12ನೇ ಶತಮಾನ ಕನ್ನಡದ ನಾನಾ ಧಾರ್ಮಿಕ, ಅಧ್ಯಾತ್ಮಿಕ ಹಾಗೂ ಸಾಮಾಜಿಕ, ವೈಚಾರಿಕ ಕ್ರಾಂತಿಯ ಯುಗ. ಈ ಕ್ರಾಂತಿಗೆ, ಪ್ರಗತಿಗೆ ಕಾರಣ ಅಂದು ಬೆಳಗಿದ ಶರಣ ಸಂಕುಲ. ಶ್ರೀ ತರಬಾಳು ಪೀಠದ ಮೂಲ ಪುರುಷನಾದ ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರರು ಜಗಜ್ಯೋತಿ ವಿಶ್ವಗುರು ಬಸವಣ್ಣನ ಹಿರಿಯ ಸಮಕಾಲೀನರು ಎಂದೇ ಹೇಳಬಹುದು. ಹಾಗಾಗಿ ಅಂದು ಮರುಳಸಿದ್ದರ ನಡೆಯನ್ನು ನೋಡಿ ಬಸವಣ್ಣನವರು ನುಡಿದರೋ ಅಥವಾ ಬಸವಣ್ಣನವರ ನುಡಿಯನ್ನು ಕೇಳಿ ಮರುಳಸಿದ್ದರು ನಡೆದರೋ ಎನ್ನುವಷ್ಟು ಇವರಿಬ್ಬರ ವ್ಯಕ್ತಿತ್ವದಲ್ಲಿ ಸಾಮ್ಯತೆ ಕಂಡುಬರುವುದನ್ನು ನೋಡಬಹುದು.
ಕಗ್ಗಲ್ಲುಪುರದ ಶಿವಭಕ್ತರಾಗಿದ್ದ ಮಚ್ಚೆ ಕಾಯಕದ ಕೂಚಿಮಾರ ಮತ್ತು ಸುಪ್ರಭೆ ಎಂಬ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಆಗ ಒಂದು ದಿನ ತಮ್ಮೂರಿಗೆ ಬಂದಿದ್ದ ಒಬ್ಬ ಜಂಗಮ ಸನ್ಯಾಸಿಗೆ ಅತ್ಯಂತ ಶಿವಭಕ್ತರಾಗಿದ್ದ ಈ ದಂಪತಿ ಭಕ್ತಿಯಿಂದ ಸೇವೆಯನ್ನು ಸಲ್ಲಿಸುತ್ತಾರೆ. ಇಂತಹ ಭಾವಪೂರಿತ ಸೇವೆಯನ್ನು ಸಲ್ಲಿಸಿದ ಆ ದಂಪತಿ ಆ ಜಂಗಮ ಸನ್ಯಾಸಿಯು ವರ ಕೊಡಲು ಬಯಸಿದಾಗ, ಈ ದಂಪತಿ ತನು, ಮನ, ಧನದಾಸೆಗೆ ನಿಮ್ಮ ಸೇವೆಗೈದಿಲ್ಲ, ಲಿಂಗ ಪೂಜೆ ಮಾಡಿಲ್ಲ ಅಲ್ಲದೆ ನಮಗಿನ್ನಾವ ಆಸೆಯೂ ಇಲ್ಲ. ಆದರೆ ನಮ್ಮ ಜ್ಯೋತಿಯು ನಂದಿ ಹೋಗುವ ಮುನ್ನ ನಮಗೆ ಒಬ್ಬ ವಂಶ ಜ್ಯೋತಿ ಕಂದನನ್ನು ಕರುಣಿಸು ಗುರುವೇ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ಆಗ ಆ ಜಂಗಮ ಸನ್ಯಾಸಿಯು ನಿಮಗೆ ವಂಶ ಜ್ಯೋತಿಯು ಹುಟ್ಟಿದರೆ ನಿಮ್ಮ ಜ್ಯೋತಿ ನಂದುತ್ತದೆ ಎಂದು ಹೇಳಿದಾಗ ಆ ಶಿವಭಕ್ತರಾದ ದಂಪತಿಗಳು ಹಾಗೇ ಆಗಲಿ ಎಂದು ನಮಗೆ ಸಂತಾನವನ್ನು ಕರುಣಿಸಿ, ಆಶೀರ್ವದಿಸಿ ಎಂದು ಆ ಜಂಗಮ ಸನ್ಯಾಸಿಯಲ್ಲಿ ಸಂಕಲ್ಪ ಮಾಡಿಕೊಳ್ಳುತ್ತಾರೆ. ನಂತರ ಶಿವಭಕ್ತೆಯಾದ ಸುಪ್ರಭೆಯು ಗರ್ಭ ಧರಿಸುತ್ತಾಳೆ. ನಂತರ ತುಂಬು ಗರ್ಭಿಣಿಯಾದ ಸುಪ್ರಭೆಯು ಹೆರಿಗೆ ನೋವನ್ನು ಅನುಭವಿಸುತ್ತಿರುವಾಗ ಜಂಗಮ ಹೇಳಿದ ಹಾಗೆ ನಾವು ಸತ್ತರೆ ನಮ್ಮ ಕುವರನಿಗೆ ದಿಕ್ಕಿಲ್ಲದಂತಾಗಬಾರದೆಂದು ಆ ಊರಿನ ಗೌಡನಾಗಿದ್ದ ಬಾಚಣ್ಣಗೌಡ ಮತ್ತು ಮಲ್ಲಮ್ಮ ದಂಪತಿಯ ಕಾಲಿಗೆ ಬಿದ್ದು ನೀವು ನಮ್ಮ ಮಗನನ್ನು ಸಾಕಬೇಕೆಂದು ಬೇಡುತ್ತಾ, ಗಂಡು ಮಗುವಿಗೆ ಜನ್ಮ ನೀಡಿ ತನ್ನ ಪ್ರಾಣ ಬಿಡುತ್ತಾಳೆ. ಆನಂತರ ತನ್ನ ಗಂಡ ಕೂಚಿಮಾರನು ಮರಣ ಹೊಂದುತ್ತಾನೆ. ಆಗ ಮಕ್ಕಳಿಲ್ಲದೆ ಸಂಕಟ ಅನುಭವಿಸುತ್ತಿದ್ದ ಬಾಚಣ್ಣಗೌಡ ಮತ್ತು ಮಲ್ಲಮ್ಮ ದಂಪತಿಗಳು ಇದು ನಮಗೆ ದೇವರು ಕೊಟ್ಟ ವರ ಪ್ರಸಾದವೆಂದು ತಿಳಿದು ಸಂತೋಷ, ಸಂಭ್ರಮದಿಂದ ಆ ಮಗುವನ್ನು ಮಗನಂತೆ ಸಾಕುತ್ತಾರೆ.
