ಮನೋಧರ್ಮದ ವಿಚಾರ, ಭಕ್ತಿಯ ಶಕ್ತಿ ತೋರಿಸುವ ಮಹಾಗ್ರಂಥ ಭಗವದ್ಗೀತೆ

ಮನೋಧರ್ಮದ ವಿಚಾರ, ಭಕ್ತಿಯ ಶಕ್ತಿ ತೋರಿಸುವ ಮಹಾಗ್ರಂಥ ಭಗವದ್ಗೀತೆ

ಮಹಾಭಾರತದಲ್ಲಿ ಇರುವಂತಹ ಎರಡು ಅತ್ಯುತ್ತಮ ಭಾಗಗಳು, ವಿಷ್ಣು ಸಹಸ್ರನಾಮ ಮತ್ತು ಭಗವದ್ಗೀತೆ. 

ಮೇಲ್ನೋಟಕ್ಕೆ ಕೇವಲ ಕಥೆಯಂತಿರುವಂತಹ ಮಹಾ ಭಾರತವು ತನ್ನೊಳಗೆ ತತ್ವ ಜ್ಞಾನಗಳನ್ನು ಮನೋಧರ್ಮದ ವಿಚಾರಗಳನ್ನು ಭಕ್ತಿಯ ಶಕ್ತಿಯನ್ನು ತೋರಿಸುವಂತಹ ಮಹಾ ಗ್ರಂಥ. ಅದರಲ್ಲಿರುವ ತತ್ವ ಸಾರ ಸರ್ವಸ್ವವೇ ಭಗವದ್ಗೀತೆ. 

ಅರ್ಜುನನು ಕಂಗಾಲಾದಾಗ, ಭಯದಿಂದ ಮೋಹ ಎಂಬ ವ್ಯಾಮೋಹದಿಂದ ತನ್ನ ಮನಸ್ಸಿನ ಸ್ಥಿಮಿತವನ್ನು ಕಳೆದುಕೊಂಡಾಗ ಭಗವಂತ ಮಾಡಿದಂತಹ ಉಪದೇಶವಿದು. ಅರ್ಜುನನ್ನು  ಕೇವಲ ನಿಮಿತ್ತವಾಗಿಟ್ಟುಕೊಂಡು ಸಕಲ ಮಾನವರಿಗೂ ಅವರ ಕಷ್ಟಕಾಲಗಳಲ್ಲಿ ಧೈರ್ಯಸ್ಥೈರ್ಯಗಳನ್ನು ತುಂಬುವ ಜೊತೆಗೆ ತನ್ನ ಬಳಿಗೆ ಹೇಗೆ ಬರಬಹುದು ಎಂಬ ಸುಲಭಾತಿಸುಲಭ ಮಾರ್ಗವನ್ನು ತಿಳಿಸಿ ಕೊಡುತ್ತಾ ಇರುವಂತಹ ಒಂದು ಕೈಪಿಡಿ. 

ಉಪನಿಷತ್ತು, ವೇದಾಂತ ಎಲ್ಲದರ ಸಾರ ಈ ಭಗವದ್ಗೀತೆಯಲ್ಲಿದೆ. ಇದು ಭಗವಂತನಾದ ಕೃಷ್ಣನ ವಾಣಿ. ಆದ್ದರಿಂದ ಅರ್ಥಗಳನ್ನು ತಿಳಿಯದೆ ಕೇವಲ ಇದರ ಪಠಣೆ ಮಾಡುವವರಿಗೂ ಶ್ರೇಯಸ್ಸು ಲಭಿಸುತ್ತದೆ. 

ಮಾನವನಿಗೆ ಅತ್ಯಂತ ಭಯಾನಕವಾದ ವಿಚಾರವೆಂದರೆ ಮೃತ್ಯು. ಶ್ರೀ ಕೃಷ್ಣ ಪರಮಾತ್ಮನು ಗೀತೆಯಲ್ಲಿ, ಎರಡನೇ ಅಧ್ಯಾಯದಲ್ಲಿ ಆತ್ಮ ಮತ್ತು ದೇಹದ ವಿಚಾರಗಳನ್ನು ತಿಳಿಸಿ, ಆತ್ಮಕ್ಕೆ ಸಾವಿಲ್ಲ. ಕೇವಲ ಒಂದು ದೇಹ ಬಿಟ್ಟು ಮತ್ತೊಂದು ದೇಹಕ್ಕೆ ತನ್ನ ಪ್ರಯಾಣವನ್ನು ಆತ್ಮ ಮುಂದುವರಿಸುತ್ತದೆ. ಆದ್ದರಿಂದ ಜರ್ಜರಿತವಾದ ದೇಹವನ್ನು ಬಿಡುವ ಪ್ರಕ್ರಿಯೆ ಯಾದ ಮೃತ್ಯುವಿಗೆ ಹೆದರಬೇಡ. ಎಂದು ಹೇಳುತ್ತಾನೆ.” ಜಾತಸ್ಯ ಮರಣಂ ಧೃವಂ” ಎಂದು ಹುಟ್ಟಿದವರೆಲ್ಲ ಒಂದಾ ನೊಂದು ದಿನ ಸಾಯಲೇಬೇಕು ಎಂಬ ತತ್ವವನ್ನು ತಿಳಿಸುತ್ತಾನೆ. `ವಾಸಾಂಸಿ ಜೀರ್ಣನಿ ಯಥಾಗತಾನಿ ಕರ್ಣಾನುಬಂಧನಿ ಮನುಷ್ಯಲೋಕೆ’ ಎಂಬ ಶ್ಲೋಕದಲ್ಲಿ, ಹಳೆ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆಗಳನ್ನು ಧರಿಸುವ ಹಾಗೆ ಆತ್ಮನು ಮುಂದಿನ ದೇಹಕ್ಕೆ ಪ್ರಯಾಣ ಮಾಡುತ್ತಾನೆ ಎಂದಿದ್ದಾನೆ. ಬಾಲ್ಯ, ಯೌವ್ವನ, ಮುಪ್ಪಿನಲ್ಲಿ ನಮ್ಮ ದೇಹವು ಬದಲಾಗುತ್ತದೆ. ಆದರೆ, ಆತ್ಮ ಹಾಗೇ ಇರುತ್ತದೆ. ಇದರ ಮುಂದಿನ ಅವಸ್ಥೆಯೇ ಮುಂದಿನ ದೇಹಕ್ಕೆ ಪ್ರಯಾಣ. ಆದ್ದರಿಂದ ನೀನು ಆತ್ಮ ತತ್ವವನ್ನು ತಿಳಿದು, ನಾನು ಈ ದೇಹವಲ್ಲ ಒಳಗಿರುವಂತಹ ಆತ್ಮ ಎಂಬ ದೃಢ ವಿಶ್ವಾಸದಿಂದ ಆತ್ಮನ ಉದ್ಧಾರವಾಗುವ ಕೆಲಸಗಳನ್ನು ಮಾಡು ಎಂಬ ಸಂದೇಶವನ್ನು ನೀಡುತ್ತಾನೆ. 

