ಪವಾಡ ಪುರುಷ ಸಂತ ಶ್ರೀ ಸೇವಾಲಾಲ್ ಮಹಾರಾಜರು

ಪವಾಡ ಪುರುಷ ಸಂತ ಶ್ರೀ ಸೇವಾಲಾಲ್ ಮಹಾರಾಜರು

ದೇಶದ ಬಂಜಾರ ಸಮುದಾಯದ ಏಕೈಕ ಸಂತ ಶ್ರೀ ಸೇವಾಲಾಲ್‌ ಮಹಾರಾಜರ 286ನೇ  ಜಯಂತ್ಯೋತ್ಸವ ಕಾರ್ಯಕ್ರಮವು ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಇಂದು  ಮತ್ತು ನಾಳೆ ನಡೆಯಲಿದೆ.

ಸೌರವ್ಯೂಹದಲ್ಲಿ ರವಿತೇಜ ಪ್ರಕಾಶಿಸುವಂತೆ ಬಂಜಾರ ಸಮುದಾಯದ ರವಿತೇಜ ಸಂತ ಶ್ರೀ ಸೇವಾಲಾಲ್ ಮಹಾರಾಜರು. ಇವರು ಒಬ್ಬ ಭಾರತೀಯ ಸಾಮಾಜಿಕ ಸುಧಾರಕ ಮತ್ತು ಸಮುದಾಯದ ನಾಯಕರಾಗಿದ್ದರು ಮತ್ತು ಗೋರ್ ಬಂಜಾರ ಸಮುದಾಯದಿಂದ ಅಧ್ಯಾತ್ಮಿಕ ಗುರು ಎಂದು ಗೌರವಿಸಲ್ಪಡುವ  ಗುರು  ಸೇವಾಲಾಲ್ ಮಹಾರಾಜರು.  18ನೇ (1739-1806) ಶತಮಾನದಲ್ಲಿ ತಮ್ಮ ಬೋಧನೆಯ ಮೂಲಕ ಜಗತ್ತಿಗೇ ಬೆಳಕನ್ನು ನೀಡಿದಂತಹ ಮಹಾ ಚೇತನ.                       

ದೇಶದ ಬಂಜಾರ ಸಮುದಾಯದ ಏಕೈಕ ಸಂತ ಶ್ರೀ ಸೇವಾಲಾಲ್‌ರ 286ನೇ  ಜಯಂತ್ಯೋತ್ಸವ ಫೆಬ್ರವರಿ 13 ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ (ಭಾಯಗಡ, ಸೂರಖಂಡ್) ) ದಲ್ಲಿ ನಡೆಯುತ್ತದೆ. 

ಈ ಸಂತರ ಬಗ್ಗೆ ಅನೇಕ ಐತಿಹ್ಯಗಳಿವೆ ನ್ಯಾಮತಿ  ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮ ನಾಯಕ್ ಮತ್ತು ಧರ್ಮಿಣಿ ಬಾಯಿ ಸಾತ್ವಿಕ ದಂಪತಿ ವಾಸವಿದ್ದರು. ಈ ದಂಪತಿಗಳಿಗೆ ಮದುವೆಯಾಗಿ 12 ವರ್ಷಗಳವರೆಗೆ  ಮಕ್ಕಳಾಗದ ಕಾರಣ, ಭೀಮನಾಯಕರು ತಪಸ್ಸನ್ನು ಮಾಡುವುದರ ಮೂಲಕ, ಜಗನ್ಮಾತೆಗೆ ಹರಕೆ ಹೊತ್ತು ಕೊಂಡಾಗ ಜಗನ್ಮಾತೆ ಶ್ರೀ ಮರಿಯಮ್ಮದೇವಿಯು ದರ್ಶನ ನೀಡಿ ವರವ ಕೊಟ್ಟ. ನಂತರ 1739, ಫೆಬ್ರವರಿ 15ರಂದು ಸಂತ ಶ್ರೀ ಸೇವಾಲಾಲ್ ರವರು ಜನ್ಮ ತಾಳುತ್ತಾರೆ. ಸೂರಗೊಂಡನಕೊಪ್ಪದಲ್ಲಿ  ಶ್ರೀ ಸೇವಾಲಾಲ್ ಮಹಾರಾಜರು ಅನೇಕ ಪವಾಡಗಳನ್ನು ಮಾಡಿದ್ದಾರೆ. 

ಬಾಲಕನಾಗಿ ಬೆಳೆಯುತ್ತಿದ್ದ ಸೇವಾ ಚಿನ್ನಿಕಟ್ಟೆ ಸುತ್ತಮುತ್ತ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ಸಹಪಾಠಿಗಳೊಂದಿಗೆ ಆಟ ವಾಡುತ್ತಾ ಪವಾಡಗಳನ್ನು ತೋರುತ್ತಿದ್ದರು ಕಲ್ಲಿನ ಬಂಡೆಯನ್ನು ನಗಾರಿಯನ್ನಾಗಿ ಭಾರಿಸುವುದು.   ಕೆಸರನ್ನು ಹುಗ್ಗಿ  (ಪಾಯಸ) ಯಾಗಿ, ನೀರನ್ನು ತುಪ್ಪ ಮಾಡಿ, ಯಜ್ಞ ಮಾಡುತ್ತಿದ್ದರು.  ಪ್ರತೀ ದಿನ ಹೋಮ ಮಾಡಿ, ದೇವರಿಗೆ ನೈವೇದ್ಯ ಮಾಡಿ ಗೆಳೆಯರಿಗೆ ಊಟ ಮಾಡಿಸುತಿದ್ದರು. ಎನ್ನುವ ಪ್ರತೀತ ಇದೆ. ಬ್ರಹ್ಮಚರ್ಯವನ್ನೆ’ ಪಾಲನೆ ಮಾಡಿ ಮಾನವ ಜನ್ಮ ಪವಿತ್ರವಾದದು ಅದನ್ನು ಹಾಳುಮಾಡಿಕೊಳ್ಳ ಬೇಡಿ, ಅಕ್ಷರ ಜ್ಞಾನದ ಮೂಲಕ ಮುಕ್ತಿಯನ್ನು ಪಡೆಯಿರಿ ಎಂದು ಸಾರಿದ ಗುರು, ದೇವಿ ಮರಿಯಮ್ಮರವರಿಂದ ದೊರೆತ ದಿವ್ಯ ಶಕ್ತಿಯನ್ನು ಬಳಸಿ  ಪವಾಡ ಮಾಡಿದ್ದಾರೆ.

ಬಂಜಾರರು  ಅಲೆಮಾರಿ ಜೀವನ ನಡೆಸುವ ಸಮುದಾಯಗಳನ್ನು ಉದ್ಧರಿಸಲು ದಿವ್ಯಶಕ್ತಿಯನ್ನು ಬಳಸಿದ ಸಂತ ಇವರು ಎಂಬ ಕಥೆಗಳು ಚಾಲ್ತಿಯಲ್ಲಿವೆ.     

ಮಹಾರಾಷ್ಟ್ರದ ಪೌರಗಡದಲ್ಲಿ (ಪೌರದೇವಿಯ ಸ್ಥಳ) ಶ್ರೀ ಸೇವಾಲಾಲರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ. ಶ್ರೀ ಸೇವಾಲಾಲರು ಬಂಜಾರ ಅಜ್ಞಾನ ದೂರ ಮಾಡಲು ಅವತರಿಸಿದ ದೈವಿ ಪುರುಷರು.      

ಹರಪ್ಪ ನಾಗರಿಕತೆಯಿಂದ ಬೆಳೆದು ಬಂದ ಬಂಜಾರರು ಸಾವಿರಾರು ವರ್ಷಗಳಿಂದ ಗ್ರಾಮ, ನಗರ ಜೀವನಗಳಿಂದ ದೂರವಿದ್ದು ಅಜ್ಞಾನ ಅಂಧಕಾರಗಳಿಂದ ಅರಣ್ಯ ವಾಸಿ ಜೀವನ ನಡೆಸು ತ್ತಿದ್ದ ಇವರಿಗೆ ಶ್ರೀ ಸೇವಾಲಾಲ್ ಮಹಾರಾಜರ ಜನನದಿಂದ ಮುಕ್ತಿಯ ಮೆಟ್ಟಿಲಾಯಿತು.

ಬಂಜಾರರು ಈ ದೈವಿ ಪುರುಷನನ್ನು `ಮೋತಿ ವಾಳೋ’  `ಲಾಲ್ ಮೋತಿ’ಎಂದು ಕರೆಯುತ್ತಾರೆ. ಕಾರಣ ಮುಂಬಯಿಯ ‘ಸ್ಮಿತ್ ಭಾವುಚಾ ‘  ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿಕೊಂಡಿತು. ಇದನ್ನು ಶ್ರೀ ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿದ ವೀರರಾಗಿದ್ದರು. ಅದರ ಪ್ರತಿಯಾಗಿ ಪೋರ್ಚುಗೀಸರು ಗುರುಗೆ ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಅದಕ್ಕಾಗಿ ಇವರನ್ನು ‘ಮೋತಿವಾಳು’ ಎಂದು ಕರೆಯುತ್ತಾರೆ.

