ಸಂತೇಬೆನ್ನೂರು ಶಿಕ್ಷಕಿ ಸುಮಂಗಲಮ್ಮ ಅವರಿಗೆ ಜಿಲ್ಲಾ ಕದಳಿಶ್ರೀ ಪ್ರಶಸ್ತಿ : ಇಂದು ಪ್ರದಾನ

ಸಂತೇಬೆನ್ನೂರು ಶಿಕ್ಷಕಿ ಸುಮಂಗಲಮ್ಮ ಅವರಿಗೆ ಜಿಲ್ಲಾ ಕದಳಿಶ್ರೀ ಪ್ರಶಸ್ತಿ : ಇಂದು ಪ್ರದಾನ

ದಾವಣಗೆರೆ ಕದಳಿ ಮಹಿಳಾ ವೇದಿಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾಗಿದ್ದು, ಕಳೆದ 16 ವರ್ಷಗಳಿಂದ ದಾವಣಗೆರೆಯಲ್ಲಿ ವಚನ ಸಾಹಿತ್ಯ, ಶರಣ ಸಂಸ್ಕೃತಿಯ ಅನುಷ್ಠಾನ ಕ್ಕಾಗಿ ಕಾರ್ಯಕ್ರಮಗಳನ್ನು, ದತ್ತಿ ಉಪನ್ಯಾಸಕಗಳನ್ನು, ವಚನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ವೇದಿಕೆಯು ಪ್ರತಿ ವರ್ಷ, ಸಮಾಜದ ಓರ್ವ ಅಪೂರ್ವ ಸಾಧಕಿಯನ್ನು ಗುರುತಿಸಿ `ಕದಳಿ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ.

ಅನ್‌ಮೋಲ್ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಯಶಾ ದಿನೇಶ್ ಹಾಗೂ ದಿನೇಶ್ ಸಿ.ಜಿ. ದಂಪತಿ  ಈ ದತ್ತಿಯ ಸ್ಥಾಪಕರಾಗಿದ್ದಾರೆ. ಯಶಾ ಅವರು ತಮ್ಮ ತಂದೆ ಪ್ರೊ. ಬಿ.ಕೆ. ಸಿದ್ದಪ್ಪ ಬಾಡ ಮತ್ತು ತಾಯಿ ಸಾವಿತ್ರಮ್ಮ ಸಿದ್ದಪ್ಪ ದಂಪತಿ ಹೆಸರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಲಕ್ಷ ರೂ. ಗಳ `ಕದಳಿ ಶ್ರೀ’ ಪ್ರಶಸ್ತಿಯ ಶರಣ ದತ್ತಿಯನ್ನು ಸ್ಥಾಪಿಸಿದ್ದಾರೆ.

ಈ ಬಾರಿ `ಕದಳಿ ಶ್ರೀ’ ಪ್ರಶಸ್ತಿಗೆ ಚನ್ನಗಿರಿಯ ಗ್ರಾಮಾಂತರ ಪ್ರಾಥಮಿಕ ಪಾಠಶಾಲೆ (ವಿಜಯ ಯುವಕ ಸಂಘ)ಯ ನಿವೃತ್ತ ಶಿಕ್ಷಕರಾದ ಶರಣೆ ಸುಮಂಗಲಮ್ಮನವರು ಭಾಜನರಾಗಿದ್ದಾರೆ. ಇವರು ದಿ. ಸಿದ್ದಪ್ಪ ಹಾಗೂ ಶಂಕರಮ್ಮ ದಂಪತಿ ಪುತ್ರಿಯಾಗಿ 7.5.1949 ರಂದು ಸಂತೇಬೆನ್ನೂರಿನಲ್ಲಿ ಜನಿಸಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸಂತೇ ಬೆನ್ನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು. 1972-74ರಲ್ಲಿ ದಾವಣಗೆರೆ ಸರ್ಕಾರಿ ಶಿಕ್ಷಕರ ಕೇಂದ್ರದಲ್ಲಿ ಶಿಕ್ಷಕರ ತರಬೇತಿಯನ್ನು ಮುಗಿಸಿದರು. ಸದಾ ಕಲಿಯುವ ಆಸಕ್ತಿ ಹೊಂದಿದ್ದಂತಹ ಸುಮಂಗಲಮ್ಮ ಅವರು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಅಂಚೆ ಮತ್ತು ತೆರಪಿನ ಶಿಕ್ಷಣದ ಮೂಲಕ ಬಿ.ಎ. ಪದವಿ ಪಡೆದರು.