ಆತ್ಮನ ಉದ್ಧಾರ ಎಂದರೆ ಏನು? ಭಗವಂತ ಹೇಳುತ್ತಾನೆ, ಕರ್ಮಫಲಗಳಿಂದಾಗಿ, ಎಂದರೆ ನಾವು ಮಾಡುವ ಒಳ್ಳೆಯ ಕೆಲಸದಿಂದ ನಮಗೆ ಪುಣ್ಯ ಬರುತ್ತದೆ ಕೆಟ್ಟ ಕೆಲಸಗಳಿಂದ ನಮಗೆ ಪಾಪ ಬರುತ್ತದೆ. ನಾವು ಈ ಭೂಮಿಯಿಂದ ಹೊರಡುವಾಗ ನಮ್ಮ ಆತ್ಮಕ್ಕೆ ಅಂಟಿಕೊಳ್ಳುವುದು ಕೇವಲ ನಾವು ಮಾಡಿರುವ ಪಾಪ ಮತ್ತು ಪುಣ್ಯ. ಇದನ್ನು ಕರ್ಮ ಎಂದು ಕರೆಯುತ್ತಾರೆ. ಈ ಕರ್ಮಗಳಲ್ಲಿ ಮೂರು ವಿಧ, ಸಂಚಿತ್ ಕರ್ಮ ಎನ್ನುವುದು ನಾವು ಹೊತ್ತು ತಂದಿರುವಂತಹ ಕರ್ಮಗಳು. ಪ್ರಾರಬ್ಧ ಕರ್ಮ ಎನ್ನುವುದು ಈ ಜನ್ಮದಲ್ಲಿ ಅನುಭವಿಸಲೇಬೇಕಾದಂತಹ ಪಾಪ ಪುಣ್ಯಗಳ ಫಲಗಳು. ಇದರಿಂದಲೇ ನಮಗೆ ಸುಖ – ದುಃಖಗಳು ಆಗುತ್ತವೆ. ಆಗಾಮಿ ಕರ್ಮ ಎಂಬುದು ಮುಂದಿನ ಜನ್ಮಗಳಲ್ಲಿ ನಾವು ಅನುಭವಿಸಬೇಕಾದಂತಹ ಫಲಗಳು.

ಕರ್ಮಫಲಗಳಿಂದ ನಾವು ಹುಟ್ಟು – ಸಾವಿನ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಇದನ್ನು ಸಂಸಾರದ ಚಕ್ರ ಎಂದು ಕರೆಯುತ್ತಾರೆ. ಆತ್ಮೋದ್ಧಾರದ ಮಾರ್ಗಗಳೆಲ್ಲ ಈ ಸಂಸಾರ ಚಕ್ರದಿಂದ ಬಿಡುಗಡೆಯ ಹೊಂದುವಂತಹ ಉಪಾಯಗಳು.

ಭಗವದ್ಗೀತೆಯಲ್ಲಿ ಭಗವಂತ ಇದಕ್ಕಾಗಿ ಮೊದಲು ಜ್ಞಾನಮಾರ್ಗವನ್ನು ಉಪದೇಶಿಸುತ್ತಾನೆ. ಎಲ್ಲ ವಿಚಾರಗಳನ್ನು ತಿಳಿದುಕೊಂಡು, ಈ ಲೌಕಿಕವಾದ ಆಸೆಗಳನ್ನೆಲ್ಲ ಬಿಟ್ಟು ಸನ್ಯಾಸವನ್ನು ಸ್ವೀಕರಿಸಿ ಕೇವಲ ಭಗವಂತನನ್ನೇ ತಲುಪಲು ಸಾಧನೆ ಮಾಡುವ ಮಾರ್ಗ. ಇದು ಕಷ್ಟದ ಮಾರ್ಗ ಎಲ್ಲರೂ ಮಾಡಲು ಸಾಧ್ಯವಿಲ್ಲ.

