ಕರ್ನಾಟಕ ಏಕೀಕರಣದ ರೂವಾರಿ, ರಾಷ್ಟ್ರ ಕಂಡ ಅಪರೂಪದ ರಾಜಕೀಯ ಮುತ್ಸದ್ದಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮತ್ತು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ದಿ. ಎಸ್. ನಿಜಲಿಂಗಪ್ಪನವರ 122ನೇ ಜನ್ಮ ದಿನಾಚರಣೆಯು ಇಂದು ಆಗಿದ್ದು, ಅವರ ಸಾಧನೆ, ಬೆಳೆದು ಬಂದ ರೀತಿ, ದಿಟ್ಟ ಸಾಮಾಜಿಕ, ರಾಜಕೀಯ ನಿಲುವು ಮತ್ತು ನೈತಿಕ ಮೌಲ್ಯಗಳ ಪುನರಾವಲೋಕನ ಮಾಡಬೇಕಾದ ಅಗತ್ಯತೆಯ ಕಾಲಘಟ್ಟದಲ್ಲಿ ನಾವಿದ್ದೇವೆ.
ಅವರೊಬ್ಬ ಧೀಮಂತ ನ್ಯಾಯವಾದಿಗಳೂ, ಅದ್ವಿತೀಯ ಸ್ವಾತಂತ್ರ್ಯ ಹೋರಾಟಗಾರರೂ, ಪರಮ ಶ್ರೇಷ್ಠ ರಾಜಕಾರಣಿಯೂ, ಮುನ್ನೋಟದ ಮುತ್ಸದ್ಧಿಗಳೂ, ಸ್ಮರಣೀಯ ರಾಷ್ಟ್ರ ನಾಯಕರೂ, ಉದಾತ್ತ ಲೋಕ ಸೇವಕರೂ, ಕರ್ನಾಟಕ ರಾಜ್ಯದ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಮುಖ್ಯಮಂತ್ರಿಗಳೂ ಹಾಗೂ ಮಹಾ ಮಾನವತಾವಾದಿಯೂ ಆಗಿದ್ದವರು. ಇಂದು ಸ್ಥಳಿಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಹಬ್ಬಿರುವ ಸಮಾಜೋ ರಾಜಕೀಯ ಮಾಲಿನ್ಯದ ಸಂದರ್ಭದಲ್ಲಿ ಸಿದ್ದವ್ವನಹಳ್ಳಿ ನಿಜಲಿಂಗಪ್ಪನವರ ಆದರ್ಶ, ಪ್ರಜಾಪ್ರಭುತ್ವದ ಬಗ್ಗೆ ಅವರ ಆಶಾವಾದಿತ್ವ ಮತ್ತು ಕಳಕಳಿ ನಿಜಕ್ಕೂ ಎಲ್ಲರಿಗೂ ಮಾದರಿಯೇ ಸರಿ.
ಎಸ್. ನಿಜಲಿಂಗಪ್ಪನವರು, ಈ ಹಿಂದಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಎಂಬ ಪುಟ್ಟ ಹಳ್ಳಿಯಲ್ಲಿ ಒಂದು ಸಾಮಾನ್ಯ ಕೃಷಿಕ ಕುಟುಂಬದ ಅಬ್ಬಲೂರು ಅಡವಪ್ಪ ಮತ್ತು ಶ್ರೀಮತಿ ನೀಲಮ್ಮ ದಂಪತಿಯ ಮಗನಾಗಿ, ದಿನಾಂಕ 10/12/1902 ರಲ್ಲಿ ಜನಿಸಿದರು. ಬಾಲ್ಯ ಜೀವನದಲ್ಲಿಯೇ ಅವರು ತಮ್ಮ ತಂದೆಯನ್ನು ಕಳೆದುಕೊಂಡರಲ್ಲದೇ, ಕಡು ಬಡತನದ ಬೇಗೆಯನ್ನೂ ಅನುಭವಿಸಿದರು. ತಾಯಿಯ ಕಡೆಯ ಸಂಬಂಧಿಕರ ನೆರವಿನಿಂದ ಅವರು ಚಿತ್ರದುರ್ಗಕ್ಕೆ ಬರುವ ಅವಕಾಶ ಒದಗಿಬಂತು. ಚಿತ್ರದುರ್ಗ ಜಿಲ್ಲೆಯಲ್ಲಿ ಅವರು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದರು. ತದನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜ್ನಲ್ಲಿ ಶಿಕ್ಷಣ ಪಡೆದರಲ್ಲದೆ ನಂತರ ಕಾನೂನು ಪದವಿಯನ್ನು ಪೂನಾದಲ್ಲಿ ಪಡೆದು ನ್ಯಾಯವಾದಿ ವೃತ್ತಿಯನ್ನು ಚಿತ್ರದುರ್ಗದಲ್ಲಿ ಕೈಗೊಂಡರು. ಚಿತ್ರದುರ್ಗದ ಹೆಸರಾಂತ ವಕೀಲರಾಗಿ ಜನಪ್ರಿಯರಾಗಿ ದೊಡ್ದ ಹೆಸರು ಮಾಡಿದರು. ಅವರನ್ನು ಪ್ರೀತಿ ಮತ್ತು ಅಭಿಮಾನದಿಂದ `ಎಸ್ಸೆನ್’ ಎಂದು ಸಂಬೋಧಿಸಲಾಗುತ್ತಿತ್ತು.
ತಾರುಣ್ಯದಲ್ಲಿಯೇ ಎಸ್. ನಿಜಲಿಂಗಪ್ಪನವರಿಗೆ ಸಮಾಜ ಸೇವೆ, ದೇಶಸೇವೆ ಮಾಡುವ ಮನೋಭಾವ ಇದ್ದಕಾರಣ ರಾಜಕೀಯ ಕ್ಷೇತ್ರ ಅವರನ್ನು ಕೈಬೀಸಿ ಕರೆಯಿತು. ಮಹಾತ್ಮ ಗಾಂಧೀಜಿ, ಅನ್ನಿಬೆಸೆಂಟ್, ಬಾಲಗಂಗಾಧರ ತಿಲಕರ ಸ್ವಾತಂತ್ರ್ಯ ಹೋರಾಟ ಅವರ ಮೇಲೆ ಪ್ರಭಾವ ಬೀರಿತು. 1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಎಸ್. ನಿಜಲಿಂಗಪ್ಪ ಸ್ವಯಂ ಸೇವಕರಾಗಿ ಪಾಲ್ಗೊಂಡರು.
1936 ರಲ್ಲಿ ಮೈಸೂರು ಪ್ರಾಂತ್ಯದ ಕಾಂಗ್ರೆಸ್ನ ಸ್ಥಾಪಿತ ಸದಸ್ಯರಾಗಿ ಆಯ್ಕೆಯಾದರು. 1938ರಲ್ಲಿ ಎಸ್. ನಿಜಲಿಂಗಪ್ಪನವರು ತುರುವನೂರಿನ `ಈಚಲು ವನ’ ಅರಣ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡರಲ್ಲದೇ, ಅದರ ನೇತೃತ್ವ ವಹಿಸಿಕೊಂಡರು. ಪರಿಣಾಮವಾಗಿ ಒಂದೂವರೆ ವರ್ಷ ಕಾರಾಗೃಹ ವಾಸದ ಶಿಕ್ಷೆಗೆ ಒಳಗಾಗಿ, ತಮ್ಮ ವಕೀಲ ಸನ್ನದನ್ನೂ ಕಳೆದುಕೊಳ್ಳಬೇಕಾಯಿತು. 1942 ರ `ಬ್ರಿಟಿಷರೇ, ಭಾರತ ಬಿಟ್ಟು ತೊಲಗಿರಿ’ ಚಳುವಳಿಯಲ್ಲಿ ತೊಡಗಿಸಿಕೊಂಡು ವಸಾಹತು ಪ್ರಭುತ್ವದ ವಿರುದ್ಧ ಉಗ್ರ ಪ್ರತಿಭಟನೆ ಮಾಡಿದರು.
