ಬೇರಾವುದೋ ಉದ್ಯೋಗದಿಂದ ಸರ್ಕಾರಿ ಕೆಲ್ಸ ಅಂತ ಬಂದೋರನ್ನು ಕಂಡಿದ್ದೇನೆ. ಆದರೆ, ಪತ್ರಿಕೆಯಿಂದ ಬಂದವರನ್ನು ನೋಡಿದ್ದು ಇದೇ ಮೊದಲು ಎಂದರಲ್ಲದೇ, ನಡೀರಿ.. ನಾನು ನಿಮ್ಮ ಜೊತೆಯೇ ಕೂರುತ್ತೇನೆ. ಪೇಪರ್‌ನೋರ ಜೊತೆ ಇದ್ದರೆ ಒಂದಷ್ಟು ವಿಚಾರ ತಿಳಿದಂತಾಗುತ್ತದೆ ಎಂದು ನನ್ನ ಕಛೇರಿಗೇ ಬಂದು, ಚಹಾ ಸ್ವೀಕರಿಸಿ, ಸೊಗಸಾಗಿದೆ ಎಂದು ಸೌಜನ್ಯ ಮೆರೆದರು ಕೃಷ್ಣ….
ಅದು ತೊಂಬತ್ತರ ದಶಕದ ಕೊನೆಯ ದಿನಗಳು. ರೈಲು ಉದ್ಯೋಗಿಯಾಗಿದ್ದ ನಾನಂದು ರಾತ್ರಿ ಪಾಳಿಯಲ್ಲಿ ಹರಿಹರ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ.
ಮಧ್ಯರಾತ್ರಿ ಹನ್ನೆರಡರ ಸಮಯ. ಸ್ಟೇಷನ್ ಮುಂದೆ ಕಾರುಗಳು ಬಂದು ನಿಂತವು. ಆ ವೇಳೆಗಾಗಲೇ ನೆರೆದಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ನಾಯಕನಿಗೆ ಜೈಕಾರ ಹಾಕಲಾರಂಭಿಸಿದ್ದರೆ, ಮುಂದಿನ ವಾಹನದಿಂದ ಬಂದಿಳಿದಿದ್ದ ಪಕ್ಷದ ಯುವ ನಾಯಕರುಗಳು, ಮುಂಚೆಯೇ ವಿಚಾರ ತಿಳಿಸಿದ್ದರೂ ತಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ, ರೈಲು ಬರುವವರೆಗೂ ವಿಶ್ರಮಿಸಲು ಪ್ರಯಾಣಿಕರ ಕೊಠಡಿ ಸ್ವಚ್ಚಗೊಳಿಸದಿರುವುದಕ್ಕೆ ಸಿಡಿಮಿಡಿಗೊಳ್ಳುತ್ತಾ, ರೇಗುತ್ತಿದ್ದವರನ್ನು ಸಂಭಾಳಿಸಲು ನಾನು ಕರ್ತವ್ಯ ದೃಷ್ಟಿಯಿಂದ ಮುಂದಾದಾಗ ಕಂಡವರು ಅಂದು ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿತ್ರ ಹೆಚ್. ಆಂಜನೇಯ!
ಸದ್ಯದಲ್ಲೇ ಬರಲಿರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಛಲದಿಂದ ಪಾಂಚಜನ್ಯ ಮೊಳಗಿಸಿ, ಜೈತ್ರಯಾತ್ರೆ ಕೈಗೊಂಡಿದ್ದ ಅಂದಿನ ಕೆ.ಪಿ.ಸಿ.ಸಿ. ಅಧ್ಯಕ್ಷರೂ ಆಗಿದ್ದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಹರಪನಹಳ್ಳಿ ಕಾರ್ಯಕ್ರಮ ಮುಗಿಸಿ, ರಾತ್ರಿ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ನಲ್ಲಿ ಬೆಂಗಳೂರಿಗೆ ವಾಪಸ್ಸಾಗಲು ಹರಿಹರ ನಿಲ್ದಾಣಕ್ಕೆ ಬಂದಿದ್ದರು. ಮೊದಲೇ ತಿಳಿಸಿದ್ದರೂ ಸ್ವಚ್ಚತಾ ಕಾರ್ಯಕೈಗೊಳ್ಳದ ಬಗ್ಗೆ ಆಕ್ಷೇಪಿಸುತ್ತಿದ್ದ ಆಂಜನೇಯರಿಗೆ ಸಮಧಾನ ಹೇಳಿ, ತ್ವರಿತವಾಗಿ ಶುಚಿಗೊಳಿಸಲು ಸಿಬ್ಬಂದಿಗೆ ಸೂಚಿಸಿ, ಅಧ್ಯಕ್ಷರನ್ನು ಕರೆತರುವಂತೆ ವಿನಂತಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದದ್ದಾಯಿತು.
