ಸೋರಿಯಾಸಿಸ್ ತೊಂದರೆಗೆ ಭರವಸೆ ಮತ್ತು ಚಿಕಿತ್ಸೆ

ಸೋರಿಯಾಸಿಸ್ ತೊಂದರೆಗೆ ಭರವಸೆ ಮತ್ತು ಚಿಕಿತ್ಸೆ

ಇಂದು ವಿಶ್ವ ಸೋರಿಯಾಸಿಸ್ ದಿನ

ಪ್ರತಿ ವರ್ಷ, ಅಕ್ಟೋಬರ್ 29 ರಂದು ವಿಶ್ವ ಆರೋಗ್ಯ ಸಂಸ್ಥೆಯು `ವಿಶ್ವ ಸೋರಿಯಾಸಿಸ್ ದಿನ’ ಆಚರಿಸುತ್ತದೆ. ಈ ವರ್ಷದ ವಿಶ್ವ ಸೋರಿಯಾಸಿಸ್ ದಿನ 2024 ರ ಉದ್ದೇಶ `ಸೋರಿಯಾಸಿಸ್ ತೊಂದರೆ ಮತ್ತು ಕುಟುಂಬ’. ಸೋರಿಯಾಸಿಸ್ ಕಾಯಿಲೆಯ ಸವಾಲುಗಳನ್ನು  ಎದುರಿಸುವ ಪ್ರತಿಯೊಬ್ಬರೂ ಅಚಲವಾದ ಬೆಂಬಲಕ್ಕೆ ಅರ್ಹರಾಗಿದ್ದಾರೆ. ಸೋರಿಯಾಸಿಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಮಾತ್ರವಲ್ಲದೆ, ಅವರ ಪ್ರೀತಿ ಪಾತ್ರರು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವುದು ಇದರಲ್ಲಿ ಸೇರಿದೆ. ಜಾಗೃತಿ ಮತ್ತು ತಿಳುವಳಿಕೆಯನ್ನು ಹೆಚ್ಚಿಸುವ ನಮ್ಮ ಬದ್ಧತೆಯ ಭಾಗವಾಗಿ, ಕುಟುಂಬದ ಆರ್ಥಿಕತೆ, ಕೆಲಸದ ಜೀವನ, ಸಾಮಾಜಿಕ ಜೀವನ, ಸಂಬಂಧಗಳು ಇತ್ಯಾದಿಗಳ ಮೇಲೆ ಸೋರಿಯಾಸಿಸ್ ಕಾಯಿಲೆಯ ಪರಿಣಾಮಗಳನ್ನು ವಿವರಿಸುವ ಸಂಪನ್ಮೂಲಗಳನ್ನು ನಾವು ರಚಿಸುತ್ತೇವೆ. ಇವುಗಳನ್ನು ಅನ್ವೇಷಿಸಲು ನಮ್ಮೊಂದಿಗೆ ಸೇರಿ ಮತ್ತು ನಾವು ಅವುಗಳನ್ನು ಹೇಗೆ ಉತ್ತಮವಾಗಿ ಬೆಂಬಲಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಸೋರಿಯಾಸಿಸ್‌ ಕಾಯಿಲೆಗೆ ಪ್ರಪಂಚದಾದ್ಯಂತ ಸರಿಸುಮಾರು  2-3% ಪೀಡಿತ ಜನರಿದ್ಧಾರೆ ಎಂದು ಅಂದಾಜಿಸಲಾಗಿದೆ. 

ಭಾರತದ ವಯಸ್ಕ ಜನಸಂಖ್ಯೆಯಲ್ಲಿ ಸೋರಿಯಾಸಿಸ್ ಪೀಡಿತರ ಪ್ರಮಾಣವು 0.44% ರಿಂದ 2.8%ರವರೆಗೆ ಇರುವುದಾಗಿ ತಿಳಿದುಬಂದಿದೆ.

ಸೋರಿಯಾಸಿಸ್  ಎಂದರೇನು?