ನಂತರ ಕರ್ಮ ಯೋಗವನ್ನು ಉಪದೇಶಿಸುತ್ತಾನೆ. ಇದರಲ್ಲಿ ನಾವು ಮಾಡುವ ಎಲ್ಲ ಕಾರ್ಯಗಳನ್ನು ಭಗವಂತನ ಪಾದಕ್ಕೆ ಅರ್ಪಿಸಿ ಅದನ್ನೇ ಭಗವಂತನ ಸೇವೆ ಎಂದು ಮಾಡುವ ನೇಮ. ಸಂಸಾರಿಯಾಗಿದ್ದುಕೊಂಡೇ ಭಗವಂತನನ್ನು ತಲುಪ ಬಹುದಾದಂತಹ ಸುಲಭ ಮಾರ್ಗ. ಇದನ್ನು ಹೇಳಿ ಭಗವಂತ ನೀನು ಯುದ್ಧ ಮಾಡು ಎಂದು ಅರ್ಜುನನಿಗೆ ಹೇಳುತ್ತಿದ್ದಾನೆ. ಇಲ್ಲಿ ನಮಗೆ ನಿಮ್ಮ ಕೆಲಸವನ್ನು ನೀವು ಧೈರ್ಯವಾಗಿ ಮಾಡಿ ಎಂದು ಹೇಳುತ್ತಾನೆ. “ಕರ್ಮಣ್ಯೇವಾದಿಕಾರಸ್ತೇ ಮಾಫಲೇಶು ಕದಾಚನ” ಎಂಬ ಶ್ಲೋಕದಿಂದ ಕೇವಲ ಕರ್ಮ ಮಾಡುವುದು ನಿನ್ನ ಕೆಲಸ, ಅದರ ಫಲಗಳ ಅಪೇಕ್ಷೆಯನ್ನು ಬಿಡು. ಹಾಗೆಂದು ನೀನು ಸುಮ್ಮನೆ ಕೂರುವ ಹಾಗಿಲ್ಲ. ನಿನ್ನ ಕರ್ಮಗಳನ್ನು ಮಾಡುತ್ತಲೇ ಇರಬೇಕು. ಈ ರೀತಿ ನೀನು ಕರ್ಮಗಳನ್ನು ಮಾಡಿದರೆ ನಿನ್ನ ಉದ್ಧಾರವಾಗುತ್ತದೆ ಎಂದು ಹೇಳುತ್ತಾನೆ. ತಮ್ಮ ಕಾರ್ಯಗಳನ್ನು ಮಾಡುತ್ತಲೇ ಭಗವಂತನನ್ನು ಕಂಡುಕೊಂ ಡಂತಹ ಭಕ್ತ ಕುಂಬಾರನನ್ನು ನಾವು ನೆನೆಸಿಕೊಳ್ಳಬಹುದು.

ಇದಾದ ನಂತರ ಭಕ್ತಿ ಮಾರ್ಗವನ್ನು ಉಪದೇಶಿಸುತ್ತಾನೆ. ಭಕ್ತಿ ಎಂದರೆ ಪರಮಾತ್ಮನ ಶಕ್ತಿಯನ್ನು ಅರಿತು, ಅವನಲ್ಲಿ ಮಾಡುವ ಅನನ್ಯವಾದ ಪ್ರೀತಿ. ನಮ್ಮ ತಂದೆ- ತಾಯಿ, ಬಂಧು- ಬಳಗ ಮಕ್ಕಳು ಎಲ್ಲರಿಗಿಂತ ಹೆಚ್ಚು ಭಗವಂತನನ್ನು ಪ್ರೀತಿಸುವುದು. ಅವನಿಗಾಗಿಯೇ ಜೀವನವನ್ನು ನಡೆಸುವುದು.

9ನೇ ಅಧ್ಯಾಯದ ತನಕ ಭಕ್ತಿ ಮತ್ತು ಕರ್ಮ ಮಾರ್ಗಗಳು ಮತ್ತು ಅದರಲ್ಲಿ ಅರ್ಜುನನಿಗೆ ಬಂದ ಅನೇಕ ಸಂಶಯಗಳನ್ನು ಪರಿಹರಿಸುತ್ತಾ 7ನೇ ಅಧ್ಯಾಯದಲ್ಲಿ ಜ್ಞಾನ ಮತ್ತು ವಿಜ್ಞಾನ ಎರಡನ್ನೂ ಬೋಧಿಸಿದ್ದಾನೆ. ಜ್ಞಾನ ಎಂದರೆ ಭಗವಂತನ ಶಕ್ತಿಯ ಮಹಿಮೆಯ ಅರಿವನ್ನು ಕೊಟ್ಟು, ಅದನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು? ನಾವೇನು ಮಾಡಬೇಕು ಎನ್ನುವ ಬೋಧನೆ ವಿಜ್ಞಾನವಾಗುತ್ತದೆ. ಇದನ್ನು ಭಗವಂತ ಒಂಬತ್ತನೇ ಅಧ್ಯಾಯದಲ್ಲಿ ವಿಸ್ತರಿಸುತ್ತಾನೆ.

