- ವೃತ್ತಿ ಜೀವನದ ವೈದ್ಯಕೀಯ ಸೇವೆಗೆ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮ
- ವೈವಾಹಿಕ ಜೀವನದ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮ
- ಸಾಮಾಜಿಕ ಸೇವೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮ
- ಜೀವನ ಆಧಾರ ಸ್ತಂಭ ಆಸ್ಪತ್ರೆಗೆ 44ನೇ ವರ್ಷಾಚರಣೆಯ ಸಂಭ್ರಮ
- ಸಾರ್ಥಕ ಜೀವನಕ್ಕೆ 77ರ ವರ್ಷಾಚರಣೆಯ ಸಂಭ್ರಮ
ಈ ಸಾಲು… ಸಾಲು… ಸಂಭ್ರಮೋತ್ಸವದಲ್ಲಿ ದಾವಣಗೆರೆ ಜಿಲ್ಲೆಯ ಹಿರಿಯ ವೈದ್ಯ ಡಾ. ಬಿ.ಎಸ್. ನಾಗಪ್ರಕಾಶ್, 2024-25ರ ಸಾಲಿನ ಎರಡ್ಮೂರು ತಿಂಗಳ ಅವಧಿಯಲ್ಲಿ ಈ ಎಲ್ಲಾ ಸಂಭ್ರಮಗಳನ್ನು ಆಚರಿಸಿಕೊಳ್ಳುವುದರ ಮೂಲಕ ಸಾರ್ಥಕ ಜೀವನವನ್ನು ಕಣ್ತುಂಬಿಕೊಂಡು, ವಿಜೃಂಭಿಸುತ್ತಿರುವುದು ಅವರ ಪಾಲಿಗೆ ಪರಮ ಅದೃಷ್ಟವೆಂದರೆ ಅತಿಶಯೋಕ್ತಿಯಾಗಲಾರದು.
ಸಂಕ್ಷಿಪ್ತ ಪರಿಚಯ: ಮೂಲತಃ ದಾವಣಗೆರೆಯವರೇ ಆದ ಕೀರ್ತಿಶೇಷರಾದ ಶ್ರೀ ಬಿ.ವಿ. ಸತ್ಯನಾರಾಯಣ ಶೆಟ್ಟಿ ಮತ್ತು ಶ್ರೀಮತಿ ಬಿ.ಎಸ್. ನಾಗರತ್ನಮ್ಮ ದಂಪತಿ ಪುತ್ರರಾಗಿ 1948, ಡಿಸೆಂಬರ್ 4ರಂದು ಜನಿಸಿದ ನಾಗಪ್ರಕಾಶ್, ಎಂಬಿಬಿಎಸ್., ಎಂ.ಎಸ್. ಪದವೀಧರರಾಗಿದ್ದು, 77ನೇ ವರ್ಷದ ಸಂಭ್ರಮದಲ್ಲಿದ್ದಾರೆ.
1975, ಫೆಬ್ರವರಿ 17 ರಂದು ಶ್ರೀಮತಿ ಪದ್ಮ ಅವರೊಂದಿಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ಅವರು, ಪುತ್ರ ಡಾ. ಅಭಿಷೇಕ್, ಪುತ್ರಿ ಶ್ರೀಮತಿ ಸ್ಮಿತಾ, ಸೊಸೆ, ಅಳಿಯ, ನಾಲ್ವರು ಮೊಮ್ಮಕ್ಕಳೊಂದಿಗೆ ಸುಖೀ ಕುಟುಂಬವನ್ನು ಹೊಂದಿದ್ದು, 50ನೇ ವರ್ಷದ ಮದುವೆ ವಾರ್ಷಿಕೋತ್ಸದ ಸಂಭ್ರಮದಲ್ಲಿದ್ದಾರೆ.
