`ಒಬ್ಬನು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ’ ಎಂಬ ಮೂಲತತ್ವದ ಮೇಲೆ ಸರ್ವರ ಆರ್ಥಿಕ ಬದುಕನ್ನು ಪ್ರಜಾಸತ್ತಾತ್ಮಕ ತಳಹದಿಯ ಮೇಲೆ ಸಂಘಟಿಸಲ್ಪಟ್ಟ ಸಹಕಾರ ಚಳವಳಿಗೆ ಭಾರತದಲ್ಲಿ 120 ವರ್ಷಗಳು ಕಳೆದಿವೆ. `ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬ ಆಶಯದೊಂದಿಗೆ ಸಂಪತ್ತಿನ ಸಮಾನ ಹಂಚಿಕೆಯ ಮೂಲಕ ಸರ್ವರ ಆರ್ಥಿಕ ಸಬಲೀಕರಣ ಮತ್ತು ಶೋಷಣೆ ರಹಿತ ಸಮಾಜ ನಿರ್ಮಾಣದ ಸಾಧನೆಯ ಗುರಿ ಹೊಂದಿದೆ. ಭಾರತದಲ್ಲಿ ಜಾಗತೀಕರಣದ ಆರ್ಥಿಕ ನೀತಿ ಸಹಕಾರ ಚಳವಳಿಯ ಮೇಲೆ ತೀವ್ರ ಪ್ರಭಾವ ಬೀರಿತ್ತು. ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ತನ್ನ ಮಾರುಕಟ್ಟೆಯ ಪಾಲನ್ನು ಕಳೆದುಕೊಳ್ಳುತ್ತಾ ಸಾಗಿತ್ತು.
ಸರ್ಕಾರದ ಬೆಂಬಲ, ಪೋಷಣೆ, ಪ್ರೋತ್ಸಾಹವಿಲ್ಲದೆ ಸಹಕಾರ ಚಳವಳಿ ಸ್ವತಂತ್ರವಾಗಿ ಬೆಳೆಯಲು, ಬದುಕಲು ಸಾಧ್ಯವಾಗಬೇಕೆಂಬ ವಾತಾವರಣ ನಿರ್ಮಾಣವಾಗಿತ್ತು. ಇದರ ಪರಿಣಾಮವಾಗಿ `ಮಾಡು ಇಲ್ಲವೇ ಮಡಿ’ ಎಂಬ ಚಿಂತನೆಯ ಪ್ರತಿಫಲವಾಗಿ ಕರ್ನಾಟಕದಲ್ಲಿ ಸೌಹಾರ್ದ ಸಹಕಾರ ಚಳವಳಿ ಜನ್ಮ ತಾಳಿತು. ಸ್ವಾತಂತ್ರ್ಯದ ನಂತರ ಪಂಚವಾರ್ಷಿಕ ಯೋಜನೆಗಳ ಮೂಲಕ ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಸಹಾಯ ನೀಡಿದರೂ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ.
ನಂತರ ಶೇರು ಬಂಡವಾಳ ನೀಡಿಕೆ, ಸುಲಭ ಸಾಲ ಸೌಲಭ್ಯ, ಸಬ್ಸಿಡಿ ಸಾಲಕ್ಕೆ ಖಾತ್ರಿ, ಈ ರೀತಿಯಲ್ಲಿ ಸರ್ಕಾರ ಬೆಂಬಲವಾಗಿ ನಿಂತಿತು. ಸಹಕಾರ ಚಳವಳಿ ಸರ್ಕಾರ ಅವಲಂಬಿತ ಚಳವಳಿ ಆಯಿತು ಇದಕ್ಕೆ ಪೂರಕವಾಗಿ ಸಹಕಾರ ಕಾಯ್ದೆಯಲ್ಲಿ ಸರ್ಕಾರ ಕೂಡ ಬಂಡವಾಳದಲ್ಲಿ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಲಾಯಿತು.
ಜೊತೆಗೆ ನಿಯಂತ್ರಣಗಳು, ಚುನಾಯಿತ ಆಡಳಿತ ಮಂಡಳಿಯ ಮೇಲೆ ಕ್ರಮಗಳು, ರದ್ದತಿ, ನಾಮನಿರ್ದೇಶನ, ಚುನಾವಣೆ ಒಳಗೊಂಡಂತೆ ವಾರ್ಷಿಕ ಸಭೆಗಳ ಮುಂದೂಡಿಕೆ ಸರ್ಕಾರಕ್ಕೆ ಮತ್ತು ನಿಬಂಧಕರಿಗೆ ನಿರ್ದೇಶನಗಳನ್ನು ನೀಡುವ ಅವಕಾಶಗಳಿದ್ದವು.