“ಅನನ್ಯಾಶ್ಚಿಂತಯಂತೋಮಾಂ ಏಜನಾಪರ್ಯುಪಾಸತೇ ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ”

ಯಾರು, ಯಾವಾಗಲೂ ನನ್ನ ಚಿಂತನೆಯಲ್ಲಿ ಮುಳುಗಿರುತ್ತಾರೋ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಯೋಗ ಎಂದರೆ ಅವರಿಗೆ ಬೇಕಾದ ಎಲ್ಲವನ್ನೂ ನಾನು ಕೊಡುತ್ತೇನೆ ಮತ್ತು ಕ್ಷೇಮ ಎಂದರೆ ಅದನ್ನು ಸಂರಕ್ಷಿಸುತ್ತೇನೆ. ಉದಾಹರಣೆಗೆ ಲಾಟರಿಯಲ್ಲಿ ಬೇಕಾದಷ್ಟು ಹಣ ಬರುತ್ತದೆ ಅದು ಯೋಗ. ಅದು ಕಳೆದುಹೋಗದಂತೆ ಅದರಿಂದ ಬಂದವರಿಗೆ ಒಳ್ಳೆಯದಾಗುವಂತೆ ಕಾಪಾಡುವುದು ಕ್ಷೇಮ. ಈ ಆಶ್ವಾಸನೆಯ ಜೊತೆಗೆ “ನಾ ಮೇ ಭಕ್ತಾ ಪ್ರಣಶ್ಯತಿ”  ನನ್ನ ಭಕ್ತ ಎಂದೂ ನಾಶವಾಗುವುದಿಲ್ಲ ಎಂದು ಘೋಷಿಸುತ್ತಾನೆ. ಈ ಭರವಸೆಗಳಿಂದ ಭಗವದ್ಗೀತೆ ಅತ್ಯಂತ ಮಾನ್ಯವಾಗಿದೆ.

ಆದ್ದರಿಂದ ಸದಾ ನನ್ನ ಚಿಂತನೆಯಲ್ಲಿ ಮುಳುಗು ನನ್ನ ಗುಣಗಾನ ಮಾಡುವ ಹಾಡುಗಳನ್ನು ಹಾಡು ನಿನ್ನ ಅಂತರಂಗದಲ್ಲಿ ನಾಮ ಸ್ಮರಣೆಯನ್ನು ಮಾಡು. ನಾನೇ ಸುಹೃತ್ ಎಂದರೆ ಅತ್ಯಂತ ಪ್ರೀತಿಯ ಗೆಳೆಯ ನಿನ್ನ ನೆರಳಿನಂತೆ ಸದಾ ನಿನ್ನ ಜೊತೆ ಇರುತ್ತೇನೆ. ಎಂದು ಹೇಳಿ, “ಪತ್ರಂ ಪುಷ್ಪಂ ಫಲಂ ತೋಯಂ” ಎಂದು ನನಗೆ ನೀನು ಕೊಡಬೇಕಾದದ್ದು ಭಕ್ತಿಯಿಂದ ಒಂದು ಎಲೆ ಅಥವಾ ಹೂವು ಅಥವಾ ಹಣ್ಣು ಅಥವಾ ನೀರು ಅಷ್ಟೇ. ಆದರೆ, ಆ ಸಮರ್ಪಣೆಯಲ್ಲಿ ಭಕ್ತಿಯೊಂದಿದ್ದರೆ ನಾನು ಅದನ್ನು ಸ್ವೀಕರಿಸುತ್ತೇನೆ ಎನ್ನುತ್ತಾನೆ.” ಸುಲಭನೋ ಹರಿ” ಎಂಬ ದಾಸರ ಮಾತು ಎಷ್ಟು ನಿಜ ಎನ್ನುವುದನ್ನು ಈ ಶ್ಲೋಕವು ತೋರಿಸುತ್ತದೆ.

