`ರಾಕ್ಷಸ ಬರಲೇ ಇಲ್ಲ ??’

`ರಾಕ್ಷಸ ಬರಲೇ ಇಲ್ಲ ??’

ಚಳಿಗಾಲ ಬಂತೆಂದರೆ ನಮಗೆ ನೆನಪಾಗುವುದು ಆರ್ಟಿಸ್ಟ್ ಕಂಬೈನ್ ಅವರ ನಾಟಕೋತ್ಸವ. ಸುಮಾರು 60 ವರ್ಷಗಳ ಹಿಂದೆ ದಾವಣಗೆರೆಯ ರಾಜನಹಳ್ಳಿ ಹನುಮಂತಪ್ಪನವರ ಧರ್ಮಛತ್ರದ ಬಲಪಕ್ಕದಲ್ಲಿದ್ದ ಸುನಂದರಂಗ ಮಂಟಪ ಅಂದರೆ ಈಗ ರಾಜನಹಳ್ಳಿ ಜನಾಬಾಯಿ ಆರ್.ಆರ್.ಶ್ರೀನಿವಾಸ ಮೂರ್ತಿ ಧರ್ಮಶಾಲಾ ಕಟ್ಟಡ ಇರುವ ಸ್ಥಳ. ಸುನಂದಮ್ಮನವರು ಎಂದರೆ ಧರ್ಮ ಪ್ರವರ್ತ ರಾಜನಹಳ್ಳಿ ಹನುಮಂತಪ್ಪನವರ ಮೊಮ್ಮಗಳು, ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟರ ಮಗಳು, ಆರ್.ಆರ್.ಶ್ರೀನಿವಾಸಮೂರ್ತಿರವರ ಸಹೋದರಿ. ಇವರು ಚನ್ನಗಿರಿ ವಿರೂಪಾಕ್ಷಪ್ಪನವರ ಮೊದಲ ಧರ್ಮಪತ್ನಿಯವರು. ಈ ಸುನಂದ ರಂಗಮಂಟಪದಲ್ಲಿ ನಡೆದ ಅನೇಕ ಮಹತ್ತರ ಕಾರ್ಯಕ್ರಮಗಳ ಬಗ್ಗೆ ಮುಂದೊಮ್ಮೆ ಬರೆಯುವೆ.

ಆರ್ಟಿಸ್ಟ್ ಕಂಬೈನ್ ಅವರ ವತಿಯಿಂದ ಸುಮಾರು ಒಂದು ವಾರದ ಕಾಲ ಪ್ರತಿದಿನ ಸಂಜೆ `ಕೈಲಾಸಂ ಸ್ಮಾರಕ ಮಕ್ಕಳ ನಾಟಕೋತ್ಸವ’, `ಹಿರಣ್ಣಯ್ಯ ಸ್ಮಾರಕ ಹಿರಿಯರ ನಾಟಕೋತ್ಸವ’ ನಡೆಯುತ್ತಿತ್ತು. ನಮಗೆ ಪರಿಚಿತರಾಗಿದ್ದ ಭದ್ರಾ ನೀರಾವರಿ ಇಲಾಖೆಯ  ಹುದ್ದೆಯಲ್ಲಿದ್ದ  ಎಂ.ಮೇಲಗಿರಿಯವರು ಸಹಾ ಆರ್ಟಿಸ್ಟ್ ಕಂಬೈನ್‌ನಲ್ಲಿ ಇದ್ದರು. ಹವ್ಯಾಸಿ ನಾಟಕ ತಂಡಗಳೇ ಇದರಲ್ಲಿ ಭಾಗವಹಿಸುತ್ತಿದ್ದು, ಉತ್ತಮ ನಾಟಕಗಳಿಗೆ ಬಹುಮಾನವೂ ಇರುತ್ತಿತ್ತು. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲೇ ಈ ನಾಟಕೋತ್ಸವ ನಡೆಯುತ್ತಿದ್ದು, ಚಳಿಯಲ್ಲೂ ರಂಗಮಂದಿರದ ಬಯಲಿನಲ್ಲಿ ಕುಳಿತು ನಾಟಕ ನೋಡಲು ಜನ ಕಿಕ್ಕಿರಿದು ಸೇರುತ್ತಿದ್ದರು. ಹೆಚ್ಚಾಗಿ ಹೋಗುತ್ತಿದ್ದುದು ಹಳೆ ದಾವಣಗೆರೆಯ ಮಂದಿಯೇ.