ಹೀಗೆ ಕಗ್ಗಲ್ಲುಪುರದ ಬಾಚಣ್ಣಗೌಡ-ಮಲ್ಲಮ್ಮ ದಂಪತಿ ಪಾಲನೆ ಪೋಷಣೆಯಲ್ಲಿ ಬೆಳೆದ ಮರುಳಸಿದ್ದನು ಬಾಲಕನಾಗಿದ್ದಾಗ ತನ್ನ ಊರಿನಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿಯನ್ನು ತನ್ನ ಪ್ರಕರವಾದ ವೈಚಾರಿಕ ಮಾತುಗಳಿಂದ ವಿರೋಧಿಸಿ, ಧಾರ್ಮಿಕ ಶೋಷಿತರ ಕುತಂತ್ರವನ್ನು ಬಯಲು ಮಾಡುತ್ತಾನೆ. ಮುಂದೊಂದು ದಿನ ವಿಶ್ವವೆಲ್ಲಾ ತನಗೆ ಬಂಧು, ವಿಶ್ವದಲ್ಲಿ ತಾನೊಬ್ಬ, ಸಕಲರ ಹಿತವನ್ನು ಕಾಣವುದೇ ಮಾನವ ಜೀವನದ ಅತ್ಯಂತಿಕ ಧ್ಯೇಯ ಎಂದುಕೊಂಡು ಜಗತ್ತಿನ ಸಮಸ್ಯೆಗಳ ಅಧ್ಯಯನಕ್ಕಾಗಿ ಕಗ್ಗಲ್ಲುಪುರ ಬಿಟ್ಟು ಲೋಕ ಕಲ್ಯಾಣಕ್ಕಾಗಿ ದೇಶ ಸಂಚಾರಕ್ಕೆ ಹೋಗುತ್ತಾನೆ. ಆ ಸಮಯದಲ್ಲಿ ಚಿನ್ಮೂಲಾದ್ರಿಯ ಗುರು ಸಾರ್ವಭೌಮ, ಆದಿ ಗುರು ರೇವಣಸಿದ್ದರ ಪರಿಚಯವಾಗಿ, ಅವರಿಂದ ಲೋಕ ಸೇವೆಗೆ ಶಿವದೀಕ್ಷೆ ಪಡೆಯುವುದರೊಂದಿಗೆ ಶಿಷ್ಯತ್ವ ಪಡೆದುಕೊಂಡು, ಅವರ ಮಾರ್ಗದರ್ಶನದಲ್ಲಿ ಸಕಲ ವಿದ್ಯಾ ಪಾರಂಗತರಾದ ಮರುಳಸಿದ್ದರು ಅಂದು ಸಮಾಜದಲ್ಲಿದ್ದ ಮೌಢ್ಯತೆ, ಧಾರ್ಮಿಕ ಶೋಷಣೆ, ತಂತ್ರ ಕುತಂತ್ರಗಳಿಂದ ಪುರೋಹಿತ ಶಾಹಿಗಳು, ಜಂಗಮರು, ವ್ಯಾಪಾರಿಗಳನ್ನು ವಿರೋಧಿಸಿ ಜನರಲ್ಲಿ ಜಾಗೃತಿಯನ್ನುಂಟು ಮಾಡಲು ಸಾಮಾಜಿಕ ಬದಲಾವಣೆಗೆ ಏಕಾಂಗಿಯಾಗಿ ಹೋರಾಟ ಮಾಡಲು ಹಾಗೂ ಲೋಕದಲ್ಲಿನ ಸಕಲ ಜೀವಿಗಳ ಕಲ್ಯಾಣಕ್ಕಾಗಿ ದೇಶ ಪರ್ಯಟನೆ ಮಾಡುತ್ತಾರೆ. ಮರುಳಸಿದ್ದರು ಬಾಲ್ಯದಲ್ಲಿಯೇ ಪಶುಪಾಲನೆ ಮಾಡುತ್ತಿದ್ದುದರಿಂದ ಪ್ರಾಣಿ ದಯೆಯನ್ನು, ನಿಸರ್ಗ ಪ್ರೀತಿಯನ್ನು ಬೆಳೆಸಿಕೊಂಡಿದ್ದರು. ಅಲ್ಲದೆ ದೇವರ ಹೆಸರಿನಲ್ಲಿನ ಪ್ರಾಣಿ ಬಲಿಯನ್ನು, ಅನಿಷ್ಠ ಪದ್ಧತಿಗಳನ್ನು, ಯಜ್ಞ ಯಾಗಾದಿಗಳಲ್ಲಿನ ಮೌಢ್ಯತೆಯನ್ನು, ಅಂಧಶ್ರದ್ಧೆ –ಕಂದಾಚಾರವನ್ನು ಮತ್ತು ಮದ್ಯ-ಮಾಂಸ ಸೇವೆನೆಯನ್ನು ಖಂಡಿಸುತ್ತಾ, ಅವುಗಳ ನಿವಾರಣೆಗಾಗಿ ಹೋರಾಟ ನಡೆಸಿ ಅನೇಕ ಸಂಕಷ್ಟಗಳನ್ನು ಎದುರಿಸಿದರು ಹಾಗೂ ಶತ ಶತಮಾನಗಳಿಂದ ಶ್ರೇಣೀಕೃತ ಸಮಾಜದಲ್ಲಿ ಮನೆ
