ಇದು ದೀಪಾವಳಿಯ ಸ್ವಾರಸ್ಯವಲ್ಲ, ಅವಘಡದ ನೆನಪು
ಹಿಂದೊಮ್ಮೆ ಹೇಳಿದ್ದೆನಾದರೂ ತುಸು ವಿವರದೊಂದಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಮೋತಿ ವೀರಪ್ಪ ಹೈಸ್ಕೂಲ್, ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪ ಮುಂತಾದವುಗಳ ಸುಪ್ರಸಿದ್ಧ ದಾನಿಗಳಾಗಿದ್ದ ಮೋತಿ ವೀರಪ್ಪನವರು, ನಗರದ ಗಣ್ಯ ವರ್ತಕರೂ ಆಗಿದ್ದರು. ತಂಬಾಕು ಪೇಟೆ ಅಂದರೆ ಈಗಿನ ವಿಜಯಲಕ್ಷ್ಮಿ ರಸ್ತೆಯ `ದಾವಣಗೆರೆ ಪ್ರೆಸ್’ ಎಂಬ ಅವರ ಅಂಗಡಿಯಲ್ಲಿ ಮುದ್ರಣಕ್ಕೆ ಬೇಕಾದ ಪೇಪರು ಹಾಗೂ ಸಾಮಗ್ರಿಗಳು, ಸ್ಟೇಷನರಿ ವಸ್ತುಗಳು, ಲೆಕ್ಕ ತಖ್ತೆ, ಖಾತೆ ಕಿರ್ದಿ ಬರೆಯುವ ಪುಸ್ತಕಗಳು, ಫೋಟೋಗ್ರಫಿ ಫಿಲಂ, ಕ್ಯಾಮೆರಾ, ಪೇಪರ್ ಮುಂತಾದ ಬಹು ಸಾಮಗ್ರಿಗಳ ಮಾರಾಟದ ಜೊತೆಗೆ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ವ್ಯಾಪಾರವೂ ಇವರ ಅಂಗಡಿಯಲ್ಲಿತ್ತು.
ಆರೂಢ ದಾಸೋಹಿ ಮಾಗನೂರು ಬಸಪ್ಪನವರು ಕಾಸಲ್ ಲಕ್ಷ್ಮೀ ನಾರಾಯಣಪ್ಪರ ಅಂಗಡಿ ಗುಮಾಸ್ತಿಗೆ ಕೆಲಸ ಬಿಟ್ಟವರು ಒಂದೂಕಾಲು ರೂಪಾಯಿ ಕೊಟ್ಟು ಒಂದು ಖಾತೆ ರೋಜು ಪುಸ್ತಕ ಕೊಂಡುಕೊಂಡು ದಾವಣಗೆರೆ ಪ್ರೆಸ್ ಮುಂದೆ ಬರುವಾಗ ಮೋತಿ ವೀರಪ್ಪನವರು ಹಣೆಗೆ ವಿಭೂತಿ ಧರಿಸಿಕೊಂಡು ಲಕ್ಷಣವಾಗಿ ಅಂಗಡಿಯಲ್ಲಿ ಕುಳಿತಿರುವುದನ್ನು ನೋಡಿ `ಶುಭ ಶಕುನವಾಯಿತು’ ಎಂದು 1930ರ ಜೇಷ್ಠ ಬಹುಳ ಪಂಚಮಿ ಶುಕ್ರವಾರದ ಶುಭಮೂರ್ತದಲ್ಲಿ 100 ರೂಪಾಯಿ ಬಂಡವಾಳದೊಂದಿಗೆ 15 ರೂಪಾಯಿ ಬಾಡಿಗೆಯ ಅಂಗಡಿಯಲ್ಲಿ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸುಮಾರು 61 ವರ್ಷಗಳ ಹಿಂದೆ ದೀಪಾವಳಿಯ ದಿನ ಮೋತಿ ವೀರಪ್ಪನವರ ಅಂಗಡಿಯಲ್ಲಿ ಮಾರುತ್ತಿದ್ದ ಪಟಾಕಿಗಳಿಗೆ ಬೆಂಕಿ ಬಿದ್ದು, ಅಂಗಡಿ ಸಂಪೂರ್ಣವಾಗಿ ಸುಟ್ಟು ಹೋಯಿತಲ್ಲದೆ, ಮೋತಿ ವೀರಪ್ಪನವರ ಮಾವ ಅಂದನೂರು ಮಹದೇವಜ್ಜನವರು ಅಂಗಡಿಯೊಳಗೇ ಸುಟ್ಟು ಕರಕಲಾದರು. ಈ ದುರಂತವನ್ನು ಬಾಲಕನಾಗಿದ್ದಾಗ ನಾನೂ ಪ್ರತ್ಯಕ್ಷ ಕಂಡಿದ್ದೇನೆ. ಆಗ ಕೆಲವರು ಆಡಿಕೊಳ್ಳುತ್ತಿದ್ದುದು ಏನೆಂದರೆ `ಯಾರೋ ಒಬ್ಬ ಸನ್ಯಾಸಿ ಭಿಕ್ಷೆ ಕೇಳಿದನಂತೆ, ಇವರು ಕೊಡದಿದ್ದಾಗ ಆತ ದೊಡ್ಡದಾಗಿ ಕಣ್ಣು ಬಿಟ್ಟು ನೋಡಿದನಂತೆ, ಅಂಗಡಿಗೆ ಬೆಂಕಿ ಬಿದ್ದಿತಂತೆ’ ಎಂದು. ಆದರೆ, ನಿಜವಾಗಿಯೂ ನಡೆದದ್ದು, ಏನೆಂದರೆ ಅಲ್ಲೇ ಪಕ್ಕದ ನಿವಾಸಿಗಳಾಗಿದ್ದ ದಾನಿ ಗೌಡರ ಗುರುಶಾಂತಪ್ಪನವರ ಮಗ ಚಂದ್ರಣ್ಣನವರು ಪ್ರತ್ಯಕ್ಷ ಕಂಡ ಪ್ರಕಾರ ಅಂದು ಸಂಜೆ ಸುಮಾರು 6-30 ರ ವೇಳೆಗೆ ಬೆಳ್ಳುಳ್ಳಿಗಲ್ಲಿಯ ಐನಳ್ಳಿ ಚನ್ನಬಸಪ್ಪನವರ ಇಬ್ಬರು ಹೆಣ್ಣು ಮಕ್ಕಳು ಅಲ್ಲಿ ಪಟಾಕಿ ಖರೀದಿಸುತ್ತಿದ್ದರು. ಆಗ ಯಾರೋ ಹಚ್ಚಿದ ಪಟಾಕಿಯ ಬೆಂಕಿ ಕಿಡಿ ಹಾರಿ ಬಂದು ಇವರ ಅಂಗಡಿಯ ಪಟಾಕಿಗಳಿಗೆ ತಾಗಿತು. ಕೂಡಲೇ ಹುಡುಗಿಯರಿಬ್ಬರೂ ಓಡಿ ಹೋದರು.
ಹಳೆ ಊರಲ್ಲಿನ ಹಳೆಯ ಕಾಲದ ದೀಪಾವಳಿ ಸ್ವಾರಸ್ಯಗಳು…
ನಮ್ಮ ಬಾಲ್ಯದಲ್ಲಿನ ದೀಪಾವಳಿಯ ಕೆಲವು ಸ್ವಾರಸ್ಯಗಳು ಹಾಗೂ ನೆನಪುಗಳು
ಪಟಾಕಿ ಸಿಡಿತ ಜೋರಾಗುತ್ತಲೇ ಗಾಬರಿಗೊಂಡ ಮೋತಿ ವೀರಪ್ಪನವರು, ಅಂಗಡಿಯ ಲೆಕ್ಕ ಬರೆಯುತ್ತಿದ್ದ ಅಪ್ಪಾಜಿರಾಯರು, ಗುಮಾಸ್ತರಾಗಿದ್ದ ಶಂಕ್ರಪ್ಪ (ಇವರು ಫೋಟೋಗ್ರಫಿ ಸಹಾ ಮಾಡುತ್ತಿದ್ದರು), ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಜಿರಾವ್ ಸಹಾ ಇದ್ದಿರಬೇಕು ಎಲ್ಲರೂ ಹೊರಗೋಡಿ ಬಂದು ಸಮೀಪದಲ್ಲಿದ್ದ ನವಲೆ ಬಸವಣ್ಣೆಪ್ಪನವರ ಅಳಿಯ ಅಂಬರ್ಕರ್ ಸ್ವಾಮಿ ರಾವ್ ಅಂಗಡಿಯ ಬಳಿ ನಿಂತರು. ಆದರೆ, ಮೋತಿ ವೀರಪ್ಪನವರ ಮಾವ ಅಂದರೆ ಚನ್ನಬಸಮ್ಮನವರ ತಂದೆ ಅಂದನೂರು ಮಹದೇವಜ್ಜನವರು ಮಾತ್ರ ಅಂದಿನ ವ್ಯಾಪಾರದ ಹಣ ತುಂಬಿದ್ದ ಕಬ್ಬಿಣದ ಕ್ಯಾಶ್ ಬಾಕ್ಸ್ ಅನ್ನು ಎತ್ತಿಕೊಂಡು ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಸಿಕ್ಕಿ ಅಲ್ಲೇ ಸುಟ್ಟು ಕರಕಲಾದರು. ಮಾರನೇ ದಿನ ನೋಡುವಾಗ ಅರೆಬರೆ ಸುಟ್ಟ ಕ್ಯಾಮರಾ ಫೋಟೋ ಫಿಲಂಗಳ ಮಧ್ಯೆ ಇವರ ದೇಹವೂ ಸುಟ್ಟು ಅಸ್ಥಿಪಂಜರದಂತಾಗಿತ್ತು. ಆಗೆಲ್ಲಾ ಈಗಿನಂತೆ ಪಟಾಕಿಗಳಿಗೆ ಬಾಕ್ಸ್‌ಗಳು ಇರುತ್ತಿರಲ್ಲ, ಕಬ್ಬಿಣದ ಬೇಸನ್ ಪುಟ್ಟಿಗಳಲ್ಲಿ ತೆರೆದೇ ಇಟ್ಟು ಮಾರುತ್ತಿದ್ದರು. ಹಾಗಾಗಿ ಸಣ್ಣ ಕಿಡಿಗೂ ಅವು ಹೊತ್ತಿಕೊಂಡವು.
