ನ್ಯಾಯನಿಷ್ಠೂರಿ, ಸರ್ವಶ್ರೇಷ್ಠ ಶರಣ: ಅಂಬಿಗರ ಚೌಡಯ್ಯ

ನ್ಯಾಯನಿಷ್ಠೂರಿ, ಸರ್ವಶ್ರೇಷ್ಠ ಶರಣ: ಅಂಬಿಗರ ಚೌಡಯ್ಯ

ಅಂಬಿಗರ ಚೌಡಯ್ಯ 12ನೇ ಶತಮಾನದ ವಚನಕಾರರಲ್ಲಿ ಒಬ್ಬ ಕ್ರಾಂತಿ ಪುರುಷ, ನಿಷ್ಠೂರ ಶರಣ. ಚೌಡಯ್ಯನೇ ಒಂದು ವಿಧ, ಮಿಕ್ಕ ಶಿವಶರಣರೇ ಒಂದು ವಿಧ. ಸಮಾಜದ ಸಂಗತಿಗಳ ವಿಡಂಬನೆಯನ್ನು ಅತ್ಯಂತ ಧೈರ್ಯವಾಗಿ, ಸಮರ್ಥವಾಗಿ ಹೇಳಿದ ಮೊದಲ ವಚನಕಾರ. ಶರಣರ ಆಂದೋಲನದಲ್ಲಿ ಸಕ್ರೀಯ ಪಾಲ್ಗೊಳ್ಳುವಿಕೆ, ಅನುಭವ ಮಂಟಪದಲ್ಲಿ ಶರಣ ರನ್ನೊಳಗೊಂಡಂತೆ ಯಾರ ಮುಲಾಜಿಗೂ ಒಳಗಾಗದೇ ತನ್ನ ಅಭಿಪ್ರಾಯವನ್ನು ನೇರವಾಗಿ, ನಿರ್ಭಯವಾಗಿ ವ್ಯಕ್ತ ಪಡಿಸಿದ ಧೈರ್ಯವಂತ ಶರಣ. ಶ್ರಮ ಜೀವಿಗಳ ಶೋಷಣೆ ವಿರೋಧಿಸಿ ಸಂಘಟಿತವಾದ ಶರಣ ಚಳುವಳಿ ಪ್ರಭುತ್ವಕ್ಕೆ ಸವಾಲಾಗಿದ್ದರಿಂದ ದಮನಕ್ಕೆ ಒಳಗಾಯಿತು. ಕಾಯಕ ಜೀವಿಗಳಾದ ವಚನಕಾರರು ಜಾತಿ ವ್ಯವಸ್ಥೆ, ಪುರೋಹಿತ ಶಾಹಿ, ಉಳ್ಳವರು ನಡೆಸುತ್ತಿದ್ದ ಶೋಷಣೆ ವಿರೋಧಿಸಿದರು. ಈ ಎಲ್ಲ ಅಸಮಾನತೆಯ ವಿರುದ್ಧ ಹೋರಾಡಿ ‘ಸಮಾನತೆಯ ಸಮಾಜದ’ ಆಶಯ ಅವರದಾಗಿತ್ತು.