1974, ಡಿಸೆಂಬರ್‌ನಲ್ಲಿ ದಾವಣಗೆರೆ ಹಳೇ ಭಾಗದ ಎಸ್.ಕೆ.ಪಿ. ರಸ್ತೆಯಲ್ಲಿ ಶ್ರೀಕಾಂತ್ ಕ್ಲಿನಿಕ್ ಆರಂಭಿಸುವುದರ ಮೂಲಕ ತಮ್ಮ ವೈದ್ಯಕೀಯ ವೃತ್ತಿ ಜೀವನವನ್ನು ಆರಂಭಿಸಿದ ಅವರು, 1980 ಡಿಸೆಂಬರ್ 10 ರಂದು ಯುನಿಟಿ ಹೆಲ್ತ್ ಸೆಂಟರ್ ಪ್ರಾರಂಭಿಸುವುದರ ಮೂಲಕ ಅಂದಿನ ದಿನಗಳಲ್ಲಿ ದಾವಣಗೆರೆ ಹಳೇ ಊರಿನಲ್ಲಿ ಅತ್ಯಾಧುನಿಕ ಪಾಲಿಕ್ಲಿನಿಕ್ ಮತ್ತು ನರ್ಸಿಂಗ್ ಹೋಂ ಸ್ಥಾಪನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಆ ಆಸ್ಪತ್ರೆಗೀಗ 44ರ ಸಂಭ್ರಮ.
1973ರಲ್ಲಿ ವೈದ್ಯಕೀಯ ಪದವಿ ಪಡೆದು 1978ರಲ್ಲಿ ಮೈಸೂರಿನಲ್ಲಿ ಉನ್ನತ ಪದವಿ (ಎಂ.ಎಸ್.) ಮುಗಿಸಿದ ಅವರು ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗುವ ಆಸೆ ಹೊತ್ತಿದ್ದರಾದರೂ, ನರ್ಸಿಂಗ್ ಹೋಂ ಸ್ಥಾಪಿಸುವಲ್ಲಿ ಸಫಲರಾಗಿದ್ದು, ವೃತ್ತಿ ಬದುಕಿನ 50ರ ಸಂಭ್ರಮದಲ್ಲಿದ್ದಾರೆ.
ವೈದ್ಯಕೀಯ ಕ್ಷೇತ್ರದ ಜೀವನದ ಜೊತೆ-ಜೊತೆಗೆ ಸಾಮಾಜಿಕ ಸೇವೆ ಸಲ್ಲಿಸಬೇಕೆಂಬ ಮಹದಾಸೆಯನ್ನು ಲಯನ್ಸ್ ಕ್ಲಬ್ ಮೂಲಕ ಈಡೇರಿಸಿಕೊಂಡರು. ಅಂತರರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆ ಲಯನ್ಸ್ ಕ್ಲಬ್‌ನೊಂದಿಗೆ 1974ರಲ್ಲಿ ಸಾಮಾಜಿಕ ಸೇವೆ ಆರಂಭಿಸಿದ ಅವರು, ಆ ಸೇವೆಗೀಗ 50ರ ಸಂಭ್ರಮದಲ್ಲಿದ್ದಾರೆ.
ಲಯನ್ಸ್ ಕ್ಲಬ್ ಮಾತ್ರವಲ್ಲದೇ, ಕನ್ನಡ ಚಳುವಳಿ, ಭಾರತೀಯ ರೆಡ್ ಕ್ರಾಸ್, ಸೇವಾ ದಳ, ಸಿನಿಮಾ ಸಿರಿ ಸೇರಿದಂತೆ ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ನಾಡು – ನುಡಿ ಸೇವೆಯಲ್ಲಿ ಸದಾ ಮುಂದಿದ್ದಾರೆ.
ಹೀಗೆ, ಡಿಸೆಂಬರ್‌ನಿಂದ ಫೆಬ್ರವರಿ ವರೆಗಿನ ಅವಧಿ ಡಾ. ಬಿ.ಎಸ್. ನಾಗಪ್ರಕಾಶ್ ಪಾಲಿಗೆ ಅದೃಷ್ಟ ಖುಲಾಯಿಸಿದ ದಿನಗಳು ಎನ್ನಬಹುದು.
ಚಿತ್ರರಂಗ : ಇವೆಲ್ಲದರ ನಡುವೆ ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. `ಪದ್ಮಾಲಯ ಕಂಬೈನ್ಸ್’ ಸ್ಥಾಪಿಸಿ ಅದರ ಮೂಲಕ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ನಿರ್ಮಾಣದ ಚಿತ್ರಗಳ ಪೈಕಿ ಸಾಂಗ್ಲಿಯಾನ, ವಿಜಯಕ್ರಾಂತಿ, ರಾಜಣ್ಣ, ದಡ ಸೇರಿದ ದೋಣಿ, ಕಲಿಯುಗ ಕೃಷ್ಣ ಚಿತ್ರಗಳು ಅಪಾರ ಜನ ಮನ್ನಣೆ ಗಳಿಸಿವೆ.
