`ನಮ್ಮ ಉತ್ಸಾಹವೆನ್ನುವುದು ಕಲ್ಲಿದ್ದಲಿನ ಕಾವಾಗಬೇಕೇ ಹೊರತು ಕೆಂಡದ ಮೇಲಿನ ಗರಿಕೆಯಾಗಬಾರದು’ ಎಂಬ ವಿಶ್ವ ಮಾನವ ಕವಿ ಕುವೆಂಪು ಅವರ ನುಡಿಯಂತೆ ನಮ್ಮ ಅನೇಕ ಸಂತೋಷಗಳು ಹೊಸ ವರ್ಷವೆಂಬ ದಿನದ ಮೂರ್ತಿಗೆ ಅಲಂಕಾರಿಕ ಬಿಡಿ ಹೂವು ಆಗದೇ ಅದು ಅನೇಕ ಮಹಾ ಸಂಕಲ್ಪಗಳ ಎಂದಿಗೂ ಚದುರದ ಇಡಿ ಹೂವಿನ ಗುಚ್ಛವಾಗ ಬೇಕು. ಇಂದಿನ ಜೀವನ ಅದೆಷ್ಟೋ ಭರವಸೆಗಳ ಕೂಟ, ನಾವೆಲ್ಲರೂ ಸೇರಿ ಅದನ್ನು ಸವಿದಾಗ ಬದುಕು ಸಾರ್ಥಕವೆನಿಸುತ್ತದೆ.
ಬರೀ ವರ್ಷ ಬದಲಾದರೆ ಸಾಲದು.! ನಮ್ಮ ಬದುಕು ಬದಲಾಗಿ ಇನ್ನೊಬ್ಬರಿಗೆ ಸ್ಫೂರ್ತಿ ಯಾಗುವಂತಹ, ಮಾದರಿಯಾಗುವಂತಹ ವಿಶ್ವ ಪಥವನ್ನ ನಾವೇ ನಿರ್ಮಿಸಿ ನಡೆದು ಇತರರು ನಡೆಯುವಂತೆ ಮಾಡಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ನಾವೆಲ್ಲ ಅದೆಷ್ಟೋ ಸಂಬಂಧಗಳು, ಸಂತೋಷಗಳು, ಪ್ರೀತಿ, ವಾತ್ಸಲ್ಯಗಳನ್ನು ನಮಗೆ ಗೊತ್ತಿಲ್ಲದೆ ಕಳೆದು ಕೊಳ್ಳುತ್ತಿದ್ದೇವೆ. `ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ನವರು ಹೇಳುವಂತೆ ಹತ್ತಿರ ವಿದ್ದು ದೂರ ನಿಲ್ಲುವೆವು ನಮ್ಮ ಅಹಮಿನ ಕೋಟೆ ಯಲಿ” ಎನ್ನುವಂತೆ ಮನಸಿನ ಅರಮನೆಯಲ್ಲಿ ಗೋಡೆಗಳ ಕಟ್ಟಿಕೊಂಡು ಯಾವುದೋ ಸಣ್ಣ ವಿನಾ ಕಾರಣಕ್ಕೆ ಇನ್ನೊಬ್ಬರಿಂದ ದೂರವಾಗಿರು ತ್ತೇವೆ. ಅಂತ ಸಂಬಂಧವನ್ನು ಮತ್ತೆ ಬೆಸೆಯುವ ಪ್ರಯತ್ನ ಮಾಡಬೇಕು ಮುಕ್ತವಾದ ಮಾತುಕತೆಯ ಮೂಲಕ ಎಂತಹುದೇ ಸಮಸ್ಯೆ ಬಗೆಹರಿಸಿಕೊಳ್ಳ ಬಹುದು. ಅಂತಹ ಮುಕ್ತ ಮಾತುಕತೆಗೆ ಹಾತೊರೆ ಯುವ ಮನಸ್ಸು ನಮ್ಮಲ್ಲಿ ಇರಬೇಕು ಅಷ್ಟೇ .
ಹೊಸ ವರ್ಷದ ನೆಪದಲ್ಲಿ ಅದೆಷ್ಟೋ ಹಣ ವ್ಯಯಿಸುವ ನಾವು ಅದನ್ನ ದುಡಿದು ಕೊಟ್ಟ ಕೈಗಳನ್ನೇ ಮರೆತು ಪಾರ್ಟಿ ಮಾಡುತ್ತೇವೆ. ಆದ್ರೆ ಕೊಟ್ಟ ಕೈಗಳು ಮಾತ್ರ ಎಂದಿಗೂ ನಿಮ್ಮನ್ನ ನಿಮ್ಮ ಸಂತೋಷವನ್ನ ಅಡ್ಡಿಪಡಿಸುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ನಿಮಗೆ ಒಳಿತನ್ನು ಬಯಸುವ ಆ ಮುಖಗಳಲ್ಲಿ ಕೊಂಚ ಹೂ ನಗೆ ಸದಾ ಇರುವಂತೆ ನೋಡಿಕೊಳ್ಳುವ ಶಪಥ ಮಾಡಿಕೊಳ್ಳಿ.
