ಕರ್ನಾಟಕ ರಾಜ್ಯೋತ್ಸವ : ಆಡಳಿತ ಭಾಷೆಯಾಗಿ ಕನ್ನಡ – ಒಂದು ಅವಲೋಕನ

ಕರ್ನಾಟಕ ರಾಜ್ಯೋತ್ಸವ : ಆಡಳಿತ ಭಾಷೆಯಾಗಿ ಕನ್ನಡ – ಒಂದು ಅವಲೋಕನ

ಪ್ರತಿ ವರ್ಷ ನವೆಂಬರ್ ಒಂದ ರಂದು ಕರ್ನಾಟಕ / ಕನ್ನಡ ರಾಜ್ಯೋತ್ಸವ ದಿನವನ್ನು ರಾಜ್ಯದಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುವುದು. ಈ ದಿನದ ಆಚರಣೆಯ ಹಿನ್ನೆಲೆಯನ್ನು ನೋಡುವುದಾದರೆ 1956 ರಲ್ಲಿ ದಕ್ಷಿಣ ಭಾರತದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ರಾಜ್ಯವನ್ನು ರಚಿಸಲಾಯಿತು. ಆಲೂರು ವೆಂಕಟರಾವ್ ಅವರು ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ 1905 ರಲ್ಲಿ ರಾಜ್ಯವನ್ನು ಏಕೀಕರಿಸುವ ಕನಸು ಕಂಡವರು. ಭಾಷಾವಾರು ಪ್ರಾಂತ್ಯಗಳನ್ನು ರಚಿಸಿದಾಗ ಆಗ ಮೈಸೂರು ರಾಜ್ಯ ಉದಯವಾಯಿತು. ಕರ್ನಾಟಕದ ಏಕೀಕರಣದ ರೂವಾರಿಗಳಲ್ಲಿ ಕುವೆಂಪು, ಶಿವರಾಮ ಕಾರಂತರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್, ಬಿ.ಎಂ. ಶ್ರೀಕಂಠಯ್ಯ ಪ್ರಮುಖರು.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ‘ಮೈಸೂರು ರಾಜ್ಯ’ಎಂಬುದರ ಬದಲಾಗಿ ‘ಕರ್ನಾಟಕ ರಾಜ್ಯ’ ಎಂದು 1, ನವೆಂಬರ್ 1973 ರಂದು ನಾಮಕರಣ ಮಾಡಿದರು. 