ಇವೆಲ್ಲವುಗಳು ಪ್ರಜಾಸತ್ತಾತ್ಮಕ ನಿಯಂತ್ರಣ ಸಂಸ್ಥೆಗಳಿಗೆ ಮಾರಕವಾಗಿಯೋ ಅತಿಯಾದ ಸರ್ಕಾರದ ಹಸ್ತಕ್ಷೇಪ ಎಂದು ಪರಿಗಣಿಸುವುದರ ಜೊತೆಗೆ ಇವುಗಳನ್ನು ಕ್ರೂರ ಕಾನೂನುಗಳು ಎಂದೇ ಪರಿಗಣಿಸಲಾಯಿತು. ಇದರಿಂದಾಗಿ ಸಹಕಾರದ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿತ್ತು ಹಾಗೂ ಸಹಕಾರ ಚಳವಳಿ ಬೆಳವಣಿಗೆಗೆ ಮಾರಕವಾಗುವುದು ಕಂಡುಬಂದಿತು.
ಈ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಲು ಕೇಂದ್ರ ಸರ್ಕಾರವು 1987ರಲ್ಲಿ ಶ್ರೀ ಅರ್ಧನಾರೀಶ್ವರನ್ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಈ ಸಮಿತಿ ತನ್ನ ವರದಿಯಲ್ಲಿ `ಸರ್ಕಾರದ ಅತಿಯಾದ ಹಸ್ತಕ್ಷೇಪದಿಂದಾಗಿ ದೇಶದಲ್ಲಿ ಸಹಕಾರಿ ಚಳವಳಿ ವಿಫಲ’ವಾಗಿದೆ ಎಂದು ತಿಳಿಸಿತು.
ಸಹಕಾರ ಚಳುವಳಿ ವಿಫಲವಾದರೂ ಸಹ ಜನಸಾಮಾನ್ಯರು ತಮ್ಮ ಆರ್ಥಿಕ ಏಳಿಗೆಗಾಗಿ ತಾವೇ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸುವ ಮೂಲಕ ಈ ಚಳವಳಿಯನ್ನು ಯಶಸ್ವಿಗೊಳಿಸುವ ಅಗತ್ಯತೆಯನ್ನು ಗುರುತಿಸಿದ ಕೇಂದ್ರ ಯೋಜನಾ ಆಯೋಗವು ಸರ್ಕಾರದ ಹಸ್ತ ಕ್ಷೇಪವನ್ನು ತಡೆಯಬಲ್ಲ, ಸದಸ್ಯರಿಗೆ ಹೆಚ್ಚು ಅಧಿಕಾರ ನೀಡುವ ಹಾಗೂ ಅವರ ಸಹಭಾಗಿತ್ವ ಹೆಚ್ಚಿಸುವ, ಸಹಕಾರಿ ಸಂಸ್ಥೆಗಳಿಗೆ ಮುಕ್ತ ವಾತಾವರಣ ನಿರ್ಮಿಸುವಂತಹ ಮಾದರಿ ಸಹಕಾರಿ ಕಾಯ್ದೆಯನ್ನು ರೂಪಿಸಲು ಚೌದರಿ ಬ್ರಹ್ಮ ಪ್ರಕಾಶರ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿತು.
ಈ ಸಮಿತಿ 1991ರಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ಸಹಕಾರಿ ಕಾಯ್ದೆಗಳ ಬಗ್ಗೆ ಅಧ್ಯಯನ ಮಾಡಿ ಆಯೋಗದವರು ಸರ್ಕಾರದ ಕನಿಷ್ಠ ಪಾತ್ರವಿರುವ ಮಾದರಿ ಕಾಯ್ದೆಯನ್ನು ರೂಪಿಸಿ, ದೇಶದ ಎಲ್ಲಾ ರಾಜ್ಯಗಳಿಗೆ ಕಳಿಸಲಾಯಿತು. ಇದಕ್ಕೆ ಸ್ವಾಯತ್ತ ಕಾಯಿದೆ (ಲಿಬರಲ್ ಕಾಯಿದೆ) ಎಂದು ಹೆಸರಿಸಲಾಯಿತು. ಈ ಕಾಯ್ದೆಯ ಅನುಷ್ಠಾನವೇ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ಕರ್ನಾಟಕದಲ್ಲಿ ಸೌಹಾರ್ದ ಕಾಯಿದೆ 1 ಜನವರಿ 2001 ರಂದು ಜಾರಿಗೆ ಬಂದಿತು. ಇದರ ಜ್ಞಾಪಕಾರ್ಥವಾಗಿ ಜನವರಿ ಒಂದರಂದು ರಾಜ್ಯಾದ್ಯಂತ ಸೌಹಾರ್ದ ಸಹಕಾರಿ ದಿನವನ್ನಾಗಿ ಆಚರಿಸಲಾಗುತ್ತದೆ.
