ನವ ದುರ್ಗೆಯರ ಮೂರನೇ ರೂಪ
“ಪಿಂಡಯಾ ಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ
ಪ್ರಸಾದಂ ತನುತೇ ಮಹ್ಯಂ ಚನ್ದ್ರಘಂಟೇತಿ ವಿಶ್ರುತಾ”
ಚಂದ್ರಘಂಟಾ ಎಂಬ ಹೆಸರಿನ ದೇವಿಯೇ, ನೀನು ಸಿಂಹ ವಾಹಿನಿಯಾಗಿ ಅನೇಕ ಆಯುಧಗಳನ್ನು ಹಿಡಿದಿದ್ದೀಯೇ, ನನ್ನ ಮೇಲೆ ಪ್ರಸನ್ನಳಾಗಿ ನನಗೆ ನಿನ್ನ ಪ್ರಸಾದವನ್ನು ನೀಡು ಎಂಬುದು ಈ ಶ್ಲೋಕದ ಅರ್ಥ.
ನವದುರ್ಗೆಯರ ಮೂರನೇ ರೂಪ ಚಂದ್ರಘಂಟಾ ದೇವಿ. ಇವಳಿಗೆ 10 ಕೈಗಳು , ಸಿಂಹ ವಾಹನದ ಮೇಲೆ ಕುಳಿತಿರುತ್ತಾಳೆ, ಮೂರನೇ ಕಣ್ಣು ಯಾವಾಗಲೂ ತೆರೆದಿರುತ್ತದೆ ಮತ್ತು ದೈತ್ಯರ ಸಂಹಾರವನ್ನು ಮಾಡುತ್ತದೆ.
ಹತ್ತು ಕೈಗಳಲ್ಲಿ, ತ್ರಿಶೂಲ,ಖಡ್ಗ,ಗಧೆ ಬಿಲ್ಲು, ಬಾಣ, ಕಮಲದ ಹೂವು, ಗಂಟೆ, ಜಪಮಣಿ, ಕಮಂಡಲ ಮತ್ತು ಒಂದು ಕೈಯಲ್ಲಿ ಅಭಯ ಮುದ್ರೆ ತೋರಿಸುತ್ತಾಳೆ. ಇವಳನ್ನು ಚಂದ್ರಿಕಾ,ಚಂಡಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಪೀತಾಂಬರವನ್ನು ಉಟ್ಟಿರುವ ತಾಯಿ, ಹಣೆಯ ಮೇಲೆ ಘಂಟೆಯನ್ನು ಚಿತ್ರಿಸುವ ಅರ್ಧಚಂದ್ರ ಧರಿಸುತ್ತಾಳೆ.ಆದ್ಧರಿಂದ ಅವಳಿಗೆ ಚಂದ್ರಘಂಟಾ ಎಂದು ಹೆಸರು.
ಘಂಟಾ ನಾದದಿಂದ ದುಷ್ಟ ಶಕ್ತಿಗಳು ದೂರ ಹೋಗುತ್ತವೆ. ಚಂದ್ರಘಂಟಾ ದೇವಿಯು ಇರುವ ಕಡೆ ದುಷ್ಟ ಶಕ್ತಿಗಳು ಬರುವುದಿಲ್ಲ.ಚಂದ್ರಘಂಟಾ ದೇವಿ ಯುದ್ಧ ಸಮಯದಲ್ಲಿ ಮಾಡಿದ ಘಂಟಾನಾದದ ಗುಡುಗಿನ ಶಬ್ದ ರಾಕ್ಷಸರನ್ನು ಪಾರ್ಶ್ವವಾಯುಗೆ ಒಳಪಡಿಸಿ ದಿಗ್ಭ್ರಮೆಗೊಳಿಸಿತು ಎನ್ನುತ್ತಾರೆ.
ಯುದ್ಧಕ್ಕೆ ಸಿದ್ಧಳಾದ ದೇವಿಯಾದರೂ ಕಾರುಣ್ಯ ಸ್ವರೂಪಿಣಿಯಾಗಿದ್ದಾಳೆ ಮತ್ತು ತನ್ನ ಭಕ್ತರಿಗೆ ಶಾಂತಿ, ನೆಮ್ಮದಿ, ಸಮಾಧಾನಗಳನ್ನು ಕೊಡುವ ದೇವಿಯಾಗಿದ್ದಾಳೆ.