ಮೈಸೂರು ಸಂಸ್ಥಾನದ ಜವಾಬ್ದಾರಿ ಸರ್ಕಾರ ರಚನೆಯ ಹೋರಾಟದಲ್ಲಿಯೂ ಭಾಗಿಯಾಗಿ ಶಿಕ್ಷೆ ಅನುಭವಿಸಿದರು.ಇವರು 1946 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. 1948ರಲ್ಲಿ ಸಂವಿಧಾನ ರಚನಾ ಸಮಿತಿ ಸದಸ್ಯರಾಗಿ ರಾಷ್ಟ್ರದ ಪ್ರಮುಖ ಮಹಾನ್ ನಾಯಕರೊಂದಿಗೆ ಆತ್ಮೀಯತೆ ಬೆಳೆಸಿಕೊಂಡರು. 1952ರಲ್ಲಿ ಚಿತ್ರದುರ್ಗ ಜಿಲ್ಲೆಯ ಲೋಕಸಭಾ ಸದಸ್ಯರಾಗಿ , 1968ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ನಿಜಲಿಂಗಪ್ಪನವರಿಗೆ ದೊರೆಯಿತು.
ಅವರು ಕರ್ನಾಟಕ ಏಕೀಕರಣ ಚಳವಳಿಯ ರೂವಾರಿಗಳಾಗಿ ಇತಿಹಾಸ ದಲ್ಲಿ ಚರಿತ್ರಾರ್ಹರಾಗಿದ್ದಾರೆ. ಕರ್ನಾಟಕ ಪ್ರಾಂತ್ಯ ರಚನೆಯಾದ ನಂತರ ನಿಜಲಿಂಗಪ್ಪನವರು ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿದು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಿದರು. ಎಸ್ಸೆನ್ 1957ರಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಂದಾಗ ಆಗ ಮೊಳಕಾಲ್ಮೂರು ಪುರಸಭೆಯ ಅಧ್ಯಕ್ಷರಾಗಿದ್ದ ಅನ್ನದಾನಿ ಆರ್. ವೀರಭದ್ರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಚುನಾವಣೆ ನಡೆದು ಸಿದ್ದವ್ವನಹಳ್ಳಿ ನಿಜಲಿಂಗಪ್ಪನವರು 1957ರಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡರು. ತದನಂತರ ಅವರು ಶಿಗ್ಗಾಂವಿ ಹಾಗೂ ಬಾಗಲಕೋಟೆಯಲ್ಲಿ ಚುನಾವಣೆಗೆ ನಿಂತು ಶಾಸಕರಾಗಿ ಆಯ್ಕೆಯಾದದ್ದು ಇತಿಹಾಸ.
ತಾಯಿ ನೀಲಮ್ಮ ಮತ್ತು ಪತ್ನಿ ಮುರಿಗೆಮ್ಮನವರು ತಮ್ಮ ಬದುಕಿನ ಕಣ್ಣುಗಳು ಹಾಗೂ ತಮ್ಮೆಲ್ಲಾ ಸಾಧನೆಯ ಹಿಂದಿನ ಪ್ರೇರಕ ಶಕ್ತಿಗಳು ಎಂದು ಎಸ್ಸೆನ್ ಸದಾ ಸ್ಮರಿಸಿಕೊಳ್ಳುತ್ತಿದ್ದರು.ಬಸವಣ್ಣನವರ `ಕಾಯಕವೇ ಕೈಲಾಸ’ ಸಿದ್ದಾಂತದಲ್ಲಿ ನಂಬಿಕೆ ಇಟ್ಟವರಾಗಿದ್ದರು. ರಾಜ್ಯ ನಿರ್ದೇಶಕ ತತ್ವಗಳಲ್ಲಿ ನಂಬಿಕೆ ಮತ್ತು ಅದರ ಅನುಷ್ಠಾನದಲ್ಲಿ ಹೆಚ್ಚಿನ ಮುತುವರ್ಜಿ; ಮಹಾತ್ಮ ಗಾಂಧಿಯವರ ಅಹಿಂಸಾ ತತ್ವ, ಸರ್ವೋದಯ ಪರಿಕಲ್ಪನೆಯಲ್ಲಿ ಎಸ್ಸೆನ್ಗೆ ಅಪಾರ ವಿಶ್ವಾಸ. ಜೀವನದುದ್ದಕ್ಕೂ ಗಾಂಧಿವಾದಿ ಯಾಗಿಯೇ ಬದುಕಿದವರು. ಅವರಲ್ಲಿ ಮೂಢನಂಬಿಕೆಗೆ ಆಸ್ಪದವಿರಲಿಲ್ಲ. ವಿಚಾರವಾದಿ, ನಿಷ್ಠೂರವಾದಿ, ನ್ಯಾಯವಾದಿ, ಮಹಾಮಾನವತಾವಾದಿಯಾಗಿದ್ದ ಎಸ್ಸೆನ್ ಪ್ರಧಾನಮಂತ್ರಿ ಪಂಡಿತ್ ಜವಹರಲಾಲ್ ನೆಹರು ಅಭಿಮಾನಿಯಾಗಿದ್ದರೂ ಅವರನ್ನು ಟೀಕಿಸದೆ ಬಿಟ್ಟವರಲ್ಲ.
