ಇಂದು ನಾವೆಲ್ಲರೂ ಸೇರಿ ಸಡಗರ ಸಂಭ್ರಮದಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ, ಸ್ನೇಹಿತರೇ ಇಂದಿನ ಜಾಗತೀಕರಣ, ಆಧುನೀಕರಣ, ಖಾಸಗೀಕರಣ, ಉದಾರೀಕರಣಗಳ ಕಪಿ ಮುಷ್ಠಿಯಿಂದ ನಮ್ಮ ನಾಡು ನಲುಗುತ್ತಿದೆ, ಜಾಗತೀಕರಣದ ಈಗಿನ ಜಾಗರಣೆಯಲ್ಲಿ ಎಲ್ಲವೂ ಸರಕಾಗುತ್ತಿರುವ ಈ ಹೊತ್ತಿನಲ್ಲಿ ವೆಬ್, ಇಂಟರ್ನೆಟ್, ಫೇಸ್ಬುಕ್, ಟ್ವಿಟರ್, ಎಸ್ಎಂಎಸ್, ವಾಟ್ಸಾಪ್, ಈ-ಲರ್ನಿಂಗ್, ಇ-ರೀಡಿಂಗ್, ಇ,-ರೈಟಿಂಗ್ಗಳೇ ಮುಂಚೂಣಿಯಲ್ಲಿರುವ ಈ ಸಂದರ್ಭದಲ್ಲೂ ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಉಳಿಸಿ-ಬೆಳೆಸಲು ನಾವೆಲ್ಲರೂ ಒಂದಾಗಿ ಸೇರಿ ಈ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ತುಂಬಾ ಸಂತೋಷದ ವಿಷಯ.
ಕರ್ನಾಟಕ ಏಕೀಕರಣ : 22 ವಿವಿಧ ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳು 1956 ನವೆಂಬರ್ ಒಂದರಂದು ಒಗ್ಗೂಡಿ ವಿಶಾಲ ಕರ್ನಾಟಕ ಉದಯವಾಯಿತು, ಮದ್ರಾಸ್ ಕರ್ನಾಟಕ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕೊಡಗು ಕನ್ನಡ, ಮೈಸೂರು ಕನ್ನಡ, ಪ್ರಭೇದಗಳನ್ನು ಒಂದಾಗಿಸುವ ಸಲುವಾಗಿ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಆರಂಭಿಸಿದರು, ನಂತರ ಧಾರವಾಡದ ವಿದ್ಯಾವರ್ಧಕ ಸಂಘ, ಸಿದ್ದಪ್ಪ ಕಂಬಳಿ ಹಾಗೂ ಎಸ್.ಆರ್. ದೇಶಪಾಂಡೆಯವರ ಮುಖಂಡತ್ವದಲ್ಲಿ ಕರ್ನಾಟಕ ಏಕೀಕರಣ ಚಳುವಳಿ ತುಂಬಾ ಮಹತ್ವ ಪಡೆದು ನಾಡಿನಾದ್ಯಂತ ಆರಂಭವಾಯಿತು, ಆಲೂರು ವೆಂಕಟರಾಯರು ಧೀರೋದಾತ್ತ ಲೇಖನಗಳನ್ನು `ವಾಗ್ಭೂಷಣ’ಪತ್ರಿಕೆಯ ಮೂಲಕ ಜನ ಜಾಗೃತಿ ಗೊಳಿಸಿದರು, ಕನ್ನಡ ನಾಡಿನ ಕವಿಗಳು, ಲೇಖಕರು, ವಿದ್ವಾಂಸರು, ಸಮಾಜ ಸುಧಾರಕರು ನಡೆಸಿದ ಹೋರಾಟದ ಫಲವಾಗಿ 1956 ನವೆಂಬರ್ ಒಂದರಂದು ‘ಮೈಸೂರ್ ರಾಜ್ಯ’ ಎಂಬ ನಾಮಕರಣದೊಂದಿಗೆ ಕರ್ನಾಟಕ ಉದಯವಾಯಿತು.