ಶಾಲಾ ವಿದ್ಯಾರ್ಥಿಗಳಿಗೆ ಏಳು ದಿನಗಳ ಸೀಸನ್ ಟಿಕೆಟ್ ಸಹಾ ರಿಯಾಯಿತಿ ದರದಲ್ಲಿ ನೀಡಲಾಗುತ್ತಿತ್ತು. 

ಬಾಲ್ಯದಲ್ಲಿ  ನಾನು,  ನನ್ನ ಅಣ್ಣ ಹೆಚ್.ಆನಂದರಾಮ ಶಾಸ್ತ್ರಿ (ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಖ್ಯಾತ ಬರಹಗಾರರು) ನಮ್ಮ ಅಕ್ಕ ಹೆಚ್.ಬಿ.ಮುಕ್ತಾ (ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕವಯತ್ರಿ) ಹಾಗೂ ಟಿ.ಗಿರಿಜಾ (ಖ್ಯಾತ ಲೇಖಕಿ) ನಾವೆಲ್ಲಾ ಒಟ್ಟಾಗಿ ಹಳೆ ದಾವಣಗೆರೆಯ ಚೌಕಿಪೇಟೆಯಿಂದ ಸಂಜೆ ಕತ್ತಲಾಗುತ್ತಿದ್ದಂತೆ ರೈಲ್ವೆ ನಿಲ್ದಾಣ ದಾಟಿ ಸುನಂದ ರಂಗಮಂಟಪಕ್ಕೆ ಸಡಗರದಿಂದ ಹೋಗುತ್ತಿದ್ದೆವು.                  ಆಗ ರೈಲ್ವೆ ನಿಲ್ದಾಣದ ಹೊರಭಾಗದ ಉತ್ತರ ದಿಕ್ಕಿನಿಂದ ದಕ್ಷಿಣ ದತ್ತ ಹೋಗಲು ಹಳೆಯದಾದ ಓವರ್ ಬ್ರಿಡ್ಜ್ ಇದ್ದದ್ದು ಈಗಲೂ ಇದೆ. ಆದರೆ, ರೈಲ್ವೆ ನಿಲ್ದಾಣದೊಳಗೆ ಈ ಕಡೆಯಿಂದ ಆ ಕಡೆ ದಾಟಲು ಮತ್ತೊಂದು ಓವರ್ ಬ್ರಿಡ್ಜ್ ಸಹ ಇತ್ತು. ಎರಡು ಪ್ಲಾಟ್ ಫಾರ್ಮ್‌ಗಳ ಹಳಿಗಳ ಮಧ್ಯದಲ್ಲಿ ಕಬ್ಬಿಣದ ಕಂಬಗಳ ಬೇಲಿ ಇತ್ತು. ಬ್ರಿಡ್ಜ್ ಹತ್ತಿ ಇಳಿಯಲು ಒಲ್ಲದ ಮಕ್ಕಳು ಒಮ್ಮೊಮ್ಮೆ ದೊಡ್ಡವರು ಸಹಾ ಆ ಬೇಲಿಯ ಪ್ರತಿ ಎರಡು ಕಂಬಗಳ ಮಧ್ಯೆ ತಲೆ ತೂರಿಸಿ ನೋಡಿ ಎಲ್ಲಿ ತಲೆ ತೂರುವುದೋ ಅಲ್ಲಿ ಮೈ ಸಹಾ ತೂರುವುದೆಂದು ಖಾತ್ರಿ ಮಾಡಿಕೊಂಡು ದಾಟುತ್ತಿದ್ದರು!.

ಕೈಲಾಸಂ ಸ್ಮಾರಕ ಮಕ್ಕಳ ನಾಟಕಗಳು ಸುಮಾರಾಗಿ ಅರ್ಧ ಗಂಟೆಯ ಅವಧಿಯದಾಗಿದ್ದು, ಸಾಮಾನ್ಯವಾಗಿ ಗುಂಡಣ್ಣ ಮುಂತಾದವರ ತಿಳಿ ಹಾಸ್ಯ ನಾಟಕಗಳೇ ಇರುತ್ತಿದ್ದವು. ಮೊದಲು ಮಕ್ಕಳ ನಾಟಕಗಳಾದ ಮೇಲೆ ಹಿರಣ್ಣಯ್ಯ ಸ್ಮಾರಕ ದೊಡ್ಡವರ ನಾಟಕಗಳ ಪ್ರಸ್ತುತಿ ನಡೆಯುತ್ತಿತ್ತು. `ವಿಷಜ್ವಾಲೆ’ ಮುಂತಾದ ಐತಿಹಾಸಿಕ ಹಾಗೂ ಸಾಮಾಜಿಕ ಗಂಭೀರ ಮತ್ತು ಹಾಸ್ಯ ನಾಟಕಗಳು ಇರುತ್ತಿದ್ದವು.                   ಮಕ್ಕಳ ನಾಟಕಗಳಿಗಿಂತ ದೊಡ್ಡವರ ನಾಟಕಗಳಿಗೆ ಹೆಚ್ಚು ಸಮಯ ಕೊಡಲಾಗುತ್ತಿತ್ತು.