ಬುದ್ಧ, ಬಸವ, ಕಬೀರ, ಗುರುನಾನಕ್ ಮುಂತಾದ ಧಾರ್ಮಿಕ ಮಾನವತ ವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ದನಗಳನ್ನು ಮೇಯಿ ಸುತ್ತಾ, ದನಗಾಯಿ ಗೋಪಾಲನಾಗಿದ್ದ ಸೇವಾಲಾಲ್ ತಮ್ಮ ಜೀವನಾನುಭವದ ಮೂಲಕ ಗೌರವಯುತ  ಮಾತುಗಳಲ್ಲಿ ಸತ್ಯ, ಅಹಿಂಸೆ, ತ್ಯಾಗ, ಮಾರ್ಗಗಳನ್ನು ಪ್ರಕಾಶಗೊಳಿಸುವ ನಿಟ್ಟಿನಲ್ಲಿ ತಮ್ಮ ಬೋಧನೆಯನ್ನು ನಡೆಸಿದರು. ಒಂದು ಸಹೋದರತ್ವದ, ಭ್ರಾತೃತ್ವದ ಸಮಾಜವನ್ನು ನಿರ್ಮಿಸಲು  ಶ್ರಮಿಸಿದರು.                     

ಇಂತಹ  ಮಾನವತಾವಾದಿಯ ಜನ ಮತ್ತು ಜೀವನ ಮೌಲ್ಯಗಳು ಇಂದು ತಾಂಡಾಗಳಲ್ಲಿ ಜನಜನಿತವಾಗಿವೆ. ಹಲವಾರು ಅಜ್ಞಾನಗಳು, ಮೌಢ್ಯತೆಯ  ಪರಾಕಾಷ್ಠೆ ತಲುಪಿ ಅಂಧಕಾರದಲ್ಲಿ ಮುಳುಗಿರುವ ಸಂದರ್ಭದಲ್ಲಿ ಸಾಮಾನ್ಯ ಸರಳ ವ್ಯಕ್ತಿ ಸದ್ಗುರು ಶ್ರೀ ಸೇವಾಲಾಲ್  ಅನುಭವದ ಜ್ಞಾನ ನುಡಿಗಳು ಇಂದಿಗೂ ಮಾರ್ಗದರ್ಶಕವಾಗಿದೆ.                      

ನುಡಿಗಳು-ತತ್ವಗಳು :

ಸೇನ ಸಾಯಿವೇಸ್.       

ಜೀವ ಜನಗಾನಿನ ಸಾಯಿವೇಸ್.     

ಖೂಂಟಾ ಮುಂಗ್ರಿನ್ ಸಾಯಿವೇಸ್.     

ಕೊರೆ ಗೋರೂನಾ ಸಾಯಿವೇಸ್.  

ಕೀಡಾ ಮಕೋಡಾನ  ಸಾಯಿವೇಸ್’

ಅರ್ಥ : ಮನುಷ್ಯನಿಗೆ ಮಾತ್ರವಲ್ಲದೆ ಜೀವ ಜಂತುಗಳಿಗೆ ಕ್ರೀಮಿ ಕೀಟಗಳಿಗೆ ಒಳ್ಳೆಯದಾಗಲಿ ಎಂದು (ಇಲ್ಲಿ ತನ್ನ ಸ್ವಾರ್ಥಕ್ಕಿಂತ ಇಡೀ ಭೂಮಿಗೆ ಒಳ್ಳೆಯದನ್ನ ಬಯಸುತ್ತಾರೆ) ಹೇಳಿದ್ದಾರೆ.      

 `ಧನ್ ಧಾನೇತಿ  ಧಪಾಡೇಸ್’

ಅರ್ಥ: ಧರ್ಮದ ವ್ಯಾಖ್ಯಾನ ಮಾಡುತ್ತಾ ಸತ್ಯ, ಅಹಿಂಸೆ, ದಯೆ,ಕರುಣೆ  ಪ್ರಜ್ಞೆಗಳನ್ನು ಪವಿತ್ರವೆಂದು ಒಪ್ಪಿಕೊಂಡು ಯಾರು ಕರ್ತವ್ಯವನ್ನು ಮಾಡುತ್ತಾರೋ ಅವರೇ ಧರ್ಮಿಗಳು ಆದ್ದರಿಂದ `ಪ್ರಕೃತಿಯೇ ಧರ್ಮ’ ಎಂದು ಸಾರಿದರು. ಮನೆಗಳು ಧನ, ಧಾನ್ಯಗಳಿಂದ ತುಂಬಿರಲಿ.                             

