ಕಣ್ಣಿಗೆ ಪಟಾಕಿ ಪೆಟ್ಟು ತಪ್ಪಿಸೋಣ : ಕಣ್ಣಿನ ಸುರಕ್ಷತೆಗೆ ಮುನ್ನೆಚ್ಚರಿಕೆ

ಕಣ್ಣಿಗೆ ಪಟಾಕಿ ಪೆಟ್ಟು ತಪ್ಪಿಸೋಣ : ಕಣ್ಣಿನ ಸುರಕ್ಷತೆಗೆ ಮುನ್ನೆಚ್ಚರಿಕೆ

‘ಹಬ್ಬದ ಸಮಯದಲ್ಲಿ ಪಟಾಕಿ ಹಚ್ಚುವುದು ನಮ್ಮಲ್ಲಿ ಸಾಮಾನ್ಯ. ಆದರೆ, ಪಟಾಕಿಗಳನ್ನು ಸಫಲವಾಗಿ ಬಳಸದಿದ್ದರೆ ಮತ್ತು ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಇದು ಕಣ್ಣಿನ ಗಂಭೀರ ಗಾಯಗಳಿಗೆ ಕಾರಣವಾಗಬಹುದು. ಪಟಾಕಿ ಹಚ್ಚುವ ಸಮಯದಲ್ಲಿ ಹೊರಹರಿವು, ಹೊಗೆ, ಉಷ್ಣತೆ ಮತ್ತು ಸಣ್ಣ ಕಣಗಳು ನಮ್ಮ ಕಣ್ಣುಗಳಿಗೆ ಅಪಾಯ ಉಂಟುಮಾಡುತ್ತವೆ. ಕಣ್ಣಿನ ಗಾಯಗಳು ಕೇವಲ ತಾತ್ಕಾಲಿಕ ತೊಂದರೆಗಿಂತಲೂ ಹೆಚ್ಚು, ಗಂಭೀರ ಪೀಡನೆಯಾಗಬಹುದು. 

ಪಟಾಕಿಗಳಿಂದ ಉಂಟಾಗಬಹುದಾದ ಸಾಮಾನ್ಯ ಕಣ್ಣಿನ ಗಾಯಗಳು

ರಾಸಾಯನಿಕ ಗಾಯಗಳು: ಪಟಾಕಿಗಳಲ್ಲಿ ಬಳಸುವ ಸ್ಫೋಟಕ ಹಾಗೂ ಬಣ್ಣದ ರಸಾಯನಿಕ ಗಳು ಕಣ್ಣುಗಳಿಗೆ ಹಾನಿ ಉಂಟುಮಾಡುತ್ತವೆ. ಈ ರಾಸಾಯನಿಕಗಳು ಕಣ್ಣಿನ ಮೇಲ್ಮೈ ಹಾಗೂ ಒಳಗಿನ ಭಾಗಕ್ಕೆ ತೊಂದರೆ ನೀಡುತ್ತವೆ, ಇದು ಕಣ್ಣಿನ ದೃಷ್ಟಿಯನ್ನು ವಿಪರೀತವಾಗಿ ಕಡಿಮೆ ಮಾಡುತ್ತದೆ.

ಸ್ಫೋಟದ ಉಷ್ಣತೆಯಿಂದಾಗುವ ತೊಂದರೆಗಳು : ಪಟಾಕಿಗಳ ಸ್ಫೋಟದಿಂದ ಹೊರಬರುವ ಉಷ್ಣ ಕಣ್ಣಿನ ಚರ್ಮ ಹಾಗೂ ನೇರವಾಗಿ ಕಣ್ಣಿನ ಮೇಲೆ ಹೊತ್ತಿಕೊಂಡಾಗ ಗಂಭೀರ ಗಾಯಗಳು ಉಂಟಾಗುತ್ತವೆ. ಇದರಿಂದ ಕಣ್ಣು ಅಥವಾ ಚರ್ಮ ಸುಟ್ಟುಹೋಗುತ್ತದೆ.

ಮೆಕ್ಯಾನಿಕಲ್/ ಭೌತಿಕ ಗಾಯಗಳು: ಪಟಾಕಿಗಳ ಸ್ಫೋಟದಿಂದ ಉಂಟಾಗುವ ಶಾಖ ಮತ್ತು ಹೊಗೆ ಕೆಲವೊಮ್ಮೆ ಧೂಳು, ಸಣ್ಣ ಕಣಗಳು ಹಾಗೂ ದೊಡ್ಡ ಚೂರುಗಳು ಕಣ್ಣುಗಳಿಗೆ ತಿವಿಯುತ್ತದೆ. ಇದು ಕಣ್ಣಿನ ರೆಪ್ಪೆ ಹಾಗೂ ಕಣ್ಣಿನ ಒಳ ಭಾಗಗಳಿಗೆ ತೀವ್ರ ತೊಂದರೆ ಉಂಟುಮಾಡಬಹುದು.  