λ ಸೋರಿಯಾಸಿಸ್ ಒಂದು ‘ಸ್ವಯಂ ದೇಹದ ಮೇಲೆ ತನ್ನ ಪ್ರತಿರಕ್ಷಣಾ  ವ್ಯವಸ್ಥೆಯು ದಾಳಿ ಮಾಡುವ (autoimmune disorder) ಸ್ಥಿತಿ’ಯಾಗಿದ್ದು, ಅದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇದು ಚರ್ಮದ ಕೋಶಗಳ ತ್ವರಿತ ಅಧಿಕ ಉತ್ಪಾದನೆಗೆ ಕಾರಣವಾಗುತ್ತದೆ.ಸಾಮಾನ್ಯವಾಗಿ 28 ರಿಂದ 30 ದಿನ ತೆಗೆದುಕೊಳ್ಳುವ ಪ್ರಕ್ರಿಯೆ ಸೋರಿಯಾಸಿಸ್ ಇರುವವರಲ್ಲಿ 3 ರಿಂದ 6 ದಿನಕ್ಕೆ ಮುಗಿಯುತ್ತದೆ, ಈ ಜೀವಕೋಶಗಳು ನಂತರ ಶೇಖರಗೊಂಡು ಪದರ ಪದರವಾಗಿ ಕಾಣುತ್ತವೆ. ಇದು ಕೆಂಪು, ತುರಿಕೆ, ದಪ್ಪ ತೇಪೆಗಳ ರಚನೆಗೆ ಕಾರಣವಾಗುತ್ತದೆ. 

λ ಈ ಸೋರಿಯಾಸಿಸ್ ಮಚ್ಚೆಗಳು ಹಲವು ಮಿ.ಮೀ. ಗಳಿಂದ ಕೆಲವು ಸೆಂ.ಮೀ ಗಳವರೆಗೂ ಹರಡಬಹುದಾಗಿದ್ದು, ಕೆಲವರಲ್ಲಿ ಒಂದೆರಡು ಮಾತ್ರವಿದ್ದು, ಮತ್ತೆ ಕೆಲವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. 

λ ಸಾಮಾನ್ಯ ಬಾಧಿತ ಪ್ರದೇಶಗಳು ತಲೆ, ಮೊಣಕೈಗಳು, ಮೊಣಕಾಲುಗಳು, ಹಾಗೂ ಬೆನ್ನಿನಲ್ಲಿ ಕಾಣಿಸಿಕೊಳ್ಳುತ್ತದೆ.

ಈ ದೈಹಿಕ ಲಕ್ಷಣಗಳು ಸಾಕಷ್ಟು ಸವಾಲಾಗಿದ್ದರೂ, ಸೋರಿಯಾಸಿಸ್ ಒಬ್ಬರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಇದು ಆತಂಕ, ಖಿನ್ನತೆ, ಮತ್ತು ಕಡಿಮೆ ಸ್ವಾಭಿಮಾನಕ್ಕೆ ಕಾರಣವಾಗಬಹುದು.

ಸೋರಿಯಾಸಿಸ್ ಗೆ ಅನೇಕ ಕಾರಣಗಳು ಇದ್ದು ಅದರಲ್ಲಿ ಪ್ರಮುಖವಾಗಿ ಆತ್ಮಘಾತಿ ಪ್ರಕ್ರಿಯೆ (autoimmune disorder), ಕೆಲವು ಸೋಂಕುಗಳು (streptococcal ), ಗಟ್ಟೇಟ್ ಸೋರಿಯಾಸಿಸ್ ಮತ್ತು ಸೋರಿಯಾಟಿಕ್ ಆರ್ಥೈಟಿಸ್‌ಗೆ ಹಲವಾರು ಕಾರಣಗಳಿದ್ದು ಅದರಲ್ಲಿ  ಅನುವಂಶೀಯತೆ ಕೂಡ ಒಂದು.

λ ವ್ಯಕ್ತಿಯ ಹುಟ್ಟಿನಿಂದ ಯಾವುದೇ ವಯಸ್ಸಿನಲ್ಲಿ ಹಾಗೂ ವೃದ್ಧಾಪ್ಯದಲ್ಲೂ ಕಾಣಿಸಿಕೊಳ್ಳಬಹುದು.

λ ಗಂಡು ಅಥವಾ ಹೆಣ್ಣು ಯಾರಲ್ಲಿ ಬೇಕಾದರು ಕಾಣಿಸಿಕೊಳ್ಳಬಹುದು.