1969ರಲ್ಲಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರೊಂದಿನ ಸೈದ್ದಾಂತಿಕ ಸಂಘರ್ಷ, ತದನಂತರದ ರಾಜಕೀಯ ಬೆಳವಣಿಗೆಯಲ್ಲಿ ಸಂಸ್ಥಾ ಕಾಂಗ್ರೆಸ್ ಸ್ಥಾಪಕ ಸದಸ್ಯರಾಗಿದ್ದು ಚಾರಿತ್ರ್ಯಿಕ.
ಸದಾ ಅಧ್ಯಯನಶೀಲತೆ, ತತ್ವಾಧಾರಿತ ರಾಜಕಾರಣ, ನೈತಿಕ ಮೌಲ್ಯ ಸಂವರ್ಧನೆಯಲ್ಲಿ ವಿಶ್ವಾಸ, ಅಭಿವೃದ್ಧಿ ಕಾರ್ಯಗಳಲ್ಲಿ ಆಸಕ್ತಿ, ಕೃಷಿ ಹಾಗೂ ಕೃಷಿಕರ ಹಿತ ಚಿಂತನೆ, ಸಮಾಜ ಕಲ್ಯಾಣ ಕಾರ್ಯಗಳಲ್ಲಿ ಹೆಚ್ಚಿನ ಉತ್ಸುಕತೆ, ಲೋಕೋಪಯೋಗಿ ಕಾರ್ಯಗಳಲ್ಲಿ ಅಪಾರ ಉತ್ಸಾಹ, ಜನೋಪಯೋಗಿ ಕಾರ್ಯಗಳಲ್ಲಿ ಭಾಗಿಯಾಗುವುದರಲ್ಲಿ ಸದಾ ಉಲ್ಲಾಸ ಹೀಗೆ ನಿಜಲಿಂಗಪ್ಪನವರ ಹಲವು ಹತ್ತು ಸಮಾಜಮುಖಿ ಹಾಗೂ ಸೃಜನಶೀಲ ಕಾರ್ಯವೈಖರಿ. ಎರಡು ಬಾರಿ ರಾಷ್ಟ್ರಾಧ್ಯಕ್ಷರಾಗಲು ಕರೆ ಬಂದರೂ ವಿನಯವಾಗಿಯೇ ನಿರಾಕರಿಸಿದವರು; ಅಧಿಕಾರದ ವಿಷಯದಲ್ಲಿ ನಿರ್ಮೋಹಿ. ಎಸ್.ಆರ್. ಬೊಮ್ಮಾಯಿ ಮತ್ತು ರಾಮಕೃಷ್ಣ ಹೆಗ್ಡೆಯವರು ಬೆಂಗಳೂರಿನಲ್ಲಿ ವಾಸಕ್ಕೆ ಮನೆ ನೀಡಲು ಬಯಸಿದರೂ ಅದನ್ನು ಒಲ್ಲೆ ಎಂದವರು. ಎಸ್ಸೆನ್ ಸರಳ, ಸಜ್ಜನ, ಸದ್ಗುಣಶೀಲ, ಸದಾಚಾರದ , ಪ್ರಾಮಾಣಿಕ ಮತ್ತು ಆದರ್ಶ ರಾಜಕಾರಣಿ.