ಅಂಧತ್ವದ ಅಪಾಯ: ಗಂಭೀರ ಕಣ್ಣು ಗಾಯಗಳು, ವಿಶೇಷವಾಗಿ ನೇರ ಪಟಾಕಿ ತಿವಿಕೆಗಳಿಂದ ಅಂಧತ್ವ ಉಂಟಾಗುವ ಅಪಾಯವಿದೆ. ಇದು ತಾತ್ಕಾಲಿಕ ಅಥವಾ ಶಾಶ್ವತವಾಗಿರಬಹುದು. ಇದನ್ನು ತಡೆಹಿಡಿಯುವುದು ಅತ್ಯಗತ್ಯ.

ಪಟಾಕಿಗಳ ಸುರಕ್ಷತಾ ಕ್ರಮಗಳು

ಮಕ್ಕಳನ್ನು ಅತೀ ಹತ್ತಿರದಲ್ಲಿಡಬೇಡಿ: ಪಟಾಕಿ ಗಳನ್ನು ಹಚ್ಚುವಾಗ ವಿಶೇಷವಾಗಿ ಮಕ್ಕಳು ಹತ್ತಿರದಲ್ಲಿ ಇರುವುದನ್ನು ತಪ್ಪಿಸಿ. ದೊಡ್ಡವರ ಮೇಲ್ವಿಚಾರಣೆ ಯಲ್ಲಿಯೇ ಮಕ್ಕಳು ಪಟಾಕಿ ಹಚ್ಚಲು ಅನುಮತಿಸಿ.

ಕಣ್ಣಿನ ರಕ್ಷಣೆ: ಪಟಾಕಿಗಳನ್ನು ಹಚ್ಚುವಾಗ ಪಾರದರ್ಶಕ ಗಾಗಲ್ಸ್ ಧರಿಸುವುದು ಉತ್ತಮ. ಇದು ಕಣ್ಣಿಗೆ ನೇರ ಹತ್ತಿಕೊಳ್ಳುವ ಕಣಗಳು ಅಥವಾ ಕಿಡಿಗಳಿಂದ ರಕ್ಷಣೆ ನೀಡುತ್ತದೆ.

ಪಟಾಕಿ ಹಚ್ಚುವ ಸ್ಥಳ: ಗಾಳಿ ತೀವ್ರವಾಗಿ ಬೀಸುವ ಸ್ಥಳದಲ್ಲಿ ಅಥವಾ ಮುಚ್ಚಿದ ಸ್ಥಳದಲ್ಲಿ ಪಟಾಕಿ ಹಚ್ಚಬೇಡಿ. ಪಟಾಕಿಗಳನ್ನು ಮುಕ್ತ ಹಾಗೂ ಸುರಕ್ಷಿತ ಸ್ಥಳದಲ್ಲಿ ಮಾತ್ರ ಹಚ್ಚಿ.

ಗಾಢವಾದ ಬಟ್ಟೆ: ಪಟಾಕಿ ಹಚ್ಚುವಾಗ ಸುಲಭವಾಗಿ ಬೆಂಕಿ ಹಿಡಿಯದ ಬಟ್ಟೆ ಧರಿಸಿ. ಇವು ಉಷ್ಣ ಹಾಗೂ ಬೆಂಕಿಯಿಂದ ರಕ್ಷಿಸಬಹುದು. ಹತ್ತಿಯಿಂದ ಮಾಡಿದ ಬಟ್ಟೆಯನ್ನು ಧರಿಸುವುದು ಉತ್ತಮ. 

ತಕ್ಷಣ ಚಿಕಿತ್ಸೆ: ಕಣ್ಣಿಗೆ ಪಟಾಕಿಯಿಂದ ಗಾಯವಾದರೆ ತಕ್ಷಣವೇ ತಣ್ಣನೆಯ ನೀರಿನಿಂದ ತೊಳೆಯಿರಿ ಮತ್ತು ಕಣ್ಣಿನ ವೈದ್ಯರನ್ನು ಸಂಪರ್ಕಿಸಿ. ಪಟಾಕಿ ಹಚ್ಚಿದ ನಂತರ ಕೈ ಚೆನ್ನಾಗಿ ಸೋಪು ಮತ್ತು ನೀರಿನಿಂದ ತೊಳೆಯದೇ ಕಣ್ಣನ್ನು ಮುಟ್ಟಿಕೊಳ್ಳಬೇಡಿ.  

ಮಾರ್ಗದರ್ಶನ: ಪಟಾಕಿ ಸುರಕ್ಷತಾ ಹಾಗೂ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಪಟಾಕಿಗಳಿಂದ ಆಗುವ ಕಣ್ಣಿನ ಗಾಯಗಳ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಕಣ್ಣಿಗೆ ಪಟಾಕಿ ಪೆಟ್ಟು ತಪ್ಪಿಸೋಣ : ಕಣ್ಣಿನ ಸುರಕ್ಷತೆಗೆ ಮುನ್ನೆಚ್ಚರಿಕೆ - Janathavani– ಡಾ. ಜಿ.ಯು. ಅಭಿಷೇಕ್, ನೇತ್ರ ತಜ್ಞರು, ಐ ಕೇರ್ ಸೆಂಟರ್, ದಾವಣಗೆರೆ.

error: Content is protected !!