ಮಾಡಿದ್ದ ಮೌಢ್ಯ, ಅಂಧಶ್ರದ್ಧೆ, ಕಂದಾಚಾರ, ವಾಮಾಚಾರ, ಶೋಷಣೆ ಮತ್ತು ವರ್ಣ ಭೇದಗಳನ್ನು ಕಿತ್ತೊಗೆದು ಜ್ಞಾನದ ಕಹಳೆಯೂದಿದರು. ದಯವೇ ಧರ್ಮದ ಮೂಲವೆಂದು ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಸ್ವಾತಂತ್ರ್ಯ – ಸ್ವಾಭೀಮಾನವಿದೆ ಎಂದು ಸಕಲ ಜೀವರಾಶಿಗಳಿಗೆ ಕಲ್ಯಾಣ ಬಯಸಿದರು.
ಹೀಗೆ ಮರುಳಸಿದ್ದರು ಲೋಕ ಸಂಚಾರ ಮಾಡುತ್ತಾ ಶಿವಭಕ್ತರಾಗಿದ್ದ ರಾಮಿ ತಂದೆಗಳ ಆಶ್ರಯದಲ್ಲಿ ನೆಲೆನಿಂತಾಗ ಆ ಭಾಗದ ಶಿವಭಕ್ತರಾಗಿದ್ದ ಉಡುತಡಿಯ ನಿರ್ಮಲಶೆಟ್ಟಿ ಮತ್ತು ಸುಮತಿ ಎಂಬ ದಂಪತಿ ಸಂತಾನ ಭಾಗ್ಯಕ್ಕಾಗಿ ಮರುಳಸಿದ್ದರಲ್ಲಿ ಬೇಡಿಕೊಳ್ಳುತ್ತಾರೆ. ಆಗ ಮರುಳಸಿದ್ದರು ಈ ದಂಪತಿ ನಿಮ್ಮ ಉದರದಲ್ಲಿ ಈ ಲೋಕ ಕಲ್ಯಾಣಕ್ಕಾಗಿ ಒಬ್ಬ ಪುತ್ರಿಯ ಜನನವಾಗುತ್ತದೆ ಎಂದು ಹರಸಿ ಆಶೀರ್ವದಿಸುತ್ತಾರೆ. ಆನಂತರದಲ್ಲಿ ಈ ದಂಪತಿ ಹೆಣ್ಣು ಮಗು ಜನನವಾಗುತ್ತದೆ. ಆಗ ಈ ದಂಪತಿ ನಮ್ಮ ಮಗಳಿಗೆ ನೀವೇ ಶಿವದಿಕ್ಷೆ ನೀಡಿ ನಾಮಕರಣ ಮಾಡಬೇಕೆಂದು ಭಿನ್ನವಿಸಿಕೊಳ್ಳುತ್ತಾರೆ. ಮರುಳಸಿದ್ದರು ಉಡುತಡಿಯಲ್ಲಿ ಆ ಹೆಣ್ಣು ಮಗುವಿಗೆ ಶಿವದಿಕ್ಷೆ ಕೊಟ್ಟು ಮಹಾದೇವಿ ಎಂದು ನಾಮಕರಣ ಮಾಡುತ್ತಾರೆ. ಮರುಳಸಿದ್ದರು ಈ ಜಗತ್ತಿನಲ್ಲಿ ಪ್ರತಿಯೊಬ್ಬರು ಸಮಾನರು ದೇವನೊಬ್ಬ ಸಂತಾನವೆಂದು ಅವರಲ್ಲಿ ಮೇಲು-ಕೀಳು ತಾರತಮ್ಯ ಬಾರದು ಎಂದು, ವಿಪ್ರರು ದೇವರನ್ನು ಪೂಜಿಸುತ್ತಾರೆಂದರೆ ಆ ಹಕ್ಕು ಇತರರಿಗೇಕಿಲ್ಲ? ಎಂಬ ಉದ್ದೇಶವಿಟ್ಟುಕೊಂಡು ವಿಪ್ರರ ನಡೆ, ನುಡಿಗಳನ್ನು ಸತ್ಯಾಗ್ರಹದ ಮೂಲಕ ಪ್ರತಿಭಟಿಸಿ ಉಡುತಡಿಯ ಮಹಾದೇವಿಯನ್ನೊಳಗೊಂಡು ಹೆಣ್ಣುಮಕ್ಕಳಿಗೆ ಶಿವದಿಕ್ಷೆಯನ್ನು ಕೊಟ್ಟು ಸ್ತ್ರೀ ಸ್ವಾತಂತ್ರ್ಯವನ್ನು ಎತ್ತಿಹಿಡಿದರು ಮರುಳಸಿದ್ದರು. ಮರುಳಸಿದ್ದನಿಂದ ಶಿವದಿಕ್ಷೆ ಪಡೆದುಕೊಂಡ ಉಡತಡಿಯ ಮಹಾದೇವಿಯು ಮುಂದೆ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿದ್ದ ಶರಣೆ ಅಕ್ಕಮಹಾದೇವಿ ಎಂದೇ ಹೇಳಬಹುದು.