ಇನ್ನು ಆಡಳಿತ ಭಾಷೆಯಾಗಿ ಕನ್ನಡ ಎಂಬುದರ ಕುರಿತು ಅವಲೋಕಿಸುವುದಾದರೆ ಎಲ್ಲ ರಾಜ್ಯಗಳ ಪ್ರಾದೇಶಿಕ ಭಾಷೆಗಳೇ  ಆಡಳಿತ ಭಾಷೆಯಾದರೆ ಅದರಿಂದ ಎಲ್ಲ ವರ್ಗದ ಜನರಿಗೆ ಬಹು ಉಪಯೋಗವಾಗುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಬರಿ ನಮ್ಮ ಭಾಷೆಯಲ್ಲ; ಅದು ನಿತ್ಯದ ಬದುಕು. ಆಡಳಿತದಲ್ಲಿ ಪರಿಣಾಮಕಾರಿಯಾಗಿ ಕನ್ನಡ ಬಳಸಬೇಕು ಎಂಬ ಆದೇಶ ಕೇವಲ ಕಾಗದದ ಮೇಲಿರದೇ ಕ್ರಿಯಾಶೀಲವಾಗಿ ಅನುಷ್ಠಾನ ಗೊಳ್ಳಬೇಕು. ಜನರ ಆಡುವ ಭಾಷೆ ಅಥವಾ ಜನಸಾಮಾನ್ಯರ ಭಾಷೆಯನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತಂದರೆ ಸರ್ಕಾರದ ನೀತಿ -ನಿಯಮಗಳು, ಆಜ್ಞೆಗಳು, ಮಾಡಿದ ಕೆಲಸ ಕಾರ್ಯಗಳು ಪ್ರತಿಯೊಬ್ಬರ ಗಮನಕ್ಕೆ ಬರುವವು. ನಮ್ಮದಲ್ಲದ ಭಾಷೆಯಲ್ಲಿ ಆಡಳಿತದ ವ್ಯವಹಾರಗಳು  ನಡೆದಲ್ಲಿ ವಿದ್ಯಾವಂತರಿಗೆ ಅಷ್ಟೇ ತಿಳಿದು ಅವಿದ್ಯಾವಂತರಿಗೆ ಏನೂ ತಿಳಿಯದಂತಾಗುವುದು. ಆದ್ದರಿಂದ ಜನರಿಂದ ಆಯ್ಕೆಯಾದ ಸರ್ಕಾರ ಎಂದೆಂದಿಗೂ ಜನಪರವಾಗಿರಬೇಕು . ಕರ್ನಾಟಕದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಬೇಕೆಂಬ ಕೂಗು ಇಂದು ನಿನ್ನೆಯದಲ್ಲ, ಇದು ಬಹಳ ಹಳೆಯದು 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ನಂತರ ಅಂದಿನ ವಿಶಾಲ ಮೈಸೂರು ರಾಜ್ಯದ ಆಡಳಿತ ಭಾಷೆ ಕನ್ನಡವಾಗಬೇಕೆಂದು1963 ರಲ್ಲಿ ಜಾರಿಗೆ ಬಂದ ಮೈಸೂರು ಅಧಿಕೃತ ಭಾಷಾ ಶಾಸನದಲ್ಲಿ ಘೋಷಣೆ ಮಾಡಲಾಗಿದೆ.ತರುವಾಯ 1970ರಲ್ಲಿ ಕನ್ನಡ ಭಾಷಾ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಗ್ರಾಮಮಟ್ಟದಿಂದ ಹಿಡಿದು ಕೇಂದ್ರ ಮಟ್ಟದವರೆಗೆ ಆಡಳಿತ ಭಾಷೆ ಕನ್ನಡವಾಗಿರಬೇಕೆಂದು ಶಿಫಾರಸು ಮಾಡಿತು. 