ನಿಮ್ಮ ಕನಸುಗಳು, ಬದುಕಿನಲ್ಲಿ ಹಾಕಿಕೊಂಡ ಗುರಿಗಳು ಎಷ್ಟರ ಮಟ್ಟಿಗೆ ಈಡೇರಿವೆ. ಅವುಗಳ ಸಫಲತೆ, ವಿಫಲತೆಗಳನ್ನು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ ಅವುಗಳ ಸರ್ಕಾರದತ್ತ ಹೊಸ ಹೆಜ್ಜೆಗಳನ್ನು ಇಡುವ ಪ್ರಯತ್ನ ಮಾಡಿ. ಈ ಸುಂದರವಾದ ಬದುಕು ಅದೆಷ್ಟೋ ಜನ್ಮಗಳ ಫಲ. ಇಂಥಹ ಜನ್ಮ ಪಡೆದ ನಾವೇ ಧನ್ಯರು ಎಂಬುದ ಮೊದಲು ಅರಿಯಿರಿ. ಸಾಧ್ಯವಾದರೆ ಇನ್ನೊಬ್ಬರ ನೋವು, ನಲಿವುಗಳಲ್ಲಿ ಭಾಗಿಯಾಗಿ `ಎಲ್ಲರೊಳಗೆ ಒಂದಾಗು ಮಂಕುತಿಮ್ಮ ‘ಎಂಬ ಡಿ. ವಿ .ಜಿ ಯವರ ನುಡಿಯಂತೆ ಬದುಕುವುದನ್ನು ಕಲಿತುಕೊಳ್ಳಬೇಕು
ಈ ವರ್ಷದಲ್ಲಿ ನಾವು ಓದಬೇಕಾದ ಪುಸ್ತಕಗಳು, ಕೇಳಬೇಕಾದ ಹಾಡುಗಳು, ಮಾಡಲೇ ಬೇಕಾದ ಒಳ್ಳೆಯ ಕಾರ್ಯಗಳು, ಕಿರಿಯರಿಗೆ ನೀಡಬೇಕಾದ ಸಲಹೆಗಳು ಮತ್ತು ಹಿರಿಯರಿಂದ ಪಡೆಯಬೇಕಾದ ಸಲಹೆಗಳನ್ನು ಪಟ್ಟಿ ಮಾಡಿಕೊಳ್ಳಿ
ಯಾಕೆಂದರೆ ಪುಸ್ತಕಗಳು ,ಹಾಡುಗಳು ಬದುಕಿನ ಬೆಸ್ಟ್ ಇನ್ವೆಸ್ಟ್‌ಮೆಂಟ್ ಅವುಗಳಿಗೆ ಒಮ್ಮೆ ಹಣ ಸುರಿದರೆ ನಿಮ್ಮ ಉಸಿರು ಹೋದರೂ ಅವುಗಳ ಹೆಸರುಗಳು, ಭಾವನೆಗಳು, ಸಂತೋಷ ಗಳು ಅವುಗಳು ಮನಸ್ಸಿಗೆ ನೀಡುವ ಮುದವೆಂ ದಿಗೂ ಕಡಿಮೆಯಾಗುವುದಿಲ್ಲ . ಹಿಂದಿನ ವರ್ಷ ಕ್ಕಿಂತ ಈ ವರ್ಷ ಇನ್ನೂ ಹೆಚ್ಚು ಜ್ಞಾನವಂತರಾಗಿ ದಯಾಳು ಗಳಾಗಿ ನಮ್ಮಿಂದ ಇನ್ನೊಬ್ಬರಿಗೆ ತೊಂದರೆಯಾಗ ದಂತೆ ಸ್ವಾಸ್ಥ್ಯ ಸಮಾಜ ಕಟ್ಟುವಂತಹ ಸಂಕಲ್ಪಗಳನ್ನು ಮಾಡಿಕೊಂಡು ಅವುಗಳ ಸಫಲತೆಗಾಗಿ ಎಲ್ಲ ರೊಂದಿಗೆ ಶ್ರಮಿಸುವಂತಹ ಶಪಥ ಮಾಡಿಕೊಳ್ಳೋಣ..
– ಬಸವರಾಜ ಕರುವಿನ ಬಸವನಾಳು