ದಾಸ ಸಾಹಿತ್ಯದ ಹರಿಕಾರ ಕನಕದಾಸರು

ದಾಸ ಸಾಹಿತ್ಯದ ಹರಿಕಾರ ಕನಕದಾಸರು

ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಪ್ರಸಿದ್ಧರಾದ ದಾಸರಲ್ಲಿ ಕನಕದಾಸರು ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಾಕಾರರು.   

ಕನಕದಾಸರು ದಂಡನಾಯಕನಾಗಿದ್ದು ಯುದ್ಧ ಒಂದರಲ್ಲಿ ಸೋತು ಅವರಿಗೆ ವೈರಾಗ್ಯ ಉಂಟಾಗಿ ಹರಿ ಭಕ್ತರಾದರಂತೆ. ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.

ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತ್ಯದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೆಯ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತ್ಯಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ.

ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾ ಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿ ದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋಗಿದ್ದರು. ಅಂದಿನಿಂದ ಇವರೂ ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು.

ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕ ನಾದ ಮಗ ಜನಿಸಬೇಕು ಎಂದು. `ವಂಶೋ ದ್ಧಾರಕನಾದ ಒಬ್ಬ ಮಗನನ್ನು ಕರುಣಿಸು’ ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪ ನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ-ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ `ತಿಮ್ಮಪ್ಪ’ ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈ ದನೇ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು.

ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣಾಯಕನಾದ.

ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯರಿದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿ ಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂಬುದು. ಕನಕದಾಸರು ತಮ್ಮನ್ನು ತಾವೇ ಸಾವಿನ ದೇವತೆಯಾದ ಯಮನೆಂದು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.

ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯ ವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ,  ಅಣೋರಣೀಯ ನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. `ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ’ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ’ ಎಂದು ಸಂತೋಷಪಟ್ಟಿದ್ದಾರೆ. `ಎಲ್ಲಿ ನೋಡಿದರಲ್ಲಿ ರಾಮ’ ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ `ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು’ ಎಂಬ ಧನ್ಯತಾಭಾವ. `ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ’ ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ `ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ’ ಎಂದುಕೊಳ್ಳುತ್ತಾರೆ.

ಕನಕದಾಸರ ಕೀರ್ತನೆಗಳ ಪ್ರಸ್ತುತತೆ: ಕನಕದಾಸರ ಕೀರ್ತನೆಗಳು 15ನೇ ಶತಮಾನದಲ್ಲಿ ರಚನೆಯಾಗಿವೆಯಾದರೂ ಅವು ಇಂದಿಗೂ ಪ್ರಸ್ತುತವೆನಿಸಿವೆ ಹಾಗೆಯೇ ಅವರ ಕೀರ್ತನೆಗಳು `ತಲ್ಲಣಿಸದಿರು ಕಂಡ ತಾಳು ಮನವೇ ಎಲ್ಲರನು ಸಲಹುವನ್ನು ಇದಕ್ಕೆ ಸಂಶಯವಿಲ್ಲ’ ಎಂಬ ಸಾಲುಗಳ ಮೂಲಕ ಲೋಕದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಲ್ಲೂ ಭಗವಂತನ ಪಾತ್ರ ಇದೆ ಅದು ಅಗೋಚರವಾದದ್ದು ಎಂದು ಹೇಳಿದ್ದಾರೆ

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಏನಾದರೂ ಬಲ್ಲಿರಾ ಎಂಬ ವಾಣಿಯ ಮೂಲಕ 15ನೇ ಶತಮಾನದಲ್ಲಿ  ರಾಮಧಾನ್ಯ ಚರಿತೆ ಕೃತಿಯ ಮೂಲಕ ಜಾತಿ ಶ್ರೇಷ್ಠತೆ ಮತ್ತು ಕನಿಷ್ಠತೆಯ ಸಂಘರ್ಷವನ್ನು ಧಾನ್ಯಗಳ ಮೂಲಕ ವಿಮರ್ಶಾತ್ಮಕವಾಗಿ ವಿವರಿಸುವ ಮೂಲಕ ಜಾತಿಗಳ ನಡುವೆ ಸಾಮರಸ್ಯವನ್ನು ಮೂಡಿಸುವ ಕಾರ್ಯ ಮಾಡಿದರು. ಅದು ಪ್ರಸ್ತುತ ಸಮಾಜಕ್ಕೆ ಒಂದು ಮಾದರಿ ಸಂದೇಶವೆನ್ನುವುದರಲ್ಲಿ ಎರಡು ಮಾತಿಲ್ಲ.

ಪರಸತಿಯ ನೋಡದಿರು

 ದುರ್ಜನರ ಕೂಡದಿರು

 ಗರ್ವದ ಮಾತುಗಳ ಆಡದಿರು ಕೈಯ ಹಿಂದೆಗೆವ ಹೇಡಿಯನ್ನು ಬೇಡದಿರು ಬೀದಿ ಗೊಳುಂಬ ದೈವಗಳನ್ನು ಕೊಂಡಾಡದಿರು.