ಪುರಾಣದ ಕಥೆಯ ಪ್ರಕಾರ, ತನ್ನನ್ನು ತಪಸ್ಸಿನಿಂದ ಒಲಿಸಿಕೊಂಡ ಪಾರ್ವತಿಯನ್ನು ವರಿಸಲು ಶಿವನು ತನ್ನ ಅತ್ಯಂತ ಘೋರವಾದ ನಿಜರೂಪದಿಂದ , ಗಣಗಳ ಸಹಿತನಾಗಿ ಪಾರ್ವತಿಯ ಮನೆಗೆ ಮದುವೆಗಾಗಿ ಬಂದಾಗ, ಪಾರ್ವತಿಯ ತಾಯಿ ಮೈನಾವತಿ ಶಿವನ ರೂಪವನ್ನು ನೋಡಿ ಮೂರ್ಛೆ ಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ದೇವಿಯ ರೂಪದಿಂದ ಅವತರಿಸಿ ಶಿವನನ್ನು ರಾಜಕುಮಾರನಂತೆ ಬರಲು ಪ್ರಾರ್ಥಿಸುತ್ತಾಳೆ. ಆಗ ಶಿವನು ಅತ್ಯಂತ ಸುಂದರ ರೂಪದಿಂದ ಬಂದು ಅವಳನ್ನು ವಿವಾಹವಾಗುತ್ತಾನೆ.
ಚಂದ್ರಘಂಟಾ ದೇವಿಯ ರೂಪವು, ದೇವಿಯ ವೈವಾಹಿತ ರೂಪ.ಅತ್ಯಂತ
ಸುಂದರ ರೂಪ.
ಶಿವಪುರಾಣದ ಪ್ರಕಾರ ಚಂದ್ರಶೇಖರ ರೂಪದ ಶಿವನ ಶಕ್ತಿ “ಚಂದ್ರಘಂಟಾ”.ಶಿವ ಶಕ್ತಿಯರು ಸೇರಿರುವ ರೂಪ ಅರ್ಧನಾರೀಶ್ವರ.
ಯೋಗ ಸಾಧನೆಗೆ ಈ ದೇವಿಯನ್ನು ಮಣಿಪೂರಕ ಚಕ್ರದಲ್ಲಿ ಧ್ಯಾನಿಸುತ್ತಾರೆ.ಇದರಿಂದ ಬೇಗ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.ಮಣಿಪೂರ ಚಕ್ರ ಅವಳ ವಾಸಸ್ಥಾನ.
ದುಷ್ಟ ಜನರನ್ನು ಭಸ್ಮ ಮಾಡುವ ಕಣ್ಣುಳ್ಳ ಈ ತಾಯಿಯು, ಶಿಷ್ಟ ಜನರನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ತಾಯಿಯ ಕೃಪಾಕಟಾಕ್ಷ ಒಂದು ನಮ್ಮ ಮೇಲಿದ್ದರೆ ಯಾವ ಕಷ್ಟ ಕಾರ್ಪಣ್ಯಗಳು ಬರುವುದಿಲ್ಲ.
ಶಾಂತಿ, ನೆಮ್ಮದಿ ಎರಡು ಮಾನವನಿಗೆ ಅತೀ ಮುಖ್ಯ . ಎಷ್ಟು ದುಡ್ಡಿದ್ದರೂ ಇದನ್ನು ಕೊಳ್ಳಲು ಸಾಧ್ಯವಿಲ್ಲ .ಮನಃಶ್ಯಾಂತಿ ಇಲ್ಲದಿದ್ದರೆ ಏನಿದ್ದರೂ ಸಂತೋಷವಿರುವುದಿಲ್ಲ. ಶಂ ಎಂದರೆ ಆನಂದ, ಅಂತ ಎಂದರೆ ಅದರ ತುತ್ತ ತುದಿ. ಶಾಂತಿ ಎಂದರೆ ಆನಂದದ ಅತ್ಯಂತ ಎತ್ತರದ ಸ್ತರ. ಇದನ್ನು ಆ ದೇವಿ ದಯಪಾಲಿಸುತ್ತಾಳೆ.ಇಂತಹ ಚಂದ್ರಘಂಟಾದೇವಿಯು ನಮ್ಮನ್ನೆಲ್ಲಾ ರಕ್ಷಿಸಲಿ ಎಂದು ಪ್ರಾರ್ಥಿಸುತ್ತಾ, ನಾವು ದೇವಿಯ ರೂಪವನ್ನು ಧ್ಯಾನ ಮಾಡೋಣ, ಸ್ತುತಿಸೋಣ ಶರಣಾಗೋಣ.
– ಡಾ. ರೂಪಶ್ರೀ ಶಶಿಕಾಂತ್, ದಾವಣಗೆರೆ.