ಫಲಗಳ ಆಸೆಗಳಿಗೆ ಯಾವ ಕರ್ಮಗಳನ್ನೂ ಮಾಡಬೇಡ ಎಂದು ಭಗವಂತ ಹೇಳುತ್ತಾನೆ. ಸ್ವರ್ಗಾದಿ ಫಲಗಳಿಗಾಗಿ ಹೋಮ ಹವನಗಳನ್ನು ಮಾಡಿದರೆ, ನಿನ್ನ ಪುಣ್ಯ ಇರುವ ತನಕ ಸ್ವರ್ಗದಲ್ಲಿ ಇರುವೆ ನಂತರ ನೀನು, ಮತ್ತೆ ಭೂಲೋಕಕ್ಕೆ ಬರುವಿ ಎಂದು ತಿಳಿಸುತ್ತಾ ನಿನ್ನ ಎಲ್ಲ ಕರ್ಮಫಲಗಳನ್ನು ನನ್ನ  ಪಾದಕ್ಕೆ ಸಮರ್ಪಣೆ ಮಾಡು. ಈ ರೀತಿ ಮಾಡುವುದರಿಂದ ನಿನ್ನ ಕರ್ಮಗಳು ಸೊನ್ನೆ ಆಗುತ್ತವೆ. ಆಗ ನೀನು ನನ್ನ ಬಳಿಗೆ ಬರುತ್ತಿ. ಎಂದು ಅತ್ಯಂತ ಶ್ರೇಷ್ಠವಾದ ಮಾರ್ಗವನ್ನು ಸುಲಭವಾಗಿ ತಿಳಿಸಿಕೊಟ್ಟಿದ್ದಾನೆ.” ನಂದೇನದೋ ಸ್ವಾಮಿ, ನಿಂದೇ ಇದೆಲ್ಲವೂ ನಂದನಂದನ ಗೋವಿಂದ ಮುಕುಂದ” ಎಂದು ದಾಸರು ಹಾಡಿರುವುದನ್ನು ನಾವು ನೆನೆಯಬಹುದು.

ಕಡೆಯದಾಗಿ ಯಾರು ನನ್ನನ್ನೇ ಸದಾ ಚಿಂತನೆ ಮಾಡುತ್ತಾರೋ, ನನಗೆ ನಮಸ್ಕರಿಸುತ್ತಾರೋ ನನ್ನನ್ನು ನಿರಂತರ ಉಪಾಸನೆ ಮಾಡುತ್ತಾರೋ ಅವರಿಗೆ ನಾನು ಒಲಿಯುತ್ತೇನೆ ಎಂದು ಆಶ್ವಾಸನೆಯನ್ನು ಕೊಡುತ್ತಾನೆ.

ತನಗೂ ಪ್ರಪಂಚಕ್ಕೂ ಇರುವ ಸಂಬಂಧವನ್ನು ತಿಳಿಸುತ್ತಾ ತನ್ನಿಂದ ಪ್ರಪಂಚ ಸೃಷ್ಟಿ ಮತ್ತು ಲಯ ಎರಡು ಆಗುತ್ತದೆ. ತಾನೇ ಅಮೃತತ್ವ ಮತ್ತು ಮೃತ್ಯು ಎರಡನ್ನು ಕೊಡುತ್ತೇನೆ ಎಂದು ಹೇಳುತ್ತಾನೆ.

