ಪುಸ್ತಕಗಳು ನಾವು ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತವೆ

ಪುಸ್ತಕಗಳು ನಾವು ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತವೆ

ಮನುಷ್ಯನು ತನ್ನ ಮಕ್ಕಳಿಗೆ ಏನನ್ನಾದರೂ ಬಿಟ್ಟು ಹೋಗುವುದಿದ್ದರೆ, ಬ್ಯಾಂಕಿನ ಠೇವಣೆಯನ್ನಲ್ಲ, ಒಳ್ಳೆಯ ಪುಸ್ತಕಗಳಿಂದ ತುಂಬಿದ ಗೃಹ ಗ್ರಂಥಾಲಯವನ್ನು ಬಿಟ್ಟು ಹೋಗಬೇಕು ಅದರಲ್ಲಿ ಮನುಷ್ಯರಿಗೆ ಬೇಕಾದುದೆಲ್ಲವೂ ಇರುತ್ತವೆ, 

ಗ್ರಂಥಾಲಯವೊಂದು ದೇವಾಲಯ

ಗ್ರಂಥಗಳೇ ದೇವರು

ಓದುವಿಕೆಯೇ ಭಕ್ತಿಯ ಪೂಜೆ

ಓದುಗರೇ ಭಕ್ತರು !

ಈ ಜಗತ್ತು ಕಂಡಿರುವ ಮನುಷ್ಯ ನಿರ್ಮಾಣದ ಅತ್ಯಂತ ಗಮನಾರ್ಹ ಸೃಷ್ಟಿ ಎಂದರೆ ಪುಸ್ತಕಗಳು, ನಾವು ಅಳಿದರೂ ಪುಸ್ತಕಗಳು ಬದುಕಿ ಉಳಿದಿರುತ್ತವೆ. ಮನುಷ್ಯ ಕಟ್ಟಿರುವುದು ಯಾವುದೂ ಸ್ಥಿರವಾಗಿ ನಿಲ್ಲುವುದಿಲ್ಲ, ಕೀರ್ತಿ ಸ್ತಂಭಗಳು ಕುಸಿದು ಬೀಳುತ್ತವೆ. ರಾಷ್ಟ್ರಗಳು ನಾಶಗೊಳ್ಳುತ್ತವೆ, ನಾಗರಿಕತೆಗಳಿಗೆ ವೃದ್ಧಾಪ್ಯ ಬಂದು ಅವು ಸತ್ತೋಗುತ್ತವೆ ಆದರೆ ಪುಸ್ತಕಗಳಿಗೆ ಸಾವು ಬರುವುದಿಲ್ಲ. 

ಹೃದಯದಿಂದ ಬಂದರು ಹೃದಯಕ್ಕೆ ಹೋಗುತ್ತದೆ. ಹೃದಯದಿಂದ ಬಂದ ಪುಸ್ತಕವು ಶತಮಾನಗಳ ನಂತರವೂ ಇನ್ನೂ ಜನ್ಮವೆತ್ತಿ ಬರದಿರುವ ಪೀಳಿಗೆಗಳ ಹೃದಯಗಳನ್ನು ತಟ್ಟುತ್ತವೆ, ಗುರುಗಳು ನಮಗೆ ಕೆಲವೊಂದನ್ನು ಹೇಳಬಹುದು, ಅವರು ನಮಗೆ ಹೇಳಿದ, ಹೇಳದೇ ಇರುವ ಎಲ್ಲಾ ಜ್ಞಾನವೂ ಪುಸ್ತಕಗಳಲ್ಲಿ ಇರುತ್ತದೆ, ನಮಗೆ ಬೋಧೆ ನೀಡುವ ಜನರಲ್ಲಿ ಇಲ್ಲದ ಒಂದು ದೊಡ್ಡ ಗುಣ ಪುಸ್ತಕಗಳಲ್ಲಿ ಇರಬಹುದು, ಆದರೆ ಪುಸ್ತಕಗಳು ನಮಗೆ ಬೇಕಾದುದನ್ನು ಬೇಸರವಿಲ್ಲದೆ ಎಷ್ಟು ಸಲವಾದರೂ ಪುನರುಚ್ಚರಿಸುತ್ತವೆ,

