ಡಾ.ಪುಟ್ಟರಾಜರ ದೊಡ್ಡಗುಣ

ಡಾ.ಪುಟ್ಟರಾಜರ ದೊಡ್ಡಗುಣ

ಹಳೇ ದಾವಣಗೆರೆ ದೊಡ್ಡಪೇಟೆ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷವೂ ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಕೀರ್ತನೆ ಏರ್ಪಾಡಾಗುತ್ತಿತ್ತು. ಅನೇಕ ದಶಕಗಳ ಹಿಂದೆ ಹೀಗೆ ಗಂಗಾಧರ ಶಾಸ್ತ್ರಿಗಳ ಕಾರ್ಯಕ್ರಮ ಏರ್ಪಾಡಾಗಿ ಕರಪತ್ರವೂ ಮುದ್ರಣವಾಗಿ ಇನ್ನೇನು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಬೇಕು ಎನ್ನುವಷ್ಟರಲ್ಲಿ ವಿಧಿಲೀಲೆ ಗಂಗಾಧರ ಶಾಸ್ತ್ರಿಗಳು ಹಠಾತ್ ದೈವಾಧೀನರಾದರೆಂದು ಸುದ್ದಿ ಬಂದಿತು. 

ಸಮಿತಿಯವರಿಗೆ ದಿಕ್ಕು ತೋಚದಂತಾಯಿತು. ಶಾಸ್ತ್ರಿಗಳ ಕೀರ್ತನೆಯ ಆ ದಿನಗಳಿಗೆ ಮತ್ತಾರನ್ನು  ಕರೆಸುವುದೆಂದು ಚಿಂತಿಸಿದರು.  ಹಿರಿಯ ಪತ್ರಕರ್ತರೂ, ಅಧ್ಯಾತ್ಮಿಕ, ಧಾರ್ಮಿಕ ಕಲಾಕ್ಷೇತ್ರಗಳಲ್ಲಿ ಸಕ್ರಿಯರೂ ಆದ ಅರ್.ಜಿ.ಗೌರಿಶಂಕರ್ ಅವರಿಗೆ ವಿಷಯ ತಿಳಿಯಿತು. ಕೂಡಲೇ ಅವರು ಸಮಿತಿಯವರನ್ನು ಕರೆದುಕೊಂಡು ಗದುಗಿಗೆ ಹೋಗಿ ಪಂಡಿತ ಪುಟ್ಟರಾಜ ಗವಾಯಿಗಳನ್ನು ಕಂಡು ಪರಿಸ್ಥಿತಿ ವಿವರಿಸಿದರು. 

ವಿಶಾಲ ಹೃದಯಿಗಳಾದ ಕವಿ ಪಂಡಿತ ವಿದ್ವಾನ್ ಡಾ. ಪುಟ್ಟರಾಜ ಗವಾಯಿಗಳವರು ಕೂಡಲೇ ಸ್ಪಂದಿಸಿ, ದಾವಣಗೆರೆಗೆ ಬಂದು `ತಿರು ನೀಲಕಂಠ’ ಕೀರ್ತನೆಯನ್ನು ಅದ್ಭುತವಾಗಿ ನೆರವೇರಿಸಿ ಕೊಟ್ಟರು. ಪುಟ್ಟರಾಜ ಗವಾಯಿಗಳ `ದೊಡ್ಡ ಗುಣ’ವನ್ನು ಎಷ್ಟು ಕೊಂಡಾಡಿದರೂ ಸಾಲದು. ಇದನ್ನು ಆಗು ಮಾಡಿದ ಆರ್‌.ಜಿ.ಗೌರಿಶಂಕರರನ್ನೂ ಸ್ಮರಿಸಲೇಬೇಕು.

ಗೌರಿಶಂಕರ್‌ರವರು ಪ್ರಖ್ಯಾತ ನಾಟಕ ಕಲಾವಿದ ಮಾಸ್ಟರ್ ಹಿರಣ್ಣಯ್ಯನವರಿಗೆ ಆತ್ಮೀಯರಾಗಿದ್ದರು. ಒಮ್ಮೆ ನಾನು ಬೆಂಗಳೂರಿನಲ್ಲಿ ಮಾಸ್ಟರ್ ಹಿರಣ್ಣಯ್ಯನವ ರೊಂದಿಗೆ ಮಾತನಾಡುತ್ತಿರುವಾಗ `ದಾವಣಗೆರೆಯಲ್ಲಿ ಗೌರಿ ಹೇಗಿದ್ದಾನೆ?’ ಎಂದು ಕೇಳಿದರು. ಅಲ್ಲಿದ್ದವರಿಗೆ ಆಶ್ಚರ್ಯವಾಯಿತು. ಮಾಸ್ಟರ್ ಹಿರಣ್ಣಯ್ಯನವರಿಗೆ ವ್ಯಾಕರಣ ಗೊತ್ತಿಲ್ಲವೇ?!, `ಗೌರಿ’ ಎಂಬ ಸ್ತ್ರೀಲಿಂಗದ ಹೆಸರಿಗೆ `ಹೇಗಿದ್ದಾನೆ’ ಎಂಬ ಪುಲ್ಲಿಂಗವನ್ನು ಸೇರಿಸುತ್ತಾರಲ್ಲ, ಏನಿದು?!’ ಎಂದು ನನ್ನನ್ನು ಕೇಳಿದರು.

ನಾನಾಗ ಹೇಳಿದೆ `ಗೌರಿ ಎಂದರೆ ಹಿರಿಯ ಪತ್ರಕರ್ತ ಆರ್.ಜಿ.ಗೌರಿಶಂಕರ್ ಎಂಬುವವರು, ಇವರನ್ನು ಬಹುತೇಕ ಎಲ್ಲರೂ ಆತ್ಮೀಯವಾಗಿ `ಗೌರಿ’ ಎಂದೇ ಕರೆಯುತ್ತಾರೆ’ ಎಂದು ಹೇಳಿದೆ.

  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!