ಹೀಗೆ ಲೋಕದಲ್ಲಿನ ಸಕಲ ಜೀವ ರಾಶಿಗಳ ಕಲ್ಯಾಣಕ್ಕಾಗಿ ಲೋಕ ಸಂಚಾರ ಮಾಡುತ್ತಾ ಅಂದು ಪಾಂಡ್ಯ ರಾಜ್ಯದ ಅಧೀನಕ್ಕೊಳಪಟ್ಟಿದ್ದ ವಿಪ್ರರ ಅಗ್ರಹಾರವಾಗಿದ್ದ ಹೆಮ್ಮನಬೇತೂರು ಗ್ರಾಮಕ್ಕೆ ಬರುತ್ತಾರೆ. ಅಲ್ಲಿ ಯಜ್ಞದ ಹೆಸರಿನಲ್ಲಿ ಅಗ್ನಿಗಾಹುತಿಯಾಗುತ್ತಿದ್ದ ವಿವಿಧ ಆಹಾರ ಪದಾರ್ಥಗಳನ್ನು, ದವಸ-ಧಾನ್ಯಗಳನ್ನು ನೋಡಿ ಮರುಗಿದ ಮರುಳಸಿದ್ದ ದೇವರುಗಳಿಗೆ ಹಸಿವು-ತೃಷೆಗಳುಂಟೆ? ಅಗ್ನಿಯಲ್ಲಿ ಬೆಂದು ಬೂದಿಯಾದ ಮೇಲೆ ದೇವಾನುದೇವತೆಗಳಿಗೆ ಹೋಗಿ ಮುಟ್ಟುವ ವಸ್ತುವಾವುದು? ಹೊಗೆ ಹೋಗುತ್ತದೆಯೇ? ಹಾಗಾದರೆ ಹೊಗೆಗೆ ದೇವರುಗಳಿರುವ ಸ್ಥಳ ಗೊತ್ತುಂಟೇ? ಎಂದು ಇಂತಹ ಮೌಢ್ಯವನ್ನು, ಅನಿಷ್ಠ ಪದ್ಧತಿಯನ್ನು ವಿರೋಧಿಸುತ್ತಾನೆ. ಆಗ ಆ ಋತ್ವಿಜರು ಈತನ ಕೈಕಾಲು ಕಟ್ಟಿ ಅಣಜಿ ಕೆರೆಯಲ್ಲಿ ಹಾಕುತ್ತಾರೆ. ಆದರೆ ಮರುಳಸಿದ್ದ ಪವಾಡವೆಂಬಂತೆ ಬದುಕಿ ಬರುತ್ತಾನೆ. ಮತ್ತೆ ಮರುಳಸಿದ್ದನು ಯಜ್ಞ-ಯಾಗಾದಿಗಳನ್ನು ಮಾಡುವುದನ್ನು ವಿರೋಧಿಸುತ್ತಾನೆ. ಆಗ ಅಲ್ಲಿನ ವಿಪ್ರರು ಮರುಳಸಿದ್ದನನ್ನು ಕುರುಡಿ ಗ್ರಾಮದಲ್ಲಿ ಹಗೇವಿಗೆ ಹಾಕಿ ಮೇಲೆ ಬಿಸಿ ಸುಣ್ಣ ಸುರಿಯುತ್ತಾರೆ. ಆಗ ಅಲ್ಲಿದ್ದ ಇತರೆ ಶೂದ್ರ ಜನರು ಮರುಳಸಿದ್ದನನ್ನು ಹಗೇವಿನಿಂದ ಮೇಲಕ್ಕೆ ಎತ್ತಿ ಅವನ ನೆತ್ತಿಗೆ ಎಣ್ಣೆಯನ್ನು ಸುರಿಯುತ್ತಾರೆ. ಆಗ ಮತ್ತೆ ಬದುಕುಳಿಯುತ್ತಾನೆ. ಹೀಗೆ ಕುರುಡಿ ಗ್ರಾಮದಲ್ಲಿ ಸುಣ್ಣದ ಪವಾಡವನ್ನು ಗೆದ್ದಿದ್ದ ಪ್ರಯುಕ್ತ ಮರುಳಸಿದ್ದನ ನೆತ್ತಿ ತಣ್ಣಗಾಗಲಿ ಎಂದು ಪ್ರತೀ ವರ್ಷ ಉಜ್ಜಯಿನಿಯ ಮರುಳಸಿದ್ದನ ದೇವಸ್ಥಾನದ ಶಿಖರಕ್ಕೆ ಇಂದಿಗೂ ಎಣ್ಣೆ ಎರೆಯುತ್ತಿದ್ದಾರೆ. ಮತ್ತೆ ಬದುಕಿ ಬಂದ ಮರುಳಸಿದ್ದನು ಮೌಢ್ಯತೆಯ ಕೇಂದ್ರವಾಗಿದ್ದ ಯಜ್ಞ ಶಾಲೆಗೆ ಪ್ರವೇಶಿಸಿ ಕಟುವಾಗಿ ವಿರೋಧಿಸುತ್ತಾನೆ. ಆಗ ಆ ಭಾಗದ ದೊರೆಯು ಮರುಳಸಿದ್ದನನ್ನು ಆನೆಯ ಕಾಲಿಗೆ ಕಟ್ಟಿ ತುಳಿಸುವಂತೆ ಆಜ್ಞೆ ಮಾಡುತ್ತಾನೆ. ಆಗ ಮರುಳಸಿದ್ದನು ಆನೆಯ ಕೈಗೆ ಸಿಗದಂತೆ ಓಡಿ ಹೋಗಿ ಮುಚ್ಚನೂರಿನಲ್ಲಿ ಮುಚ್ಚಿಕೊಳ್ಳುತ್ತಾನೆ. ಹಾಗಾಗಿ ಈ ಊರಿಗೆ ಮುಚ್ಚನೂರು ಎಂಬ ಹೆಸರು ಬಂದಿದೆ ಎಂದು ಹೇಳಬಹುದು. ನಂತರ ಉಳುಪಿನ ಕಟ್ಟಿಯಲ್ಲಿ ಉಳಿದುಕೊಂಡು ಆನಗೋಡಿನಲ್ಲಿ ಆನೆಯೊಂದಿಗೆ ಸೆಣಸಾಡಿ ಅದರ ಕೋರೆಗಳನ್ನು (ಕೋಡುಗಳನ್ನು) ಕಿತ್ತು ಹಾಕಿ ಗರ್ವಭಂಗ ಮಾಡುತ್ತಾನೆ. ಇದರಿಂದ ಈ ಗ್ರಾಮಕ್ಕೆ ಆನಗೋಡು ಎಂಬ ಹೆಸರು ಬಂದಿದೆ. ನಂತರ ಪಲ್ಲಾಗಟ್ಟೆಯಲ್ಲಿ ಪಲ್ಲಕ್ಕಿ ಏರಿ ಮರುಳಸಿದ್ದನು ತನ್ನ ಮಹಿಮೆಯನ್ನು ತೋರಿಸುತ್ತಾನೆ.
ಆ ನಂತರ ಮರುಳಸಿದ್ದನು ದ್ವಾರ ಸಮುದ್ರಕ್ಕೆ ಹೋಗುವ ದಾರಿಯಲ್ಲಿ ಸಿಗುವ ಕಲ್ಲು ಮರಡಿಯಲ್ಲಿ ಕೆಲಕಾಲ ವಿಶ್ರಾಂತಿ ಪಡೆಯುತ್ತಾನೆ. ಆ ನಂತರ ಮರುಳಸಿದ್ದನು ದ್ವಾರಸಮುದ್ರ ಪ್ರವೇಶಿಸುತ್ತಾನೆ. ಅಲ್ಲಿ ಜನ ಕಲ್ಯಾಣಕ್ಕಾಗಿ ಅಲ್ಲಿನ ದೊರೆ ಬಲ್ಲಾಳರಾಯನ ವಿರುದ್ಧ ಸಿಡಿದೇಳುತ್ತಾನೆ. ಇದರಿಂದ ಸಿಟ್ಟಿಗೆದ್ದ ಬಲ್ಲಾಳ ರಾಯ ದೊರೆಯು ಬೆಂಕಿಯಲ್ಲಿ ಕಾಯಿಸಿದ ಕಬ್ಬಿಣದ ಬಳೆಗಳನ್ನು ಕೈಗೆ ಹಾಕಿಸುತ್ತಾನೆ. ಆ ತಕ್ಷಣವೇ ಮಳೆ ಬಂದು ಕಾದ ಬಳೆಗಳು ತಣ್ಣಗಾಗುತ್ತವೆ. ಮರುಳಸಿದ್ದನ ಈ ಪವಾಡದಿಂದ ಪರಿವರ್ತನೆಯಾದ ಬಲ್ಲಾಳ ದೊರೆಯು ಬಳೆಗೈ ಶರಣ ಎಂಬ ಹೆಸರಿನಿಂದ ಮರುಳಸಿದ್ದನ ಶಿಷ್ಯನಾಗುತ್ತಾನೆ, ನಂತರ ಮರುಳಸಿದ್ದ ಓರಂಗಲ್ಲಿನ ಸಿದ್ದಗಿರಿಯಲ್ಲಿ ಆ ದೇಶದ ರಾಜಪುತ್ರಿಯೊಡನೆ ವಿವಾದಕ್ಕಿಳಿದು ಆಕೆಯನ್ನು ವಾಮಮಾರ್ಗದಿಂದ ನಿವೃತ್ತಿಗೊಳಿಸಿ ತನ್ನ ಶಿಷ್ಯಳನ್ನಾಗಿ ಮಾಡಿಕೊಳ್ಳುತ್ತಾನೆ.
