ಹಾಡಲಾರೆ, ಪಾಡಲಾರೆ ಎನ್ನುತ್ತಲೇ ಮನೆಯಿಂದ ಹೊರಟು ದೇವಸ್ಥಾನಕ್ಕೆ ಹೋಗಿ ವಾಪಸ್ ಮನೆಗೆ ಬರುವವರೆಗೂ ಬಿಡುವಿಲ್ಲದೇ ಹಾಡುತ್ತಲೇ ಇರುವುದು ಗೌರಿ ಆರತಿಯ ಸ್ವಾರಸ್ಯ !!. ಆಶ್ವಯುಜ ಶುದ್ಧ ಹುಣ್ಣಿಮೆ ಅಂದರೆ ಶೀಗೆ ಹುಣ್ಣಿಮೆ ಹಾಗೂ ಕಾರ್ತಿಕ ಶುದ್ಧ ಹುಣ್ಣಿಮೆ ಈ ಎರಡು ಹುಣ್ಣಿಮೆಗಳ ಪೂರ್ವದಲ್ಲಿ ಒಂಭತ್ತು ದಿನಗಳ ಕಾಲ ದೇವಸ್ಥಾನದಲ್ಲಿ ಗೌರಿಯನ್ನು ಕೂರಿಸಿ, ಮನೆಯಿಂದ ಆರತಿ ತೆಗೆದುಕೊಂಡು ಹೋಗಿ ಗೌರಿಗೆ ಬೆಳಗಿ ಬರುವುದು ಬಯಲು ಸೀಮೆಯಲ್ಲಿನ ಹಳೇ ಸಂಪ್ರದಾಯ.
ದಾವಣಗೆರೆಯ ಚೌಕಿಪೇಟೆ ಶ್ರೀ ಬಕ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲೂ ಗೌರಿಯನ್ನು ಕೂರಿಸುತ್ತಿದ್ದರು. ದಶಕಗಳ ಹಿಂದೆ ಎರಡೂ ಹುಣ್ಣಿಮೆಗಳ ಪೂರ್ವದ ಒಂಭತ್ತು ದಿನಗಳೂ ಕೂರಿಸುತ್ತಿದ್ದರು.
ದಾವಣಗೆರೆ ಹಳೆ ಊರಿನ ಗೌರಿ ಆರತಿಯ ಸ್ವಾರಸ್ಯಗಳು…
ಹೆಣ್ಣು ಮಕ್ಕಳು ದಿನಕ್ಕೊಂದು ಬಗೆಯ ಆರತಿಗಳನ್ನು ಮಾಡಿಕೊಂಡು ದೇವಸ್ಥಾನಕ್ಕೆ ಹೋಗಿ ಗೌರಿಗೆ ಆರತಿ ಬೆಳಗಿ ಮನೆಗೆ ಬರುವವರೆಗೂ ಬಿಡುವಿಲ್ಲದೇ ಹಾಡುಗಳನ್ನು ಹೇಳುತ್ತಿದ್ದರು. ಹಾಡುಗಳ ನೈಜ ಸಾಹಿತ್ಯವೇನಿರುತ್ತಿತ್ತೋ ಆದರೆ, ನಮಗೆ ಕೇಳಿಸುತ್ತಿದ್ದುದು ಹೀಗೆ, `ಗೌರಿ ಹಾಡಲಾರೆನೆ, ಗೌರಿ ಪಾಡಲಾರೆನೆ, ಗೌರಿಚಲ್ಲಂ ಚಿಕ್ಕಳೆ, ಗೌರಿ ಮಲ್ಲೆ ಮುಡ್ಕೊಳ್ಳೆ, ಗೌರಿ ದಾಳಿಂಬ್ರಿ’. ಇದು ಒಂದು ಹಾಡಾದರೆ `ಕೋಲ್ ಗೌರಿ ಕೋಲೆ, ಕಂಚಿನ್ ಗೌರಿ ಕೋಲೆ, ಒಂದೆ ಹೂವ ಒಂದೆ ಪತ್ರಿ, ಪತ್ರಿಗ ಪನಿವಾರ, ನಮ್ಮ ಗೌರವ್ವಗೆ ಮುತ್ತಿನ ಜನಿವಾರ’.. ಎರಡೆ ಹೂವ ಎರಡೆ ಪತ್ರಿ…. `ಈ ಹಾಡು ಹೀಗೇ ಮೂರು ನಾಲ್ಕು ಐದು ಆರು ಎಂದು ಮುಂದುವರೆಯುತ್ತಲೇ ಇರುತ್ತದೆ. ಮಗದೊಂದು ಹಾಡು `ಒಂದೆ ಸೇರ್ ಎಣ್ಣಿ ತಂದೆ ಮಲ್ಲಕ್ಕ, ಒಂದೆ ದೀಪಕೆ ಮುಡುಸೆ ಮಲ್ಲಕ್ಕ, ರಾಯರಾಡರು