ನೀಳಕಾಯ, ವಯಸ್ಸು ಅರವತ್ತು ದಾಟಿದ್ದರೂ ನಲ್ವತ್ತರ ಹರೆಯದವರ ಚುರುಕು ನಡಿಗೆ, ತೀಕ್ಷ್ಣ ಆದರೆ ಮಂದಸ್ಮಿತ… ಒಟ್ಟಿನಲ್ಲಿ ಕಂಡೊಡನೆ ಗೌರವ ಭಾವವುಕ್ಕಿಸುವ ಕೃಷ್ಣರು ಸರಸರನೆ ಕೊಠಡಿಯ ಒಳ ಕಾಲಿಟ್ಟರು. ಜೊತೆಗಿದ್ದ ಆಂಜನೇಯರು, ನನ್ನನ್ನು ಪರಿಚಯಿಸುತ್ತಾ , “ಇವರು ರೈಲು ಇಲಾಖೆಯಲ್ಲಿದ್ದಾರೆ. ಆದರೆ ಮೂಲತಃ ಪತ್ರಕರ್ತರು. ಒಳ್ಳೆಯ ಬರಹಗಾರರು. ಇವರನ್ನು ಪತ್ರಿಕೆಯಲ್ಲಿ ಉಳಿಸಿಕೊಳ್ಳಲಾಗಲಿಲ್ಲ, ಅದೊಂದು ವಿಪರ್ಯಾಸ” ಎಂದಿದ್ದನ್ನು ಆಲಿಸಿದ ಕೃಷ್ಣರು ಆಶ್ಚರ್ಯಚಕಿತರಾದರು. ಬೇರಾವುದೋ ಉದ್ಯೋಗದಿಂದ ಸರ್ಕಾರಿ ಕೆಲ್ಸ ಅಂತ ಬಂದೋರನ್ನು ಕಂಡಿದ್ದೇನೆ. ಆದರೆ, ಪತ್ರಿಕೆಯಿಂದ ಬಂದವರನ್ನು ನೋಡಿದ್ದು ಇದೇ ಮೊದಲು ಎಂದರಲ್ಲದೇ, ನಡೀರಿ.. ನಾನು ನಿಮ್ಮ ಜೊತೆಯೇ ಕೂರುತ್ತೇನೆ. ಪೇಪರ್‌ನೋರ ಜೊತೆ ಇದ್ದರೆ ಒಂದಷ್ಟು ವಿಚಾರ ತಿಳಿದಂತಾಗುತ್ತದೆ ಎಂದು ನನ್ನ ಕಛೇರಿಗೇ ಬಂದು, ಚಹಾ ಸ್ವೀಕರಿಸಿ, ಸೊಗಸಾಗಿದೆ ಎಂದು ಸೌಜನ್ಯ ಮೆರೆದರು.
ಅಂದು ರೈಲು ಒಂದು ತಾಸು ತಡವಾಗಿತ್ತು. ಕಿರಿದಾಗಿದ್ದ ಬುಕ್ಕಿಂಗ್ ಆಫೀಸಿನಲ್ಲಿ ಅಭಿಮಾನಿಗಳು ಕಿಕ್ಕಿರಿಯಲಾರಂಭಿಸಿದ್ದರು. ಸಹಜ ಮಾತುಕತೆ ಸಾಧ್ಯವಾಗಲಿಲ್ಲ. `ಮಾಸ್ಟರೇ, ನಿಮಗೆ ತೊಂದರೆ ಎನಿಸದಿದ್ದರೆ, ಇಬ್ಬರೇ ಪ್ಲಾಟ್ ಫಾರಂ ನಲ್ಲಿ ಅಷ್ಟು ದೂರ ಹೋಗಿ ಬರಬಹುದಲ್ಲವೇ?’ ಎಂದರು. ಅಂದು ರಾಜ್ಯಸಭಾ ಸದಸ್ಯರೂ ಆಗಿದ್ದ ಸಾಹೇಬರು. ನನ್ನ ಸಹಾಯಕನಿಗೆ ಟಿಕೆಟ್ ಕೊಡಲು ಹಚ್ಚಿ ಹೊರ ಹೊರಟಿದ್ದಾಯಿತು.