ಯಾವುದೇ ಭಾಷೆಗೆ ಆಡಳಿತ, ವಿದ್ಯಾಭ್ಯಾಸ, ಧಾರ್ಮಿಕ ಆಚರಣೆ ಮುಂತಾದ ಸ್ಥಾನವಿಲ್ಲದಿದ್ದರೆ, ಅಂತಹ ಭಾಷೆ ಬಹುಮುಖವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ, ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡವು ಮದರಾಸು, ಮುಂಬೈ, ಹೈದರಾಬಾದ್ ಹಾಗೂ ಇತರೆ ಕೆಲವು ಪ್ರಾಂತ್ಯಗಳಲ್ಲಿ ಅಲ್ಪಸಂಖ್ಯಾತ ಭಾಷೆಯಾಗಿತ್ತು, ಅಂತಹ ಪರಿಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪತ್ರಿಕೆಗಳು, ಕನ್ನಡ ಚಳವಳಿ ಮುಂದುವರೆಸಿ ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿ ಏಕೀಕರಣಕ್ಕೆ ಹೆಚ್ಚಿನ ಒಲವು ಪಡೆಯಿತು.
ಕನ್ನಡ ನಾಡಿನ ಕೀರ್ತಿಯನ್ನು ಹೊಗಳುವ ನಾಡಗೀತೆ ಗಳನ್ನು ಕವಿಗಳು ರಚಿಸಿ ಹಾಡಿದರು,”ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”ಎಂದು ಹುಯಿಲಗೋಳು ನಾರಾಯಣರಾಯರ, ಕವಿತೆ ಕನ್ನಡಿಗರೆಲ್ಲರ ಬಾಯಲ್ಲೂ ಮೊಳಗಿತು, ಬಿ ಎಂ ಶ್ರೀ, ಪಂಜೆ ಮಂಗೇಶರಾಯರು, ಗೋವಿಂದ ಪೈ, ಆನಂದ ಕಂದ, ಶ್ರೀನಿವಾಸ, ದ,ರಾ ಬೇಂದ್ರೆ, ಕುವೆಂಪು, ಪುತಿನ, ಜಿ, ಪಿ ರಾಜರತ್ನಂ ಮುಂತಾದ ಕವಿಗಳು ಕನ್ನಡ ನಾಡಿನ ಕೀರ್ತಿಯನ್ನು ಹೊಗಳುವ ಅನೇಕ ಕವನಗಳನ್ನು ರಚಿಸಿದರು, ಗೋಕಾಕ್ ಚಳುವಳಿ ಮೂಲಕ ಪಾಟೀಲ್ ಪುಟ್ಟಪ್ಪ, ರಾಜಕುಮಾರ್ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಜಾಗ್ರತರಾದ ಕನ್ನಡಿಗರ ಹೋರಾಟದ ಫಲವಾಗಿ 1973 ನವೆಂಬರ್ ಒಂದರಂದು “ಕರ್ನಾಟಕ”ಎಂಬ ಹೆಸರು ನಮ್ಮ ನಾಡಿಗೆ ಬಂತು. ಈ ಎಲ್ಲಾ ಉದ್ದೇಶಗಳಿಂದ ನಾವಿಂದು ನಮ್ಮ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತಿದ್ದೇವೆ, ನವೆಂಬರ್ 1 ಹಾಗೂ ಈ ತಿಂಗಳು ಪೂರ್ತಿ ಸರ್ಕಾರದ ಕಚೇರಿಗಳಲ್ಲಿ, ಸಂಘ- ಸಂಸ್ಥೆಗಳಲ್ಲಿ, ಕಂಪನಿಗಳಲ್ಲಿ ಹಾಗೂ ದೇಶ-ವಿದೇಶಗಳಲ್ಲಿ ಕನ್ನಡಿಗರು ಒಗ್ಗೂಡಿ ಒಗ್ಗಟ್ಟಿನಿಂದ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ಧೇವೆ, ಈ ನಮ್ಮ ಕನ್ನಡ ಹಬ್ಬ ನವೆಂಬರ್ ಒಂದಕ್ಕೆ, ತಿಂಗಳಿಗೆ ಮಾತ್ರ ಸೀಮಿತವಾಗದೆ, ಪ್ರತಿದಿನವೂ, ಪ್ರತಿ ತಿಂಗಳು ಆಚರಿಸುವ ನಿತ್ಯೋತ್ಸವ ಆಗಬೇಕು, ನಾವು ನವೆಂಬರ್ ಕನ್ನಡಿಗರಾಗದೆ, ನಂಬರ್ ಒನ್ ಕನ್ನಡಿಗರಾಗಬೇಕು.