ಅಗ್ನಿಶಮನಕ್ಕಾಗಿ ಆಗ ಇಟ್ಟು ಕೊಳ್ಳುತ್ತಿದ್ದ ವ್ಯವಸ್ಥೆ ಎಂದರೆ ಬೆಂಕಿ ಆರಿಸಲು ನಾಲ್ಕಾರು ಗಡಿಗೆಗಳಲ್ಲಿ ನೀರು, ಬೆಂಕಿಯ ಮೇಲೆ ಎರಚಲು ನಾಲ್ಕಾರು ಪುಟ್ಟಿಗಳಲ್ಲಿ ಮರಳು ಅಷ್ಟೇ. ಅಂಗಡಿಯಲ್ಲಿದ್ದ ಪಟಾಕಿಗಳೆಲ್ಲಾ ಸಿಡಿಯುತ್ತಿದ್ದುದರಿಂದ ಆಸುಪಾಸಿನ ಯಾರೂ ನೀರು ಎರಚಲು ಬೆಂಕಿ ನಂದಿಸಲು ಸಾಧ್ಯ ವಾಗಲಿಲ್ಲ. ಪಟಾಕಿಗಳ ಸಿಡಿತ ಎಷ್ಟಿತ್ತೆಂದರೆ ತಂಬಾಕು ಪೇಟೆಯಿಂದ ಚೌಕಿಪೇಟೆವರೆಗೂ ಬಂದು ಬೀಳುತ್ತಿದ್ದವು. ನಾವೆಲ್ಲಾ ಗಾಬರಿಗೊಂಡು ರಕ್ಷಣೆಗಾಗಿ ಶ್ರೀ ಬಕ್ಕೇಶ್ವರ ದೇವಸ್ಥಾನದ ಕಣಕ್ಕೆ ಹೋಗಿ ನಿಂತೆವು.
ಹರಿಹರದ ಮೈಸೂರು ಕಿರ್ಲೋಸ್ಕರ್ ನಿಂದ ಅಗ್ನಿ ಶಮನ ವ್ಯವಸ್ಥೆಯವರು ಬಂದರೂ ನಿಯಂತ್ರಿಸಲು ಆಗಲಿಲ್ಲ. ಧಾರವಾಡ ಜಿಲ್ಲೆಯ ರಾಣೆಬೆನ್ನೂರಿನಿಂದ ಅಗ್ನಿಶಾಮಕದವರು ತಡರಾತ್ರಿ ವೇಳೆಗೆ ಬಂದರು. ಅವರಿಂದಲೂ ಪೂರ್ತಿಯಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮಾರನೇ ದಿನ ಬೆಳಗಿನ ಹೊತ್ತಿಗೆ ಬೆಂಕಿ ಕ್ಷೀಣಿಸಿತು. ಈ ಅಗ್ನಿ ದುರಂತದ ನಂತರ ಮೋತಿ ವೀರಪ್ಪನವರು ತಮ್ಮ ದಾವಣಗೆರೆ ಪ್ರೆಸ್ ಅಂಗಡಿಯನ್ನು ಸ್ಟೇಷನ್ ರೋಡ್ ಅಂದರೆ ಗಡಿಯಾರ ಕಂಬದ ಬಳಿ ಭಾನುವಳ್ಳಿ ಬಸೆಟ್ಟಪ್ಪನವರ ತಿಂಡಿ ಅಂಗಡಿಯ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಿದರು.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