ನವ ದುರ್ಗೆಯರ ಐದನೇ ರೂಪ
“ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ t ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ”
ಸಿಂಹದ ಮೇಲೆ ಕುಳಿತು ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದ ಸ್ಕಂದನ ತಾಯಿಯೇ, ನಮಗೆ ಯಾವಾಗಲೂ ಶುಭವನ್ನೇ ಮಾಡು.ಎಂಬುದು ಈ ಶ್ಲೋಕದ ಅರ್ಥ.
ಈ ರೂಪದ ದುರ್ಗಾದೇವಿ, ಮೂರು ಕಣ್ಣುಳ್ಳವಳು.ತೊಡೆಯ ಮೇಲೆ ಆರು ತಲೆಯ ಸುಬ್ರಹ್ಮಣ್ಯನನ್ನು ಕೂರಿಸಿಕೊಂಡು ಒಂದು ಕೈಯಲ್ಲಿ ಅವನನ್ನು ಹಿಡಿದುಕೊಂಡಿದ್ದಾಳೆ, ಒಂದು ಕೈಯಲ್ಲಿ ಅಭಯ ತೋರಿಸುತ್ತಾ, ಮತ್ತೆರಡು ಕೈಗಳಲ್ಲಿ ಕಮಲದ ಹೂ ಹಿಡಿದಿದ್ದಾಳೆ. ಈ ತಾಯಿಯ ಬಣ್ಣ ಬಿಳಿ ಅಥವಾ ಶುಭ್ರ ಬಣ್ಣ.
ತಾರಕಾಸುರನಿಂದ ತೊಂದರೆಗಳು ಬಹಳ ವಾಗಿದ್ದರಿಂದ ಮತ್ತು ಅವನು ಶಿವನ ಮಗನಿಂದ ತನಗೆ ಮೃತ್ಯು ಎಂದು ವರ ಬೇಡಿದ್ದರಿಂದ ದೇವತೆಗಳು ಕಾರ್ತಿಕೇಯನ ಜನನಕ್ಕಾಗಿ ಕಾಯುತ್ತಿದ್ದರು. ಒಮ್ಮೆ ಶಿವ ಮತ್ತು ಪಾರ್ವತಿಯರು ಧ್ಯಾನಸ್ಥರಾಗಿ ತಮ್ಮ ಶಕ್ತಿಗಳ ಸಮ್ಮಿಲನದಿಂದ ಒಂದು ದಿವ್ಯ ಶಕ್ತಿ ರೂಪಗೊಂಡಾಗ, ಇಂದ್ರನು ಅಗ್ನಿ ದೇವರಿಗೆ ಆ ಶಕ್ತಿಯನ್ನು ತೆಗೆದುಕೊಳ್ಳಲು ಆದೇಶಿಸಿದನು. ಇದನ್ನು ತಿಳಿದ ಪಾರ್ವತಿ ದೇವಿಯು, ಅಗ್ನಿ ಸ್ಪರ್ಶಿಸಿದ ಎಲ್ಲವೂ ಭಸ್ಮವಾಗಲಿ ಎಂದು ಶಪಿಸಿದಳು.ಈ ಶಾಪವು ಒಳ್ಳೆಯದು ಮತ್ತು ಕೆಟ್ಟದ್ದನ್ನು ಪರಾಮರ್ಶಿಸುವ ಶಕ್ತಿಯನ್ನು ಅಗ್ನಿ ಕಳೆದುಕೊಳ್ಳುವಂತೆ ಮಾಡಿತು.