ಕನ್ನಡ ಸಾಹಿತ್ಯ : ಕನ್ನಡ ಸಾಹಿತ್ಯಕ್ಕೆ 2000 ವರ್ಷಗಳ ಸುದೀರ್ಘ ಇತಿಹಾಸವಿದೆ, ಪಂಪನಿಂದ-ಕುವೆಂಪುವರೆಗೆ ಅದು ವಿಸ್ತಾರವಾಗಿ, ಶ್ರೀಮಂತವಾಗಿ ಚಾಚಿಕೊಂಡಿದೆ, ವ್ಯಾಸ-ವಾಲ್ಮೀಕಿಯರ ಮಹಾಭಾರತ, ರಾಮಾಯಣವನ್ನು ಕನ್ನಡ ನಾಡಿನ ಪರಿಸರಕ್ಕೆ ಒಗ್ಗಿಸಿ ಮರುಸೃಷ್ಟಿ ಮಾಡಿದ್ದಾರೆ, ಕಠಿಣವಾದ ಕನ್ನಡದಿಂದ ಸರಳವಾದ ಕನ್ನಡದವರೆಗೆ ಅದರ ಭಾಷಾ ಬಳಕೆ ಇದೆ, ಚಂಪೂ ಶೈಲಿಯಂತ ಕಸುವಿನ ಕನ್ನಡದ ಜೊತೆಗೆ ಷಟ್ಪದಿ, ತ್ರಿಪದಿ, ರಗಳೆ, ಸಾಂಗತ್ಯದಂತಹ ಹಾಡು ಗಬ್ಬಗಳಿವೆ, ಅರಮನೆಗಳಲ್ಲಿ ಮಾತ್ರ ವಾಸ ಮಾಡುತ್ತಿದ್ದ ಸರಸ್ವತಿಯನ್ನು ಜನರ ಮನೆಗೆ ತಂದ ಮಹಾನ್ ಕವಿಗಳಿದ್ದಾರೆ.
ಒಂಬತ್ತನೇ ಶತಮಾನದ ಕನ್ನಡದ ಕೃತಿ`ಕವಿರಾಜಮಾರ್ಗ’ದಲ್ಲಿ ಶ್ರೀವಿಜಯನು ಕನ್ನಡಿಗರನ್ನು ಕುರಿತು
ಸುಭಟರ್ಕಳ್ ಕವಿಗಳ್
ಸುಪ್ರಭುಗಳ್ ಚೆಲ್ವರ್ಕಳ್ ಅಭಿಜನರ್ಕಳ್ ಗುಣಿಗಳ್
ಅಭಿಮಾನಿಗಳ್ ಅತ್ಯುಗ್ರರ್
ಗಂಭೀರ ಚಿತ್ತರ್ ವಿವೇಕಿಗಳ್ ನಿಡವರ್ಗಳ್”
ನಾಡವರು ಒಳ್ಳೆಯ ಭಟರು, ಕವಿಗಳು, ಪ್ರಭುಗಳು, ಚೆಲುವರು, ಸಜ್ಜನರು, ಗುಣಿಗಳು, ಅಭಿಮಾನಿಗಳು, ಅತ್ಯುಗ್ರರು, ಗಂಭೀರ ಚಿತ್ತರು, ಜಾಣರು ಎಂದು ತಿಳಿಸಿದ್ದಾನೆ,
ಕರ್ನಾಟಕ ರಾಜಕೀಯ ಮತ್ತು ಧಾರ್ಮಿಕ ಪರಂಪರೆ ಯನ್ನು ನೋಡುವುದಾದರೆ ಕರ್ನಾಟಕಕ್ಕೆ ಅಶೋಕನ ಕಾಲದಿಂ ದಲೂ ಐತಿಹಾಸಿಕ ದಾಖಲೆಗಳು ದೊರೆಯುತ್ತವೆ, ಬನ ವಾಸಿಯ ಕದಂಬರು, ತಲಕಾಡಿನ ಗಂಗರು, ರಾಷ್ಟ್ರಕೂಟರು, ಬಾದಾಮಿ ಚಾಲುಕ್ಯರು, ಹೊಯ್ಸಳರು. ಬಾದಾಮಿ ಚಾಲುಕ್ಯರು ಕರ್ನಾಟಕದ ಎಲ್ಲೆಯನ್ನು ದಕ್ಷಿಣ ಭಾರತ ಮೂಲೆ ಮೂಲೆಗೂ ವಿಸ್ತರಿಸಿದರು, ಆರನೇ ಶತಮಾನದಿಂದ 12ನೇ ಶತಮಾನದವರೆಗೆ ಕರ್ನಾಟಕ ರಾಜರ ದಿಗ್ವಿಜಯ ಕಾಣುತ್ತೇವೆ, ವಿಜಯನಗರ ಅರಸ, ಶ್ರೀ ಕೃಷ್ಣದೇವರಾಯನ ಕೀರ್ತಿ ವಿಶ್ವದೆಲ್ಲೆಡೆ ಪ್ರಸಿದ್ಧಿಯಾಗಿದೆ, ಕೆಳದಿ ಅರಸರು