ಸುಮಂಗಲಮ್ಮನವರ ಕೈಯಲ್ಲಿ ಓದಿದ ವಿದ್ಯಾರ್ಥಿಗಳು ಅನೇಕರು ಉನ್ನತ ಪದವಿಯನ್ನು ಪಡೆದು ಸಾಹಿತಿಗಳಾಗಿ, ಕವಿಗಳಾಗಿ, ಶಿಕ್ಷಕರಾಗಿ, ವೈದ್ಯರಾಗಿ, ಅಭಿಯಂತರರಾಗಿ, ಉತ್ತಮ ರಾಜಕಾರಣಿಗಳಾಗಿ, ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿರು ವುದು ಅತ್ಯಂತ ಆದರ್ಶನೀಯ. ಇವರ ನಿಷ್ಠೆ, ಕ್ರಿಯಾಶೀಲತೆ, ಪ್ರಾಮಾಣಿಕತೆ ಜೊತೆಗೆ ಪರಿಶ್ರಮದ ಹಾದಿಯಲ್ಲಿ ಪ್ರಗತಿಯ ಬೆಳಕನ್ನು ನೀಡುವಲ್ಲಿ ತಮ್ಮ ಸೇವೆಯ ಸಾರ್ಥಕತೆ ಯಲ್ಲಿ ಸಮರ್ಥ ಬದುಕನ್ನು ನೀಡಿದವರು ಸುಮಂಗಲಮ್ಮ ನವರು. ಇವರು ಮಕ್ಕಳ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯ ಸಂಘಟನಾ ಕಾರಿಯಾಗಿ ಅನೇಕ ಶಾಲಾ-ಕಾಲೇಜುಗಳಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ತಮ್ಮದೇ ಸ್ವಂತ ಖರ್ಚಿನಲ್ಲಿ ಬಹುಮಾನ ನೀಡಿ ಪ್ರೋತ್ಸಾಹ ಮಾಡಿರುವುದು ಅತ್ಯಂತ ಹೆಗ್ಗಳಿಕೆ ವಿಚಾರ.

ಇವರ ಅವಧಿಯಲ್ಲಿ ಚನ್ನಗಿರಿ ತಾಲ್ಲೂಕಿನ ನೂರಾರು ಮಕ್ಕಳಿಗೆ ಕನ್ನಡ ಕುವರ, ಕುವರಿ ಪ್ರಶಸ್ತಿ ನೀಡುವಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವುದನ್ನು ನಾವು ಈ ಕ್ಷಣದಲ್ಲಿ ಸ್ಮರಿಸಬಹುದು. ಇವರು ಶಿಕ್ಷಕಿಯಾಗಿ ಜ್ಞಾನ ದಾಸೋಹ ನೀಡುವುದರ ಜೊತೆಯಲ್ಲಿ ತಮ್ಮ ಮನೆಯಲ್ಲಿ ಅನ್ನ ದಾಸೋಹ ನೀಡಿರುವುದು ಅತ್ಯಂತ ಶ್ಲ್ಯಾಘನೀಯ ಕಾರ್ಯ.

ಇವರು ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಜನಪದ, ಪ್ರಬಂಧ, ಆಶುಭಾಷಣ, ಕವಿಗೋಷ್ಠಿ, ಮಕ್ಕಳ ಸಾಹಿತ್ಯ ಅವರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸತತವಾಗಿ 9 ವರ್ಷಗಳ ಕಾಲ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿದ್ದರು.

ಈ ಎಲ್ಲಾ ಕ್ಷೇತ್ರಗಳ ಸರ್ವತೋಮುಖ ಬೆಳವಣಿಗೆಗೆ ತಮ್ಮ ಕೊಡುಗೆಯು ಅತ್ಯಂತ ಪಾರದರ್ಶಕವಾಗಿರುವುದಕ್ಕೆ ಇವರಿಗೆ ಅನೇಕ ಸಂಘ-ಸಂಸ್ಥೆಗಳಿಂದ, ತಾಲ್ಲೂಕು ಆಡಳಿತ ದಿಂದ, ಜಿಲ್ಲಾಡಳಿತದಿಂದ, ಶಾಲಾ-ಕಾಲೇಜುಗಳಿಂದ, ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನಕ್ಕೆ ಭಾಜನರಾಗಿದ್ದಾರೆ. ಚಿತ್ರದುರ್ಗದ ಚಿಂತನ ಪ್ರಕಾಶನದಿಂದ ಬೆಳ್ಳಿ ಪದಕ ಹಾಗೂ ಉತ್ತಮ ಸಂಘಟನಾ ಶಿಕ್ಷಕಿ ಪ್ರಶಸ್ತಿ, 2013ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗ್ರಾಮೀಣ ಸಿರಿ ಪ್ರಶಸ್ತಿಯನ್ನು ಪಡೆದಿರುವ ಇವರು ಭದ್ರಾವತಿಯ ಆಕಾಶವಾಣಿಯಲ್ಲಿ ಕಿರುನಾಟಕ, ಮಹಿಳೆಯರ ಸಮೂಹ ಚರ್ಚೆಗಳಲ್ಲಿ ಭಾಗವಹಿಸಿ ಸಾಹಿತ್ಯ ವೇದಿಕೆ, ಸಾಂಸ್ಕೃತಿಕ ಚಟುವಟಿಕೆಗಳ ಯಶಸ್ಸಿಗೆ ಶ್ರಮಿಸಿದ್ದಾರೆ. ಇವರ ಸತ್ಯ, ಶುದ್ಧ ಕಾಯಕವು ಸಮಾಜಕ್ಕೆ ಕನ್ನಡಿ ಹಿಡಿದಂತಿದೆ. ಒಬ್ಬ ಆದರ್ಶ ಹೆಣ್ಣು ಮಗಳು ಸಾವಿರ ಜನ ಶಿಕ್ಷಕರಿಗೆ ಸಮ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಚಂದ್ರಿಕಾ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ,

ಕದಳಿ ಮಹಿಳಾ ವೇದಿಕೆ, ದಾವಣಗೆರೆ.

error: Content is protected !!