಿಡಿ ಕಾರಿದ, ಮೂಢನಂಬಿಕೆ, ಶೋಷಣೆಗಳನ್ನು ಕಟುವಾಗಿ ಟೀಕಿಸಿದ, ವಿಶ್ವ ಮಾನವತೆಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಸರ್ವಜ್ಞನ ತ್ರಿಪದಿಗಳು ಸಮಾಜಕ್ಕೆ ಸಾರ್ವಕಾಲಿಕ ದಿವ್ಯ ಔಷಧಿಗಳಾಗಿವೆ.

ಸರ್ವಜ್ಞನೆಂಬುವನು ಗರ್ವದಿಂದಾದವನೆ

ಸರ್ವರೊಳೊಂದೊಂದು ನುಡಿಗಲಿತುವಿದ್ಯದ

ಪರ್ವತವೇ ಆದ ಸರ್ವಜ್ಞ

`ಸರ್ವಜ್ಞ’ ಎಂದರೆ `ನಾನು ಎಲ್ಲಾ ತಿಳಿದವನು’ ಎಂಬ ಅರ್ಥವಲ್ಲ, `ಸರ್ವರೊಳು ಒಂದೊಂದು ನುಡಿ ಕಲಿತವನು’ ಎಂಬ ಅರ್ಥವು ಕಲಿಕೆಗಿರುವ ಸಾಮಾಜಿಕ, ಜಾನಪದೀಯ ಆಯಾಮವನ್ನು ಎತ್ತಿ ತೋರಿಸುತ್ತದೆ. ವಿದ್ಯೆಯ ಪರ್ವತವಾಗುವುದು ನಾವೇನೋ ಅಪೂರ್ವವಾದದ್ದನ್ನು ಕಲಿತು ಜ್ಞಾನ ಸಿದ್ಧಿಸಿಕೊಳ್ಳುವುದರಲ್ಲಿಲ್ಲ, ಎಲ್ಲರೊಳು ಒಂದಾಗಿ, ಎಲ್ಲರನ್ನು ಗುರುವಾಗಿ ಕಂಡು, ಎಲ್ಲರಲ್ಲೂ ಇರುವ `ವಿದ್ಯೆ’ಯನ್ನು ಗ್ರಹಿಸಿ, ಸಂಗ್ರಹಿಸಿ ನಮ್ಮದಾಗಿಸಿಕೊಂಡಾಗಲೇ ಪುಸ್ತಕಗಳ ಓದು, ಶಾಲಾ – ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಣಕ್ಕಿಂತ ಭಿನ್ನವಾದ ಸಹಜ, ಸಾಮುದಾಯಿಕ ಕಲಿಕೆ, ತಿಳಿವಳಿಕೆಗೆ ಮಹತ್ವ ನೀಡುವ ಯಾವುದೇ ವ್ಯಕ್ತಿಯು ಅಹಂಕಾರಕ್ಕೆ ದುರ್ಲಭವಾದ ಸ್ವಚ್ಛ ಜ್ಞಾನವನ್ನು ಪಡೆಯುವನೆಂಬ ಮಾರ್ಮಿಕವಾದ ಅರಿವು ಈ ಎರಡೇ ಸಾಲುಗಳಲ್ಲಿರುವುದು ನಿಜಕ್ಕೂ ಸೋಜಿಗವೇ ಅಲ್ಲವೇ?

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಪೇಳಿದರೆ

ಗೋರ್ಕಲ್ಲ ಮೇಲೆ ಮಳೆ ಸುರಿದರಾ ಕಲ್ಲು

ನೀರ್ಕೊಂಬುದುಂಟೆ ಸರ್ವಜ್ಞ

ಹಿರಿಯರಂತೂ ಮಕ್ಕಳನ್ನು ಕುರಿತು ಈ ಮಾತನ್ನು ಹೇಳುವುದು ಎಲ್ಲರ ಮನೆಯಲ್ಲಿ ಸಾಮಾನ್ಯವೇ. ಏನು ಮಾಡುವುದು? ಅನುಭವಕ್ಕೆ ಬರದ ಹೊರತು ಯಾವ ಬುದ್ಧಿಮಾತೂ ಪ್ರಭಾವ ಬೀರುವುದಿಲ್ಲವಲ್ಲ? ನಾವೇ ಹೋಗಿ, ಎಡವಿಬಿದ್ದು ಪೆಟ್ಟಾದಾಗಲೇ ಜಾಗರೂಕತೆ ಕಲಿಯುವುದರಲ್ಲಿ ತಪ್ಪೇನಿದೆ? ಅನುಭವ ಮಾತ್ರವೇ ಮನುಷ್ಯನನ್ನು ಕಲ್ಲಿನಂತಹ ಜಡತ್ವದಿಂದ ಮೇಲೆತ್ತಬಹುದು. ಆಗ ಮಾತ್ರವೇ ಬದುಕಿನ ‘ನೀರನ್ನು’ ಹೀರಬಲ್ಲಂತಹ ಸಾಮರ್ಥ್ಯ ಉಂಟಾಗುವುದಲ್ಲದೆ ಬರೀ ಮಾತಿನಿಂದ ಯಾವ ಕಲ್ಲಿಗೆ ತಾನೇ ಶಾಪ ವಿಮೋಚನೆಯಾದೀತು?

ಹೀಗೆ ಸರ್ವಜ್ಞ ರವರ ತ್ರಿಪದಿಗಳ ಸಾಲು ಮೂರೇ ಆದರೂ ಅವುಗಳು ನೀಡುವ ಅರ್ಥ ಸಾವಿರಾರು ಪಟ್ಟು ಇದೆ .

– ಬಸವಾರಾಜ ಕರುವಿನ, ಬಸವನಾಳು

error: Content is protected !!