ನೀನು ಸುಖ- ದುಃಖ, ಶುಭ – ಅಶುಭ, ಲಾಭ – ನಷ್ಟ, ಜಯ ಅಪಜಯ ಗಳಿಗೆ ಸಮನಾಗಿರು. “ಸುಖೇ ದುಖೇ ಸಮೇಕೃತ್ವ ಲಾಭಾ ಲಾಭೌ ಜಯಾಜಯೌ” ಎಂದು ಹೇಳುತ್ತಾ ಸ್ಥಿತಪ್ರಜ್ಞನಾಗು ಎಂಬ ಬೋಧನೆಯನ್ನು ನೀಡುತ್ತಾನೆ.

ಈ ಲೋಕದಲ್ಲಿ ಕ್ಷರವಾದದ್ದು ಎಂದರೆ ನಾಶ ಹೊಂದುವ ಶಾಶ್ವತವಲ್ಲದ ಪ್ರಕೃತಿ ಮತ್ತು ಅದರಿಂದ ಬಂದಂತಹ ಈ ಎಲ್ಲಾ ಚರಾಚರ ವಸ್ತುಗಳ ಮೇಲಿನ ವ್ಯಾಮೋಹವನ್ನು ಬಿಟ್ಟು, ಅಕ್ಷರನಾದ ನಿತ್ಯನಾದ ಸತ್ಯನಾದ ಶಾಶ್ವತ ಆನಂದವನ್ನು ಕೊಡುವ ನನ್ನನ್ನು ಉಪಾಸನೆ ಮಾಡಿ ನನ್ನನ್ನು ಸೇರು ಎಂದು ಹೇಳಿ ಒಂದು ಅಶ್ವತ್ಥ ಮರಕ್ಕೆ ಈ ಸಂಸಾರವನ್ನು ಹೋಲಿಸುತ್ತಾನೆ. ಅದರ ಬೇರು ಭಗವಂತನ ಹತ್ತಿರವಿದೆ. ರೆಂಬೆ ಕೊಂಬೆಗಳು ಭೂಲೋಕದ ಬಳಿಗೆ ಚಾಚಿಕೊಂಡಿವೆ. ನಾವು ಆ ಭಗವಂತನನ್ನು ಸೇರಬೇಕಾದರೆ ಬಂಧನಕ್ಕೆ ಒಳಪಡಿಸುವ ಕಾಮ, ಕ್ರೋದ, ಲೋಭ, ಮೋಹ, ಮದ, ಮತ್ಸರ ಮುಂತಾದವುಗಳಿಂದ ದೂರ ಆಗಬೇಕು. ವೈರಾಗ್ಯವೆಂಬ ಕೊಡಲಿಯಿಂದ ಬಂಧನಗಳನ್ನು ಬಿಡಿಸಿಕೊಳ್ಳಬೇಕು.

ನಮ್ಮ ಗತಿ ನಮ್ಮ ಗುರಿ ಭಗವಂತನೇ ಆಗಬೇಕು. `ಗತಿ ನೀನೆ ಮತಿ ನೀನೆ `ಸ್ವಾಮಿ ಎಂದು ಹಾಡಿದ್ದಾರೆ. ಈ ಗತಿಯನ್ನು ಪಡೆಯಬೇಕಾದರೆ ನಾವು ಶರಣಾಗತಿಯನ್ನು ಬೆಳೆಸಿಕೊಳ್ಳ ಬೇಕು. ಭಗವಂತ ಶರಣಾಗತ ವತ್ಸಲ ಭಕ್ತ ವತ್ಸಲ ಎಂಬ ಬಿರುದುಗಳನ್ನು ಹೊಂದಿರುವವನು. ಶರಣಾದವರನ್ನು ಸಂರಕ್ಷಿ ಸುತ್ತಾನೆ. ಅಸುರನಾದ ವಿಭೀಷಣನು ಶರಣಾಗಿ ಬಂದಾಗ ರಾಮನಾಗಿ ಅವನನ್ನು ಉದ್ಧರಿಸಿದ. ಅಹಂಕಾರದಿಂದ ಬೀಗಿದ ಹಿರಣ್ಯಾಕ್ಷ ಹಿರಣ್ಯಕಶಿಪು ಮುಂತಾದವರನ್ನು ಸಂಹರಿಸಿದ.