ಸೋರಿಯಾಸಿಸ್ ಹೆಚ್ಚಿಸುವ ಅಂಶಗಳು  

λ ಗಂಟಲು ಸೋಂಕು λ ಮಾನಸಿಕ ಒತ್ತಡ λ ಧೂಮಪಾನ

λ ಕೆಲವು ಔಷಧಿಗಳು – ಲೀಥಿಯಮ್,  ಯಾಂಟಿ ಮಲೇರಿಯಲ್, ಬೀಟಾ ಬ್ಲಾಕರ್, ನೋವು ನಿವಾರಕ ಮಾತ್ರೆಗಳು, ಸ್ಟಿರಾಯ್ಡ್

λ ಮಧ್ಯಪಾನ λ ವಾತಾವರಣ ಬದಲಾವಣೆ 

λ ಚರ್ಮದ ಗಾಯ

ಸೋರಿಯಾಸಿಸ್‌ನಲ್ಲೂ  ವಿಧಗಳಿವೆ

λ ಪ್ಲಾಕ್ ಸೋರಿಯಾಸಿಸ್  λ ಗಟ್ಟೇಟ್ ಸೋರಿಯಾಸಿಸ್ λ ಪಸ್ಟುಲಾ‌ರ್ ಸೋರಿಯಾಸಿಸ್  λ ಎರಿತ್ರೋಡರ್ಮಿಕ್ ಸೋರಿಯಾಸಿಸ್‌  λ ಇನ್ವರ್ಸ್ ಸೋರಿಯಾಸಿಸ್  λ ಸೋರಿಯಾಟಿಕ್ ಆರ್ಥೈಟಿಸ್  λ ನೈಲ್ ಸೋರಿಯಾಸಿಸ್ 

ಲಭ್ಯವಿರುವ ಚಿಕಿತ್ಸಾ ವಿಧಾನಗಳು  

λ ಮುಲಾಮುಗಳು (ಮಾಯಿಶ್ಚರೈಸರ್, ಕಾರ್ಟಿಕೋ ಸ್ಟೀರೈಡ್, ಟ್ಯಾಕ್ರೋಲಿಮಸ್)

λ ಮಾತ್ರೆಗಳು : ಮೆಥೋಟ್ರೇಕ್ಸೇಟ್, ಅಪ್ರೆಮೀಲಸ್ಟ್

λ ಬೆಳಕಿನ ಚಿಕಿತ್ಸೆ(ಫೋಟೋ ಥೆರಪಿ ಚಿಕಿತ್ಸೆ) – ಇಡೀ ದೇಹ, ಕೈ ಮತ್ತು ಕಾಲು ಅಥವಾ ಸ್ಪಾಟ್ ನ್ಯಾರೋ ಬ್ಯಾಂಡ್ ಯುವಿಬಿ (NBUVB), , ಪೂವಾ ಚಿಕಿತ್ಸೆ  (PUVA) 

λ ಬೈಯೊಲಾಜಿಕಲ್ಸ್

λ ಸೈಕ್ಲೋಸ್ಪೋರಿನ್ (Cyclosporines)

λ ಲೇಸರ್ ಚಿಕಿತ್ಸೆ- ಎಕ್ಸೈಮರ್ ಲೇಸರ್ (Excimer Laser)

ಸೋರಿಯಾಸಿಸ್ ಬಗೆಗಿನ ಮಿಥ್ಯಗಳು

λ ಸೋರಿಯಾಸಿಸ್‌ ಸಾಂಕ್ರಾಮಿಕ ರೋಗವೆ ?

 – ಖಂಡಿತಾ ಇಲ್ಲ. ಇದು ಸಾಂಕ್ರಾಮಿಕ ರೋಗವಲ್ಲ ಮತ್ತು  ಶುಚಿತ್ವ ಅಥವಾ ಸ್ವಚ್ಛತೆಯೊಂದಿಗೆ ತಳುಕು ಹಾಕಿಕೊಂಡಿಲ್ಲ.

λ ಯಾವುದಾದರೂ ಆಹಾರ ಪದಾರ್ಥಗಳಿಂದ ರೋಗ  ನಿವಾರಿಸಬಹುದಾ?