ಮೈಸೂರು ಒಡೆಯರು ನಮ್ಮ ನಾಡನ್ನು ಆಳಿದ ಮರೆಯಲಾರದ ಮಹಾನ್ ಅರಸರಾಗಿದ್ದಾರೆ, ಶಾಸನ ಸಂಪತ್ತು, ವೀರಗಲ್ಲುಗಳು, ದಾನ ಶಾಸನಗಳು, ಧರ್ಮ ಸಮನ್ವಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ, ಸಾಹಿತ್ಯ ಸೌಂದರ್ಯದಲ್ಲಿ ನಮ್ಮ ಜೀವನ ಅನಾವರಣಗೊಂಡಿದೆ
ಜನಪದ ಸಾಹಿತ್ಯ : ಶಿಷ್ಟ ಸಾಹಿತ್ಯದ ಜೊತೆಗೆ ಜನಪದರ ಬದುಕಿನೊಂದಿಗೆ ಸಾಹಿತ್ಯ ಬೆರೆತ ರೀತಿಯೇ ವಿಶಿಷ್ಟವಾದುದಾಗಿತ್ತು, ಜನಪದರೆಂದರೆ ರೈತರೇ ಎಂದರ್ಥ, ದಿನ ಬೆಳಗಾದರೆ ಅವರು ಒಡನಾಡುವ ವಸ್ತುಗಳೊಂದಿಗೆ, ಆಚರಣೆಗಳೊಂದಿಗೆ, ವ್ಯವಹಾರಗಳೊಂದಿಗೆ ಸಾಹಿತ್ಯದ ಒಡನಾಟ ವಿರುತ್ತಿತ್ತು.
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗಿ ಬೆಳೆವಂತ ಭೂಮಿ ತಾಯಿನ
ಎದ್ದೊಂದು ಘಳಿಗೆ ನೆನೆದೇನ !
ಶರಣೆಂಬೆ ಶಿವನಿಗೆ ಶರಣೆಂಬೆ ಗುರುವಿಗೆ
ಶರಣೆಂಬೆ ಶಿವನ ಮಡದಿ ಗೌರಮ್ಮಗೆ
ಶರಣೆಂದು ಕಲ್ಲ ಹಿಡಿದೇನ !
ವಚನ ಸಾಹಿತ್ಯ : 12ನೇ ಶತಮಾನದ ಶರಣರ ವಚನಗಳು ಕನ್ನಡ ಸಾಹಿತ್ಯದಲ್ಲಿ ಮನೆ-ಮಾತಾಯಿತು, ಬಸವಣ್ಣನವರ ಒಂದು ವಚನ,
ಕಳಬೇಡ ಕೊಲಬೇಡ; ಹುಸಿಯ ನುಡಿಯಲು ಬೇಡ;
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ;
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ;
ಇದೇ ಅಂತರಂಗ ಶುದ್ದಿ; ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲ ಸಂಗಮ ದೇವನೊಲಿಸುವ ಪರಿ
ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಕೊಡುಗೆ ನೀಡಿದೆ, ಜಗತ್ತಿನ ಹಲವಾರು ಭಾಷೆಗಳಲ್ಲಿ ವಚನಗಳು ಅನುವಾದ ಗೊಂಡಿವೆ,
ದಾಸ ಸಾಹಿತ್ಯ : (ಭಕ್ತಿ ಸಾಹಿತ್ಯ) ಪುರಂದರದಾಸರು ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡ ಹುಚ್ಚಪ್ಪ ಗಳಿರಾ !