ಸರ್ದಾರ್ ವಲ್ಲಭಾಯ್ ಪಟೇಲ್ ಟ್ರಸ್ಟ್ನ ಮುಖ್ಯ ಸದಸ್ಯರಾಗಿಯೂ ಕಾರ್ಯ ನಿರ್ವಹಣೆ ಮಾಡಿದವರು. ಭ್ರಷ್ಟಾ ಚಾರ ಸಹಿಸದ ಅನನ್ಯ ಆದರ್ಶ ರಾಜಕೀಯ ಮಾಡಿದವರು. ಇಂದಿನ ಹಲವು ರಾಜಕೀಯ ವ್ಯವಸ್ಥೆ, ರಾಜಕೀಯ ವ್ಯಕ್ತಿಗಳ ಬಗ್ಗೆ ಹಾಗೂ ಪ್ರಜಾಸತ್ಮಾತ್ಮಕ ಆಡಳಿತ ವ್ಯವಸ್ಥೆ ಕುಸಿದಿರುವುದರ ಬಗ್ಗೆ ಚಿಂತಾಕ್ರಾಂತರಾಗುತ್ತಿದ್ದರಲ್ಲದೆ ಸಿಡಿಮಿಡಿಗೊಳ್ಳುತ್ತಿದ್ದರು. ಜನಪರ ಚಳವಳಿ ಹಾಗೂ ಸಮಷ್ಟಿ ಹಿತದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಯುವಕ ಯುವತಿಯರು ದೇಶಪ್ರೇಮ ಬೆಳೆಸಿಕೊಳ್ಳುವಂತೆ ತಿಳಿ ಹೇಳುತ್ತಿದ್ದರು.
ನಿಜಲಿಂಗಪ್ಪನವರ ಬದುಕು ಅತ್ಯಂತ ಸರಳವಾದುದು ಮತ್ತು ಪಾರದರ್ಶಕವಾದುದು. ಸುಮಾರು ಮೂರು ದಶಕಗಳಿಗೂ ಹಿಂದೆ ಅವರು ಮೊಳಕಾಲ್ಮೂರಿನ ನಮ್ಮ ಮನೆಗೆ ಆಗಮಿಸಿದಾಗ ನಮ್ಮ ತಾಯಿಯವರು ಬಡಿಸಿದ ರೊಟ್ಟಿ, ಮೊಸರು ಇಷ್ಟಪಟ್ಟು ಸೇವಿಸಿದರಲ್ಲದೆ, ಪಪ್ಪಾಯಿ ಹಣ್ಣನ್ನು ಸಹಾ ಅಷ್ಟೇ ಇಷ್ಟಪಟ್ಟು ಸವಿದರು. ನಮ್ಮ ಸಾಮಾನ್ಯ ಮನೆಯ ಸಣ್ಣ ಕೋಣೆಯಲ್ಲಿ ಮಧ್ಯಾಹ್ನದ ಅಲ್ಪಕಾಲ ವಿಶ್ರಾಂತಿ ಪಡೆದದ್ದು ಮರೆಯಲಾಗದ ಸಂಗತಿ. ಯಾರನ್ನೂ ಕೇಳಿ ಪಡೆಯದ ಅವರು ತಮಗೆ ಆತ್ಮೀಯರಾದ ನಮ್ಮ ತಂದೆಯವರಾದ ಅನ್ನದಾನಿ ಆರ್. ವೀರಭದ್ರಪ್ಪನವರಿಗೆ ಊಲೂಪಿ ಕಟ್ಟಿಗೆಯ ಊರುಗೋಲು ಸಿಗುವುದೇ ಎಂದು ಕೇಳಿ ಪಡೆದುಕೊಂಡರು. ಅದೊಂದು ಸಾಮಾನ್ಯ ಕಟ್ಟಿಗೆಯದಾಗಿದ್ದರೂ, ಗಾಂಧೀವಾದಿ ಯಾಗಿದ್ದ ಅವರು, ಜೀವಿತದ ಕೊನೆಗಾಲದಲ್ಲಿ ಆ ಊಲೂಪಿ ಊರುಗೋಲನ್ನೇ ಬಳಸುತ್ತಿದ್ದರು. ನಮ್ಮಜ್ಜಿ ಸಾಂತಮ್ಮನವರು ವಕೀಲರಾಗಿದ್ದ ನಿಜಲಿಂಗಪ್ಪನವರ ಕಕ್ಷಿದಾರಳು. ನಾನು ಅವರನ್ನು ಹತ್ತಾರು ಬಾರಿ ಅವರ ಮನೆಯಲ್ಲಿ ಭೇಟಿಯಾದಾಗ ನಿಮ್ಮಜ್ಜಿ ಸಾಂತಮ್ಮ ಬಹಳ ಬುದ್ದಿವಂತೆ ಎಂದು ಸಾಮಾನ್ಯ ಮಹಿಳೆಯಾಗಿದ್ದ ನನ್ನಜ್ಜಿಯನ್ನು ಹೊಗಳುತ್ತಿದ್ದರು. ಇದು ಅವರ ಸ್ತ್ರೀ ಪರವಾದದ ಪ್ರಗತಿಪರ ನಿಲುವು.