 – ಇಲ್ಲ. ಆದರೆ ಸಮತೋಲನ, ಆರೋಗ್ಯಕರ ಆಹಾರ ಉದಾಹರಣೆಗೆ omega-3 fatty acids (EPA and DHA)ಯುಕ್ತ ಫಿಶ್ ಆಯಿಲ್, ಹೆಚ್ಚು ಪ್ರೋಟೀನ್ ಇರುವ ಆಹಾರ ಕ್ರಮ ಅಗತ್ಯ.

λ ಶಾಶ್ವತ ಚಿಕಿತ್ಸೆ ಇದೆಯಾ? – ಇಲ್ಲ, ಆದರೆ, ವೈದ್ಯರ ಸಲಹೆಯಿಂದ ರೋಗ ನಿಯಂತ್ರಿಸಬಹುದು ಹಾಗೂ ತೀವ್ರತೆ ಹೆಚ್ಚಾಗದಂತೆ ತಡೆಯಬಹುದು.

λ ಸೋರಿಯಾಸಿಸ್‌ ನಿಂದ ಜೀವನದ ಮೇಲೆ ಪರಿಣಾಮ? – ಬಹುತೇಕ ರೋಗಿಗಳಲ್ಲಿ ರೋಗವು ಸೌಮ್ಯವಾಗಿದ್ದು,  ಇನ್ನಿತರರನ್ನು ಮಾನಸಿಕ ಒತ್ತಡಕ್ಕೆ ಗುರಿಪಡಿಸುತ್ತದೆ. ದೀರ್ಘಾವಧಿ ಕಾಯಿಲೆಯಾಗಿ ರುವುದರಿಂದ ರೋಗಿಗಳು  ಖಿನ್ನತೆಗೆ ಉಂಟಾಗುವ ಸಾಧ್ಯತೆ ಇರುತ್ತದೆ.

λ ಸೋರಿಯಾಟಿಕ್‌ ಆರ್ಥೈಟಿಸ್ ಇರುವವರು  ಯೋಗ ಮತ್ತು ವ್ಯಾಯಾಮ ಮಾಡಬಹುದೇ?

ನಿಜ ಸಂಗತಿ :  ಖಂಡಿತವಾಗಿಯೂ  ಮಾಡಬಹುದು.  ಮಧ್ಯಮ ಗತಿಯ,ಕ್ರಮಬದ್ದ ವ್ಯಾಯಾಮವು ವಾಸ್ತವವಾಗಿ ಸೋರಿಯಾಸಿಸ್ ಅನ್ನು ಕಡಿಮೆ ಮಾಡುತ್ತದೆ.

λ ಸೋರಿಯಾಸಿಸ್ ಇರುವ ಜನರು ಬಿಸಿಲಿಗೆ  ಹೋಗಬಾರದೇ?

ನಿಜ ಸಂಗತಿ : ಬೇಸಿಗೆಯಲ್ಲಿ ಸಾಮಾನ್ಯವಾಗಿ ಪರಿಸ್ಥಿತಿಯು ಸುಧಾರಿಸುತ್ತದೆ.ಬಿಸಿಲಿಗೆ ಒಡ್ಡಿಕೊಳ್ಳುವುದು ಪರಿಣಾಮಗೊಂಡ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಬಹುದು.

ಗಮನವಿರಲಿ : λ ಇದು ದೀರ್ಘಾವಧಿಯ ಚರ್ಮ ಸಂಬಂಧಿತ ಕಾಯಿಲೆ. λ ಚರ್ಮವನ್ನು ತೇವವಾಗಿಡಲು ನಿಯಮಿತವಾಗಿ ಮಾಯ್ಶ್ಚರೈಸರ್ ಬಳಸಿ. λ ಯೋಗ ಮತ್ತು ಧ್ಯಾನದೊಂದಿಗೆ ಆತಂಕವನ್ನು ಕಡಿಮೆ ಮಾಡಿ. λ ಸಮತೋಲಿತ ತೂಕವನ್ನು ಕಾಯ್ದುಕೊಳ್ಳಿ. λ ಸೋರಿಯಾಸಿಸ್‌ ಅಂಟು ಕಾಯಿಲೆ ಅಲ್ಲ. ಆದುದರಿಂದ ಇವರನ್ನು ತಾತ್ಸಾರ ಮಾಡಬೇಡಿ ಅಥವಾ     ದೂರವಿಡಬೇಡಿ. λ  ಸೋರಿಯಾಸಿಸ್‌ನೊಂದಿಗೆ ಬದುಕಲು ಸಮಾಧಾನದಿಂದ ಇದ್ದು ಜೀವನದ ಸಹಜ ಸ್ಥಿತಿಯೆಂದು    ಒಪ್ಪಿಕೊಳ್ಳಿ. λ ಜೀವನದ ಸಹಜ ಸ್ಥಿತಿಯೆಂದು ಒಪ್ಪಿಕೊಂಡು, ಸಮಾಧಾನದಿಂದ ಬದುಕುವುದನ್ನು ಕಲಿಯಿರಿ λ ಸೋರಿಯಾಸಿಸ್ ತೀವ್ರತೆ ವ್ಯಕ್ತಿಗತವಾಗಿದ್ದು, ಬೇರೆ ಯಾರಿಗೂ ಹೋಲಿಸದೆ ಸಮಾಧಾನವಿರಿಸಿ.