ಬಂಡಾಯ ವಚನಕಾರ ಚೌಡಯ್ಯ : ಚೌಡಯ್ಯನದು ಅಂಬಿಗನ ವೃತ್ತಿ, ಮೂಲ ಹೆಸರು ಚೌಡೇಶ, ತಾಯಿ ಪಂಪಾ ದೇವಿ, ತಂದೆ ವಿರುಪಾಕ್ಷ. ಕ್ರಿ.ಶ. 1160ರಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಶಿವಪುರದಲ್ಲಿ ಇಂದಿನ ಚೌಡಯ್ಯದಾನಪುರದಲ್ಲಿ ಜನಿಸಿದರು. ಇವರು 279 ವಚನಗಳನ್ನು ಬರೆದಿದ್ದಾರೆ. ಇನ್ನೊಂದೆಡೆ 330 ಎಂದು ದಾಖಲಾಗಿದೆ. ಅಂಬಿಗನಾಗಿ, ಅನುಭಾವಿಯಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಸಂಗತಿ ಕನ್ನಡ ನಾಡಿನಲ್ಲಿ ವೈಶಿಷ್ಟ್ಯ. ಚೌಡಯ್ಯನಲ್ಲಿ ತಾತ್ವಿಕಕ್ಕಿಂತ ನೈತಿಕ ಮತ್ತು ಸಾಮಾಜಿಕ ವಿಚಾರಗಳೇ ಅಧಿಕ. ವಚನಗಳು ಸಾಹಿತ್ಯ ರಚನೆಯ ಉದ್ಧೇಶಕ್ಕಾಗಿ ಹುಟ್ಟಿದುವಲ್ಲ. ಆತ್ಮ ಶುದ್ಧಿ, ಸಮಾಜದಶುದ್ಧಿ, ಲೋಕಶುದ್ಧಿಯ ಉದ್ಧೇಶ ಹೊಂದಿವೆ. ಸಮಾಜ ನೀತಿ, ಲೋಕನೀತಿ ವಸ್ತುವಾದಲ್ಲಿ ಸಾಹಿತ್ಯ ಬಂಡಾಯದ ಧ್ವನಿ ಪಡೆಯುತ್ತದೆ. ಈ ಬಂಡಾ ಯದ ಧ್ವನಿ-ಸರಳತೆಗಳು ಚೌಡಯ್ಯನ ವಚನಗಳ ಮುಖ್ಯ ಲಕ್ಷಣಗಳು. ನ್ಯಾಯ ನಿಷ್ಠೂರಿಯಾಗಿ, ಸರ್ವಶ್ರೇಷ್ಠನಾಗಿ, ಬಂಡಾಯ ವಚನಕಾರನಾಗಿ ಸಾಮಾಜಿಕ ಪರಿವರ್ತನೆಗೆ ಹಂಬಲಿಸಿ, ಅವರು ‘ಹಚ್ಚಿಟ್ಟ ಹಣತೆ’ ಇವತ್ತಿನ ಕತ್ತಲೆಗೆ ‘ಮನುಷ್ಯ ಜಾತಿ’ ಒಂದೇ ಎಂಬ ‘ಬೆಳಕು’ ನೀಡುತ್ತದೆ.

ಅಧ್ಯಾತ್ಮದ ಸಾರ ಅಂಬಿಗರ ಚೌಡಯ್ಯ : ಅಂಬಿಗರ ಚೌಡಯ್ಯನ ಒರಟುಮಾತಿನ ಹಿನ್ನೆಲೆ ಸಾತ್ವಿಕ ಕೋಪವೇ ಹೊರತು ಸ್ವಭಾವತಃ ಕೋಪಿಷ್ಟನಲ್ಲ. ಆತನ ದಿಟ್ಟತನ, ನಿಷ್ಠೂರ ಮಾತು, ಇಡೀ ವಚನ ಸಾಹಿತ್ಯದಲ್ಲಿಯೇ ಅಪೂರ್ವವಾಗಿದೆ ಮತ್ತು ವಿಶಿಷ್ಟ ಆಯಾಮವನ್ನು ನೀಡಿದೆ. ಅವರ ವಚನಗಳನ್ನು ಗಮನಿಸಿದರೆ, ಅಧ್ಯಯನಿಸಿದರೆ, ಚೌಡ ಯ್ಯನ ಅನುಭವ ಮುಗಿಲೆತ್ತರದಷ್ಟು. ಭಕ್ತಿ ಮತ್ತು ಅಧ್ಯಾ ತ್ಮದ ಅನುಭವಗಳನ್ನು ಅನುಭವ ಮಂಟಪದಲ್ಲಿ ಚೆನ್ನಬಸ ವಣ್ಣನವರಿಂದ ಅರಿತುಕೊಂಡ ಅರಿವಿನ ದಾರಿ ಇವರದು. ಅದರಕ್ಕೆ ಕಹಿಯಾದರೂ, ಉದರಕ್ಕೆ ಸಿಹಿಯಾದ ವಚನ ಗಳನ್ನು ಹೇಳಿದ್ದು ಅವರ ಅಂತರಂಗದ ಸರಳತೆ, ನ್ಯಾಯ ನಿಷ್ಠೂರತೆ, ಒರಟುತನ ಸತ್ಯವಾದಿತ್ವಗಳು ಹಾಗೂ ಶ್ರೇಷ್ಠ ಮಟ್ಟದ ಅಧ್ಯಾತ್ಮದ ಅನುಭವ ನೀಡುವ ವಚನಗಳಾಗಿವೆ. ಚೌಡಯ್ಯದಂಬದ ವೈರಿಯೂ ಹೌದು, ಅನುಭವ ವಿಹಾರಿಯೂ ಹೌದು. ಚಿನ್ಮಯ ಚಕೋರಿಯಾ ಅಹುದು. ದಿಟ್ಟಧೀರ ಅಧ್ಯಾತ್ಮ ಸಾರವೇ ಅಂಬಿಗರ ಚೌಡಯ್ಯ.