ರಾಜಬೀದ್ಯಾಗೆ, ಶೆಟ್ಟರಾಡರು ಪಟ್ಟಣ ಶಾಲ್ಯಾಗೆ, ತುಂಬಿತೇ ಬೆಳದಿಂಗಳು, ನಾಡ್ಗೆಲ್ಲಾ ಹರದಿತೇ ಬೆಳದಿಂಗಳು’.. ಎರಡೆ ಸೇರೆಣ್ಣಿ ತಂದೆ ಮಲ್ಲಕ್ಕ, ಎರಡೆ ದೀಪಕೆ ಮುಡ್ಸೆ ಮಲ್ಲಕ್ಕ…” ಇದೂ ಹೀಗೇ ಮೂರು ನಾಲ್ಕು ಐದು ಆರು ಮುಂತಾಗಿ ಸಾಗುತ್ತದೆ. ಸಾಮಾನ್ಯವಾಗಿ ಹದಿನೆಂಟಕ್ಕೆ ಮುಗಿಸುತ್ತಿದ್ದರು, ಕಾರಣ ನಂತರದ ಮಗ್ಗಿ ಪ್ರಾಸಕ್ಕೆ ಹೊಂದುತ್ತಿರಲಿಲ್ಲ. ಆನಂತರದ ಹಾಡೆಂದರೆ `ಗೌರೀ ಗೌರೀ, ಗಾನಾ ಗೌರೀ, ಕುಂಕುಮ್ ಗೌರೀ, ಕುಲಾರಿ ಗೌರೀ, ಅಣ್ಣನಂತ ಅವರಿಕೋಲ್ ಅವರಿಕೋಲ್, ತಮ್ಮನಂತ ತವರಿಕೋಲ್ ತವರೀಕೋಲ್,
ನಿಲ್ಲ ನಿಲ್ಲ ಗೌರವ್ವಾ ಗೌರವ್ವಾ, ನೀಲಿ ಕೊಂಬಿ ತರ್ತಿದ್ನಾ ತರ್ತಿದ್ನಾ, ನಮ್ಮ ಗೌರವ್ವಗೆ ಮುತ್ತಿನ ಜನಿವಾರ,’. ಆಮೇಲೆ ಹಾಡುವುದು `ಒಂದೇ ಹೂವ ತಂದಿನಿ ಒಂದೇ ಪತ್ರಿ ತಂದೀನಿ, ಒಂದೇ ಮೆಟ್ಲ ಒಂದೇ ದೀಪಾ, ಬಸವಕ್ಕ ಬಸವನ್ನಿರೆ, ಬಸವನ ಪಾದಕೆ ಹೊಸ ಮುತ್ತು ಹುಲಿಗೆಜ್ಜಿ ತಾಮ್ರೆನಿರೇ… ಎರಡೇ ಹೂವ ತಂದಿನಿ ಎರಡೆ ಪತ್ರಿ ತಂದಿನಿ….’ ಹೀಗೆ ಇದೂ ಸಹಾ ಪುನಃ ಹದಿನೆಂಟರವರೆಗೆ ಸಾಗಿದರೆ ದೂರ ದೂರದ ಮನೆಗಳಿಂದ ಬರುವ ಹುಡುಗಿಯರು ಹದಿನೆಂಟಕ್ಕೆ ಮುಗಿಸದೇ ತೊಂಭತ್ತೊಂಭತ್ತು ನೂರು ಎಂದು ಮನೆ ಮುಟ್ಟುವವರೆಗೂ ಹಾಡುತ್ತಿದ್ದರು.
ಇನ್ನಷ್ಟು ಹಾಡುಗಳಿವೆ ಹಾಗೂ ಪ್ರತಿನಿತ್ಯ ವಿವಿಧ ಬಗೆಯ ಆರತಿಗಳ ಬಗ್ಗೆಯೂ ನಾಳೆ ಅಥವಾ ನಾಳಿದ್ದು ಹೇಳುತ್ತೇನೆ. `ಹಾಡಲಾರೆ’ ಎಂದು ಆರಂಭಿಸಿದವರು, ಬಿಡುವಿಲ್ಲದೇ ಹಾಡು ಗಳನ್ನು ಹೇಳುತ್ತಿದ್ದುದೇ ಈ ಗೌರಿ ಆರತಿಯ ಆ ಕಾಲದ ಸ್ವಾರಸ್ಯ. ಈಗ ಬಹುಷಃ ಬಕ್ಕೇಶ್ವರ ದೇವಸ್ಥಾನದಲ್ಲಿ ಕೇವಲ ಸೀಗೆ ಹುಣ್ಣಿಮೆ ಹಾಗೂ ಕಾರ್ತಿಕ ಹುಣ್ಣಿಮೆಗಳಲ್ಲಿ ಮಾತ್ರ ಗೌರಿಯನ್ನು ಕೂರಿಸುತ್ತಾರೆಂದು ತಿಳಿದುಬಂದಿತು.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