ಈ ಸ್ಥಿತಿಯನ್ನು ನೀವು ಒಬ್ಬರೇ ಎದುರಿಸಬೇಕಾಗಿಲ್ಲ. ಸೋರಿಯಾಸಿಸ್‌ನೊಂದಿಗೆ ಬದುಕುತ್ತಿರುವ ಅನೇಕರು ನಿಮ್ಮೊಂದಿಗೆ ಇದ್ದಾರೆ. ತಜ್ಞ ವೈದ್ಯರ ಸಹಾಯವನ್ನು ಪಡೆಯಿರಿ; ಅವರು ನಿಮ್ಮ ಸ್ಥಿತಿಯನ್ನು ಸುಧಾರಿಸಲು ಉತ್ತಮ ಮಾರ್ಗಗಳನ್ನು ಸೂಚಿಸುತ್ತಾರೆ. ಲಕ್ಷಾಂತರ ಜನರು ಸೋರಿಯಾಸಿಸ್‌ನ ಹೊರೆ ಹೊರುತ್ತಿದ್ದಾರೆ. ನಿಮ್ಮ ಚರ್ಮ ತಜ್ಞರ ಸಹಾಯದಿಂದ ನೀವು ಸುಧಾರಣೆಗೆ ಹೆಜ್ಜೆಯಿಡಬಹುದು.  ಎಲ್ಲರೂ ಕೈಜೋಡಿಸಿ, ಸೋರಿಯಾಸಿಸ್ ಬಗ್ಗೆ ಜಾಗೃತಿಗೆ ಹೆಜ್ಜೆ ಇಡೋಣ. ಮೂಢ ನಂಬಿಕೆಗಳನ್ನು ತೊಡೆದುಹಾಕಿ, ಆರೋಗ್ಯ ಸಮಾಜಕ್ಕಾಗಿ ಶ್ರಮಿಸೋಣ. ಸೋರಿಯಾಸಿಸ್‌ನಿಂದ ಬಳಲುವವರಿಗೆ ಸಹಾಯ, ತಿಳುವಳಿಕೆ ಮತ್ತು ಪ್ರೋತ್ಸಾಹ ನೀಡೋಣ. ಆರೋಗ್ಯಕರ ಸಮಾಜಕ್ಕಾಗಿ ಮೂಢ ನಂಬಿಕೆಗಳ ವಿರುದ್ಧ ಕೆಲಸ ಮಾಡೋಣ.

– ಡಾ|| ಸೂಗಾರೆಡ್ಡಿ, 

ಚರ್ಮರೋಗ ವಿಭಾಗದ ಮುಖ್ಯಸ್ಥರು,

ಜೆಜೆಎಂ ಮೆಡಿಕಲ್‌ ಕಾಲೇಜ್, ದಾವಣಗೆರೆ.

– ಡಾ|| ಯಶ್ವಂತ್ ಕಿರಣ್ ಎಸ್., 

ಚರ್ಮರೋಗ ಸ್ನಾತಕೋತ್ತರ ವಿದ್ಯಾರ್ಥಿ, ಜೆಜೆಎಂ ಮೆಡಿಕಲ್‌ ಕಾಲೇಜ್. ಮೊ: 87227 16158

error: Content is protected !!