`ಅಂಚೆ ಅಣ್ಣಪ್ಪನ ಬತ್ತಾಸು ಬಟವಾಡೆ ?!’

`ಅಂಚೆ ಅಣ್ಣಪ್ಪನ ಬತ್ತಾಸು ಬಟವಾಡೆ ?!’

ವರ್ತಕರು ದೀಪಾವಳಿ ಪೂಜೆಗೆ ತಮಗೆ ಬೇಕಾದ ತೆರಿಗೆ ಇಲಾಖೆಯ ಅಧಿಕಾರಿಗಳನ್ನು, ಬ್ಯಾಂಕ್ ಮ್ಯಾನೇಜರ್‌ಗಳನ್ನು, ಆಡಿಟರ್‌ಗಳನ್ನು, ವಕೀಲರುಗಳನ್ನು ಕರೆದು ಆದರಿಸುವುದು ಸ್ವಾಭಾವಿಕ. ನಮ್ಮ ಬಾಲ್ಯದ ದಿನಗಳಲ್ಲಿ ಪೋಸ್ಟ್ ಮ್ಯಾನ್‌ಗಳನ್ನು, ಟೆಲಿಫೋನ್ ಆಪರೇಟರ್‌ಗಳನ್ನು, ಟೆಲಿಗ್ರಾಂ ತಂದು ಕೊಡುವವರನ್ನೂ ಸಹ ವರ್ತಕರು ದೀಪಾವಳಿ ಪೂಜೆಗೆ ಕರೆದು ವಿಶೇಷವಾಗಿ ಆದರಿಸುತ್ತಿದ್ದರು. ಕಾರಣ ಆಗ ಈಗಿನಂತೆ ಯಾವುದೇ ಆಧುನಿಕ ಸಂಪರ್ಕ ಮಾಧ್ಯಮಗಳಿರಲಿಲ್ಲ. ಹುಂಡಿಗಳಾಗಲೀ ಚೆಕ್‌ಗಳಾಗಲೀ ಪೋಸ್ಟ್ ಮುಖಾಂತರವೇ ಕಳಿಸಬೇಕಿತ್ತು ಹಾಗೂ ತರಿಸಬೇಕಾಗಿತ್ತು. 

ಟೆಲಿಗ್ರಾಂ ಸಹಾ ವ್ಯಾಪಾರ ವ್ಯವಹಾರಕ್ಕೆ ಅಷ್ಟೇ ಅವಶ್ಯವಾಗಿತ್ತು. ಅದು ಮೊಬೈಲ್ ಇಂಟರ್ನೆಟ್, ಇ-ಮೇಲ್ ಯಾವುದೂ ಇಲ್ಲದ ಕಾಲ. ಟೆಲಿಫೋನ್ ಮುಖಾಂತರವೇ ವ್ಯವಹಾರವೆಲ್ಲಾ ನಡೆಯಬೇಕಿತ್ತು. ಫೋನುಗಳಿಗೆ ನೇರ ಡಯಲಿಂಗ್ ವ್ಯವಸ್ಥೆಯೂ ಇರಲಿಲ್ಲ. ಟ್ರಂಕ್ ಕಾಲ್ ಲೈಟನಿಂಗ್ ಕಾಲ್‌ಗಳು ಇರಲಿ ಲೋಕಲ್ ಕಾಲ್‌ಗೂ ಸಹಾ ಟೆಲಿಫೋನ್ ಎಕ್ಸ್‌ಚೇಂಜ್‌ನ ಆಪರೇಟರ್ ಮೂಲಕ ಸಂಪರ್ಕ ಪಡೆದು ಮಾತನಾಡಬೇಕಿತ್ತು. 

ದೇವಸ್ಥಾನದಿಂದ ತಂದ ಹೂವುಗಳನ್ನು ಅಂಗಡಿಯ ಟೆಲಿಫೋನುಗಳ ಮೇಲೆ ಇಟ್ಟು ಭಕ್ತಿಯಿಂದ ಕೈಮುಗಿಯುವುದು ವರ್ತಕರ ಅಂಗಡಿಗಳಲ್ಲಿ ರೂಢಿಯಲ್ಲಿತ್ತು. 

ಈ ಪದ್ಧತಿ ಡಾ. ಶಾಮನೂರು ಶಿವಶಂಕರಪ್ಪನವರ ಚೌಕಿಪೇಟೆಯ ಕಲ್ಲಪ್ಪ ಅಂಡ್ ಸನ್ಸ್ ಅಂಗಡಿಯಲ್ಲಿ ಈಗಲೂ ರೂಢಿಯಲ್ಲಿದೆ. ಪೋಸ್ಟ್‌ಮ್ಯಾನ್‌ಗಳಿಗೆ, ಟೆಲಿಗ್ರಾಂ ತಂದು ಕೊಡುವವರಿಗೆ, ಟೆಲಿಫೋನ್ ಆಪರೇಟರ್ ಗಳಿಗೆ  ಸಹಾ ದೀಪಾವಳಿ ಪೂಜೆಯಲ್ಲಿ ವರ್ತಕರಿಂದ ವಿಶೇಷ ಮನ್ನಣೆ, ಅಂದರೆ ಎಲೆ ಅಡಿಕೆಯ ಮೇಲೆ ಒಂದು ಮೂಸುಂಬೆ ಹಣ್ಣು ಅಥವಾ ಬಾಳೆಹಣ್ಣು ನಾಲ್ಕಾರು ಚಿಕ್ಕ ಬತ್ತಾಸುಗಳು ಹಾಗೂ ಒಂದೋ ಎರಡೋ ರೂಪಾಯಿ ಇಟ್ಟುಕೊಡುವುದೇ ವಿಶೇಷ. 