ಕರ್ನಾಟಕ ಸರ್ಕಾರವು ಅಧಿಕೃತವಾಗಿ  10.10.1963 ರಂದು ಕನ್ನಡವನ್ನು ರಾಜ್ಯದ ಆಡಳಿತ ಭಾಷೆ ಎಂದು ಘೋಷಿಸಿತು. ತಾಲ್ಲೂಕು ಜಿಲ್ಲಾ ಮತ್ತು ಸಚಿವಾಲಯದ ಮಟ್ಟದಲ್ಲಿ ಕನ್ನಡ ಭಾಷೆಯನ್ನು ಆಡಳಿತದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು  ರಾಜ್ಯ ಸರ್ಕಾರ ಆದೇಶಿಸಿದೆ. ಇದಲ್ಲದೆ 1981-82ರ ಅವಧಿಯಲ್ಲಿ ಕನ್ನಡವನ್ನು ಶಿಕ್ಷಣ ಮತ್ತು ಆಡಳಿತದಲ್ಲಿ ಅನುಷ್ಠಾನಗೊಳಿಸಲು ಗೋಕಾಕ್ ರವರ ನೇತೃತ್ವದಲ್ಲಿ ಕವಿಗಳು, ಸಾಹಿತಿಗಳು, ಸ್ವಯಂ ಸೇವಾ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಸಿನಿಮಾ ನಟ ನಟಿಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಇನ್ನು ಮುಂತಾದವರು ಒಟ್ಟಾಗಿ ಒಂದು ದೀರ್ಘ ಚಳುವಳಿಯನ್ನೇ ಪ್ರಾರಂಭಿಸಿದರು. ನಮ್ಮ ರಾಜ್ಯದಲ್ಲಿ ನಮ್ಮ ಪ್ರಾದೇಶಿಕ ಭಾಷೆಯನ್ನೇ ಒಂದು ಆಡಳಿತ ಭಾಷೆಯನ್ನಾಗಿ ಮಾಡಿ ಎಂದು ಹೋರಾಟ ಮಾಡುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ. ಆಡಳಿತದ ಬಹುಮುಖ್ಯ ಕೇಂದ್ರ ಸ್ಥಾನದಲ್ಲಿರುವವರೇ ಕನ್ನಡವನ್ನು ವ್ಯಾವಹಾರಿಕ ಭಾಷೆಯಾಗಿ ಬಳಸದೆ ವಿದೇಶಿ ಭಾಷೆಗೆ ಜೋತು ಬಿದ್ದಿರುವುದು ಕನ್ನಡಿಗರ ದುರ್ದೈವವೇ ಸರಿ.ಇತ್ತೀಚೆಗಷ್ಟೇ ಇಂಗ್ಲಿಷ್ ನಾಮಫಲಕಗಳಿಗೆ ಕಪ್ಪು ಮಸಿ ಬಳಿದು ಅದರ ಜಾಗದಲ್ಲಿ ಶೇ 60 ರಷ್ಟು ಕನ್ನಡದಲ್ಲಿ ಬರೆದ ನಾಮಫಲಕಗಳನ್ನು ಅಳವಡಿಸಬೇಕೆಂಬ ಕೂಗು ಕೇಳಿ ಬಂದಿತು. ಆದರೆ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಇದನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿಲ್ಲದಿರುವುದು ಕನ್ನಡದ ಬಗ್ಗೆ ಅವರಿಗೆ ಇರುವ ಧೋರಣೆ ಎಂತಹದ್ದು ಎಂಬುದು ಇದರಿಂದ ತಿಳಿದುಬರುತ್ತದೆ. ಒಂದೊಮ್ಮೆ ಸರ್ಕಾರಗಳು ಎಲ್ಲಾ ಹಂತದ ಕಚೇರಿಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು ಎಂಬ ಸುತ್ತೋಲೆಯನ್ನು ಹೊರಡಿಸದರೂ ಸಹ ಅಲ್ಲಿನ ಅಧಿಕಾರಿ ವರ್ಗ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರದಿರುವುದು ಬೇಸರದ ಸಂಗತಿ. ಅದೇನೇ ಇದ್ದರೂ ಕನ್ನಡ ನಾಡು- ನುಡಿ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು  ಕನ್ನಡಕಾವಲು ಸಮಿತಿ, ಕನ್ನಡ  ಅಭಿವೃದ್ಧಿ ಪ್ರಾಧಿಕಾರ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಅವಿರತವಾಗಿ ಶ್ರಮಿಸುತ್ತಿವೆ.