ಪುರಾಣಗಳ ಪ್ರಕಾರ ಒಮ್ಮೆ ತನ್ನ ಮಗ ಕಾರ್ತಿಕೇಯನನ್ನು ರಕ್ಷಿಸಲು ಪಾರ್ವತಿ ದೇವಿಯು ಕೋಪಗೊಂಡು ಆದಿಶಕ್ತಿ ರೂಪದಲ್ಲಿ ಕಾಣಿಸಿಕೊಂಡಾಗ ಇಂದ್ರನು ಭಯದಿಂದ ನಡುಗುತ್ತಾ, ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ದೇವಿಯ ಕ್ಷಮೆಯನ್ನು ಕೇಳಿದನು. ಕುಮಾರ ಕಾರ್ತಿಕೇಯನ ಇನ್ನೊಂದು ಹೆಸರು ಸ್ಕಂದ ಆಗಿರುವುದರಿಂದ, ದೇವತೆಗಳೆಲ್ಲ ತಾಯಿಯನ್ನು ಸ್ಕಂದಮಾತಾ ಎಂದು ಕರೆದು ಸ್ತೋತ್ರ ಮಾಡಿ ಕೊಂಡಾಡಿದರು. ಅಂದಿನಿಂದ ಈ ದುರ್ಗಾ ರೂಪವನ್ನು ಸ್ಕಂದಮಾತಾ ಎಂದು ಕರೆಯುತ್ತಾರೆ.
ಕಾರ್ತಿಕೇಯನು ತಾರಕಾಸುರನನ್ನು ಸಂಹಾರ ಮಾಡಿ ಲೋಕವನ್ನು ಕಾಪಾಡಿದನು. ಇಂತಹ ಲೋಕ ಕಲ್ಯಾಣಕ್ಕೆ ಕಾರಣವಾದಂತಹ ರೂಪ ದೇವಿಯ ಸ್ಕಂದಮಾತಾ ರೂಪವಾಗಿದೆ
ಮಂಗಳಮಯವಾದ ಮಾತೃಸ್ವರೂಪಿಣಿಯಾದ ತಾಯಿಯ ರೂಪ, ಅತ್ಯಂತ ಶಕ್ತಿಶಾಲಿ ಮತ್ತು ವಾತ್ಸಲ್ಯ ತುಂಬಿದ ರೂಪವಾಗಿದೆ.ಈ ರೂಪವನ್ನು ಆರಾಧಿಸಿದರೆ ದೇವಿ ಮತ್ತು ಸುಬ್ರಮಣ್ಯ ಇಬ್ಬರ ಆರಾಧನೆಯು ಆಗುತ್ತದೆ ಮತ್ತು ಇಬ್ಬರ ಕೃಪೆಯು ನಮ್ಮ ಮೇಲೆ ಆಗುತ್ತದೆ.
ತನ್ನ ಭಕ್ತರಿಗೆ ತಾಯಿ ಶಕ್ತಿ ಸಂಪತ್ತುಗಳನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ. ಅವಳನ್ನು ಪೂಜೆ ಮಾಡಿದ ಅನಕ್ಷರಸ್ಥನೂ ಕೂಡ ಬುದ್ಧಿವಂತನಾಗುತ್ತಾನೆ . ನಿಸ್ವಾರ್ಥವಾಗಿ ಅವಳಲ್ಲಿ ಶರಣಾದವನಿಗೆ ತಾಯಿಯು ಸಕಲ ಸಂಪತ್ತನ್ನು ಕೊಟ್ಟು ಕಾಪಾಡುತ್ತಾಳೆ. ಆರಾಧಿಸುವ ಭಕ್ತನ ಹೃದಯವನ್ನು ಶುದ್ಧಗೊಳಿಸುತ್ತಾಳೆ. ಕಡೆಯದಾಗಿ ಮೋಕ್ಷ ನೀಡುತ್ತಾಳೆ ಎಂಬ ನಂಬಿಕೆ ಇದೆ.
ತನ್ನ ಮಗನನ್ನು ತೊಡೆಯ ಮೇಲೆ ಇಟ್ಟುಕೊಂಡಿರುವುದರಿಂದ ಅತ್ಯಂತ ಸಂತೋಷವಾಗಿ ಮತ್ತು ಹಿತಕರ ಭಾವನೆಯಿಂದ ಕಾಣಿಸಿಕೊಳ್ಳುತ್ತಾಳೆ.
ಈ ತಾಯಿಯು ಬುಧ ಗ್ರಹದ ಆಡಳಿತವನ್ನು ನೋಡಿಕೊಳ್ಳುತ್ತಾಳೆ. ಆದ್ದರಿಂದ ಕುಂಡಲಿಯಲ್ಲಿ ಬುಧ ಗ್ರಹ ದೋಷಗಳಿದ್ದರೆ ತಾಯಿಯ ಆರಾಧನೆಯಿಂದ ಅದು ನಿವಾರಣೆಯಾಗುತ್ತದೆ.