ಇದಲ್ಲದೆ ಶ್ರದ್ದೆ ಬಹಳ ಮುಖ್ಯ ಎಂದು ಭಗವಂತ ಹೇಳುತ್ತಾನೆ. ಶ್ರದ್ಧೆ ಎಂದರೆ ಅನನ್ಯ ವಾದಂತಹ ನಂಬಿಕೆ. `ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ನಂಬದೇ ಕೆಡಬ್ಯಾಡಿರೋ’ ಎಂದು ದಾಸರು ಹಾಡುತ್ತಾರೆ.  ನಂಬಿಕೆ ಇಟ್ಟವರಿಗೆ ಮಾತ್ರ ನಾನು ನನ್ನ ಜ್ಞಾನವನ್ನು ಕೊಡುತ್ತೇನೆ ಎಂದು ಭಗವಂತ ಹೇಳುತ್ತಾನೆ.

ಆಸೆಯಿಂದ ದೂರವಿರಿ. ಆಸೆಯ ಒಂದು ಬೀಜ ಹೃದಯದಲ್ಲಿದ್ದರೆ ಮನಸ್ಸನ್ನು ಕೆಡಿಸುತ್ತದೆ. ಮಾಡಬಾರದ್ದನ್ನು ಮಾಡಿಸುತ್ತದೆ. ಕೋಪ ಬರುತ್ತದೆ. ಅದರಿಂದ ಬುದ್ಧಿ ನಾಶವಾಗಿ ಬುದ್ಧಿ ನಾಶವಾದವರು ಸರ್ವನಾಶವಾಗುತ್ತಾರೆ. ಎಂಬ ಒಂದು ವಿಶಿಷ್ಟವಾದ ಸೂತ್ರವನ್ನು ತಿಳಿಸುತ್ತಾನೆ.

ಈ ಲೇಖನದಲ್ಲಿ ಭಗವದ್ಗೀತೆಯಿಂದ ನಾವು ತಿಳಿದುಕೊಳ್ಳಲೇ ಬೇಕಾದ ಮತ್ತು ನಮಗೆ ಸುಲಭವಾಗಿ ಮಾಡಲಾಗುವಂತಹ ಕೆಲವು ಸೂತ್ರಗಳ ಬಗ್ಗೆ ಯಥಾವತ್ ತಿಳಿಸಿದ್ದೇನೆ. ಆಳಕ್ಕೆ ಇಳಿದಷ್ಟು ಹೆಚ್ಚು ಹೆಚ್ಚು ಮುತ್ತು ರತ್ನಗಳು ಸಿಗುವ ಸಮುದ್ರದ ಹಾಗೆ ಈ ಭಗವದ್ಗೀತೆ. ಅದರ ಬಗ್ಗೆ ಚಿಂತನೆ ಮಾಡಿದಷ್ಟು ಎಲ್ಲಾ ಕಷ್ಟಗಳಿಗೂ ಪರಿಹಾರಗಳನ್ನು ಕೊಡುತ್ತದೆ.

ಗೀತೆಯನ್ನು ಉಪದೇಶ ಮಾಡಿದಂತಹ ಈ ಗೀತಾ ಜಯಂತಿಯ ದಿನದಂದು ನಾವೆಲ್ಲರೂ ಗೀತೆಯ ಅರ್ಥ ಚಿಂತನೆಯನ್ನು ಮಾಡಿ ಅದನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿ ಭಗವಂತನಲ್ಲಿ ಭಕ್ತಿಯನ್ನು ಮಾಡೋಣ ಎಂದು ಪ್ರಾರ್ಥಿಸುತ್ತೇನೆ.

– ಡಾ. ರೂಪಶ್ರೀ ಶಶಿಕಾಂತ್, ದಾವಣಗೆರೆ.

error: Content is protected !!