 

ಸಕ್ಕರೆ ಪಾಕದಿಂದ ಮಾಡುವ ಬೆಂಡು ಬತ್ತಾಸುಗಳು ಆಗ ದೀಪಾವಳಿ ಪೂಜೆಯಲ್ಲಿ ಹೆಚ್ಚಾಗಿ ಎಲ್ಲರೂ ಬಳಸುತ್ತಿದ್ದರು. ಹಳೆ ಊರಿನ ಬಿ.ಟಿ.ಗಲ್ಲಿ ಚೌಡೇಶ್ವರಿ ದೇವಸ್ಥಾನದ ಪಕ್ಕದ ಶಾಮನೂರು ಸೀನಪ್ಪ (ಶ್ರೀನಿವಾಸ ಶೆಟ್ರು ಲಕ್ಷ್ಮಿನಾರಾಯಣ ಶೆಟ್ಟ) ರ ಮನೆಯ  ಹಿಂಭಾಗದಲ್ಲಿ ಬೆಂಡು ಬೆತ್ತಾಸು ಮಾಡುವ ಕೈಗಾರಿಕೆಯೂ ಇತ್ತು.

ಈಗಿನಂತೆ ಸ್ವೀಟ್‌ ಬಾಕ್ಸ್‌ಗಳು, ಡ್ರೈ ಫ್ರೂಟ್ ಪ್ಯಾಕ್‌ಗಳು ಉಡುಗೊರೆಗಳು ಆಗ ಅಷ್ಟಾಗಿ ರೂಢಿಯಲ್ಲಿ ಇರಲಿಲ್ಲ. ಹಳೇ ಊರಿನ ಪ್ರಮುಖ ಬೀದಿಗಳಾದ ತಂಬಾಕುಪೇಟೆ, ಚೌಕಿಪೇಟೆ, ಚಾಮರಾಜಪೇಟೆ ಭಾಗದ ಪೋಸ್ಟ್ ಮ್ಯಾನ್ ಅಣ್ಣಪ್ಪ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ನಗು ಮೊಗದ ಅಣ್ಣಪ್ಪ ಜನಪ್ರಿಯ.

ಒಮ್ಮೆ ದೀಪಾವಳಿಯ ಮರುದಿನ ಅಣ್ಣಪ್ಪ ಅಂಚೆ ಬಟವಾಡೆಗೆ (ಹಂಚುವುದು) ಬಂದಾಗ ಬೀದಿಯ ಮಕ್ಕಳೆಲ್ಲಾ ಆತನ ಸುತ್ತ ಸೇರಿದ್ದರು?!. ಮಕ್ಕಳಿಗೆಲ್ಲಾ ಅಣ್ಣಪ್ಪ ತನ್ನ ಹೆಗಲ ಚೇಲದಿಂದ ತೆಗೆದು ಕೊಡುತ್ತಿದ್ದ. ನಮ್ಮ ಪ್ರಾಥಮಿಕ ಶಾಲೆಯ ಪದ್ಯವೊಂದು ನನಗಾಗ ನೆನಪಾಯಿತು.

`ಅಂಚೆಯ ಅಣ್ಣ, ಬಂದಿಹ ಚಿನ್ನ,

ಅಂಚೆಯ ಹಂಚಲು ಮನೆ ಮನೆಗೆ,

ಸಾವಿರ ಸುದ್ದಿಯ ಬೀರುತ ಬರುವನು

ತುಂಬಿದ ಚೀಲವು ಹೆಗಲೊಳಗೆ,

ಬಾಗಿಲು ತಟ್ಟಿ ಚಿಲಕವ ಕುಟ್ಟಿ

ಸದ್ದನು ಮಾಡುತ ಕರೆಯುವನು,

ಕಾಗದ ಬಂದಿದೆ ಬೇಗನೆ ಬನ್ನಿರಿ,

ಕಾಗದಕೊಳ್ಳಿರಿ ಎನ್ನುವನು,

ಕಾಗದ ವಿದೆಯೇ ಕಾಗದ ಎಂದು

ಮಕ್ಕಳು ಕೇಳಲು ಬಾಯ್ ತುಂಬಾ,

ಕೊರಳಿನ ಚೀಲದಿ ಬೆರಳುಗಳಾಡಿಸಿ

ಕಾಗದವಿದೆಯೇ ನೋಡುವನು”…. ಮುಂತಾಗಿ ಪದ್ಯದ ಸಾಲುಗಳಿದ್ದವು.

ಇದೇನು ಇವತ್ತು ಮಕ್ಕಳಿಗೆ ಅಣ್ಣಪ್ಪ ಇಷ್ಟೊಂದು ಪತ್ರಗಳನ್ನು ಕೊಡುತ್ತಿದ್ದಾನೆ ಎಂದು ನೋಡಲು ಹೋದರೆ, ಅಣ್ಣಪ್ಪ ತನ್ನ ಚೀಲದಿಂದ ಮಕ್ಕಳಿಗೆ ಕೊಡುತ್ತಿದ್ದುದು ಪತ್ರಗಳನ್ನಲ್ಲ, ಹಿಂದಿನ ದಿನ ಅಂಗಡಿ ಪೂಜೆಯಲ್ಲಿ ತನಗೆ ಬಂದ ಬತ್ತಾಸುಗಳನ್ನೆಲ್ಲಾ ಮಕ್ಕಳಿಗೆ ತಿನ್ನಲಿಕ್ಕಾಗಿ ಹಂಚುತ್ತಿದ್ದ. ಅಣ್ಣಪ್ಪನಿಂದ ಟಪಾಲು ಬಟವಾಡೆಯಲ್ಲ, ಬತ್ತಾಸು ಬಟವಾಡೆಯಾಗಿತ್ತು.

  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!