ಅಲ್ಲಿಂದ ಮುಂದೆ ಗುರು ರೇವಣಸಿದ್ದರ ಆಣತಿಯಂತೆ ಮರುಳಸಿದ್ದನು ಶಕ್ತಿಪೂಜೆಯ ಕೇಂದ್ರವಾಗಿದ್ದ ಕೊಲ್ಲಾಪುರದ ಯುವರಾಣಿ ಮಾಯಾದೇವಿಯ ದುರಹಂಕಾರವನ್ನು ಅಡಗಿಸಲು ಕೊಲ್ಲಾಪುರಕ್ಕೆ ಬಂದು, ಆ ಮಾಯಾದೇವಿಯ ಹಾವಭಾವಗಳಿಗೆ ಮನಸೋಲದೆ, ತನ್ನ ಶರೀರ ಸೌಂದರ್ಯದಿಂದ ಸುಲಭವಾಗಿ ಮರುಳಸಿದ್ದನನ್ನು ವಶಪಡಿಸಿಕೊಳ್ಳಬಲ್ಲೆನೆಂಬ ಆಕೆಯ ನಿರೀಕ್ಷೆಯನ್ನು ಹುಸಿಗೊಳಿಸಿ, ಆಕೆಯ ಗರ್ವಭಂಗ ಮಾಡುತ್ತಾನೆ. ಮಾಯಾದೇವಿಯು ಮರುಳಸಿದ್ದನನ್ನು ಹಿಮ್ಮೆಟ್ಟಿಸುವಂತೆ ಮಾಡಲು ನಾನಾ ವಿಧವಾದ ತಂತ್ರಗಳೆಲ್ಲಾ ವಿಫಲವಾದಾಗ ಅವಳೇ ನೇರವಾಗಿ ಮರುಳಸಿದ್ದನೆದುರು ಬರುತ್ತಾಳೆ. ಆಗಲೂ ಮರುಳಸಿದ್ದ ಅವಳ ಹಾವ-ಭಾವ, ವಿಲಾಸ – ವಿಭ್ರಮಗಳಿಗೆ ಮಣಿಯದಿದ್ದಾಗ ಬೆದರಿದ ಅವಳು
ಬಿಟ್ಟು ನೋಡುವೆ ಕಾಮ ಬಾಣವ
ನಿಟ್ಟು ನೋಡಿದೆ ತಾಮಸಾಗ್ನಿಯ
ಕಟ್ಟಿ ನೋಡಿದೆ ಮೋಹನಾಸ್ತ್ರದಿ
ದಿಟ್ಟನಾಗಿರುವಿ ನೀ ಎಂದು ಈ ರೀತಿ ನುಡಿಯುತ್ತಾಳೆ. ಆಗ ಮರುಳಸಿದ್ದನು ನಾನು ಸುಟ್ಟ ಬಟ್ಟೆ ನನ್ನಂತವನನ್ನು ಹಿಡಿಯುವ ಸಾಹಸ ನಿನಗೇಕೆ? ಎಂದು ವಿವಿಧ ರೀತಿಯ ವಿವೇಕದ ಮಾತುಗಳನ್ನು ಹೇಳುತ್ತಾನೆ. ಆಗಲೂ ತನ್ನ ಹಠವನ್ನು ಬಿಡದ ಮಾಯೆ ಮನಬಂದಂತೆ ಹರಟದಿರು, ಈ ನನ್ನ ಕರಹಟನ ರಾಜ್ಯದಲ್ಲಿ ತಲೆಹರಟೆಗೆ ಅವಕಾಶವಿಲ್ಲ. ಹರನ ರೂಪಧರಿಸಿ ಬಂದ ಸಾಧುಸಿದ್ದರನ್ನು ಬಂಧಿಸಿ ಸಿದ್ದಗಿರಿಯಲ್ಲಿ ಸೆರೆಯಲ್ಲಿಡುವೆ ಎಂದು ಉದ್ದಟತನದ ಮಾತುಗಳನ್ನಾಡುತ್ತಾಳೆ. ಆಗ ಮರುಳಸಿದ್ದ ಅವಳಿಗೆ ವಿಧ ವಿಧವಾಗಿ ವಿವೇಕದ ಮಾತುಗಳನ್ನು ಹೇಳಿ ಅವಳ ಮನ ಪರಿವರ್ತನೆ ಮಾಡುತ್ತಾನ. ಆಗ ಮಾಯಾದೇವಿ ಸಂಪೂರ್ಣವಾಗಿ ಸೋತು ತಾನೇ ಮರುಳಸಿದ್ದನಿಗೆ ಶರಣಾಗತಳಾಗಿ ಶಿಷ್ಯತನ ಪಡೆಯುತ್ತಾಳೆ. ಹೀಗೆ ವಿಪ್ರರ ಕುಟಿಲತೆಗೆ ಒಳಗಾಗಿದ್ದ ಅನೇಕ ಶಿವಭಕ್ತರನ್ನು ಬಂಧಮುಕ್ತರನ್ನಾಗಿ ಮಾಡಿಸುತ್ತಾರೆ. ಯಾವುದೇ ಪ್ರಬಲ ಜಾತಿ, ಧರ್ಮ, ರಾಜಾಶ್ರಯದ ಬೆಂಬಲವಿಲ್ಲದೆ ಅತ್ಯಂತ ಕೆಳವರ್ಗದಿಂದ ಬಂದು ಶ್ರಮಜೀವಿಗಳ ಸಹಕಾರದ ಮೂಲಕ ಜನರ ಪರಿವರ್ತನೆಗೆ ತನ್ನ ಬದುಕನ್ನೇ ಮೀಸಲಿಟ್ಟ ಅದಮ್ಯ ಶಕ್ತಿ ಮರುಳಸಿದ್ದ. ವ್ಯಕ್ತಿತ್ವದ ವಿಕಾಸಕ್ಕೆ ಹುಟ್ಟಾಗಲೀ – ಜಾತಿಯಾಗಲಿ ಸಂಬಂಧವಿಲ್ಲ ಎಂಬುದನ್ನು ಲೋಕಕ್ಕೆ ತೋರಿದ ಮಹಾತ್ಮ ಮರುಳಸಿದ್ದನು. ಅಂತ್ಯಜರಾಗಿ ಹುಟ್ಟಿಯೂ ತಮ್ಮ ಮಾನವೀಯ ಅನುಕಂಪ, ಸಕಲ ಜೀವಿಗಳ ಕಲ್ಯಾಣಕ್ಕಾಗಿ ಮಾಡಿದ ಹೋರಾಟ, ಸಾಮಾಜಿಕ ಕಳಕಳಿ ಮತ್ತು ಇವರ ವೈಯಕ್ತಿಕ ಸಾಧನೆಯ ಮೂಲಕ ವಿಶ್ವಬಂಧುವಾಗಿ ಇವರ ತತ್ವಗಳಿಂದ ಪ್ರಭಾವಿತರಾದ ಜನತೆ ಮರುಳಸಿದ್ದರನ್ನು ವಿಶ್ವಬಂಧು ಮರುಳಸಿದ್ದ ಎಂದು ಭಕ್ತಿಯಿಂದ ಆರಾಧಿಸುವುದರ ಮೂಲಕ ಜನಮನದ ಹೃದಯ ಸಿಂಹಾಸನದಲ್ಲಿ ನೆಲೆಗೊಂಡರು.