ಶುದ್ಧ ಭಕ್ತಿ, ಪರಿಶುದ್ಧ ನಡೆನುಡಿ ಮುಖ್ಯ : ಅಂಬಿಗರ ಚೌಡಯ್ಯ ತಿಳಿಸುವಂತೆ ಭಕ್ತಿಯೇ ಮುಖ್ಯ. ಪರಿಶುದ್ಧ ನಡೆ-ನುಡಿಗಳೇ ಮುಖ್ಯ. ಅಂತಹ ಭಕ್ತರೆಲ್ಲ ಯಾವ ಕಟ್ಟು ಪಾಡಿಗೂ ಒಳಗಾಗದೆ ಸ್ವತಂತ್ರವಾಗಿ ಭಕ್ತಿ ಸಾಧನೆ ಮಾಡಿ ಶಿವನ ಕೃಪೆಗೆ ಪಾತ್ರರಾದರು. ಆದರೆ ತಾವೇ ಶ್ರೇಷ್ಠ, ತಮ್ಮ ಆಚಾರ-ವಿಚಾರಗಳೇ ಶ್ರೇಷ್ಠವೆಂಬ ಭ್ರಮೆಯವರು ನಡೆದ ದಾರಿ ನಮಗೆ ಬೇಡ. ನಮ್ಮಲ್ಲಿ ಶುದ್ಧ ಭಕ್ತಿ, ಶುದ್ಧ ನಡೆ-ನುಡಿಗಳೇ ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯ ಎಂಬು ದನ್ನು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಭಕ್ತನಾಗಿ ಭವಗೇಡಿ ಯಾಗಬೇಕು, ಇದು ಅವರ ಗುರಿ. ಭವಗೇಡಿಯಾಗದವ ಬುದ್ಧಿಗೇಡಿ ಎಂದು ಶಿವಯೋಗ ಸಾಧನೆಯ ಮಾರ್ಗವನ್ನು ತಮ್ಮ ವಚನದಲ್ಲಿ ತಿಳಿಸಿದ್ದಾನೆ. ‘ಮಾಡುವ ಭಕ್ತನಿಗೆ ಮನವೇ ಸಾಕ್ಷಿ’ ಮನಸಾಕ್ಷಿಯಾಗಿ ಇರಬೇಕು, ಹಾಗೆಯೇ ಬದುಕಬೇಕು ಎಂಬುದು ಆತನ ಅಭಿಮತ.