ಪ್ರತಿ ವರ್ಷ ನವಂಬರ್ 1 ರಂದು  ಹಾಗೂ ತಿಂಗಳು ಪೂರ್ತಿ ಕನ್ನಡ ರಾಜ್ಯೋತ್ಸವವನ್ನು  ಆಚರಣೆ ಮಾಡುವಾಗ ಒಂದಿಷ್ಟು ಸಂಘಟನೆಗಳು ಕನ್ನಡ ಆಡಳಿತ ಭಾಷೆಯಾಗಬೇಕೆಂದು ಮಾತನಾಡಿ, ಮುಂದಿನ ದಿನಗಳಲ್ಲಿ ಅದನ್ನು ಮರೆತುಬಿಡುವುದೇ ಹೆಚ್ಚು. ಪೂರ್ಣ ಪ್ರಮಾಣದ ಫಲ ದೊರಕುವವರೆಗೂ ಹೋರಾಟ ನಿರಂತರವಾಗಿರಬೇಕು, ಇದಕ್ಕೆ ಕೇವಲ ಸಂಘಟನೆಗಳಷ್ಟೇ ಅಲ್ಲದೆ ಎಲ್ಲರ ಸಹಕಾರ ಅತೀ ಅಗತ್ಯ.ಒಟ್ಟಾರೆ ಸರ್ಕಾರದ ಚುಕ್ಕಾಣಿ ಹಿಡಿದಿರುವವರು ಮತ್ತು ಅಲ್ಲಿನ ಆಡಳಿತ ವರ್ಗ ಕನ್ನಡವನ್ನು ಆಡಳಿತ ಭಾಷೆಯಾಗಿ  ಅನುಷ್ಠಾನಕ್ಕೆ ತರದಿದ್ದರೆ ಬೇಲಿಯೇ ಎದ್ದು ಹೊಲವನ್ನು ಮೇಯ್ದಂತಾಗುವುದು.ಎಷ್ಟೋ ಬಾರಿ ‘ಕನ್ನಡ ಉಳಿಯಲಿ ಇಂಗ್ಲಿಷ್ ತೊಲಗಲಿ ‘ ಎಂಬ ಅಭಿಯಾನವನ್ನು ಮಾಡಿದರೂ ಅದರಿಂದ ಯಾವುದೇ  ಪ್ರಯೋಜನವಾಗಿಲ್ಲ. ಇದು ಹೀಗೆ ಮುಂದುವರೆದರೆ  ಇನ್ನೂ ಎಷ್ಟೇ ದಶಕಗಳು ಕಳೆದರೂ ಆಡಳಿತ ಭಾಷೆಯಾಗಿ ಕನ್ನಡ ಪೂರ್ಣ ಪ್ರಮಾಣದಲ್ಲಿ ನಿಲ್ಲಲಾರದೆಂಬ ನಂಬಿಕೆ ಜನ ಸಾಮಾನ್ಯರದ್ದಾಗಿದೆ.  ಈ ಸಂದರ್ಭದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಪ್ರಾದೇಶಿಕ ಭಾಷೆಯ ಕುರಿತು ಆಡಿರುವ ಮಾತುಗಳು ತುಂಬಾ ಚಿಂತನೆಗೆ ಒಳಪಡಿಸುತ್ತವೆ. ಅಂದರೆ, “ಕೈಗೊಳ್ಳುವ ಪ್ರತಿಯೊಂದು ಕಾರ್ಯ, ಆಡುವ ಎಲ್ಲ ನುಡಿ ಮತ್ತು ಉದ್ದೇಶ ಪ್ರಾಂತೀಯ ಭಾಷೆಯಲ್ಲಿ ನಡೆದಾಗ ಸಾಮಾನ್ಯ ಜನರ ಮನಸ್ಸು ಪ್ರಫುಲ್ಲಿತಗೊಂಡು ಪ್ರಾಂತ್ಯ ಜೀವನದಲ್ಲಿ ಯುಕ್ತವಾದ ಪ್ರಭಾವವನ್ನು ಬೀರಲು ಸಾಧ್ಯವಾಗುವುದು ಎಂದಿದ್ದಾರೆ.ಈ ದಿಸೆಯಲ್ಲಿ  ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಪ್ರಾದೇಶಿಕ

(ಕನ್ನಡ) ಭಾಷೆಯನ್ನು ಪೂರ್ಣ ಪ್ರಮಾಣದಲ್ಲಿ ಅನು ಷ್ಠಾನಕ್ಕೆ ತರುವ ತೀವ್ರತರ ಪ್ರಯತ್ನವನ್ನು ಆಳುವ ಸರ್ಕಾರಗಳು ಮಾಡಲೇಬೇಕು.’ಕುವೆಂಪು ರವರು “ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಇಂದು ಅದೇ ಗೋವರ್ಧನ ಗಿರಿಧಾರಿಯಾಗು ತ್ತದೆ.’ಇದು ನಿನ್ನ ಭಾಷೆ, ಇದು ದೇಶ ಭಾಷೆ,”ಎಂದಿದ್ದಾರೆ. ಈ ಮಾತುಗಳನ್ನು ಗಮನಿಸಿದರೆ ಕನ್ನಡ ಎಂಥ ಸುಮಧುರ ಭಾಷೆ ಎಂಬುದು ವೇದ್ಯವಾಗುತ್ತದೆ. ಆದ್ದರಿಂದ ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಸರ್ಕಾರದ ಎಲ್ಲ ನಿರ್ಧಾರ, ಆಜ್ಞೆಗಳು, ಟಿಪ್ಪಣಿಗಳು ಇನ್ನು ಮುಂತಾದವು ಬಂದಲ್ಲಿ ಅದು ಜನಪರ ಸರ್ಕಾರವಾಗುವುದರಲ್ಲಿ ಎರಡು ಮಾತಿಲ್ಲ.

ಡಾ. ಶಿವಯ್ಯ ಎಸ್.  ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.

error: Content is protected !!