ಹಳೆ ಊರಿನ ಹಳೆ ಕಾಲದ ಗಣೇಶೋತ್ಸವ, ದೀಪಾವಳಿ, ಗೌರಿ ಆರತಿಯ ಕೆಲ ಸ್ವಾರಸ್ಯಗಳನ್ನು ಹೇಳಿದೆ. ಈಗ ಚಳಿಗಾಲದ ಕೆಲ ಸ್ವಾರಸ್ಯಗಳನ್ನು ಹೇಳುವೆ.
ಹರಿಹರದ ನಾಗಪ್ಪನವರು ಅಂದರೆ ನಾಗೋಸಾ ಲದ್ವಾರವರು ಉಪಾಧ್ಯಾಯ ವೃತ್ತಿಯನ್ನು ಬಿಟ್ಟು, ಜವಳಿ ವ್ಯಾಪಾರವನ್ನು ಮಾಡಲು ದಾವಣಗೆರೆಯ ಚೌಕಿಪೇಟೆಗೆ ಬಂದು ನೆಲೆಸಿದವರು.
ಇವರು ಹರಿಹರದ ಶ್ರೀ ಹನುಮಾನ್ ಮೋಟಾರ್ ಸರ್ವಿಸ್‌ನ ಹಿರಿಯ ಲದ್ವಾರವರ ತಮ್ಮನವರು.
ದಾವಣಗೆರೆ ನಗರಪಾಲಿಕೆ ಸದಸ್ಯೆಯವರಾಗಿದ್ದ ಸೋನಾ ಬಾಯಿ ರಂಗನಾಥ್‌ರವರ ಮಾವನವರು. ಅನೇಕ ದಶಕಗಳ ಹಿಂದೆ ಚೌಕಿಪೇಟೆಯಲ್ಲಿ ಇವರದು ಸೊಲ್ಲಾಪುರದ `ಲಕ್ಷ್ಮಿ ಅಂಡ್ ವಿಷ್ಣು ಮಿಲ್ಸ್‌ನ ಉತ್ಪನ್ನಗಳ ಮಾರಾಟ ಅಂಗಡಿ ಇತ್ತು. ಇದನ್ನು ನಗರಸಭೆ ಅಧ್ಯಕ್ಷರಾಗಿದ್ದ ಸಿ.ಕೇಶವಮೂರ್ತಿ ಉದ್ಘಾಟನೆ ಮಾಡಿದ್ದರು. ದಾವಣಗೆರೆ ಚೌಕಿಪೇಟೆಯಲ್ಲಿ ನಾಗಪ್ಪನವರ ಮನೆ ಹಾಗೂ ಅಂಗಡಿ ದಕ್ಷಿಣಾಭಿಮುಖವಾಗಿದ್ದು, ಚಳಿಗಾಲದಲ್ಲಿ ಬಿಸಿಲು ಉತ್ತರದ ಕಡೆಗೆ ಇರುತ್ತದೆ. ನಾಗಪ್ಪನವರು ಒಂದು ದಿನ ಚಳಿಗಾಲದ ಬೆಳಿಗ್ಗೆ ತಮ್ಮ ಎದುರು ಅಂಗಡಿಯ ಸಂಘವಿ ಹೀರಾಚಂದ್ ರಾಯಚಂದ್ ಕಟ್ಟೆಯ ಬಳಿ ಬಂದು ಕೂತರು. `ಏನ್ ನಾಗಪ್ಪೋರೇ, ಬಿಸಿಲು ಕಾಯಿಸಕ್ಕೆ ಬಂದ್ರಾ?’ ಎಂದು ಹೀರಾಚಂದ್ ಕೇಳಿದರು. `ಬಿಸಿಲು ಬಿಸೀನೇ ಇರುತ್ತೆ, ಅದನ್ನು ಇನ್ನೇನ್ ಕಾಯಿಸೋದು, ಮೈ ಕಾಯಿಸಕ್ಕೆ ಬಂದೆ’ ಎಂದು ನಾಗಪ್ಪ ನಗುತ್ತಾ ಹೇಳಿದರು.
