ಎಲ್ಲರ ಮನದಾಳದಲ್ಲಿ ಸದಾ ನೆನೆಯುವ ದೈವ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ

ಎಲ್ಲರ ಮನದಾಳದಲ್ಲಿ ಸದಾ ನೆನೆಯುವ ದೈವ  ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ

ನಮ್ಮ ಭಾರತ ಪವಿತ್ರ ನಾಡು, ತತ್ವಾದರ್ಶಗಳ ನೆಲೆಬೀಡು. ಈ ಪುಣ್ಯಭೂಮಿಯಲ್ಲಿ ಹುಟ್ಟಿದ ಋಷಿಗಳು, ಮಹರ್ಷಿಗಳು, ತತ್ವಜ್ಞಾನಿಗಳು, ಶರಣರು, ದಾಸರು, ಸಾಧು-ಸಂತರು, ಸತ್ಪುರುಷರು ಮತ್ತು ಮಠಾಧಿಪತಿಗಳು ಗುರು ಸ್ಥಾನದಲ್ಲಿ ನಿಂತು ಜನರಲ್ಲಿ ಸದ್ಗುಣದ ಬೀಜಗಳನ್ನು ಬಿತ್ತಿ, ಜೀವನದ ಆದರ್ಶ ಮೌಲ್ಯಗಳನ್ನು ತಿಳಿಸುತ್ತಾ ಜ್ಞಾನಪ್ರಸಾರ ಮಾಡಿ ನಾಗರಿಕ ಸಮಾಜ ಕಟ್ಟುವಲ್ಲಿ ಅವರುಗಳ ಪಾತ್ರ ಅನನ್ಯವಾದದ್ದು, ಭಾರತದಲ್ಲಿ ಜ್ಞಾನದ ಅಧಿಪತಿಗಳಾದ ಗುರುಗಳಿಗೆ ಪವಿತ್ರ ಸ್ಥಾನವಿದೆ. ಗುರುಗಳನ್ನು ದೈವಾಂಶ ಸಂಭೂತರೆಂದು ಗೌರವಿಸಲಾಗುತ್ತಿದೆ. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬ ಉಕ್ತಿಗಳು ಪ್ರಚಲಿತದಲ್ಲಿವೆ. 

ಗುರುಗಳನ್ನು ಬ್ರಹ್ಮ ವಿಷ್ಣು ಮಹೇಶ್ವರರೆಂದು ಪೂಜಿಸಲಾಗುತ್ತಿದೆ. ಹರ ಮುನಿದರೂ ಗುರು ಕಾಯುವನು ಎನ್ನುವ ವಾಣಿ ಗುರುವಿನ ಮೂಲಕ ದೇವರನ್ನು ಕಾಣಬಹುದೆಂಬುದನ್ನು ತಿಳಿಸುತ್ತದೆ. `ಅರಿತರೆ ಶರಣ ಮರೆತರೆ ಮಾನವ’ ಎಂಬ ಶರಣರ ಮಾತಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರವಾಣಿಗೆ ಪ್ರತಿರೂಪದಂತಿರುವ ಸಿರಿಗೆರೆಯ ಶ್ರೀರತ್ನ ತರಳಬಾಳು ಬೃಹನ್ಮಠದ 20ನೇ ಜಗದ್ಗುರು ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ನಿಜಕ್ಕೂ ಎಲ್ಲಾ ಮಠಮಾನ್ಯಗಳಿಗೆ ಮಾದರಿಯಾಗಿದ್ದಾರೆ. 

ಧರ್ಮದ ಉದ್ಧಾರಕ್ಕೆ ಸಜ್ಜನರ ರಕ್ಷಣೆಗೆ ದುಷ್ಟರ ನಿಗ್ರಹಕ್ಕೆ ಮತ್ತು ಧರ್ಮ ಪರಿಪಾಲನೆಗೆ ಯುಗಯುಗಗಳಲ್ಲೂ ಅವತಾರವೆತ್ತುತ್ತೇನೆ ಎಂದು ನುಡಿದ ಶ್ರೀ ಕೃಷ್ಣ ಪರಮಾತ್ಮನ ವಾಣಿಯಂತೆ ಹೊಳಲ್ಕೆರೆ ತಾಲ್ಲೂಕು ಮುತ್ತುಗದೂರಿ ನಲ್ಲಿ ಮುತ್ತಿನ ಮಣಿಯಂತೆ ಮೈ ವೆತ್ತು ಮುತ್ತುಗದೂರಿನ ಈ ಮುತ್ತು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಗುರು ಪರಂಪರೆಯಲ್ಲಿ ಇಪ್ಪತ್ತನೇ ಜಗದ್ಗುರುಗಳಾಗಿ 78 ವರ್ಷಗಳ ಕಾಲ ಅತ್ಯಮೂಲ್ಯ ಜೀವನವನ್ನು ಸಾಗಿಸಿ ಸಹನೆಯ ಸಾಕಾರ ಮೂರ್ತಿಯಾಗಿ, ಸಮರ್ಥ ಗುರುವೆನಿಸಿ, ಚಾಣಾಕ್ಷ ಮಹಾಸ್ವಾಮಿಗಳೆನಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಜನಸಾಮಾನ್ಯರ ಒಳಗಣ್ಣು ತೆರೆಸಿದ ಮಹಾಗುರುಗಳಾಗಿ ತರಳಬಾಳು ಹುಣ್ಣಿಮೆ ಹಾಗೂ ಶರಣ ಸಮ್ಮೇಳನಗಳ ಮುಖೇನ ಜನಸಾಮಾನ್ಯರಲ್ಲಿ ಐಕ್ಯತೆಯ ಬೀಜ ಬಿತ್ತಿದ ಗುರು ಕಾರುಣ್ಯರಾಗಿ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಾರಿದ ಸಮಾನತೆಯ ಹರಿಕಾರನಾಗಿ, ಸಮಾಜದಲ್ಲಿ ಧಾರ್ಮಿಕ ಭಾವನೆ ತುಂಬಿ, ಜನರ ಮನಸ್ಸಿನಲ್ಲಿ ಸ್ಥಾನ ಪಡೆದ ಹೃದಯ ಸಿಂಹಾಸನಾಧೀಶ್ವರ ಈ ಸಿರಿಗೆರೆಯ ಹಿರಿಯ ಗುರು ಎಲ್ಲರ ಮನದಾಳದಲ್ಲಿ ಸದಾ ನೆನೆಯುವ ದೈವವಾಗಿದ್ದಾರೆ.

ಅತ್ಯಲ್ಪ ಅವಧಿಯಲ್ಲಿ ಅದ್ಭುತ ಕ್ರಾಂತಿ ಮಾಡಿದ ನಿರ್ಮಲಾಂತಕರಣದ ಅಸೀಮ ಸಾಹಸಿ. 1914ರ ಏಪ್ರಿಲ್ 28ರಂದು ಹೊಳಲ್ಕೆರೆ ತಾಲ್ಲೂಕು ಮುತ್ತುಗದೂರು ಗ್ರಾಮದ ಮಹದೇವಯ್ಯ, ಬಸಮ್ಮ ದಂಪತಿಗೆ ಜನಿಸಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಪೂರ್ವಾಶ್ರಮದಲ್ಲಿ ರೇವಣಸಿದ್ದಯ್ಯ ಎಂಬ ಹೆಸರಿನಲ್ಲಿ ಮುತ್ತುಗದೂರು ಬೀರೂರು, ಬನಾರಸ್‌ನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ಪಡೆದು, ಸುಸಂಸ್ಕೃತ ವ್ಯಕ್ತಿತ್ವ ರೂಪಿಸಿಕೊಂಡು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 19ನೇ ಜಗದ್ಗುರುಗಳಾಗಿದ್ದ ಶ್ರೀ ಗುರು ಶಾಂತದೇಶೀಕೇಂದ್ರ ಮಹಾಸ್ವಾಮಿಗಳವರ ಆಶೀರ್ವಾದದಿಂದ ಅವರ ಆದೇಶದಂತೆ ಶಿಕ್ಷಣವನ್ನು ಮೊಟಕುಗೊಳಿಸಿ 1933ರ ಆಗಸ್ಟ್ ಎರಡರಂದು ಯಲಹಂಕ ಮಠದ ಚರ ಪಟ್ಟಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಠದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ದಣಿವರಿಯದ ದಾರ್ಶನಿಕರಾಗಿ, ಜನತೆಯಲ್ಲಿ ದುಡಿಮೆಯ ಬೆಲೆಯನ್ನು ಅರ್ಥೈಸಿದ ಅಪ್ರತಿಮ ಧೀರ ಸನ್ಯಾಸಿ ಎನಿಸಿದ ಈ ಮೇರು ಚೈತನ್ಯ, ವ್ಯಕ್ತಿ ಎನಿಸದೆ ಶಕ್ತಿಯಾಗಿ ಬಾಳಿದರು. ಸಮಾಜದ ಬೆಳಕಾದರು, ಮಹಾ ಮಾನವತಾವಾದಿಯಾದರು.

ಸಮರ್ಥ ಗುರುವಾಗಿ ಸ್ವಾಮಿಗಳ ಸ್ವಾಮಿಗಳಾಗಿ, ಭಕ್ತ ವತ್ಸಲರೆನಿಸಿ, 1940ರ ಮೇ ತಿಂಗಳಿನಲ್ಲಿ ಬಸವ ಜಯಂತಿ ಯಂದು ಶ್ರೀ ಜಗದ್ಗುರು ಬೃಹನ್ಮಠದ ಅಧಿಪತಿಗಳಾಗಿ ಪಟ್ಟಾಭಿಷಿಕ್ತರಾದರು. ಶ್ರೀಮಠದ ಅಭಿವೃದ್ಧಿಗೆ ಹಗಲಿರುಳೆನ್ನದೆ ಶ್ರಮಿಸಿ ಮಠದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ,ಎದೆಗುಂದದೆ ಧೈರ್ಯದಿಂದ ಎದುರಿಸಿ, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿ ಇಡೀ ನಾಡಿಗೆ ನಾಡೇ ಭೇಷ್ ಎಂದು ಉದ್ಘರಿಸುವಂತೆ ಮಾಡಿದ ಯುಗದ ಗುರುವಾಗಿ ಶಿಕ್ಷಣ ಪ್ರಸಾರ, ಉಚಿತ ಊಟ, ವಸತಿ, ಸಹಪಂಕ್ತಿ ಭೋಜನ, ಕೆರೆ-ಕಟ್ಟೆಗಳ ರಿಪೇರಿ, ತೋಟಗಳ ಕಾರ್ಯ ಶಿಕ್ಷಣ ಸಂಸ್ಥೆಗಳ ಆರಂಭ, ವಸತಿ ನಿಲಯಗಳ ಸ್ಥಾಪನೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಹೆಣ್ಣು ಮಕ್ಕಳ ಜ್ಞಾನಾರ್ಜನೆಗೆ ಪ್ರೋತ್ಸಾಹ, ಕಾಯಕ ನಿಷ್ಠೆಗೆ ನಾಂದಿ ಹಾಡಿ, ವಚನ ಗೋಷ್ಠಿ ಶರಣರ ಜೀವನವನ್ನು ನಾಟಕಗಳ ಮೂಲಕ ವಚನಸುಧೆಯನ್ನು ನಾಡಿನಾದ್ಯಂತ ಪಸರಿಸಿ, ಸರಳ ವಿವಾಹ ಅಂತರ್ಜಾತಿಯ ವಿವಾಹದ ಮೂಲಕ ಸಾಮಾಜಿಕ ಪ್ರಜ್ಞೆ ಬೆಳೆಸಿ, ಮನುಕುಲದ ನಿತ್ಯ ಸಂಜೀವಿನಿ ಆದರು, ಪ್ರಾತಃಸ್ಮರಣೀಯರಾದರು. ಭಕ್ತರ ಒಡನಾಟ ಮಹಾಸುದಿನವೆಂದು ಭಾವಿಸಿ, ಸಮಾಜಕ್ಕಾಗಿ ಹುಟ್ಟಿ, ಸಮಾಜಕ್ಕಾಗಿ ದುಡಿದು ಸಮಾಜಕ್ಕಾಗಿಯೇ ತಮ್ಮನ್ನು ತಾವು ಸಮರ್ಪಿಸಿಕೊಂಡ ಈ ದಿವ್ಯ ಜ್ಯೋತಿ ಸೆಪ್ಟೆಂಬರ್ 24, 1992 ರಂದು ಭೌತಿಕವಾಗಿ ಆರಿದರು. ಈಗಲೂ ಕೋಟ್ಯಾಂತರ ಭಕ್ತರ ಮನಸ್ಸಿನಲ್ಲಿ ಆರದ ಬೆಳಕಾದರು. ಅಮರ ಜ್ಯೋತಿಯಾದರು. ನಂದಾದೀಪವಾದರು. ದಿಟ್ಟ ಹೆಜ್ಜೆಯ ಧೀರ, ಅದ್ಭುತ ಶಕ್ತಿಗಳ ಸಂಕೇತ, ಈ ಮಹಾ ಗುರುವಿಗೆ ಕೋಟಿ ಕೋಟಿ ಪ್ರಣಾಮಗಳು.

 – ಡಾ. ಅನಿತಾ ಹೆಚ್. ದೊಡ್ಡಗೌಡರ್, ದಾವಣಗೆರೆ.

error: Content is protected !!