ಚೌಡಯ್ಯನ ದೃಷ್ಟಿಯಲ್ಲಿ ಯೋಗಿ ಯಾರು? : ಜಾತಿ ಭ್ರಮೆ, ನೀತಿ ಭ್ರಮೆ ಎಂಬ ಕರ್ಮಗಳನ್ನು ಪಾಲಿಸಿ, ಕಳೆಯಬಲ್ಲನಾತ ಯೋಗಿ …… ಎಂಬ ವಚನದಲ್ಲಿ ನಿಜವಾದ ಯೋಗಿ ಯಾರು? ಎಂದು ತಿಳಿಸುತ್ತಾ ಆ ಜಾತಿ, ಈ ಜಾತಿ, ಮೇಲು-ಕೀಳು ಎಂಬ ಭ್ರಮೆಯಿರಬಾರದು. ಜಾತಿ ಭ್ರಮೆ, ನೀತಿ ಭ್ರಮೆ ಎಂಬ ಕರ್ಮಗಳನ್ನು ಕತ್ತರಿಸಿ ನಾಶ ಮಾಡಬಲ್ಲವನೇ ನಿಜವಾದ ಯೋಗಿ. ನೀತಿಯೂ ಕೂಡ ಭ್ರಮೆಯೇ ಅಂದರೆ ಸ್ವ-ಕೇಂದ್ರಿತವಾಗಿ ನೀತಿಯನ್ನು ಪರಿಭಾವಿಸುವುದು, ಪುಣ್ಯಕ್ಷೇತ್ರಕ್ಕೆ ಹೋದರೆ ಪಾಪ ಕಳೆಯುವುದು, ತೀರ್ಥಗಳಲ್ಲಿ ಸ್ನಾನ ಮಾಡಿದರೆ, ಶಿಲಾಮೂರ್ತಿ ಪೂಜಿಸುವುದೂ ಕೂಡ ಭ್ರಮೆಯೇ. ಈ ಎಲ್ಲ ಭ್ರಮೆಗಳನ್ನು ನಿವಾರಿಸಿ ಕಳೆಯಬಲ್ಲವನೇ ನಿಜವಾದ ಯೋಗಿ ಎಂಬುದು ಚೌಡಯ್ಯನ ವಚನದ ತಾತ್ಪರ್ಯವಾಗಿದೆ. ಯೋಗಿಯಲ್ಲಿ ಸ್ವಾರ್ಥ, ಚಂಚಲ ಸ್ವಭಾವ ಇರಬಾರದು, ಇದ್ದರೆ ಅಂಥವರು ‘ಯೋಗಿ’ ಎನಿಸಿಕೊಳ್ಳಲು ಅರ್ಹರಲ್ಲ ಎಂದು ತಿಳಿಸಿದ್ದಾನೆ.

ಬ್ರಹ್ಮಜ್ಞಾನಿ ಕುರಿತು ಚೌಡಯ್ಯನ ವ್ಯಾಖ್ಯಾನ : ಬ್ರಹ್ಮದ ಮಾತನಾಡಿ, ಕನ್ನೆಯರ ಕಾಲದೆಸೆಯಲ್ಲಿ ಕುಳಿತಡೆ ಪರಬೊಮ್ಮದ ಮಾತು. ಅಲ್ಲಿಯೇ ನಿಂದಿತ್ತೆಂದ ಅಂಬಿಗರ ಚೌಡಯ್ಯ ಎಂಬ ವಚನದಲ್ಲಿ ಕೆಲವರು ಬ್ರಹ್ಮಜ್ಞಾನಿಗಳೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ತರುಣಿಯರ ಬಳಿ ಕುಳಿತಿರುತ್ತಾರೆ. ಕಾಮಕ್ಕೆ ವಶವಾದರೆ ಬ್ರಹ್ಮಜ್ಞಾನಿಗಳಾಗಲು ಸಾಧ್ಯವೇ ಇಲ್ಲ. ಪರಬ್ರಹ್ಮದ ಮಾತು ಅಲ್ಲಿಯೇ ನಿಂತು ಬಿಡುತ್ತದೆ. ಬ್ರಹ್ಮಜ್ಞಾನಿಗಳು ಸ್ತ್ರೀ-ವ್ಯಾಮೋಹಕ್ಕೆ ಒಳಗಾದರೆ ಶೋಭಿಸುವುದಿಲ್ಲ. ಒಟ್ಟಾರೆ ಬ್ರಹ್ಮಜ್ಞಾನಿಗೆ ಶುದ್ಧ ಚಾರಿತ್ರ್ಯ ಬಹು ಮುಖ್ಯವೆಂಬುದು ಚೌಡಯ್ಯನ ಆಶಯವಾಗಿದೆ. ಶರಣರನ್ನು ಸೇರಿಸಿಕೊಂಡೇ ತಮ್ಮ ಸುತ್ತಲಿನ ಸಮಾಜವನ್ನು ವಿಮರ್ಶೆ ಮಾಡಿದರು. ಆರೂಢ ಜ್ಞಾನಿಯಾದವನಿಗೆ ಅನುಭವ ಬೇರೆ, ಅಂತವನಿಗೆ ನೀರೇನು ನೆಲವೇನು ಎಂದು ಹೇಳುತ್ತಾನೆ.