ಈಸಬೇಕು ಇದ್ದು ಜಯಿಸಬೇಕು
ಕನ್ನಡ ಸಾಹಿತ್ಯ ಲೋಕಕ್ಕೆ ಹರಿದಾಸರ ಸಾಹಿತ್ಯ ಸೇವೆ ಅನುಪಮವಾದದ್ದು,
ತತ್ವ ಸಾಹಿತ್ಯ: ನಿಜಗುಣ ಶಿವಯೋಗಿಗಳು, ಸಂತ ಶಿಶುನಾಳ ಶರೀಫರು, ಸರ್ವಜ್ಞ ಕವಿಗಳು ಹಾಗೂ ಇತ್ಯಾದಿ ಮಹಾನ್ ಕವಿಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಹಾಗೂ ಅನನ್ಯವಾದದು,
ಕನ್ನಡ ತಾಯಿ ಭುವನೇಶ್ವರಿಯ ಒಡಲು ಸಂತಸ-ಸಂಭ್ರಮದಲ್ಲಿ ಮುಳುಗಿ ತೇಲಾಡುತ್ತಿದೆ, ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುತ್ತವೆ, ಶಾಸ್ತ್ರೀಯ ಸ್ಥಾನಮಾನವೂ ಲಭಿಸಿರುತ್ತದೆ,
ಸ್ನೇಹಿತರೇ “ಇವನಾರವ ಇವನಾರವ ಇವನಾರವ ಎನ್ನದೇ
ಇವ ನಮ್ಮವ, ಇವ ನಮ್ಮವ, ನಮ್ಮ ಮನೆಯ ಮಗನಮ್ಮ”ಎನ್ನುವ ಸಂಸ್ಕೃತಿ ನಮ್ಮದು, ಬಾಂಧವರೇ, ಒಂದು ಭಾಷೆಯ ಸಾಹಿತ್ಯ ದೊಡ್ಡದಾಗಬೇಕಾದರೆ, ನಾಡು ದೊಡ್ಡದಾಗ ಬೇಕು, ಜನರೂ ದೊಡ್ಡವರಾಗಬೇಕು, ಯಾವುದೇ ಭಾಷೆ ಮತ್ತು ಸಾಹಿತ್ಯವು ನಾಡನ್ನು ಬಿಟ್ಟು, ಜನರನ್ನು ಬಿಟ್ಟು ಇಲ್ಲ, ಇರಲು ಸಾಧ್ಯವೂ ಇಲ್ಲ. ನಾಡು ಆಧುನಿಕವಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಖ್ಯಾತಿ ಪಡೆಯುತ್ತಿದೆ, ಕನ್ನಡಿಗರು ದೊಡ್ಡವರಾಗುತ್ತಿದ್ದಾರೆ, ಆದರೆ ಕನ್ನಡ ಸೊರಗುತ್ತಿದೆ, ಕನ್ನಡಿಗರ ಮಧ್ಯೆ ಉಳ್ಳವರ-ಇಲ್ಲದವರ ಅಂತರ ಹೆಚ್ಚಾಗುತ್ತಿದೆ, ನಗರದವರು-ಹಳ್ಳಿಯವರು ಎಂಬ ಭೇದಭಾವ ಬಳೆಯುತ್ತಿದೆ. ಕುವೆಂಪು ಅವರು ಕಂಡ ಕನಸು
“ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು, ಸರ್ವೋದಯವಾಗಲಿ ಸರ್ವರಲಿ” ಎಂಬುದು ಹುಸಿಯಾಗುತ್ತಿದೆ, ಎಲ್ಲರೂ ಇಂಗ್ಲಿಷಿನ ಬೆನ್ನು ಹತ್ತಿದ್ದೇವೆ, ನಗರದವರು ಮತ್ತು ಉಳ್ಳವರು ಅತಿ ಶ್ರೇಷ್ಠ ದರ್ಜೆಯ, ಅತ್ಯುನ್ನತ ಶುಲ್ಕದ ಇಂಗ್ಲಿಷ್ ಶಾಲೆಗಳಿಗೆ ಪ್ರವೇಶ ಪಡೆದರೆ, ಹಳ್ಳಿಯವರು ತಮ್ಮ ಸಮೀಪದ ಇಂಗ್ಲಿಷ್ ಶಾಲೆಗಳಿಗೆ ಸೇರುತ್ತಿದ್ದಾರೆ, ಹಳ್ಳಿಗಳಲ್ಲಿ ಕಾನ್ವೆಂಟ್ ಶಾಲೆಗಳು ನಡೆಯುತ್ತಿವೆ, ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳು ಸೊರಗುತ್ತಿವೆ, ಅದರ ಪಕ್ಕದಲ್ಲಿಯೇ ಇಂಗ್ಲಿಷ್ ಶಾಲೆಗಳು ನಳನಳಿಸುತ್ತಿವೆ, ಬಡವರು ಸರ್ಕಾರಿ ಶಾಲೆಗಳಿಗೆ ಹೋದರೆ, ಸ್ಥಿತಿವಂತರು ಖಾಸಗಿ ಇಂಗ್ಲಿಷ್ ಶಾಲೆಗಳತ್ತ ದಾಪುಗಾಲಿಡುತ್ತಿದ್ದಾರೆ, ಇಂಗ್ಲಿಷ್ ಪ್ರಪಂಚದಾದ್ಯಂತ ಅನ್ನ ನೀಡುತ್ತಿದೆ, ಕನ್ನಡ ಕನ್ನಡದ ನೆಲದಲ್ಲಿಯೇ ಅನ್ನ ನೀಡುತ್ತಿಲ್ಲ, ಎಲ್ಲಿಯವರೆಗೆ ಕನ್ನಡಕ್ಕೆ ಅನ್ನ ದೊರಕಿಸುವ ಶಕ್ತಿ ಬರುವುದಿಲ್ಲವೋ ಅಲ್ಲಿಯವರೆಗೆ ಕನ್ನಡಕ್ಕೆ ಮಹತ್ವ ಬರುವುದು ಕಷ್ಟಕರ.
ಸ್ನೇಹಿತರೇ, ಇದುವರೆಗೂ ನಡೆದ ಸಾಹಿತ್ಯ ಸಮ್ಮೇಳನಗಳು, ಸಾವಿರಾರು ನಿರ್ಣಯಗಳು ಅಂಗೀಕೃತವಾಗಿವೆ, ಆದರೆ ಅನುಷ್ಠಾನ ಆಗದಿರುವುದರಿಂದ ಕೋಟ್ಯಾಂತರ ಕನ್ನಡಿಗರ ಬಯಕೆಗಳಿಗೆ ಬೆಲೆ ಇಲ್ಲದಂತಾಗಿದೆ, ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಇರುವ ಬದ್ಧತೆ ಅನುಷ್ಠಾನದಲ್ಲಿ ಬರಬೇಕು, ಕನ್ನಡ ಉಳಿಸಿ ಬೆಳೆಸುವ ಪ್ರೀತಿಯ ಕಾರ್ಯವನ್ನು ಕೈಗೊಳ್ಳಬೇಕು, ನಾಡು-ನುಡಿ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಹುಮ್ಮಸ್ಸು ಕಡಿಮೆಯಾಗಬಾರದು,
ಜಾತಿ, ಹಣ, ಪ್ರಾದೇಶಿಕತೆ, ಭ್ರಮೆ, ಆಮಿಷ, ಸುಳ್ಳು ವದಂತಿಗಳನ್ನು ಮೆಟ್ಟಿ ವಿರೋಧಿಗಳಿಗೆ ತಕ್ಕ ಉತ್ತರ ಕೊಡಬೇಕು. ನಾವೆಲ್ಲರೂ ಈ ವಿಷಯದಲ್ಲಿ ಜಾಗೃತರಾಗೋಣ, ಕನ್ನಡ ಸಾಗರ, ವಿಶ್ವವ್ಯಾಪಿ, ವಿಶ್ವರೂಪಿ ಇಂತಹ ಮೌಲ್ಯಯುತ ಸಾಹಿತ್ಯ ಭಾಷೆಯ ವಾರಸುದಾರರು ನಾವು !
ಇಂದು ಅಗತ್ಯವಾಗಿರುವುದು ಒಗ್ಗಟ್ಟು, ಜಾತಿ, ಧರ್ಮ, ಮೇಲು-ಕೀಳು, ಭೇದವಿಲ್ಲದೆ, ಪಕ್ಷಾತೀತವಾಗಿ ಕನ್ನಡದ ಉಳಿವು ಬೆಳವಣಿಗೆಗಾಗಿ ನಾವೆಲ್ಲರೂ ಒಂದಾಗುವುದು ತೀರ ಅಗತ್ಯ.
– ಜೆಂಬಿಗಿ ಮೃತ್ಯುಂಜಯ,
ಕನ್ನಡ ಉಪನ್ಯಾಸಕರು, ದಾವಣಗೆರೆ