ಈ ಕೀರ್ತನೆಯಲ್ಲಿ ಕನಕದಾಸರು ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುವ ಅನೈತಿಕತೆ, ಆಡಂಬರಗಳು ಹಾಗೂ ಸಮಾಜದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳು ಮತ್ತು ಮಾನವೀಯತೆಯನ್ನು ಮರೆಮಾಚುತ್ತಿರುವ ಬಗೆಯನ್ನು ಹಾಗೂ ನಾನೇ ಶ್ರೇಷ್ಠ ಎಂಬ ಅಹಂ ಅನ್ನು ಖಂಡಿಸಿದ್ದಾರೆ. ನೀಡದಿರುವವನನ್ನು ನಾವು ಎಂದೂ ಕೂಡ ಬೇಡಬಾರದು ಎಂಬ ಮಾತುಗಳನ್ನು ಈ ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಮನದಲ್ಲಿ  ಕಪಟವಿಟ್ಟುಕೊಂಡು

ಎಷ್ಟು ಜಪ ಮಾಡಿದ್ದರೇನು ಫಲ.?

ಇದು ಇಂದಿನ ಜನರ ಜೀವನಕ್ಕೆ ಹಿಡಿದ ಕೈಗನ್ನಡಿಯಂತೆ ಇದೆ. ಪ್ರಸ್ತುತ ದಿನಮಾನಗಳಲ್ಲಿ ಬದುಕನ್ನು ಕಪಟತನದಿಂದಲೇ ಕಳೆಯುತ್ತಿರುವ ಮನುಷ್ಯನಿಗೆ ಈ ಸಾಲು ಅರ್ಥಪೂರ್ಣವಾಗಿ ಬಿಂಬಿಸುತ್ತಿವೆ. ಮನಸ್ಸಿನಲ್ಲಿ ಕಪಟವನ್ನು ಇಟ್ಟುಕೊಂಡು ಒಳ್ಳೆಯವರಂತೆ ನಟಿಸುತ್ತಿರುವ ಸಮಾಜದ ಅನೇಕ ಮಹಾಶಯರಿಗೆ ಇಂತಹ ಸಾಲುಗಳು ಅನ್ವಯಿಸುತ್ತವೆ.

ಒಡಲಿನ ಆಸೆಗಾಗಿ ಜೇನಿನೊಳಗೆ ಬಿದ್ದು ಸಾಯುವ ನೊಣದಂತೆ ನಾನಾಗಿರುವೆ ನನ್ನನ್ನು ಈ ಜೀವನ ಈ ಬಂಧನದಿಂದ ಮುಕ್ತಗೊಳಿಸು ರಂಗನೇ.

ಇಲ್ಲಿ ಸಂಸಾರವೆಂಬ ಅಲ್ಪ ಸುಖಕ್ಕಾಗಿ ಸಾಗರದಷ್ಟು ದುಃಖ ಎಂಬಂತೆ ನೋವನ್ನು ಪಡುತ್ತಿರುವ ಮನುಜನ ಅಂತರಾಳವನ್ನು ವ್ಯಕ್ತಪಡಿಸುತ್ತಿರುವುದು ಹಾಗೂ ಇಂದಿಗೂ ಈ ಸಾಲುಗಳು ಪ್ರಸ್ತುತವೆನಿಸುತ್ತವೆ ಮನುಷ್ಯನ ಜೀವನ ಬರಿ ಸಂಸಾರದ ಬಂಧನಕ್ಕೆ ಒಳಗಾಗದೆ ಅದರ ಆಚೆಗೂ ಒಂದು ಅಧ್ಯಾತ್ಮಿಕ ನಿಲುವು ತಾಳುವ ಮೂಲಕ ಜೀವನದಲ್ಲಿ ಮುಕ್ತಿಯನ್ನು ಪಡೆಯಬೇಕೆಂಬುದು ಈ ಒಂದು ಕೀರ್ತನೆಯ ಆಶಯವಾಗಿದೆ.

ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ ಮುಂದೆ ಎನ್ನ ಬೈಯುವವರೆಲ್ಲ ಅಂದಣ ಏರಲಿ

ಇಲ್ಲಿ ಸಮಾಜದ ಕುಹಕದ ಮಾತುಗ ಳನ್ನು ನಿರ್ಲಕ್ಷಿಸಿ ಬದುಕಬೇಕೆಂಬುದನ್ನು ಅವರಿಗೆ ಒಳಿತನ್ನು ಬಯಸಿ ಮುಂದೆ ನಡೆಯ ಬೇಕೆಂಬುದು ಈ ಒಂದು ಸಾಲುಗಳ ಮೂಲಕ ಮಾರ್ಮಿಕವಾಗಿ ವಿವರಿಸಿರುವುದು ಪ್ರಸ್ತುತ ಸಮಾಜಕ್ಕೆ ಹಿಡಿದ ಕೈಗನ್ನಡಿಯನ್ನಬಹುದು. ಹೀಗೆ ಕನಕದಾಸರ ಕೀರ್ತನೆಗಳು, ರಚನೆಯಾಗಿ ಐದರಿಂದ ಆರು ಶತಮಾನಗಳು ಕಳೆದರೂ ಪ್ರಸ್ತುತ ದಿನಮಾನಕ್ಕೆ ಅತ್ಯಂತ ಸೂಕ್ತವೂ ಎನಿಸಿವೆ.

ದಾಸ ಸಾಹಿತ್ಯದ ಹರಿಕಾರ ಕನಕದಾಸರು - Janathavaniಬಸವರಾಜ. ಕರುವಿನ ಬಸವನಾಳು.

error: Content is protected !!