ಸಿದ್ದವ್ವನಹಳ್ಳಿ ನಿಜಲಿಂಗಪ್ಪನವರ 88 ನೇ ಹುಟ್ಟುಹಬ್ಬದ ವರ್ಧಂತ್ಯೋತ್ಸವ ಮೊಳಕಾಲ್ಮೂರಿನಲ್ಲಿ 1990 ರಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಲವಲವಿಕೆಯಿಂದ ಭಾಗವಹಿಸಿದ್ದ ಎಸ್ಸೆನ್ರವರು ಸಮಾರಂಭದಲ್ಲಿ ಸಂಭ್ರಮಿಸಿದರು. ಈಗ ಅವರಿಲ್ಲ. ಅವರು ಹಾಕಿಕೊಟ್ಟ ಆದರ್ಶ ಮಾರ್ಗವಿದೆ. ಆ ಪಥದಲ್ಲಿ ಸಾಗಿ ಮುನ್ನಡೆದಾಗಲೇ ಅವರ 122ನೇ ವರ್ಷದ ಜಯಂತಿಗೆ ಅರ್ಥ ಬಂದೀತು. ನವ ಕರ್ನಾಟಕ ಶಿಲ್ಪಿ, ಕರ್ನಾಟಕ ರತ್ನ ದಿವಂಗತ ನಿಜಲಿಂಗಪ್ಪನವರ ಚೈತನ್ಯ ಮತ್ತು ಸಿದ್ದಾಂತಕ್ಕೆ ಎಂದೂ ಸಾವಿಲ್ಲ. ಅವರೊಬ್ಬ ನಿಜ `ಜಂಗಮ’ ಮತ್ತು ಅವರ ಸಾಧನೆಗಳು ಅಜರಾಮರ. ಇಂತಹ ಶ್ರೇಷ್ಠ ಚಿನ್ಮೂಲಾದ್ರಿ ಮಣ್ಣಿನ ಮಗನ ಸಾಧನೆ ಸ್ಮರಣೆಗೆ ಅವರ ಆಳೆತ್ತರದ ಕಂಚಿನ ಪ್ರತಿಮೆ ಸ್ಥಾಪನೆಯನ್ನು ಚಿತ್ರದುರ್ಗದ ಮುಖ್ಯ ವೃತ್ತದಲ್ಲಿ ಘನ ಸರ್ಕಾರ ಸರ್ವರ ಸಾಮರಸ್ಯದೊಂದಿಗೆ ಮಾಡುವಂತಾಗಲಿ; ಅವರು ಜೀವಿಸಿದ್ದ ಮನೆಯನ್ನು ತ್ವರಿತವಾಗಿ ನವೀಕರಿಸಿ ಶಾಶ್ವತ ಸ್ಮರಣಾಲಯ ಮಾಡಿ ಪ್ರಜೆಗಳ ಪ್ರೀತಿಗೆ ಪಾತ್ರವಾಗಲಿ.
– ಪ್ರೊ. ಎ.ವಿ. ನುಂಕಪ್ಪ, ನಿವೃತ್ತ ಪ್ರಾಂಶುಪಾಲರು, ಚಿತ್ರದುರ್ಗ