ದಾವಣಗೆರೆ ಹಳೆ ಊರಿನ ಚಳಿಗಾಲದ ಸ್ವಾರಸ್ಯಗಳು…
ಬಾಲ್ಯದಲ್ಲಿನ ದೀಪಾವಳಿಯ ಕೆಲವು ಸ್ವಾರಸ್ಯಗಳು, ನೆನಪುಗಳು
`ಮೈಯ್ಯಾಗೆ ಕಾವು ಇದ್ದೇ ಇರುತ್ತೆ, ಅದು ಹೋದ್ರೆ ಸತ್ತೋಗ್ತೀವಿ, ಅದುನ್ನ ಮತ್ತೇನ್ ಕಾಯಿಸೋದು?’ ಎಂದು ತಮಾಷೆ ಮಾಡಿದರು ರಾಯಚಂದಜೀ. ಹಾಗಾದರೆ ಹೇಗೆ ಹೇಳುವುದು ಸೂಕ್ತ ? ಎಂದು ಅವರವರಲ್ಲಿ ಜಿಜ್ಞಾಸೆ ಶುರುವಾಯಿತು. ನಮ್ಮ ಅಣ್ಣ `ಹೆಚ್. ಆನಂದರಾಮ ಶಾಸ್ತ್ರೀ ಆಗ ಶಾಲಾ ಬಾಲಕ. ಸಿಂಡಿಕೇಟ್ ಬ್ಯಾಂಕಿನ ಹಿರಿಯ ಪ್ರಬಂಧಕರಾಗಿ ಸ್ವಯಂ ನಿವೃತ್ತಿ ಪಡೆದು, ಪ್ರಸ್ತುತ ಇವರು ಬೆಂಗಳೂರಿನಲ್ಲಿ ನೆಲೆಸಿದ್ದು, ಹಿರಿಯ ಪತ್ರಿಕಾ ಅಂಕಣಕಾರರು, ವಿಮರ್ಶಕರು, ಬರಹಗಾರ, ಚಿಂತಕರಾಗಿ ಖ್ಯಾತರಾಗಿದ್ದಾರೆ. `ಆನಂದ್ ರಾಮ್ ನೀನ್ ಬಾಳ ಬುದ್ಧಿವಂತ, ಎಲ್ಲಾ ಓದ್ಕೊಂಡಿರ್ತಿ, ತಿಳ್ಕೊಂಡಿರ್ತಿ, `ಬಿಸಿಲು ಕಾಯಿಸುವುದು’ ಅಂದ್ರೂ ಸರಿಯಲ್ಲ, ‘ಮೈ ಕಾಯಿಸೋದು’ ಅಂದ್ರೂ ಸರಿ ಅಲ್ಲ, ಹಂಗಾದ್ರೆ ಏನು ಹೇಳಬೇಕು, ಯಾವುದು ಸರಿ? ನೀನೇ ಹೇಳಪ್ಪ” ಎಂದು ಕೇಳಿದರು ಹೀರಾಚಂದ್. ನಮ್ಮ ಅಣ್ಣ ಹೇಳಿದರು, `ಚಳಿಗಾಲದಲ್ಲಿ ಸಾಮಾನ್ಯವಾಗಿ ಮೈಗೆ ಚಳಿ ಹಿಡಿದಿರುತ್ತದೆ, ಅದನ್ನು ಕಾಯಿಸುವುದು. ಹಾಗಾಗಿ `ಚಳಿ ಕಾಯಿಸುವುದು’ ಎನ್ನಬಹುದು ಎಂದರು. ಪ್ರಸಿದ್ಧ ಜವಳಿ ಅಂಗಡಿ ಗೌಡರ ಗಂಗಾಧರಪ್ಪ ಮಹಾಲಿಂಗಪ್ಪನವರಲ್ಲಿ ಗುಮಾಸ್ತಿಕೆ ಮಾಡುತ್ತಿದ್ದ ಕಾಯಿಪೇಟೆಯ ಸ್ವಾಮಿಯವರು ನಡುವೆ ಬಾಯಿ ಹಾಕಿ `ಹಂಗಾದ್ರೆ’ ಮೈಚಳಿ ಬಿಡಿಸುವುದು `ಅಂತ ಹೇಳಬಹುದಲ್ಲ’ ಎಂದರು.
ಅದಕ್ಕೆ ನಮ್ಮ ಅಣ್ಣ ನಗುತ್ತಾ `ಸ್ವಾಮ್ಯೋರೇ `ಮೈಚಳಿ ಬಿಡಿಸುವುದು’ ಎಂದರೆ ಹೊಡೆಯುವುದು ಎಂದಾಗುತ್ತದೆ. ಇನ್ನೂ ಚರ್ಚಿಸಿ ಈ ವಿಷಯದ ಕಾವು ಏರಿಸುವುದು ಬೇಡ, ಚಳಿ ಕಾಯಿಸಿದರೆ ಸಾಕು’ ಎಂದರು. `ಹೌದು’ ಎಂದು ನಗುತ್ತಾ ಎಲ್ಲರೂ ತಲೆ ಹಾಕಿದರು.
ಹೆಚ್.ಬಿ. ಮಂಜುನಾಥ್, ಹಿರಿಯ ಪತ್ರಕರ್ತ, ದಾವಣಗೆರೆ.