ಶುದ್ಧ ಜೀವನ ಸಾಗಿಸಿದ ಚೌಡಯ್ಯ : ವಿಡಂಬನೆ, ಚಾಟಿಯೇಟನ್ನು ಕೊಡುವುದೇ ಆತನ ಕೆಲಸವಾಗಿತ್ತೇ ಅಥವಾ ತನ್ನ ಜೀವನವನ್ನು ಎಷ್ಟೊಂದು ಶುದ್ಧವಾಗಿ ಸಾಗಿಸಿದ ಎಂಬುದನ್ನು ತಿಳಿಯುತ್ತಾ ಹೋದರೆ ಆತನ ವ್ಯಕ್ತಿತ್ವದ ನಿಜದರ್ಶನ ತಿಳಿಯದೇ ಇರಲಾರದು. ಅವರು ತಿಳಿಸುವಂತೆ ಗತಿ ಪಥದ ಜ್ಞಾನದಲ್ಲಿದ್ದು ನೀಗಿರೋ ನಿಮ್ಮ ಭವಬಂಧನದ ಸಾಗರವನ್ನು! ಪ್ರಾಣತ್ಯಾಗವು ಈಗಲೋ ಆಗಲೋ ಎಂದರಿಯಬಾರದು, ರೋಗ-ರುಜಿನಗಳಿಗೆ ಆಗರವು ನಿಮ್ಮ ಒಡಲು. ತನುಮನ ಪ್ರಾಣವ ನೆಚ್ಚದಿರು, ನಾಗಭೂಷಣನ ಪಾದ ಪೂಜೆಯ ಮಾಡಿ, ಶಿವಯೋಗದಲ್ಲಿ ಲಿಂಗವನೊಡಗೂಡಿ ಸಾಗಿಹೋದವರೆ ಭವಗೇಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ಎಂಬ ಮಾತಿನಲ್ಲಿ ಅವರ ಅಧ್ಯಾತ್ಮದ ಭಕ್ತಿಯ ಆಳ ಅರಿಯಬಹುದು.

ಶೈವ-ಶರಣರ ಚಳಿ ಬಿಡಿಸಿದ ಚೌಡಯ್ಯ : ಶೈವ ಸಂಪ್ರದಾಯದ ಶರಣರನ್ನು, ಸನ್ಯಾಸಿಗಳನ್ನು ತಮ್ಮ ವಚನಗಳ ಮೂಲಕ ಚಾಟಿಯೇಟನ್ನು ನೀಡಿದ್ದಾನೆ. ಈಶ ಲಾಂಛನವ ತೊಟ್ಟು, ಮನ್ಮಥ ಲಾಂಛನವ ತೊಡಲೇತಕ್ಕೆ ನಿಮ್ಮ ನಡೆ-ನುಡಿಗೆ ನಾಚಿಕೆಯಲ್ಲವೇ ಎಂದು ಜಗ್ಗಿಸಿ ಕೇಳುವುದಲ್ಲದೆ ‘ವಿರಾಗಿ’ ಜೀವನನಡೆಸುವವರಿಗೆ ಅಂದಳಛತ್ರ ಆಭರಣ ಕರಿ ತುರಂಗಗಳಗೊಂದಣವೇತಕ್ಕೆ ಎಂದು ಪ್ರಶ್ನಿಸುತ್ತಾ ಧರ್ಮ, ದೇವರು, ಮಠ, ದೇವಾಲಯಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಖಂಡಿಸುತ್ತಾ ಭಕ್ತರಿಂದ ಹಣ ತಂದು ಬದುಕುತ್ತಿದ್ದವರನ್ನು, ಯಾವ ಮುಲಾಜಿಗೂ ಒಳಗಾಗದೇ ಅಂಥವರನ್ನು ಚಳಿ ಬಿಡಿಸುವ ಕೆಲಸ ತಮ್ಮ ವಚನಗಳಲ್ಲಿ ಮಾಡಿದ್ದಾರೆ. ಕಟು ಮಾತಿನಲ್ಲಿ ಟೀಕಿಸಿದ್ದಾರೆ.

ನಿಮ್ಮನ್ನು ನೀವು ತಿಳಿಯಿರಿ ಎಂಬ ಸಂದೇಶ : ಅತ್ಯಂತ ಸಮಕಾಲಿನ ಸಂಗತಿಗಳನ್ನು, ಅದರಲ್ಲೂ ಬಸವಾದಿ ಶರಣರು ಒಪ್ಪಿದ್ದ ಮೌಲ್ಯಗಳಲ್ಲಿ ಒಂದಾಗಿದ್ದ ‘ಶರಣಸತಿ-ಲಿಂಗಪತಿ’ ಎಂಬ ತತ್ವವೂ ವೈಚಾರಿಕ ಪ್ರಭೆಯ ಒರೆಗೆ ಸಿಲುಕಿದೆ. ಇದನ್ನು ‘ಮೊದಲಿಗೆ ಮೋಸ’ ಎನ್ನುವ ಎದೆಗಾರಿಕೆ ಚೌಡಯ್ಯನದು, ಹೀಗಾಗಿ ಶರಣ ಸಂಕುಲ ದಲ್ಲಿಯೇ ಅತ್ಯಂತ ನಿರ್ಭೀತರು. ವೇದಶಾಸ್ತ್ರಗಳನ್ನು ದೂರಮಾಡಬೇಕು, ಪಾಪ-ಪುಣ್ಯ ಎಂದು ಹೇಳುವ ಭಂಡರ ಬೆನ್ನು ಹತ್ತದೇ ‘ನಿನ್ನನ್ನು ನೀನು ತಿಳಿಯಬೇಕು. ಲೋಕ ನಿನ್ನಲ್ಲಿಯೇ ಇದೆ ಎಂಬ ಸ್ಪಷ್ಟ ಸಂದೇಶ ಅವರದು. ಬಹಿರಂಗ ಪೂಜೆಯ ಆಡಂಬರವನ್ನು ನಿರಾಕರಿಸುತ್ತಾ ಪೂಜಿಸಿದ ಪುಣ್ಯ ಹೂವಿಗೋ, ನೀರಿಗೋ ಎಂದು ವ್ಯಂಗ್ಯ ಮಾಡುತ್ತಾನೆ. ಮುಚ್ಚು ಮರೆಯಿಲ್ಲದ ಬಿಚ್ಚು ಮನಸ್ಸು, ಕಂಡುದನ್ನು ಕಂಡಂತೆ ಹೇಳುವ ಕೆಚ್ಚು, ಡಂಭಾಚಾರವನ್ನು ಕಂಡರೆ ಸಾತ್ವಿಕವಾದ ರೊಚ್ಚು, ಇದು ಅಂಬಿಗರ ಚೌಡಯ್ಯನ ವ್ಯಕ್ತಿತ್ವದ ಪಡಿಯಚ್ಚು. ಹೀಗೆ ಅತ್ಯಂತ ಕಟು ವಿಮರ್ಶೆ ಅಂಬಿಗರ ಚೌಡಯ್ಯನದು ಸಿಂಹಘರ್ಜನೆ. ದಂಭದ ವೈರಿಯಾಗಿ ಅನುಭವ ವಿಹಾರಿಯಾಗಿರುವುದು
ಶರಣ ಸಂಕುಲದಲ್ಲಿಯೇ ವಿಶೇಷವೆನ್ನಬಹುದು.

ನ್ಯಾಯನಿಷ್ಠೂರಿ, ಸರ್ವಶ್ರೇಷ್ಠ ಶರಣ: ಅಂಬಿಗರ ಚೌಡಯ್ಯ - Janathavani– ಡಾ. ಗಂಗಾಧರಯ್ಯ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕರು, ಮೊ: 9880093613

error: Content is protected !!