ಚಿತ್ರರಂಗದಲ್ಲಿ ಅನೇಕ ತಾರಾ ನಟರಿಗೆ ಭವಿಷ್ಯವನ್ನು ಕಲ್ಪಿಸಿದ ಶ್ರೇಯಸ್ಸು ಡಾ.ನಾಗಪ್ರಕಾಶ್ ಅವರದ್ದಾಗಿದೆ. ದೇವರಾಜ್, ಶಶಿಕುಮಾರ್, ಕೀರ್ತಿರಾಜ್, ಪ್ರಕಾಶ್ ರೈ ಮತ್ತಿತರರು ಹೆಸರಾಂತ ನಟರಾಗಲು ಡಾ. ನಾಗಪ್ರಕಾಶ್ ಅವರ ಚಿತ್ರಗಳು ಬುನಾದಿ ಹಾಕಿಕೊಟ್ಟಿವೆ. ಬಹುಭಾಷಾ ತಾರೆ ಸೌಂದರ್ಯ ಅವರಿಗೆ ಪ್ರಪ್ರಥಮವಾಗಿ ಚಿತ್ರರಂಗದಲ್ಲಿ ಅವಕಾಶ ಕಲ್ಪಿಸಿದವರು ಡಾ. ನಾಗಪ್ರಕಾಶ್. ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ 1990ರಲ್ಲಿ ಚಲನಚಿತ್ರ ತಾರೆಯರ ಸ್ಟಾರ್ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿದ ರೂವಾರಿಯೂ ಅವರಾಗಿದ್ದಾರೆ.
ದಾನಿ : ದುಡಿಮೆಯೇ ಮುಖ್ಯವಲ್ಲ, ಎಷ್ಟೇ ದುಡಿದಿದ್ದರೂ ಅದರಲ್ಲಿ ಸ್ವಲ್ಪವನ್ನಾದರೂ ಸಮಾಜ ಸೇವೆಗೆ ಸಮರ್ಪಿಸಿದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದು ಎನ್ನುವ ಡಾ. ನಾಗಪ್ರಕಾಶ್, ದಾವಣಗೆರೆ ಲಯನ್ಸ್ ಸಂಸ್ಥೆಯ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ, ಡಿಸಿಎಂ ಟೌನ್‌ಶಿಪ್‌ನಲ್ಲಿರುವ ವಾಸವಿ ಸೇವಾ ಸಂಘದ ಭೋಜನಾಲಯ ನಿರ್ಮಾಣಕ್ಕೆ, ಅವೋಪ ಕಟ್ಟಡಕ್ಕೆ ಉದಾರವಾಗಿ ದೇಣಿಗೆ ನೀಡಿದ್ದಾರೆ.
ಕಡು ಬಡತನದಲ್ಲಿರುವ ಇಬ್ಬರು ವಿದ್ಯಾರ್ಥಿಗಳನ್ನು ವೈದ್ಯಕೀಯ ವಿದ್ಯಾಭ್ಯಾಸ, ಓರ್ವ ವಿದ್ಯಾರ್ಥಿಯನ್ನು ಇಂಜಿನಿಯರಿಂಗ್ ವಿದ್ಯಾಭ್ಯಾಸದ ಪೂರ್ಣ ಜವಾಬ್ಧಾರಿ ನಿರ್ವಹಿಸುತ್ತಿದ್ದಾರೆ. ಹೀಗೆ ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಯಶಸ್ಸು ಕಂಡಿರುವ ಡಾ. ನಾಗಪ್ರಕಾಶ್ ಅವರಿಗೆ ಭವಿಷ್ಯದ ದಿನಗಳಲ್ಲೂ ಸದಾವಕಾಶಗಳು ದೊರೆಯಲಿ.
– ಇ.ಎಂ. ಮಂಜುನಾಥ, [email protected]