`ಬೊಲಜೋ ಮತ್ ಲುಚಿ (ಲಾಟಿ) ಲಬಾಡಿ’

ಅರ್ಥ:  ಸುಳ್ಳುಗಳನ್ನು ಯಾರು ನುಡಿಯಬಾರದು ಎಂದು ಹೇಳಿದರು ಸತ್ಯ ನುಡಿಯಿರಿ ಎಂದು ಜಗತ್ತಿಗೇ ಸಾರಿದರು.    

`ಮತಲೋ ಜೀವ ಕಾಡೋಮತ್  ಕೋಯಿ  ಲೋಯಿ’   

ಅರ್ಥ :ಯಾವುದೇ ಜೀವಿಯನ್ನು ಕೊಲ್ಲಬೇಡ, ಅದರ ರಕ್ತವನ್ನು ತೆಗೆಯಬೇಡ (ಅಹಿಂಸೆಯನ್ನು ಪ್ರತಿಪಾದಿಸಿದರು)            

ಚೋರಿ ಮತ್ತ ಕರೋ.  

ಕರುಯೇ ಚೋರಿ ಖಾಯಂ ಕೋರಿ 

ಹಾತೆ ಮಾಯಿ ಹತಕಡಿ, ಪಗಮಮಾಯಿ 

ಬೇಡಿ ಡೋರಿ ಡೋರಿ ಹಿಂಡಿಯೇ…      

ಅರ್ಥ : ಕಳ್ಳತನ ಮಾಡಬೇಡಿ ಕಳ್ಳತನ ಮಾಡುವವರನ್ನು ಬೇಡಿ ಹಾಕಿ ಓಡಾಡಿಸುತ್ತಾರೆ. 

`ದಾರೂ, ಗಾಂಜಾ ಮತ್ ಪೀವೊ’   

ಅರ್ಥ : ಮದ್ಯಪಾನದಿಂದ ದೂರವಿರಿ ವ್ಯಸನ ಮುಕ್ತರಾಗಿ.

`ಜೋರ್ ಜುಲೂಮ್’

ಗೋರ್ ಗರೀಬ ದಾಂಡನ್ ಖಾಯೇ 

ವೋರಿ ಸಾತ್ ಪೀಡೀಪರ ದಾಗ್ ಲಗಜಾಯೆ!

ವಂಶ ಪರ ದೀವೋಕೋನಿ ರೀಯೇ ,

ಅರ್ಥ : ಬಡವರಿಗೆ ಎಂದು ದಂಡಹಾಕಬೇಡಿ ನೋವು ಕೊಡಬೇಡಿ. ಅವರ ಶಾಪ ತಟ್ಟುತ್ತದೆ.

`ಕಾಮಾ ಕ್ರೋಧೇರಿ ಧೂಣಿಬಾಳೋ 

ಸತ್ಯಧರ್ಮೇನ ಆಂಗ ಚಲಾವೋ! 

ಭೂಕ ಜೇನ ಅನ್ನ ಖರಾಯೋ 

ತರಸ ಜೇನ ಪಾಣಿ ಪರಾಯೋ!’

ಅರ್ಥ : ತಮ್ಮ ಜೀವನದಲ್ಲಿ ಅರಿಷಡ್ವರ್ಗಗಳನ್ನು ಸುಟ್ಟು ಹಾಕಿ. ಸತ್ಯ ಧರ್ಮವನ್ನು ಮುನ್ನಡೆಸಿ, ಹಸಿದವರಿಗೆ ಅನ್ನ ನೀಡಿ ಬಾಯಾರಿದವರಿಗೆ ಜಲ ಪ್ರಾಪ್ತಿ ಮಾಡಿ. ಹೆಣ್ಣು ಮಕ್ಕಳನ್ನು ದೇವಿ ಯಂತೆ ಕಾಣಿ ಎಂದು ಬೋಧನೆ ಮಾಡಿರುವರು.

ಈ ಮೇಲಿನ ತತ್ವಗಳನ್ನು ಲೋಕಕ್ಕೆ ಸಾರಿದ ಮಹಾರಾಜರ ಜಯಂತಿ ಆಚರಣೆಯನ್ನು ಇಂದು ದೇಶಾದ್ಯಂತ ಆಚರಿಸುತ್ತಿದ್ದೇವೆ. ನಾವು ಇವರ ತತ್ವಗಳನ್ನು  ನಮ್ಮ ತನು ಮನದಲ್ಲಿ ಅಳವಡಿಸಿ ಕೊಳ್ಳಬೇಕು ಆಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ, ಎಲ್ಲರಿಗೂ
ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯ ಶುಭಾಷಯಗಳು. 

– ಕೆ. ಕೃಷ್ಣನಾಯ್ಕ 

ಸಹ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಶಾಲೆ,
ನ್ಯಾಮತಿ, ದಾವಣಗೆರೆ ಜಿಲ್ಲೆ

error: Content is protected !!