ಮನುಷ್ಯನು, ತನ್ನ ಸ್ನೇಹಿತರನ್ನು ಆರಿಸಿಕೊ ಳ್ಳುವಂತೆ, ತಾನು ಓದುವ ಪುಸ್ತಕಗಳನ್ನು ಆರಿಸಿ ಕೊಳ್ಳಬೇಕು, ಯಾರು ನಮ್ಮನ್ನು ವಂಚಿಸಿದರೂ ಪುಸ್ತಕಗಳು ನಮ್ಮನ್ನು ವಂಚಿಸಲಾರವು, ಪುಸ್ತಕಗಳು ನಮಗೆ ಒಳ್ಳೆಯ ಪ್ರೀತಿಯಿಂದ ಹೇಗೆ ಬದುಕಬೇಕೆನ್ನುವುದನ್ನು ಹೇಳಿಕೊಡುತ್ತವೆ, ನಾವು ಬದುಕುವುದಕ್ಕೋಸುಗ ತಿಳಿಯಬೇಕಲ್ಲದೆ, ತಿಳಿಯುವುದಕ್ಕೋಸುಗ ಬದುಕಬಾರದು,

ನಾವು ಪುಸ್ತಕಗಳಿಂದ ಕಲಿಯುವುದು ಇರುವಂತೆ ಜಗತ್ತಿನಿಂದ ಕಲಿಯುವುದೂ ಇದೆ, ಅದಕ್ಕೆಂತಲೇ, ಕೋಶ ಓದಬೇಕು, ದೇಶ ನೋಡಬೇಕು ಎಂದು ಹೇಳುತ್ತಾರೆ, ನಿಜವಾದ ಬುದ್ಧಿವಂತರು ಪುಸ್ತಕಗಳನ್ನು ಓದುವಂತೆ ಜೀವನವನ್ನೂ ಓದಬೇಕೆಂದು  ಹೇಳುತ್ತಾರೆ, 

ಮನುಷ್ಯನ ಚಾರಿತ್ರ್ಯವು ಅವನು ಯಾರೊಂದಿಗೆ ಇರುವನು ಅವರೊಂದಿಗೆ ನಿರ್ಮಾಣವಾಗುವಂತೆ, ಅದು, ಅವನು ಓದುವ ಪುಸ್ತಕಗಳಿಂದಲೂ ನಿರ್ಮಾಣವಾಗುತ್ತದೆ.

ಸ್ನೇಹಿತರೇ, ‘ಬುದ್ಧಿ ಬರಲು ಸ್ವಂತ ಓದಬೇಕು ಗ್ರಂಥ’ ನುಡಿ ಸತ್ಯವಾದದ್ದು, ನಾವೆಲ್ಲರೂ ಇಂದಿನಿಂದಲೇ ಕನ್ನಡ ಪುಸ್ತಕಗಳನ್ನು ಕೊಂಡುಕೊಳ್ಳೋಣ, ಬಿಡುವಿನ ಸಮಯದಲ್ಲಿ ಓದುತ್ತಾ ನಮ್ಮ ಮಕ್ಕಳನ್ನೂ ಓದುಗರನ್ನಾಗಿ ಮಾಡೋಣ, ಮಕ್ಕಳಲ್ಲಿ ಆಟ ಆಡುವ ಅಭ್ಯಾಸ ಬೆಳೆಯುವಷ್ಟು ಸಹಜವಾಗಿ ನಮ್ಮಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಗ್ರಂಥಾಲಯಗಳೇ ಮಕ್ಕಳ ಮೊದಲ ಜ್ಞಾನ ದೇಗುಲಗಳು, ಸಂಪತ್ತನ್ನು ಉಪಯೋಗಿಸಿದ್ದಲ್ಲಿ ತೀರಿಹೋಗುತ್ತದೆ, ವಿದ್ಯೆಯನ್ನು ಉಪಯೋಗಿಸಿದರೆ ಮತ್ತೆ ಮತ್ತೆ ಹೆಚ್ಚಾಗುತ್ತದೆ, ಸರಸ್ವತಿ ಸದಾ ನಮ್ಮ ಮನೆಯಲ್ಲಿ ನೆಲೆಸಿರುವಂತೆ ನೋಡಿಕೊಳ್ಳೋಣ ಶುಭವಾಗಲಿ. 

– ಜೆಂಬಿಗಿ ಮೃತ್ಯುಂಜಯ, 

ಕನ್ನಡ ಉಪನ್ಯಾಸಕರು, ದಾವಣಗೆರೆ.

error: Content is protected !!