ಎಳ್ಳು ಬೀರುವ ಹಬ್ಬ ಸಂಕ್ರಾಂತಿ

ಎಳ್ಳು ಬೀರುವ ಹಬ್ಬ ಸಂಕ್ರಾಂತಿ

ಈಗಿನ ಕಾಲದಲ್ಲಿ ಒಬ್ಬರ ಮನೆಗೆ ಒಬ್ಬರು ಹೋಗಬೇಕೆಂದರೆ, ಕರೆ ಮಾಡಿ ಮನೆಯಲ್ಲಿದ್ದೀರಾ ಎಂದು ಕೇಳಿ ಹೋಗಬೇಕು. ಅಂತಹ ಸಮಯದಲ್ಲಿ ಎಳ್ಳು ಬೀರುವ ಹಬ್ಬ ಅಥವಾ ಸಂಕ್ರಾಂತಿಯ ದಿನ, ಎಲ್ಲರ ಮನೆಯ ಬಾಗಿಲುಗಳು ತೆರೆದಿರುತ್ತವೆ. ಎಳ್ಳು ಬಾಳೆಹಣ್ಣು, ಸಕ್ಕರೆ ಅಚ್ಚು, ಕಬ್ಬು ಹಿಡಿದು ಎಳ್ಳು ಬೀರುಲು ಬರುವ ಮಕ್ಕಳು, ಹೆಂಗೆಳೆಯರನ್ನು ಸ್ವಾಗತಿಸುತ್ತವೆ. 

ಹಬ್ಬ ಎಂದರೆ  ಯಾವುದಾದರೂ ಒಂದು ದೇವರನ್ನು ವಿಶೇಷವಾಗಿ ಪೂಜಿಸುವ ಸಂಪ್ರದಾಯವಿರುತ್ತದೆ. ಆದರೆ, ಸಂಕ್ರಾಂತಿಯ ದಿನ ಮುಖ್ಯವಾಗಿ ಸೂರ್ಯನ ಪಥ ಬದಲಾಗುತ್ತಿದೆ ಎಂದು ಸಂಭ್ರಮಿಸುವಂತಹ ಕಾಲ. ಚಳಿ ಹೆಚ್ಚಿರುವ ಈ ಸಮಯದಲ್ಲಿ ದೇಹಕ್ಕೆ ಶಾಖವನ್ನು ಕೊಡುವ ಎಳ್ಳು ಕಡಲೆ ಬೀಜ, ಬೆಲ್ಲ ಎಲ್ಲವೂ ಆರೋಗ್ಯಕರ. 

ಈ ಮಾಸದಲ್ಲಿ ಚೆನ್ನಾಗಿ ಬೆಳೆ ಬಂದು ಕಬ್ಬು ಬೇಕಾದಷ್ಟು ಸಿಗುತ್ತಿರುತ್ತದೆ. ಆದ್ದರಿಂದ ಬೆಲ್ಲ ಸಕ್ಕರೆಗಳಿಗೆ ತೊಂದರೆ ಇರುವುದಿಲ್ಲ! ಸಕ್ಕರೆಯ ಪಾಕವನ್ನು ಹದವಾಗಿ ಮಾಡಿ ಅಚ್ಚುಗ ಳೊಳಗೆ ಸುರಿದು ಸುಂದರ ಆಕೃತಿಗಳು ಮೂಡಿಬರುವುದನ್ನು ನೋಡುವುದೇ ಮನಸ್ಸಿಗೆ ಆನಂದವಲ್ಲವೇ. ಮನೆ ಮಂದಿ ಎಲ್ಲ ಕೂತು, ಮರದ ಅಚ್ಚುಗಳನ್ನು ತೊಳೆಯುವವರು ಒಬ್ಬರಾದರೆ, ಅದನ್ನು ಒರೆಸಿ, ಅದರ ಜೋಡಿಯೊಂದಿಗೆ ಸೇರಿಸಿ ಕಟ್ಟುವವರು ಒಬ್ಬರು. ಪಾಕವನ್ನು ಹದವಾಗಿ ಕಾಯಿಸಿ ಚೆನ್ನಾಗಿ ತಿಕ್ಕಿ, ಸರಿಯಾದ ಹದಕ್ಕೆ ಅದನ್ನು ಸುರಿಯಬೇಕು. ತಿಳಿಯಾದ ಪಾಕ ಒಂದೇ ನಿಮಿಷದಲ್ಲಿ ಬಿಳಿ ಸಕ್ಕರೆ ಅಚ್ಚಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಸಣ್ಣ ಮಕ್ಕಳಿಗಂತೂ ಸಂತೋಷವೋ ಸಂತೋಷ. ಮುರಿದ ಬಿಸಿ ಅಚ್ಚುಗಳನ್ನು ತಿನ್ನುವುದರಲ್ಲೂ ಒಂದು ವಿಶೇಷವಾದ ಆನಂದ. 

ಹೀಗೆ ಸಂಕ್ರಾಂತಿ ಹಬ್ಬ ಬರುವ 15 ದಿನಗಳ ಮೊದಲಿನಿಂದಲೇ, ಮನೆಯಲ್ಲಿ ಬೆಲ್ಲ, ಕೊಬ್ಬರಿ ಹೆಚ್ಚುವುದು, ಕಡಲೆಬೀಜ ಹುರಿದು ಅದರ ಸಿಪ್ಪೆ ತೆಗೆದು ಬೆಳ್ಳಗೆ ಮಾಡುವುದು, ಹೆಚ್ಚಿದ ಬೆಲ್ಲ ಬಿಸಿಲಿನಲ್ಲಿ ಒಣಗಿಸುವುದು, ಎಲ್ಲವೂ ನಡೆಯುತ್ತಿರುತ್ತದೆ. ಮನೆಯಲ್ಲಿ ಹಬ್ಬದ ಸಂಭ್ರಮ ಶುರುವಾಗಿರುತ್ತದೆ. 

ಬಂಧು ಬಾಂಧವರಿಗೆ, ಆತ್ಮೀಯರಿಗೆ, ಅಕ್ಕಪಕ್ಕದ ಮನೆಯವರಿಗೆ ಸ್ನೇಹಿತರಿಗೆ, ಪರಿಚಿತರಿಗೆ, ಅಪರಿಚಿತರಿಗೆ ಎಲ್ಲರಿಗೂ ಎಳ್ಳನ್ನು ಕೊಟ್ಟು, `ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ’ ಎಂದು ಹೇಳುವ ಈ ಸಂಪ್ರದಾಯ ಎಷ್ಟು ಹಿರಿದಾದುದಲ್ಲವೇ? 

ಮಾನವೀಯ ಮೌಲ್ಯವಾದ ಎಲ್ಲರನ್ನೂ ಪ್ರೀತಿಸುವ ಎಲ್ಲರನ್ನೂ ಬಂಧು- ಬಾಂಧವರಂತೆ ಕಾಣುವ, ಎಲ್ಲರಿಗೂ ಸಿಹಿ ಹಂಚುವ ಈ ಹಬ್ಬ `ವಸುದೈವಕುಟುಂಬಕಂ’ ಎಂಬ ಘೋಷಣೆಗೆ ಸಾಕಾರರೂಪವಾಗಿದೆ. 

ಎಳ್ಳಿಗೆ ತುಂಬಾ ಮಹತ್ವವಿದೆ. ವರಾಹ ರೂಪದಲ್ಲಿ ಭಗವಂತನು ಬಂದಾಗ ಅವನ ಬೆವರ ಹನಿಯಿಂದ ಎಳ್ಳಾಯಿತು ಎಂಬ ನಂಬಿಕೆ ಇದೆ. ಪಿತೃ ಕಾರ್ಯಗಳಿಗೆ ಹೆಚ್ಚಾಗಿ ಉಪಯೋಗಿಸುವ ಈ ಕರಿ ಎಳ್ಳು, ಸಂಕ್ರಾಂತಿ ಹಬ್ಬದಲ್ಲಿ ಬಿಳಿ ಬಣ್ಣದ್ದಾಗಿ ಅತ್ಯಂತ ಪ್ರಮುಖವಾಗುತ್ತದೆ.ಎಳ್ಳಿನ ದೀಪ ಹಚ್ಚಿ, ಎಳ್ಳಿನ ತರ್ಪಣ ಕೊಟ್ಟು,‌ ಎಳ್ಳಿನ ಸ್ನಾನ ಮಾಡಿ, ಎಳ್ಳು ದಾನ ಮಾಡಿ, ಹೋಮ ಮಾಡಿ ಅದನ್ನು ಭಕ್ಷಿಸಬೇಕು. ಎಂದು ಆರು ರೀತಿಯಲ್ಲಿ ಎಳ್ಳು ಬಳಸುತ್ತಾರೆ.

ಎಳ್ಳಿನ ನಾರಿನಂಶ ಜೀರ್ಣಕಾರಿ, ಅದರಲ್ಲಿನ ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಕೆಲವು ಅಮೈನೋ ಆಮ್ಲಗಳು ದೇಹಕ್ಕೆ ಬಹು ಮುಖ್ಯ. ಎಳ್ಳು ಉರಿಯೂತ ಕಡಿಮೆ ಮಾಡುತ್ತದೆ.