ಪ್ರತಿನಿತ್ಯ ನಾಟಕ ನೋಡಿ ಕೊನೆಯ ದಿನ ಎಲ್ಲಾ ನಾಟಕಗಳ ಕುರಿತು ವಿಮರ್ಶೆ ಬರೆಯುವುದು ಹಾಗೂ ಉತ್ತಮ ವಿಮರ್ಶೆಗೆ ಬಹುಮಾನ ಸಹಾ ನೀಡಲಾಗುತ್ತಿತ್ತು. ನಾಟಕ ನೋಡುತ್ತಲೇ ಟಿ.ಗಿರಿಜಾ ಹಾಗೂ ನಮ್ಮ ಅಣ್ಣ ಮತ್ತು ಅಕ್ಕ ಅಲ್ಲೇ ಪರಸ್ಪರ ಮಾತನಾಡಿ ಕೊಳ್ಳುತ್ತಾ ಅಭಿಪ್ರಾಯ ವಿನಿಮಯ ಮಾಡಿ ಕೊಳ್ಳುತ್ತಿದ್ದರು. ಟಿ. ಗಿರಿಜಾರವರು ತಮ್ಮೊಡನೆ ತಂದ ನೋಟ್ ಬುಕ್ ಒಂದರಲ್ಲಿ ಅದನ್ನೆಲ್ಲಾ ಬರೆದುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಪ್ರತಿ ವರ್ಷವೂ ಟಿ.ಗಿರಿಜಾ ಅವರ ವಿಮರ್ಶೆಗೆ ಬಹುಮಾನ ಇದ್ದೇ ಇರುತ್ತಿತ್ತು.                             

ಈ ನಾಟಕೋತ್ಸವದ ವಿಶೇಷವೆಂದರೆ ರಾಜ್ಯದ ಬೇರೆ ಬೇರೆ ಕಡೆಗಳಿಂದಲೂ ತಂಡಗಳು ಬಂದಂತೆ ಮಂಗಳೂರಿನಿಂದಲೂ `ಕಡಲನಾಡ ಕಲಾವಿದರು’ ಎಂಬ ತಂಡ ಹಾಗೂ ಮತ್ತೊಂದು ತಂಡ ಬರುತ್ತಿತ್ತು. ಈ ತಂಡದವರ ಸಾಮಾಜಿಕ ಹಾಗೂ ಐತಿಹಾಸಿಕ ನಾಟಕಗಳು ಯಾವ ವೃತ್ತಿರಂಗ ಭೂಮಿಯವರ ನಾಟಕಗಳಿಗಿಂತಲೂ ಕಡಿಮೆ ಇರದೇ, ಹಾಗೆ ನೋಡಿದರೆ ಒಂದು ಗುಂಜಿ ಮತ್ತೂ ಚೆನ್ನಾಗೇ ಇರುತ್ತಿತ್ತು!. ಅದರಲ್ಲೂ `ಚಿತ್ರ’ ಎಂಬ ನಾಯಕಿ ಪ್ರಧಾನವಾದ ಅವರ ಪತ್ತೇದಾರಿ ಸಾಮಾಜಿಕ ನಾಟಕವೊಂದು ಹಾಗೂ ಬಹಳ ವಿಶೇಷವಾಗಿ ಅವರ `ಚಾಣಕ್ಯ ಚಂದ್ರಗುಪ್ತ’ ನಾಟಕವಂತೂ ಅಭಿನಯ, ವೇಷಭೂಷಣ, ರಂಗ ಸಜ್ಜಿಕೆ, ಸಂಗೀತ, ಸಾಹಿತ್ಯ, ಸಂಭಾಷಣೆ ಎಲ್ಲದರಲ್ಲೂ ಅದ್ಭುತವಾಗಿರುತ್ತಿತ್ತು. ಸಾಮಾನ್ಯವಾಗಿ ಪ್ರತಿ ವರ್ಷವೂ ಅವರಿಗೇ ಪ್ರಥಮ ಬಹುಮಾನ ಹೋಗುತ್ತಿತ್ತು. ಕೊನೆಗೆ ಆಯೋಜಕರ ವಿನಂತಿಯ ಮೇರೆಗೆ ಅವರು ಪ್ರದರ್ಶನ ಕೊಡುತ್ತಿದ್ದರೇ ವಿನಃ ಸ್ಪರ್ಧೆಯಿಂದ ಹೊರಗಿರುತ್ತಿದ್ದರು.

ಮಂಗಳೂರಿನ ಇವರ ತಂಡದ ನಾಟಕ ಗಳಿದ್ದ ದಿನ ಸೀಸನ್ ಟಿಕೆಟಿಗೆ ಪ್ರವೇಶವಿಲ್ಲದೇ ಅಂದಿನ ನಾಟಕಕ್ಕೆ ವಿಶೇಷ ಟಿಕೆಟ್ ದರ ಸಹಾ ಕೆಲವೊಮ್ಮೆ ನಿಗದಿ ಮಾಡಲಾಗುತ್ತಿತ್ತು!!. ಸುನಂದ ರಂಗಮಂಟಪದ ಮುಂದಿನ ಬಯಲಲ್ಲಿ ಜಮಖಾನ ಹಾಸಿ ಕೂರಲು ವ್ಯವಸ್ಥೆ ಮಾಡಲಾಗಿರುತ್ತಿತ್ತು, ಹಿಂಭಾಗದಲ್ಲಿ ಮರದ ಬೆಂಚುಗಳನ್ನೂ ಹಾಕಲಾಗಿರುತ್ತಿತ್ತು.

ಪ್ರೇಕ್ಷಕರ ಹಾಗೂ ಆಯೋಜಕರ ಒತ್ತಾಯದ ಮೇರೆಗೆ ಮಂಗಳೂರಿನ ಕಡಲನಾಡ ಕಲಾವಿದರು `ಚಾಣಕ್ಯ’ ನಾಟಕವನ್ನು ಮರು ವರ್ಷವೂ ಅಭಿನಯಿಸುವವರಿದ್ದರು. ಈ ನಾಟಕದ ಚಾಣಕ್ಯ, ಚಂದ್ರಗುಪ್ತ ಅಷ್ಟೇ ಮುಖ್ಯವಾಗಿ `ಅಮಾತ್ಯ ರಾಕ್ಷಸನ’ ಅಭಿನಯಗಳ ಬಗ್ಗೆ ನಾವು ಮಾತನಾಡುತ್ತಿದ್ದುದನ್ನು ಕೇಳಿದ ನಮ್ಮ ಬೀದಿಯ ಕೆಲ ಮಕ್ಕಳು ಅಂದು ನಾಟಕ ನೋಡಲು ನಮ್ಮೊಡನೆ ಬಂದರು. ನಾಟಕ ನೋಡಿ ಖುಷಿ ಪಟ್ಟರು. ಆದರೆ, ಒಬ್ಬ ಹುಡುಗ ಬಹುಷಃ ಶಿವಯೋಗಿ ಇರಬೇಕು, `ರಾಕ್ಷಸ ಬರಲೇ ಇಲ್ವಲ್ಲ ?? ನಾನು ನೋಡಬೇಕಿತ್ತು’.. ಎಂದ. ಟಿ.ಗಿರಿಜಾ ಹೇಳಿದರು. `ಲೇ ಶಿವೂ, ರಾಕ್ಷಸ ಅಂದ್ರೆ ಕೋರೆ ದಾಡಿ ಇರಾ ರಾಕ್ಷಸ ಅಲ್ಲಪ್ಪ, ಈ ನಾಟಕದಾಗೆ ರಾಜನ ಮಹಾಮಂತ್ರಿ ಇದ್ನಲ್ಲ ಅವನ ಹೆಸರೇ ಅಮಾತ್ಯ ರಾಕ್ಷಸ’ ಎಂದರು. ಶಿವಯೋಗಿ `ಹೌದಾ!! ನಾನು ಭಾರೀ ರಾಕ್ಷಸ ಬರ್ತೈತಿ ಅದನ್ನು ನೋಡಬೇಕು ಅಂತಾನೆ ಬಂದಿದ್ದೆ’ ಎಂದ.                     

–  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!