ಕೃಷ್ಣರೇನೋ `ನಿಮ್ಮ ಬಳಿ ಸಾಕಷ್ಟು ವಿಚಾರ ತಿಳಿಯುವುದಿದೆ’ ಎಂದು ಆರಂಭದಲ್ಲಿ ಹೇಳಿದ್ದರು. ಆದರೆ ಆ ಮುಕ್ಕಾಲು ಘಂಟೆಯಲ್ಲಿ ನಾನು ಮಾತನಾಡಿದ್ದು ತೀರಾ ಅಂದ್ರೆ ತೀರಾ ಕ್ವಚಿತ್. ದಶಕಗಳ ಹಿಂದೆ 1975 ರ ಸುಮಾರಿನಲ್ಲಿ ರಾಜ್ಯದ ಕೈಗಾರಿಕಾ ಸಚಿವರಾಗಿದ್ದ ಕೃಷ್ಣರ ಜೊತೆ ಏಕೈಕ ಪತ್ರಕರ್ತನಾಗಿ ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಂಡದ್ದು, ಚಿತ್ರದುರ್ಗ ಪ್ರವಾಸೀ ಮಂದಿರದಲ್ಲಿ ಊಟ ಮಾಡಿದ್ದನ್ನು ನೆನಪಿಸಿದ್ದಷ್ಟೆ. ಉಳಿದಂತೆ ನಾನು ಆಲಿಸಿದ್ದು ಮಾತ್ರ. ನನಗಿಂತಾ ಎರಡೂವರೆ ದಶಕಕ್ಕೂ ಹೆಚ್ಚಿನ ವಯೋಮಾನದ, ದೇಶ – ವಿದೇಶಗಳಲ್ಲಿ ಅಭ್ಯಸಿಸಿ, ರಾಜ್ಯ – ಕೇಂದ್ರದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ, ರಾಜ್ಯದ ರಾಜ ಕಾರಣಿಗಳಲ್ಲಿ highly talented ಎನಿಸಿದ್ದ ಕೃಷ್ಣರು. ಹಿಂದಿನ ಮೂರೂವರೆ ದಶಕಗಳ ರಾಜಕೀಯ ಚಿತ್ರಣ ಹಾಗೂ ಮುಂದಿನ ದಿನಗಳ ನಾಡು ಮುನ್ನಡೆಯಬೇಕಾದ – ಮುನ್ನಡೆಸಬೇಕಾದ ಮಾರ್ಗೋಪಾಯಗಳನ್ನು ವಿವರಿಸಿದ್ದನ್ನು ಕೇಳಿ, ಸಾರ್ಥಕ್ಯ ಭಾವ ಅನುಭವಿಸಿದ್ದು ನಾನು !!
ರೈಲು ಬಂತು. ಹೊರಡುವ ಮುನ್ನ, ಬೆಂಗಳೂರಿಗೆ ಬಂದು ಭೇಟಿ ಮಾಡಲು ಆಹ್ವಾನವಿತ್ತ ಕೃಷ್ಣರು `ಒಂದು ತಾಸು ಕಳೆದದ್ದೇ ಗೊತ್ತಾಗಲಿಲ್ಲ, ಬರೆಯುತ್ತಿರಿ, ಬಿಡಬೇಡಿ’ ಎಂದು ಸೂಚಿಸುವುದನ್ನು ಮರೆಯಲಿಲ್ಲ.
ಕೃಷ್ಣರಿಗೆ ಕೃಷ್ಣರೇ ಸಾಟಿ ! ಹೋಗಿ ಬನ್ನಿ ಸರ್, ಅಂತಿಮ ನಮಸ್ಕಾರ.
– ಹಳೇಬೀಡು ರಾಮಪ್ರಸಾದ್, ದಾವಣಗೆರೆ.