ಸಂಕ್ರಾಂತಿ ದಿನ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಹೋಗುವುದರಿಂದ, ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಮಕರ ರಾಶಿಯ ಅಧಿಪತಿ ಶನಿ ದೇವರಾಗಿರುವುದರಿಂದ, ಎಳ್ಳು ಶನಿ ದೇವರಿಗೆ ಅತಿಪ್ರಿಯವಾಗಿರುವುದರಿಂದ, ಎಳ್ಳು ದಾನ ಕೊಡುತ್ತಾರೆ.

ಈ ಹಬ್ಬದ ಇನ್ನೊಂದು ಮುಖ್ಯವಾದ ಸಂದೇಶವೆಂದರೆ, ಬಾಳಿನಲ್ಲಿ ಬರುವ ಸಿಹಿ ಕಹಿ ಎರಡನ್ನೂ ಸಮವಾಗಿ ಸ್ವೀಕರಿಸುವುದು. `ಸುಖೆ, ದುಃಖೇ ಸಮೇ ಕೃತ್ವ ಲಾಭಾ ಲಾಭೌ ಜಯಾ ಜಯೌ’ ಎಂದು ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ. ಇದು ಹೇಳಿದಷ್ಟು ಸುಲಭವಲ್ಲ. ಆದರೂ ಎಲ್ಲರ ಜೀವನದಲ್ಲೂ ಸುಖದ ಹಿಂದೆ ದುಃಖ ಇದ್ದೇ ಇರುತ್ತದೆ. ಇದನ್ನು ನೆನಪಿಟ್ಟುಕೊಂಡು ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಎರಡನ್ನೂ ಅನುಭವಿಸಿ ಎಂದೇ ಎಳ್ಳು ಬೆಲ್ಲಗಳನ್ನು ಒಟ್ಟಿಗೆ ದಾನ ಕೊಡುವ, ಒಟ್ಟಿಗೆ ತಿನ್ನುವ ಸಂಪ್ರದಾಯವಿದೆ. 

ಎಳ್ಳು ಬೀರುವ ಸಲುವಾಗಿ ಎಲ್ಲರ ಮನೆಗಳಿಗೂ ಹೋಗುವುದರಿಂದ, ಏನಾದರೂ ಮಾತಿನಲ್ಲಿ ಅಥವಾ ಕಾರ್ಯದಲ್ಲಿ ಅವರ ಮನಸ್ಸಿಗೆ  ನೋವಾಗಿದ್ದರೂ, ಈ ಹಬ್ಬ ಎಲ್ಲರನ್ನೂ ಒಟ್ಟುಗೂಡಿಸಿ ಕಹಿಯನ್ನು ಮರೆಸಿ ಸಿಹಿಯನ್ನು ಮಾತ್ರ ನೆನಪಿಟ್ಟುಕೊಳ್ಳುವಂತೆ ಮಾಡುತ್ತದೆ. ಸ್ನೇಹ ಬಾಂಧವ್ಯ ಆತ್ಮೀಯತೆ ಹೆಚ್ಚಿಸುತ್ತದೆ. 

ಮನುಷ್ಯ ಸಮಾಜ ಜೀವಿ. ಒಬ್ಬರೇ ಇದ್ದರೆ ಒಂಟಿತನದ ನೋವೆಷ್ಟು ಎಂದು ತಿಳಿಯುತ್ತದೆ. ಮನಸ್ಸಿನ ಮಾತುಗಳನ್ನು ಆಡಲು ಕೂಡ ಯಾರೂ ಜೊತೆಗೆ ಇರುವುದಿಲ್ಲ. 

ಇಂತಹ ಕಷ್ಟಗಳು ಎಂದೂ ನಮಗೆ ಬರದಿರಲಿ. ಎಲ್ಲರೊಟ್ಟಿಗೆ ಸಂಭ್ರಮ, ಸಡಗರದಿಂದ ಹಬ್ಬಗಳನ್ನು ಆಚರಿಸುತ್ತಾ, ರುಚಿಯಾದ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ತಿನ್ನುತ್ತಾ ಸಂಕ್ರಾಂತಿ ಹಬ್ಬವನ್ನು ಆಚರಿಸೋಣ ಎಂದು ಪ್ರಾರ್ಥಿಸುತ್ತೇನೆ. 

– ಡಾ. ರೂಪಶ್ರೀ ಶಶಿಕಾಂತ್, ದಾವಣಗೆರೆ.

error: Content is protected !!