ಜನವರಿ 1, 2025ಕ್ಕೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸಿಕೊಳ್ಳುತ್ತಾ ಇದೆ. ಈ ಸಂದರ್ಭದಲ್ಲಿ ಸೌಹಾರ್ದ ಸಹಕಾರಿಗಳು ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ತಮ್ಮ ಅಸ್ತಿತ್ವದ ಬಗ್ಗೆ ಅರಿವು ಮೂಡಿಸಬೇಕು. ಸೌಹಾರ್ದ ಸಹಕಾರಿಗಳು ಉತ್ತಮ ಆರ್ಥಿಕ ಸಂಘಟನೆಗಳು ಎಂದು ನಿರೂಪಿಸಬೇಕು.
ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಶಾಸನಬದ್ಧ ಮಾರ್ಗದರ್ಶನಗಳ ಜೊತೆಗೆ ಅಭಿವೃದ್ಧಿಗೆ ಅವಶ್ಯಕವಿರುವ ಶಿಕ್ಷಣ ತರಬೇತಿ ಪ್ರಚಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜರುಗುತ್ತಿರುವುದು ಶ್ಲಾಘನೀಯ. ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯು ಸೌಹಾರ್ದ ಸಹಕಾರಿಗಳ ಮೇಲ್ವಿಚಾರಣೆ ಉಸ್ತುವಾರಿ ಹಾಗೂ ನಿಯಂತ್ರಣದ ಜವಾಬ್ದಾರಿ ನಿರ್ವಹಿಸುವ ಶಾಸನಬದ್ಧವಾಗಿ ರಚನೆಗೊಂಡು ಸದಸ್ಯ ಸಹಕಾರಿಗಳಿಂದಲೇ ಆಯ್ಕೆಯಾಗಿರುವ ಆಡಳಿತ ಮಂಡಳಿಯನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ದೇಶದ ಪ್ರಥಮ ಮಾದರಿ ಸಹಕಾರಿ ಸಂಸ್ಥೆಯಾಗಿದೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯೂ ತನ್ನದೇ ಆದ ಧ್ಯೇಯ, ದೃಷ್ಟಿ ಹಾಗೂ ಮೌಲ್ಯಗಳನ್ನು ಹೊಂದಿದೆ.
ಧ್ಯೇಯ : ಸ್ವಾಯತ್ತತೆ, ಸ್ವಯಂ ಆಡಳಿತ, ಸ್ವಯಂ ನಿಯಂತ್ರಣದ ಜೊತೆಗೆ ವೃತ್ತಿಪರ ಪಾರದರ್ಶಕ ಹಾಗೂ ಉತ್ತರದಾಯಿತ್ವದ ಸೌಹಾರ್ದ ಸಹಕಾರಿ ನಿರ್ಮಾಣ.
ದೃಷ್ಟಿ: ಸ್ವಾಯತ್ತ, ಸಾಮಾಜಿಕ ಬದ್ಧತೆ, ಸಕಾರಾತ್ಮಕ ಚಿಂತನೆ, ಅಭಿವೃದ್ಧಿಪರ ವಿಶ್ವ ಮಾದರಿ ಸಹಕಾರಿ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವುದು.
ಮೌಲ್ಯಗಳು : ಜ್ಞಾನ, ಸೇವೆ, ಬದ್ಧತೆ, ಭಾಗವಹಿಸುವಿಕೆ ಉತ್ತರದಾಯಿತ್ವ.
ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಕಾಯ್ದೆ ಇಡೀ ರಾಜ್ಯದಲ್ಲಿ 31.3.2024ಕ್ಕೆ ಒಟ್ಟು 6259 ಸೌಹಾರ್ದ ಸಹಕಾರಿ ಸಂಘಗಳಿದ್ದು, 43,704 ಕೋಟಿ ಠೇವಣಿ, ದುಡಿಯುವ ಬಂಡವಾಳ 49,396 ಕೋಟಿ, ಲಾಭ 626 ಕೋಟಿ, ಉದ್ಯೋಗದಲ್ಲಿರುವವರು 75,000, 1631 ಸೌಹಾರ್ದ ಸಹಕಾರ ಸಂಘಗಳು ಈ ಸ್ಟ್ಯಾಂಪಿಂಗ್ ಕೇಂದ್ರಗಳನ್ನು ಹೊಂದಿವೆ. ದಾವಣಗೆರೆ ಜಿಲ್ಲೆಯಲ್ಲಿ 96 ಸೌಹಾರ್ದ ಸಹಕಾರ ಸಂಘಗಳು ಇದ್ದು, ಇದರಲ್ಲಿ 30 ಸಂಘಗಳು ನಿಷ್ಕ್ರಿಯೆಗೊಂಡಿವೆ. ಸೌಹಾರ್ದ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿಶೇಷವೆಂದರೆ ಯುವಕರು ಮತ್ತು ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದರಿಂದ `ಯುವ ಪೀಳಿಗೆಯ ನವ ಸಹಕಾರಿ ಸಂಸ್ಥೆ’ಗಳೆಂದು ಈ ಕ್ಷೇತ್ರವನ್ನು ಗುರುತಿಸಲಾಗುತ್ತದೆ. 2012ರಲ್ಲಿ ದೇಶದ 97ನೇ ಸಂವಿಧಾನ ತಿದ್ದುಪಡಿಯಿಂದಾಗಿ ಸಹಕಾರ ಕ್ಷೇತ್ರಕ್ಕೆ ಮಾನ್ಯತೆ ನೀಡಿ ಸಹಕಾರಿಯ ಆಡಳಿತ ಹಾಗೂ ವ್ಯವಹಾರಿಕ ಸ್ವಾತಂತ್ರ್ಯವನ್ನು ನೀಡಿ ಸಹಕಾರಿಗಳಿಗೆ ಸಂತೋಷವನ್ನುಂಟು ಮಾಡಿದೆ.
ಕೇಂದ್ರ ಸರ್ಕಾರ `ಸಹಕಾರದಿಂದ ಸಮೃದ್ಧಿ’ ಎಂಬ ದೃಷ್ಟಿಕೋನದ ಮೂಲಕ ಸಹಕಾರಿ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಪಾರದರ್ಶಕತೆ, ಆಧುನೀಕರಣ, ಗಣಕೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಂಡು ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರವನ್ನು ಹೆಚ್ಚಿಸಲು ಜುಲೈ 6, 2021 ರಂದು ಕೇಂದ್ರ ಸರ್ಕಾರ ಕೃಷಿ ಇಲಾಖೆಯಿಂದ ಸಹಕಾರ ಕ್ಷೇತ್ರವನ್ನು ಪ್ರತ್ಯೇಕಗೊಳಿಸಿ, ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿ, ಕಾಲಕ್ಕೆ ತಕ್ಕಂತೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ದೆಹಲಿಯಲ್ಲಿ ದಿನಾಂಕ 25.11.2024 ರಿಂದ 29.11.2024ವರೆಗೆ ಐಸಿಎ ಏರ್ಪಡಿಸಿದ್ದ ಜಾಗತಿಕ ಸಹಕಾರ ಸಮ್ಮೇಳನ ಮತ್ತು ವಿಶ್ವಸಂಸ್ಥೆ ಸಹಕಾರ ಸಂಸ್ಥೆಗಳು ಉತ್ತಮ ರಾಷ್ಟ್ರವನ್ನು ನಿರ್ಮಾಣ ಮಾಡಬಲ್ಲವು ಎಂಬ ದೃಢ ಸಂಕಲ್ಪದಿಂದ 2025 ವರ್ಷವನ್ನು ಅಂತರರಾಷ್ಟ್ರೀಯ ಸಹಕಾರ ವರ್ಷವೆಂದು ಘೋಷಿಸಿರುವುದು ಸಹಕಾರ ಕ್ಷೇತ್ರ ಪ್ರಾಮುಖ್ಯತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಸಹಕಾರ ಚಳವಳಿಯು ಸುದೀರ್ಘ ಮತ್ತು ವೈವಿಧ್ಯಮಯ ಇತಿಹಾಸ ಹೊಂದಿದ್ದು, ಗಮನಾರ್ಹ ಸಾಧನೆಗಳು ಮತ್ತು ಸವಾಲುಗಳಿಂದ ಗುರುತಿಸಲ್ಪಟ್ಟಿದೆ. ಇದು ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಭಾಗವಾಗಿ ಉಳಿದಿದೆಯಲ್ಲದೆ ಭವಿಷ್ಯದ ಭರವಸೆಯಂತೆ ಕಾಣುತ್ತಿದೆ.
– ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ.