ಪಕ್ಷ ಮಾಸ ಒಂದು ಚಿಂತನೆ

ಪಕ್ಷ ಮಾಸ ಒಂದು ಚಿಂತನೆ

ನಮ್ಮ ವಂಶದಲ್ಲಿ ಬಂದಂತಹ ತಾತ, ಮುತ್ತಾತ, ಅವರ ತಂದೆ ಮುಂತಾದವರು ನಮ್ಮ ಹಿರಿಯರು. ಇವರನ್ನು ನೆನೆದು, ಇವರಿಗೆ ಒಳ್ಳೆಯದಾಗಲಿ ಎಂದು ಪೂಜೆ ಸಲ್ಲಿಸುವ 15 ದಿನಗಳ ಪರ್ವ ಕಾಲವೇ ಪಿತೃ ಪಕ್ಷ. ಇದರ ಕಡೆಯ ದಿನ ಮಹಾಲಯ ಅಮಾವಾಸ್ಯೆ. ಅಂದು ಜಾತಿ, ಮತ ಬೇಧವಿಲ್ಲದೆ ಎಲ್ಲರೂ ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುತ್ತಾರೆ.

ಮೃತ್ಯು ಎಂಬುದು ನಮ್ಮ ನೆರಳಿನಂತೆ ಜೊತೆಗೆ ಬರುತ್ತಿರುತ್ತದೆ. ಯಾವಾಗ ಎಂಬುದು ಯಾರಿಗೂ ತಿಳಿಯದು. ಆದರೆ `ಜಾತಸ್ಯ ಮರಣಂ ಧೃವಂ’ ಎಂಬ ಭಗವದ್ಗೀತೆಯ ವಾಕ್ಯದಂತೆ, ಹುಟ್ಟು ಎಷ್ಟು ಸತ್ಯವೋ ಸಾವು ಅಷ್ಟೇ ಸತ್ಯ. ಸತ್ತ ನಂತರ ಮತ್ತೆ ಬೇರೆ ದೇಹದೊಳಗೆ ಈ ಜೀವದ ಪ್ರವೇಶ.

ಪಿತೃಗಳು ಎಂಬ ಗಣಗಳು ಭೂಮಿ ಮತ್ತು ಸ್ವರ್ಗದ ಮಧ್ಯೆ ಇರುವ ಪಿತೃ ಲೋಕದಲ್ಲಿ ಇರುತ್ತಾರೆ. ಇದು ಚಂದ್ರ ಲೋಕದ ಹತ್ತಿರ ಇದೆ.ಪೂಜೆ ಯಲ್ಲಿ 8 ವಸುಗಳು, 11 ರುದ್ರರು, 12ಆದಿತ್ಯ ರನ್ನು ಪೂಜಿಸಲಾಗುತ್ತದೆ. ಈ ಪೂಜೆ ಮಾಡಿದರೆ, ನಮ್ಮ ಹಿರಿಯರ ಆತ್ಮಗಳು ಯಾವ ದೇಹದಲ್ಲಿ ಇರುತ್ತವೋ ಆ ದೇಹದಲ್ಲಿ ಅವರಿಗೆ ಒಳ್ಳೆಯ ಆಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.

ಈ ಪೂಜೆಯನ್ನು ಶ್ರದ್ಧೆ ಭಕ್ತಿಯಿಂದ ಮಾಡಬೇಕು.ಬಹಳ ಶ್ರದ್ಧೆ ಬೇಕಾಗಿರುವುದರಿಂದ ಇದಕ್ಕೆ ಶ್ರಾದ್ಧ ಎಂದು ಹೆಸರು. ಪಿತೃಗಳು ಸಂತೃಪ್ತಿ ಪಡೆದರೆ, ವಂಶಕ್ಕೆ ಒಳ್ಳೆಯ ಸಂತಾನ. ಮನೆಯ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ. ಅವರಿಗೆ ಅರ್ಪಿಸಬೇಕಾಗಿರುವುದು ಅನ್ನ (ಪಿಂಡ ಪ್ರದಾನ) ನೀರು (ಜಲತರ್ಪಣ), ಎಳ್ಳು(ತಿಲ ತರ್ಪಣ) ಅಷ್ಟೇ. 

ಒಂದು ಕಥೆಯ ಪ್ರಕಾರ ಕರ್ಣನಿಗೆ ದೇಹಾಂತವಾದ ಮೇಲೆ ನರಕಕ್ಕೆ ಹೋಗುತ್ತಾನೆ ಅಲ್ಲಿ ಅವನಿಗೆ ಊಟ ಮಾಡಲು ಕೇವಲ ಬಂಗಾರ ದುಡ್ಡು ಕೊಡಲಾಗುತ್ತದೆ. ಅವನು ಕಾರಣ ಕೇಳಿದಾಗ ನೀನು ಕೇವಲ ಇದನ್ನೇ ದಾನ ಮಾಡಿದ್ದೀಯಾ, ನಿನ್ನ ಪಿತೃಗಳಿಗೆ ತರ್ಪಣ ಕೊಟ್ಟಿಲ್ಲ. ಆದ್ದರಿಂದ ನೀನು ಭೂಮಿಗೆ ಹೋಗಿ ಪಿತೃಗಳಿಗೆ ಅನ್ನ ನೀರು ಕೊಟ್ಟು ಬಾ ಎಂದು ಹದಿನೈದು ದಿನ ಕಳಿಸುತ್ತಾರೆ. ಅದಾದ ನಂತರ ಅವನು ಸ್ವರ್ಗಕ್ಕೆ ಹೋಗುತ್ತಾನೆ. ಈ 15 ದಿನವೇ ಪಿತೃಪಕ್ಷ ಎಂದು ಹೇಳುತ್ತಾರೆ.

ವರುಷಕೊಮ್ಮೆ ಪಿತೃ ಪಕ್ಷದಲ್ಲಿ ಪಿತೃಗಳು ತಮ್ಮ ವಂಶದವರನ್ನು ಹರಸಲು ಭೂಮಿಗೆ ಬರುತ್ತಾರೆ ಎಂಬ ನಂಬಿಕೆಯು ಇದೆ. ಪಿತೃಗಳ ಒಂದು ಹಗಲು 15 ದಿನ ಇರುತ್ತದೆ. ಆದ್ದರಿಂದ ಅವರು 15 ದಿನ ಇರುತ್ತಾರೆ ಎಂಬ ನಂಬಿಕೆಯೂ ಇದೆ.

ಭಾದ್ರಪದ ಮಾಸದ ಕೃಷ್ಣ ಪಕ್ಷದ 15 ದಿನ ಪಕ್ಷ ಮಾಸ ಎಂದು ಕರೆಸಿಕೊಳ್ಳುತ್ತದೆ ಅಮಾವಾಸ್ಯೆಯನ್ನು ಮಹಾಲಯ ಅಮವಾಸ್ಯೆ ಎಂದು ಕರೆಯುತ್ತಾರೆ.

ಈ ಪಿತೃ ಪಕ್ಷದಲ್ಲಿ ಗಯಾ ಕ್ಷೇತ್ರದಲ್ಲಿ ಪಿತೃಪಕ್ಷ ಮೇಳ ಎಂದು ಆಚರಿಸಲಾಗುತ್ತದೆ. ಗಯಾ ಕ್ಷೇತ್ರದಲ್ಲಿರುವ ವಿಷ್ಣು ಪಾದದ ಮೇಲೆ ತಮ್ಮ ಪಿತೃಗಳ ಹೆಸರಿನಲ್ಲಿ ಪಿಂಡಪ್ರದಾನ ಮಾಡಿದರೆ, ಅವರಿಗೆ ಸದ್ಗತಿ ಎಂಬ ನಂಬಿಕೆ ಇದೆ. ಪಿತೃಗಳ ಪೂಜೆ ಮಾಡುವಾಗಲೆಲ್ಲ ವಿಷ್ಣು ಪಾದಕ್ಕೆ ಪೂಜಿಸಲಾಗುತ್ತದೆ. ಅನೇಕ ಕಡೆ ಪಿಂಡ ಪ್ರದಾನವನ್ನು ಮಾಡಿಸಲಾಗುತ್ತದೆ. ಪಿಂಡಗಳನ್ನು ಅನ್ನದಿಂದ, ಗೋಧಿ ಹಿಟ್ಟಿನಿಂದ, ಮಾಡಿ, ಅವರ ಪಿತೃಗಳ ಹೆಸರಿನಲ್ಲಿ ಅದನ್ನು ಇಡಲಾಗುತ್ತದೆ. 

ಈ ಶರೀರ ನಶ್ವರ ಎಂಬುದನ್ನು ಪಿತೃಪಕ್ಷವು ನೆನಪಿಸುತ್ತದೆ. ಧರ್ಮ ಮಾರ್ಗದಲ್ಲಿ ಬಾಳಿ ಬದುಕಿ ಪಾಪ ಮಾಡದೆ ಪುಣ್ಯ ಸಂಪಾದಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಬಾಳಿ ಬದುಕಿ ನಮ್ಮ ಇರುವಿಕೆಗೆ ಕಾರಣರಾಗಿರುವಂತಹ ಪಿತೃಗಳನ್ನು ನೆನಪಿಸಿಕೊಂಡು ಅವರಿಗೆ ಸದ್ಗತಿಯಾಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ. ಈ ಪಕ್ಷವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಪಿತೃಗಳ ಆಶೀರ್ವಾದವನ್ನು ಪಡೆಯೋಣ. 

– ಡಾ. ರೂಪಶ್ರೀ ಶಶಿಕಾಂತ್, ದಾವಣಗೆರೆ.

error: Content is protected !!