ಹೀಗೆ ಮಾದಿಗರ ಮಗನಾಗಿ ಹುಟ್ಟಿ, ಸಾದಿಗರ ಮಗನಾಗಿ ಬೆಳೆದ ವಿಶ್ವಬಂಧು ಮರುಳಸಿದ್ದ ವೇದ ಸಾರುವ ದಿಗ್ಗಜರನ್ನು ಸೋಲಿಸಿ, ಮಾಯೆಯ ಮದವನ್ನು ಮರ್ಧಿಸಿ, ವಿಪ್ರರ ಉಪಟಳವನ್ನು ಬೇಧಿಸಿ, ಈ ಲೋಕದಲ್ಲಿನ ಸಕಲ ಜೀವಿಗಳ ಕಲ್ಯಾಣಕ್ಕಾಗಿ ಲೋಕಸಂಚಾರ ಮಾಡಿ, ದೇಶ ಪರ್ಯಟನೆಯ ನಂತರ ತನ್ನ ಜನ್ಮ ಭೂಮಿಯಾದ ಕಗ್ಗಲ್ಲುಪುರಕ್ಕೆ ಮರಳಿ ಬಂದು ಲೋಕ ಕಲ್ಯಾಣಕ್ಕೋಸ್ಕರ ಸದ್ಧರ್ಮ ಪೀಠ ಸ್ಥಾಪನೆಗಾಗಿ ತನ್ನ ಸಾಕು ತಂದೆ ಬಾಚಣ್ಣಗೌಡರಲ್ಲಿ ಭೂಮಿ ಕೇಳುತ್ತಾನೆ. ಆಗ ಬಾಚಣ್ಣಗೌಡನು ನಿನಗೆ ಬೇಕಾದ ಭೂಮಿಯನ್ನು ತೆಗೆದುಕೊಳ್ಳಬಹುದೆಂದು ಹೇಳುತ್ತಾನೆ. ಆಗ ಮರುಳಸಿದ್ದನು ಉಜ್ಜಯಿನಿಯಲ್ಲಿ ಒಂಭತ್ತು (9) ಕಡೆ ಪಾದವಿರಿಸಿ, ಈ ಮಧ್ಯದ ಭೂಮಿ ಬೇಕೆಂದು ಪಡೆದುಕೊಂಡು, ಅಲ್ಲಿ ಒಂದು ಪೀಠವನ್ನು ಸ್ಥಾಪನೆ ಮಾಡುತ್ತಾನೆ.
ನಂತರ ವಿಶ್ವಬಂಧು ಮರುಳಸಿದ್ದನು ತೆಲುಗುಬಾಳಿಗೆ ಬಂದು ಅಲ್ಲಿ ವ್ಯವಸಾಯ ಕಾರ್ಯದಲ್ಲಿ ತೊಡಗಿದ್ದ 5 ಜನ ಸಹೋದರರಲ್ಲಿ ಕಿರಿಯನು ಮೂಕನು ಆಗಿದ್ದ ಸಿದ್ದನನ್ನು ಕರೆದು ಮಾತನಾಡಿಸುತ್ತಾನೆ. ಅಲ್ಲಿಯವರೆಗೂ ಮಾತನಾಡದೆ ಮೂಕ ಆಗಿದ್ದ ಸಿದ್ದನು ಆಗ ಮಾತನಾಡುತ್ತಾನೆ. ಆ ತಕ್ಷಣವೇ ತೆಲುಗುಬಾಳು ಸಿದ್ದನಿಗೆ ಶಿವದಿಕ್ಷೆ ಕೊಟ್ಟು ಸಿದ್ದಯ್ಯ ಎಂದು ನಾಮಕರಣ ಮಾಡಿ, ಉಜ್ಜಯಿನಿಯಲ್ಲಿ ಸ್ಥಾಪಿಸಿದ್ದ ಸದ್ಧರ್ಮ ಪೀಠಕ್ಕೆ ಮಾಘ ಶುದ್ಧ ಹುಣ್ಣಿಮೆಯಂದು ತೆಲುಗುಬಾಳು ಸಿದ್ದಯ್ಯನನ್ನು ಈ ಪೀಠದ ಮೇಲೆ ಕುಳ್ಳಿರಿಸಿ ತರಳಬಾಳು ಎಂದು ಹರಸಿ ಆಶೀರ್ವದಿಸುತ್ತಾನೆ. ಅಂದಿನಿಂದ ಪ್ರಾರಂಭವಾದ ತರಳಬಾಳು ಗುರು ಪರಂಪರೆಯವರು ಶ್ರೀ ವಿಶ್ವಬಂಧು ಮರುಳಸಿದ್ದನ ತತ್ವಗಳನ್ನು ಪ್ರಚಾರ ಮಾಡುತ್ತಾ ಬರುತ್ತಿದ್ದಾರೆ. ಶ್ರೀ ವಿಶ್ವಬಂಧು ಮರುಳಸಿದ್ದನ ವ್ಯಕ್ತಿತ್ವ, ಹೋರಾಟ, ಒಂದೊಂದು ದಿಟ್ಟ ಹೆಜ್ಜೆಗಳೂ ಒಂದೊಂದು ಧೀರೋದಾತ್ತ ತತ್ವದ ಹಿನ್ನೆಲೆಯನ್ನು ಸಾರುತ್ತವೆ, ಅಪಾರ ಅನುಭವ ರಸಾಯನವನ್ನೇ ತೋರುತ್ತವೆ. ಹೀಗೆ ಸಕಲ ಜೀವರಾಶಿಗಳ ಕಲ್ಯಾಣಕ್ಕಾಗಿ ಹೋರಾಟ ಮಾಡಿ ಮನುಕುಲದ ಗುರುವಾದ ಶ್ರೀ ತರಳಬಾಳು ಪೀಠದ ಮೂಲ ಪುರುಷನಾದ ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರನ ದೇವಸ್ಥಾನವನ್ನು ದಾವಣಗೆರೆಯಲ್ಲಿ ನಿರ್ಮಾಣ ಮಾಡಿ, ಪ್ರತೀ ವರ್ಷ ಅದರ ಕಾರ್ತಿಕೋತ್ಸವವನ್ನು ಆಚರಿಸುತ್ತಾ, ಜನತೆಗೆ ಶ್ರೀ ವಿಶ್ವಬಂಧು ಮರುಳಸಿದ್ದನ ಜೀವನ ಚರಿತ್ರೆಯನ್ನು, ತತ್ವಗಳನ್ನು, ವಿಚಾರಗಳನ್ನು ಉಣಬಡಿಸುತ್ತಾ ಬಂದಿರುವ ದಾವಣಗೆರೆಯ ಸದ್ಭಕ್ತರಾದ ಕರೇಶಿವಪ್ಳರ ಸಿದ್ದಣ್ಣ, ಮಾಗನೂರು ಸಂಗಮೇಶ್ವರ ಗೌಡರು, ಕೆ.ಜಿ.ಡಿ. ಹಾಲಪ್ಪ, ಡಿ.ಸುರೇಂದ್ರಣ್ಣ, ರಾಮಗೊಂಡನಹಳ್ಳಿ ಜಯಣ್ಣ, ಎಂ. ಬಸವರಾಜಪ್ಪ, ಮುದೇಗೌಡ್ರ ಬಸವರಾಜಣ್ಣ, ಬೇತೂರು ಮಧುಸೂದನಣ್ಣ, ಕಲ್ಪನಹಳ್ಳಿ ನಾಗರಾಜಣ್ಣ, ಮಂಜುಳ ಬಸವಲಿಂಗಪ್ಪ, ಎಂ. ಚಂದ್ರಶೇಖರಯ್ಯ, ಕೆ.ಆರ್. ಜಯದೇವಪ್ಪ, ಶಾಮನೂರು ರಾಮಚಂದ್ರಣ್ಣ, ಆನೆಕೊಂಡದ ಗೌಡ್ರ ರೇವಣಸಿದ್ದಣ್ಣ, ಬೊಮ್ಮೇನಹಳ್ಳಿ ಲಿಂಗರಾಜಣ್ಣ, ಐಗೂರು ಚಂದ್ರಶೇಖರಣ್ಣ, ಬಾಡಾ ಸೋಮಶೇಖರಣ್ಣ, ಶ್ಯಾಗಲೆ ಪುಷ್ಪಾ ಮಲ್ಲಿಕಾರ್ಜುನಪ್ಪ, ವಿ. ಶಿವಮೂರ್ತಯ್ಯ, ಎಂ. ಬಸವರಾಜಪ್ಪ, ಬಿ.ಎಸ್. ರಮೇಶಣ್ಣ, ಕಾಕನೂರು ಪ್ರಭಣ್ಣ, ನಾಗರಕಟ್ಟೆ ಪ್ರಕಾಶಣ್ಣ, ಶಿವನಳ್ಳಿ ರೇವಣ್ಣ, ಬುಳ್ಳಾಪುರದ ಸಿದ್ದೇಶಣ್ಣ, ಇನ್ನು ಮುಂತಾದ ಸದ್ಭಕ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ..
ಶ್ರೀ ವಿಶ್ವಬಂಧು ಮರುಳಸಿದ್ದನ 17ನೇ ಕಾರ್ತಿಕೋತ್ಸವದ ಪ್ರಯುಕ್ತ ಎಲ್ಲಾ ಸದ್ಭಕ್ತರ ಪರವಾಗಿ ಭಕ್ತಿಪೂರ್ವಕ ನಮನಗಳು.
– ಕೊಂಡಜ್ಜಿ ಬಣಕಾರ್ ಶಿವಕುಮಾರ್, ವಕೀಲರು, ದಾವಣಗೆರೆ.