ವಿಶೇಷವಾಗಿ ಈ ದೇವಿಯನ್ನು ಕೆಂಪು ಮತ್ತು ಹಳದಿ ಹೂಗಳಿಂದ ಪೂಜಿಸಲಾಗುತ್ತದೆ. ಗುಲಾಬಿ ಹೂಗಳು ಬಹಳ ಇಷ್ಟ. ನವರಾತ್ರಿ ಐದನೆಯ ದಿನ ಷೋಡಶೋಪಚಾರ ಪೂಜೆಯನ್ನು ಮಾಡಿ ಆರತಿ ಮಾಡಬೇಕು. ಜೀವನದ ಸದ್ಗತಿಗೆ ಮತ್ತು ಅಧ್ಯಾತ್ಮಿಕ ಸಂತುಷ್ಟಿಗೆ ಸ್ಕಂದಮಾತೆಯ ಆರಾಧನೆ ಮಾಡಲಾಗುತ್ತದೆ.
ಕೆಟ್ಟ ಮಕ್ಕಳು ಲೋಕದಲ್ಲಿ ಇರುತ್ತಾರೆ ಆದರೆ ಕೆಟ್ಟ ತಾಯಿ ಎಂದೆಂದೂ ಇರುವುದಿಲ್ಲ. ತನ್ನ ಮಗು ಏನೇ ತಪ್ಪು ಮಾಡಿದರೂ, ಅವನನ್ನು ಕ್ಷಮಿಸಿ, ತಿದ್ದಿ ಬುದ್ದಿ ಹೇಳುವ ಕೆಲಸ ತಾಯಿಯದು. ಜಗತ್ತಿಗೇ ತಾಯಿಯಾಗಿರುವ ಈ ತಾಯಿಯು ತನ್ನ ಮಕ್ಕಳಾದ ನಮ್ಮ ಎಲ್ಲಾ ಅಪರಾಧಗಳನ್ನು ಕ್ಷಮಿಸಿ, ತನ್ನ ಮಡಿಲಲ್ಲಿಟ್ಟುಕೊಂಡು ಕಾಪಾಡುತ್ತಾಳೆ. ಶರಣಾಗತ ವತ್ಸಲೆ ಎಂದು ಕರೆಸಿಕೊಳ್ಳುವ ತಾಯಿಯು ಈ ರೂಪದಲ್ಲಿ ಕಾರುಣ್ಯಮಯಿಯಾಗಿ ಎಲ್ಲರನ್ನೂ ಕಾಪಾಡುತ್ತಾಳೆ. ಆದರೆ ದುಷ್ಟ ದೈತ್ಯರನ್ನು ಮಾತ್ರ ಅಷ್ಟೇ ಕಠೋರವಾಗಿ ಶಿಕ್ಷಿಸುತ್ತಾಳೆ. ಕಾರ್ತಿಕೇಯನು ಕೂಡ ದುಷ್ಟ ಶಿಕ್ಷಣಕ್ಕಾಗೇ ಹುಟ್ಟಿಬಂದಂತಹ ದಿವ್ಯ ಶಕ್ತಿ .ಅವನ ಆರಾಧನೆಯಿಂದಲೂ ಕೂಡ ನಮಗೆ ಸನ್ಮಂಗಳವಾಗುತ್ತದೆ.ಇಂತಹ ತಾಯಿಯನ್ನು ಭಕ್ತಿ ಶ್ರದ್ಧೆಗಳಿಂದ ಆರಾಧಿಸೋಣ ಮತ್ತು ಅವಳ ಮತ್ತು ಸ್ಕಂದನ ಕೃಪೆಗೆ ಪಾತ್ರರಾಗೋಣ ಎಂದು ಪ್ರಾರ್ಥಿಸುತ್ತೇನೆ.
– ಡಾ. ರೂಪಶ್ರೀ ಶಶಿಕಾಂತ್, ದಾವಣಗೆರೆ.